
Business Desk:ನಿಮ್ಮ ಬಳಿ ಈಗಾಗಲೇ ಒಂದು ಪ್ಯಾನ್ ಕಾರ್ಡ್ ಇದ್ದು, ಇನ್ನೊಂದಕ್ಕೆ ಅರ್ಜಿ ಸಲ್ಲಿಕೆ ಮಾಡುತ್ತಿದ್ದೀರಾ? ಹಾಗಾದ್ರೆ 10,000ರೂ. ದಂಡ ಕಟ್ಟಬೇಕಾಗುತ್ತದೆ. ಒಬ್ಬ ವ್ಯಕ್ತಿಗೆ ಈಗಾಗಲೇ ಒಂದು ಪ್ಯಾನ್ ಕಾರ್ಡ್ ನೀಡಲಾಗಿದ್ದು, ಆತ ಇನ್ನೊಂದಕ್ಕಾಗಿ ಅರ್ಜಿ ಸಲ್ಲಿಕೆ ಮಾಡಿದ್ರೆ ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 272ಬಿ ಅಡಿಯಲ್ಲಿ 10,000ರೂ. ದಂಡ ವಿಧಿಸಲಾಗುತ್ತದೆ. ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚಿನ ಪ್ಯಾನ್ ಕಾರ್ಡ್ ಹೊಂದುವಂತಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಅಧಿಕೃತ ವೆಬ್ ಸೈಟ್ ನಲ್ಲಿ ತಿಳಿಸಲಾಗಿದೆ. ಒಂದು ವೇಳೆ ಒಬ್ಬ ವ್ಯಕ್ತಿಗೆ ಒಂದಕ್ಕಿಂತ ಹೆಚ್ಚಿನ ಪ್ಯಾನ್ ಕಾರ್ಡ್ ನೀಡಿದ್ರೆ ಆತ ತಕ್ಷಣ ಹೆಚ್ಚುವರಿ ಪ್ಯಾನ್ ಕಾರ್ಡ್ ಅನ್ನು ಹಿಂತಿರುಗಿಸಬೇಕು ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. ಭಾರತದಲ್ಲಿ ಪ್ಯಾನ್ ಕಾರ್ಡ್ ಅತ್ಯಗತ್ಯ. ಆದಾಯ ತೆರಿಗೆ ಕಾನೂನಿನ ಪ್ರಕಾರ 2017ರ ಜುಲೈ 1ರಿಂದ ಭಾರತದಲ್ಲಿ ಪ್ರತಿ ವ್ಯಕ್ತಿ ಪ್ಯಾನ್ ಕಾರ್ಡ್ ಹೊಂದಿರೋದು ಕಡ್ಡಾಯ. ಕಾಯಂ ಖಾತೆ ಸಂಖ್ಯೆ ಅಥವಾ ಪ್ಯಾನ್ ಅನ್ನೋದು 10 ಅಂಕೆಗಳ ಇಂಗ್ಲಿಷ್ ಅಕ್ಷರಗಳು ಹಾಗೂ ಸಂಖ್ಯೆಗಳ ಸಮೂಹ. ಈ ಸಂಖ್ಯೆಯನ್ನು ಭಾರತದಲ್ಲಿ ವ್ಯಕ್ತಿಯ ಗುರುತು ದೃಢೀಕರಣವಾಗಿಯೂ ಬಳಸಲಾಗುತ್ತದೆ. ಇದನ್ನು ಮುಖ್ಯವಾಗಿ ತೆರಿಗೆ ಸಂಬಂಧಿ ಉದ್ದೇಶಗಳಿಗೆ ಬಳಸಲಾಗುತ್ತದೆ.
ಏನಿದು ಇ-ಪ್ಯಾನ್ ?
ಇ-ಪ್ಯಾನ್ ಭೌತಿಕ ಕಾರ್ಡ್ ರೂಪದ ಬದಲು ಪಿಡಿಎಫ್ ಸ್ವರೂಪದಲ್ಲಿರುತ್ತದೆ. ಪ್ಯಾನ್ ಅರ್ಜಿ ನಮೂನೆಯಲ್ಲಿ ನಮೂದಿಸಿರುವ ಇ-ಮೇಲ್ ಐಡಿಗೆ ಪಿಡಿಎಫ್ ರೂಪದಲ್ಲಿರುವ ಇ-ಪ್ಯಾನ್ ಕಾರ್ಡ್ ಕಳುಹಿಸಲಾಗುತ್ತದೆ. ನಿಮಗೆ ಭೌತಿಕ ಕಾರ್ಡ್ ರೂಪದಲ್ಲಿ ಪ್ಯಾನ್ ಕಾರ್ಡ್ ಅಗತ್ಯವಿಲ್ಲದಿದ್ರೆ, ಪ್ಯಾನ್ ಕೋರಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಇದನ್ನು ನಮೂದಿಸಬೇಕು. ಪ್ಯಾನ್ ಅರ್ಜಿಯಲ್ಲಿ ಇ-ಮೇಲ್ ಐಡಿಯನ್ನು ಕೂಡ ನಮೂದಿಸಬೇಕು. ನಿಮ್ಮ ಇ-ಮೇಲ್ ಐಡಿಗೆ ಪ್ಯಾನ್ ಕಾರ್ಡ್ ಕಳುಹಿಸುತ್ತಾರೆ. ಹಾಗೆಯೇ ನಿಮಗೆ ಭೌತಿಕ ರೂಪದ ಪ್ಯಾನ್ ಕಾರ್ಡ್ ನೀಡೋದಿಲ್ಲ. ಇ-ಪ್ಯಾನ್ ಕಾರ್ಡ್ ಗೆ ವಿಧಿಸುವ ಶುಲ್ಕ ಭೌತಿಕ ಪ್ಯಾನ್ ಕಾರ್ಡ್ ಗಿಂತ ಬೇರೆಯಾಗಿರುತ್ತದೆ.
ಸಾಲದ ಮೇಲಿನ ಬಡ್ಡಿದರ ಹೆಚ್ಚಿಸಿದ ಎಸ್ ಬಿಐ; ಬಿಪಿಎಲ್ ಆರ್ ಶೇ.13.45ಕ್ಕೆ ಏರಿಕೆ
ಪ್ಯಾನ್ ಪರಿಶೀಲನೆ ಅಂದ್ರೇನು?
ತೆರಿಗೆದಾರರು ನೀಡಿರುವ ಪ್ಯಾನ್ ಆದಾಯ ತೆರಿಗೆ ಇಲಾಖೆ ದತ್ತಾಂಶಗಳ ಅನ್ವಯ ಮಾನ್ಯವಾಗಿದೆಯಾ ಎಂಬುದನ್ನು ಪರಿಶೀಲಿಸಲು ಇದು ನೆರವು ನೆರವು ನೀಡುತ್ತದೆ.
ಪ್ಯಾನ್ ಹೊಂದಿರದಿದ್ರೆ ಏನಾಗುತ್ತದೆ?
ಪ್ಯಾನ್ ಕಾರ್ಡ್ ಪಡೆಯಲು ಅರ್ಹನಾದ ವ್ಯಕ್ತಿ ಇನ್ನೂ ಅದನ್ನು ಪಡೆದಿಲ್ಲ ಎಂಬುದು ತಿಳಿದು ಬಂದರೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 272ಬಿ ಅಡಿ ದಂಡ ವಿಧಿಸಲು ಅವಕಾಶವಿದೆ. ಹಾಗೆಯೇ ಪ್ಯಾನ್ ಮಾಹಿತಿ ಅಗತ್ಯವಿರುವ ಯಾವುದೇ ದಾಖಲೆಯಲ್ಲಿ ತಪ್ಪು ಪ್ಯಾನ್ ಮಾಹಿತಿ ನೀಡಿದರೆ ಹಾಗೂ ತೆರಿಗೆ ಕಡಿತ ಮಾಡುವ ವ್ಯಕ್ತಿ ಅಥವಾ ತೆರಿಗೆ ಸಂಗ್ರಹಿಸುವ ವ್ಯಕ್ತಿಗೆ ತಪ್ಪು ಪ್ಯಾನ್ ಸಂಖ್ಯೆ ನೀಡಿದ್ರೆ ಆಗ ಕೂಡ ದಂಡ ವಿಧಿಸಲಾಗುತ್ತದೆ. ಈ ಎಲ್ಲ ಸಂದರ್ಭಗಳಲ್ಲಿ 10,000 ರೂ. ದಂಡ ವಿಧಿಸಲಾಗುತ್ತದೆ.
ಸಾಲದ ಮೇಲಿನ ಬಡ್ಡಿದರ ಹೆಚ್ಚಿಸಿದ ಎಸ್ ಬಿಐ; ಬಿಪಿಎಲ್ ಆರ್ ಶೇ.13.45ಕ್ಕೆ ಏರಿಕೆ
ಪ್ಯಾನ್ ಮಾನ್ಯತೆ ಎಷ್ಟು ಸಮಯ?
ಒಮ್ಮೆ ಪ್ಯಾನ್ ಕಾರ್ಡ್ ಪಡೆದ್ರೆ ಅದು ಜೀವನಪರ್ಯಂತ ಭಾರತದಾದ್ಯಂತ ಮಾನ್ಯತೆ ಹೊಂದಿರುತ್ತದೆ. ವಿಳಾಸ ಬದಲಾವಣೆ ಅಥವಾ ಮಾಲ್ಯಮಾಪನ ಅಧಿಕಾರಿ ಇತ್ಯಾದಿ ಬದಲಾವಣೆಗಳಿಂದ ಪ್ರಭಾವಿತವಾಗೋದಿಲ್ಲ. ಪ್ಯಾನ್ ಕಾರ್ಡ್ ನಲ್ಲಿ ಯಾವುದಾದ್ರೂ ಬದಲಾವಣೆ ಅಥವಾ ಪರಿಷ್ಕರಣೆ ಮಾಡಬೇಕಾದ ಅಗತ್ಯವಿದ್ರೆ ಆದಾಯ ತೆರಿಗೆ ಇಲಾಖೆಗೆ ಮನವಿ ಸಲ್ಲಿಸಬೇಕು. ಹಾಗೆಯೇ ಹೊಸ ಪ್ಯಾನ್ ಕಾರ್ಡ್ ಅಗತ್ಯವಿದ್ರೂ ಕೂಡ ಮನವಿ ಸಲ್ಲಿಸಬಹುದು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.