ಗಂಡನ ಕನಸನ್ನು ಉಳಿಸಿಕೊಳ್ಳಲು ಜಟ್ಟಿಯಂತೆ ಹೋರಾಡ್ತಿರುವ ಮಾಳವಿಕಾ ಸಿದ್ಧಾರ್ಥ್‌, ಕಾಫಿ ಡೇ ಪಾಲಿಗೆ ಸಿಕ್ತು ಬಿಗ್‌ನ್ಯೂಸ್‌!

Published : Dec 30, 2025, 04:45 PM IST
malavika

ಸಾರಾಂಶ

ದಿವಂಗತ ವಿ.ಜಿ. ಸಿದ್ಧಾರ್ಥ್ ಅವರ ಪತ್ನಿ ಮಾಳವಿಕಾ ಹೆಗಡೆ, ಕಾಫಿ ಡೇ ಕಂಪನಿಯ ಸಾಲ ತೀರಿಸುವಲ್ಲಿ ಮಹತ್ವದ ಯಶಸ್ಸು ಸಾಧಿಸಿದ್ದಾರೆ. ಆಕ್ಸಿಸ್ ಬ್ಯಾಂಕ್‌ನೊಂದಿಗಿನ ₹70 ಕೋಟಿ ಸಾಲವನ್ನು ಒನ್‌ ಟೈಮ್‌ ಸೆಟಲ್‌ಮೆಂಟ್‌ ಮೂಲಕ ಇತ್ಯರ್ಥಪಡಿಸಲು ಅನುಮೋದನೆ ದೊರೆತಿದೆ. 

ಬೆಂಗಳೂರು (ಡಿ.30): ದಿವಂಗತ ವಿ.ಜಿ.ಸಿದ್ಧಾರ್ಥ್‌ ಅವರ ದೊಡ್ಡ ಕನಸಾದ ಕಾಫಿ ಡೇ ಕಂಪನಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಜಟ್ಟಿಯಂತೆ ಹೋರಾಟ ನಡೆಸುತ್ತಿರುವ ಚೇರ್ಮನ್‌ ಹಾಗೂ ವಿ.ಜಿ.ಸಿದ್ಧಾರ್ಥ್‌ ಅವರ ಪತ್ನಿ ಮಾಳವಿಕಾಗೆ ದೊಡ್ಡ ಯಶಸ್ಸು ಸಿಕ್ಕಿದೆ. ಸಿದ್ಧಾರ್ಥ್‌ ಅವರ ಅಕಾಲಿಕ ಸಾವಿನ ಬಳಿಕ ಕಾಫಿ ಡೇ ವ್ಯವಹಾರಗಳನ್ನು ನೋಡಿಕೊಂಡು ಸಾಲವನ್ನು ತೀರಿಸುವುದರಲ್ಲಿ ಮಗ್ನರಾಗಿರುವ ಮಾಳವಿಕಾ ಸಿದ್ಧಾರ್ಥ್‌ಗೆ ಆಕ್ಸಿಸ್‌ ಬ್ಯಾಂಕ್‌ ಕಡೆಯುಂದ ಗುಡ್‌ನ್ಯೂಸ್‌ ಸಿಕ್ಕಿದೆ.

ಕೆಫೆ ಕಾಫಿ ಡೇಯ ಮಾತೃ ಕಂಪನಿಯಾದ ಕಾಫಿ ಡೇ ಎಂಟರ್‌ಪ್ರೈಸಸ್, ಆಕ್ಸಿಸ್ ಬ್ಯಾಂಕಿನೊಂದಿಗಿನ ತನ್ನ ಬಾಕಿ ಸಾಲವನ್ನು ಪಾವತಿಸಲು ಸಜ್ಜಾಗಿದೆ. ವಲಯದ ಸಾಲದಾತ ಕಂಪನಿಯು ರೂ.70 ಕೋಟಿಗಳ ಒನ್‌ ಟೈಮ್‌ ಸೆಟಲ್‌ಮೆಂಟ್‌ಗೆ (ಒಟಿಎಸ್‌) ಅನುಮೋದನೆ ನೀಡಿದೆ. "ಆಕ್ಸಿಸ್ ಬ್ಯಾಂಕ್ ಲಿಮಿಟೆಡ್ ಕಂಪನಿಯೊಂದಿಗೆ ಬಾಕಿ ಇರುವ ರೂ.70 ಕೋಟಿಗಳ ಸಾಲವನ್ನು ಒನ್‌ ಟೈಮ್‌ ಸೆಟ್ಲ್‌ಮೆಂಟ್‌ ಅನುಮೋದಿಸಿದೆ" ಎಂದು ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್ (CDEL) ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಿದೆ.

ಒಟಿಎಸ್‌ ಪ್ರಕಾರ, CDEL 2026 ಸೆಪ್ಟೆಂಬರ್ 30ರೊಳಗೆ ಸಂಪೂರ್ಣ ಮೊತ್ತವನ್ನು ಪಾವತಿಸುತ್ತದೆ. ಸಾಲದಿಂದ ಬಳಲುತ್ತಿರುವ ಕಂಪನಿಯು ಆಸ್ತಿಗಳ ಮಾರಾಟ ಮತ್ತು ಇತರ ವಿಧಾನಗಳ ಮೂಲಕ ತನ್ನ ಸಾಲಗಳನ್ನು ಪಾವತಿಸುತ್ತಿದೆ. ಜುಲೈ 2019 ರಲ್ಲಿ ಸಂಸ್ಥಾಪಕ ಅಧ್ಯಕ್ಷ ವಿ.ಜಿ. ಸಿದ್ಧಾರ್ಥ ಅವರ ಮರಣದ ನಂತರ, CDEL ವಿವಿಧ ಕಾರಣಗಳಿಂದ ಸಮಸ್ಯೆಗೆ ಸಿಲುಕಿಕೊಂಡಿತ್ತು. ಹೆಚ್ಚಿನವರು ಕಂಪನಿ ಮುಳುಗಿ ಹೋಗಲಿದೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು. ಆದರೆ, ಮಾಳವಿಕಾ ಸಿದ್ಧಾರ್ಥ್‌ ಎಲ್ಲವನ್ನು ಧೈರ್ಯವಾಗಿ ಎದುರಿಸಿ ಕಂಪನಿಯ ಸಾಲ ತೀರಿಸಲು ಕೆಲಸ ಮಾಡುತ್ತಿದ್ದಾರೆ.

ಇದರಲ್ಲಿ ಕಂಪನಿಯಿಂದ ಮೈಸೂರು ಅಮಲ್ಗಾ-ಮೇಟೆಡ್ ಕಾಫಿ ಇಸ್ಟೇಟ್ಸ್ ಲಿಮಿಟೆಡ್ (MACEL) ಗೆ ವರ್ಗಾಯಿಸಲಾಗಿದೆ ಎನ್ನಲಾದ ರೂ.3,535 ಕೋಟಿ ಸೇರಿದೆ. ಇದು ವಿ.ಸಿದ್ಧಾರ್ಥ್‌ ಸ್ಥಾಪಿಸಿದ ವೈಯಕ್ತಿಕ ಸಂಸ್ಥೆಯಾಗಿದೆ. ಜೂನ್ 30, 2025 ರ ಹೊತ್ತಿಗೆ, ಬ್ಯಾಂಕುಗಳು ಮತ್ತು NCD ಗಳಿಂದ ಅಲ್ಪಾವಧಿ ಮತ್ತು ದೀರ್ಘಾವಧಿಯ ಸಾಲ ಸೇರಿದಂತೆ ಅದರ ಒಟ್ಟು ಆರ್ಥಿಕ ಸಾಲವು ರೂ.372.52 ಕೋಟಿಗಳಷ್ಟಿತ್ತು.

ಸಾಲ ಮರುಪಾವತಿ ಘೋಷಿಸಿದ ಕೆಫೆ ಕಾಫಿ ಡೇ

ಇದು ಬ್ಯಾಂಕುಗಳಿಂದ ಒಟ್ಟು ₹196.42 ಕೋಟಿ ಬಾಕಿ ಉಳಿಸಿಕೊಂಡಿದ್ದು, ಅದರಲ್ಲಿ ₹181.66 ಕೋಟಿ ಮರುಪಾವತಿ ಮಾಡಿಲ್ಲ. ₹14.76 ಕೋಟಿ ಬಡ್ಡಿ ಪಾವತಿಯನ್ನೂ ಬಾಕಿ ಉಳಿಸಿಕೊಂಡಿದೆ. ಮಾರ್ಚ್ 2020 ರಲ್ಲಿ, ಸಿಡಿಇಎಲ್ ತನ್ನ ತಂತ್ರಜ್ಞಾನ ವ್ಯವಹಾರ ಪಾರ್ಕ್ ಅನ್ನು ಮಾರಾಟ ಮಾಡಲು ಬ್ಲಾಕ್‌ಸ್ಟೋನ್ ಗ್ರೂಪ್‌ನೊಂದಿಗೆ ಒಪ್ಪಂದ ಮಾಡಿಕೊಂಡ ನಂತರ 13 ಸಾಲದಾತರಿಗೆ ₹1,644 ಕೋಟಿ ಮರುಪಾವತಿ ಮಾಡುವುದಾಗಿ ಘೋಷಿಸಿತು.

ಈ ವರ್ಷದ ಆರಂಭದಲ್ಲಿ, ಫೆಬ್ರವರಿ 2025 ರಲ್ಲಿ, ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (NCLAT) ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್ (CDEL) ವಿರುದ್ಧದ ದಿವಾಳಿತನ ಕ್ರಮಗಳನ್ನು ರದ್ದುಗೊಳಿಸಿತು. ಸೋಮವಾರ ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಷೇರುಗಳು ಹಿಂದಿನ ಮುಕ್ತಾಯಕ್ಕಿಂತ ಶೇ 6.33 ರಷ್ಟು ಹೆಚ್ಚಾಗಿ ರೂ.37.46 ಕ್ಕೆ ಸ್ಥಿರವಾಯಿತು.

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

2025ರಲ್ಲಿ ಹೆಚ್ಚು ಸಂಪತ್ತುಗಳಿಸಿದ ಭಾರತದ ಶ್ರೀಮಂತರ ಪಟ್ಟಿ ರಿಲೀಸ್, ಅಂಬಾನಿಗೆ ಎಷ್ಟನೇ ಸ್ಥಾನ?
ತನ್ನ ವೀರ್ಯ ಬಳಸಿ ತಾಯಿಯಾಗಲು ಬಯಸುವರಿಗೆ IVF ವೆಚ್ಚ, ಎಲ್ಲಾ ಮಕ್ಕಳಿಗೆ ಆಸ್ತಿಯಲ್ಲಿ ಪಾಲು: ಉದ್ಯಮಿಯ ಬಿಗ್ ಆಫರ್