
ಹಾಂಕಾಂಗ್(ಅ.8): ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಜ್ರ ವ್ಯಾಪಾರಿ ನೀರವ್ ಮೋದಿಗೆ ಸೇರಿದ್ದ ಮಳಿಗೆಯಲ್ಲಿ ನಕಲಿ ವಜ್ರಗಳ ಮಾರಾಟ ನಡೆದಿರುವುದು ಬೆಳಕಿಗೆ ಬಂದಿದೆ.
ಕೆನಡಾ ಮೂಲದ ವ್ಯಕ್ತಿಯೊಬ್ಬ ನೀರವ್ ಮೋದಿ ಮಾಲಿಕತ್ವದ ಮಳಿಗೆಯಲ್ಲಿ ವಜ್ರ ಖರೀದಿ ಮಾಡಿ, ತನ್ನ ಗೆಳತಿಗೆ ನೀಡಿದ್ದು ಗೆಳತಿ ಅದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದು ನಕಲಿ ವಜ್ರ ಎನ್ನುವುದು ತಿಳಿದಿದೆ. ಇದರಿಂದ ಮನನೊಂದು ಯುವತಿ ತನ್ನ ಪ್ರಿಯಕರನಿಂದ ದೂರವಾಗಿದ್ದಾಳೆ. ಇದೀಗ ಆ ವ್ಯಕ್ತಿ ಗೆಳತಿಯ ಅಗಲಿಕೆಯಿಂದ ಮಾನಸಿಕ ಖಿನ್ನತೆಗೆ ತುತ್ತಾಗಿದ್ದಾನೆ.
ನೀರವ್ ಮೋದಿಗೆ ಸೇರಿದ ಹಾಂಕಾಂಗ್ ವಜ್ರದ ಮಳಿಗೆಯಲ್ಲಿದ್ದ ಎರಡು ನಕಲಿ ವಜ್ರದ ರಿಂಗ್ ಅನ್ನು ಎರಡು ಲಕ್ಷ ಅಮೆರಿಕನ್ ಡಾಲರ್ ಗೆ ಕೆನಡಾ ವ್ಯಕ್ತಿಗೆ ಮಾರಾಟ ಮಾಡಲಾಗಿದೆ ಎನ್ನಲಾಗಿದೆ.
ನೀರವ್ ಮೋದಿಯಿಂದ ಮೋಸ ಹೋದ ಕೆನಡಾ ವ್ಯಕ್ತಿಯನ್ನು ಪಾಲ್ ಅಲ್ಫೊನ್ಸ್ಎಂದು ಗುರುತಿಸಲಾಗಿದೆ. ಈತ ತನ್ನ ಗೆಳತಿಗಾಗಿ ಈ ರಿಂಗ್ ಗಳನ್ನು ಖರೀದಿಸಿದ್ದ. ಆದರೆ ರಿಂಗ್ ನಲ್ಲಿರುವ ವಜ್ರಗಳು ನಕಲಿ ಎಂದು ತಿಳಿಯುತ್ತಿದ್ದಂತೆ ಆ ಗೆಳತಿ ಈತನೊಂದಿಗಿನ ತನ್ನ ಸಂಬಂಧ ಕಡಿದುಕೊಂಡಿದ್ದಾಳೆ ಎಂದು ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
ಅಲ್ಫೋನ್ಸೊ ಮತ್ತು ನೀರವ್ ಮೊದಲ ಬಾರಿಗೆ 2012 ರಲ್ಲಿ ಭೇಟಿಯಾಗಿದ್ದು, ಈ ವರ್ಷ ಏಪ್ರಿಲ್ ನಲ್ಲಿ ಅಲ್ಫೋನ್ಸೊ ತನ್ನ ಗೆಳತಿಯೊಡನೆ ನಿಶ್ಚಿತಾರ್ಥಕ್ಕಾಗಿ ಎರಡು ವಿಶೇಷ ಡೈಮಂಡ್ ರಿಂಗ್ ಬೇಕೆಂದು ನೀರವ್ ಗೆ ಮೇಲ್ ಕಳಿಸಿದ್ದ. ನೀರವ್ ಆತನಿಗೆ 3.2 ಕ್ಯಾರೆಟ್ ತೂಕದ ವಜ್ರದ ಉಂಗುರಗಳನ್ನು ಮಾರಾಟ ಮಾಡಿದ್ದು, ಅವು ನಕಲಿ ಎಂಬುದು ಗೊತ್ತಾಗಿದೆ.
ಇದೇ ವೇಳೆ ನೀರವ್ ಮೋದಿ ಒಡೆತನದ ಸಂಸ್ಥೆಗಳು ದಿವಾಳಿಯಾದ ಸುದ್ದಿ ಅಲ್ಫೋನ್ಸೊಗೆ ಗೊತ್ತಾಗಿ ಆತ ಆಘಾತಕ್ಕೆ ಒಳಗಾಗಿದ್ದಾನೆ. ಸದ್ಯ ಅಲ್ಫೋನ್ಸೊ ನಿಶ್ಚಿತಾರ್ಥ ಮುರಿದುಬಿದ್ದಿದೆ, ಈ ಹಿನ್ನೆಲೆಯಲ್ಲಿ ಆತ ಕ್ಯಾಲಿಫೋರ್ನಿಯಾದಲ್ಲಿ ನೀರವ್ ಮೋದಿ ವಿರುದ್ಧ ಪ್ರಕರಣ ದಾಖಲಿಸಿದ್ದು, ಒಟ್ಟು 4.2 ಮಿಲಿಯನ್ ಡಾಲರ್ ಪರಿಹಾರಕ್ಕಾಗಿ ಆಗ್ರಹಿಸಿದ್ದಾನೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.