ಅಕಸ್ಮಾತ್ ರಷ್ಯಾ ಏನಾದರೂ ಸಮುದ್ರದಾಳದ ಕೇಬಲ್ ಮೇಲೆ ನಿಯಂತ್ರಣ ಸಾಧಿಸಿದರೆ, ಅಂತರ್ಜಾಲವೇ ಕಣ್ಮರೆಯಾಗಬಹುದೇ? ಆದರೆ ಸಮುದ್ರದಾಳದಲ್ಲಿರುವ ಕೇಬಲ್ ವ್ಯವಸ್ಥೆಗಳು ಡಿಜಿಟಲ್ ಜಗತ್ತನ್ನು ಹೇಗೆ ಮರು ರೂಪಿಸಬಲ್ಲದು?
- ಗಿರೀಶ್ ಲಿಂಗಣ್ಣ, (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಇತ್ತೀಚೆಗೆ ಕೆಂಪು ಸಮುದ್ರದ ಆಳದಲ್ಲಿರುವ ಕೇಬಲ್‌ಗಳ ಮೇಲೆ ನಡೆದಿರುವ ಹಾನಿಗಳು ಅತ್ಯಂತ ಅಮೂಲ್ಯವಾದ, ಅವಶ್ಯಕವಾದ, ಬದಲಾಯಿಸಲು ಸಾಧ್ಯವಿಲ್ಲದ ಉಪಕರಣಗಳ ಸುರಕ್ಷತೆಯ ಕುರಿತ ಕಳವಳಗಳಿಗೆ ಬೆಳಕು ಚೆಲ್ಲಿವೆ. ಇದರಿಂದ ತಲೆದೋರುವ ಒಂದು ಗಣನೀಯ ವಿಚಾರವೆಂದರೆ, ಯಾವುದಾದರೂ ಸರ್ಕಾರವಾಗಲಿ, ಉಗ್ರಗಾಮಿ ಸಂಘಟನೆಯಾಗಲಿ, ಸಂಪೂರ್ಣ ಜಗತ್ತಿನ ಅಂತರ್ಜಾಲ ವ್ಯವಸ್ಥೆಯನ್ನೇ ಹಾಳುಗೆಡವಬಹುದು ಎನ್ನುವುದಾಗಿದೆ. ಕೆಂಪು ಸಮುದ್ರದ ಆಳದಲ್ಲಿರುವ ಕೇಬಲ್‌ಗಳು ಹಾನಿಗೊಳಗಾಗಿರುವುದರಿಂದ, ಟೆಲಿಕಮ್ಯುನಿಕೇಷನ್ ಜಾಲದಲ್ಲಿ ಅಡಚಣೆಗಳನ್ನು ಉಂಟುಮಾಡಿದ್ದು, ಅಂತರ್ಜಾಲ ಸೇವಾ ಪೂರೈಕೆದಾರರು ಏಷ್ಯಾ, ಯುರೋಪ್ ಮತ್ತು ಮಧ್ಯ ಪೂರ್ವದ ನಡುವಿನ ಅಂತರ್ಜಾಲ ಟ್ರಾಫಿಕ್ ಅನ್ನು ವರ್ಗಾವಣೆಗೊಳಿಸಬೇಕಾಯಿತು.
ಆದರೆ, ಕೆಂಪು ಸಮುದ್ರದ ಘಟನೆ ಒಂದು ದೊಡ್ಡ ಸಮಸ್ಯೆಯ ಸಣ್ಣ ಉದಾಹರಣೆಯಷ್ಟೇ. ಒಂದು ವೇಳೆ ರಷ್ಯಾ ಏನಾದರೂ ಸಮುದ್ರದಾಳದ ಕೇಬಲ್‌ಗಳ ಮೇಲೆ ನಿಯಂತ್ರಣ ಸಾಧಿಸಿದರೆ, ಅಂತರ್ಜಾಲವೇ ಕಣ್ಮರೆಯಾಗಬಹುದೇ? ಆದರೆ ಸಮುದ್ರದಾಳದಲ್ಲಿರುವ ಕೇಬಲ್ ವ್ಯವಸ್ಥೆಗಳು ಡಿಜಿಟಲ್ ಜಗತ್ತನ್ನು ಹೇಗೆ ರೂಪಿಸುತ್ತವೆ? ಸಮುದ್ರದ ತಳದಲ್ಲಿರುವ ಕೇಬಲ್ ಮೇಲೆ ದಾಳಿ ನಡೆಸಿದರೆ, ಡಿಜಿಟಲ್ ವ್ಯವಸ್ಥೆ ನಾಶವಾಗುತ್ತದೆಯೇ?
ಒಂದು ದಿನ ಇದ್ದಕ್ಕಿದ್ದ ಹಾಗೇ, ಜಗತ್ತಿನ ಬಹಳಷ್ಟು ಜನರಿಗೆ ಅವರ ಸಾಮಾಜಿಕ ಜಾಲತಾಣಗಳು, ಇಮೇಲ್‌ಗಳನ್ನು ಸುದೀರ್ಘ ಕಾಲದವರೆಗೆ, ಅಥವಾ ಶಾಶ್ವತವಾಗಿ ಬಳಸಲು ಸಾಧ್ಯವಾಗದೇ ಹೋಗಬಹುದು. ಇದಕ್ಕೆ ಜಾಗತಿಕ ಅಂತರ್ಜಾಲ, ಟ್ರಾನ್ಸ್ ಎಕನಾಮಿಕ್ ಸಂವಹನ ದೊಡ್ಡ ಮಟ್ಟದಲ್ಲಿ ಸಮುದ್ರದಾಳದ ಕೇಬಲ್‌ಗಳ ಮೇಲೆ ಅವಲಂಬಿತವಾಗಿರುವುದು ಕಾರಣವಾಗಿದೆ. ಇದರ ಪರಿಣಾಮವಾಗಿ, ಅಂತರ್ಜಾಲಕ್ಕೆ ಸಮಸ್ಯೆ ಉಂಟಾಗುವ ಸಾಧ್ಯತೆಗಳಿವೆ.
ಆದರೆ, ಅಂತರ್ಜಾಲ ಬಳಕೆ ಸ್ಥಗಿತಗೊಳ್ಳುವುದರಿಂದ, ಸಾಮಾಜಿಕ ಜಾಲತಾಣಗಳ ಬಳಕೆಗೆ ತೊಂದರೆ ಉಂಟಾಗುವುದಕ್ಕಿಂತಲೂ ಹೆಚ್ಚಾಗಿ, ಜಾಗತಿಕ ಆರ್ಥಿಕ ವ್ಯವಸ್ಥೆಗಳ ಮೇಲೆ ಬೀರುವ ಪರಿಣಾಮ ಗಂಭೀರವಾಗಿರುತ್ತದೆ. ಸಮುದ್ರದಾಳದ ಕೇಬಲ್‌ಗಳು ಸಾಮಾನ್ಯವಾಗಿ ಗಮನಕ್ಕೆ ಬಾರದಿದ್ದರೂ, ಸಂಪೂರ್ಣ ಅಂತರ್ಜಾಲ ವ್ಯವಸ್ಥೆಯ ನಿರ್ಮಾಣಕ್ಕೆ ತಳಹದಿಯಾಗಿದೆ. ಈ ಮೂಲಭೂತ ವ್ಯವಸ್ಥೆ ಜಗತ್ತಿನಾದ್ಯಂತ ಎಲ್ಲ ಖಂಡಗಳನ್ನೂ ಸಂಪರ್ಕಿಸುವ ವ್ಯವಸ್ಥೆಯಾಗಿದ್ದು, ಕೋಟ್ಯಂತರ ಜನರ ನಡುವೆ ಮಾಹಿತಿ ವಿನಿಮಯಕ್ಕೆ ಸೇತುವೆಯಾಗಿದೆ.
ಸಂಬಂಧ ವೃದ್ಧಿಯ ಹಾದಿ: ಭಾರತದಿಂದ ಮಾರಿಷಸ್‌ನಲ್ಲಿ ಅಭಿವೃದ್ಧಿ!
ಜಾಗತಿಕವಾಗಿ 1,400 ಲ್ಯಾಂಡಿಂಗ್ ಬಿಂದುಗಳಿಗೆ 99% ಖಂಡಾಂತರ ಮಾಹಿತಿಗಳನ್ನು ರವಾನಿಸಲು ಈ ಕೇಬಲ್‌ಗಳು ಜವಾಬ್ದಾರವಾಗಿವೆ. ಈ ಕೇಬಲ್ ಜಾಲದ ಮೂಲಕ ಪ್ರತಿದಿನವೂ 10 ಟ್ರಿಲಿಯನ್ ಡಾಲರ್‌ಗೂ ಹೆಚ್ಚಿನ ಹಣಕಾಸು ವ್ಯವಹಾರಕ್ಕೆ ವೇದಿಕೆಯಾಗಿದೆ. ಟೆಲಿಕಮ್ಯುನಿಕೇಶನ್ ಮಾರುಕಟ್ಟೆ ಸಂಶೋಧನೆಗೆ ಹೆಸರಾಗಿರುವ ಟೆಲಿ ಜಿಯಾಗ್ರಫಿ ಎಂಬ ಸಂಸ್ಥೆಯ ವರದಿಯ ಪ್ರಕಾರ, 2024ರ ಆರಂಭದ ವೇಳೆಗೆ ಜಗತ್ತಿನಾದ್ಯಂತ 574 ಸಮುದ್ರದಾಳದ ಕೇಬಲ್‌ಗಳಿದ್ದವು. ಹಳೆಯ ಕೇಬಲ್‌ಗಳ ಜಾಗದಲ್ಲಿ ಹೊಸ ಕೇಬಲ್‌ಗಳನ್ನು ಕಾಲಕಾಲಕ್ಕೆ ಚಾಲ್ತಿಗೊಳಿಸುವುದರಿಂದ, ಈ ಕೇಬಲ್‌ಗಳ ಸಂಖ್ಯೆಗಳು ಬದಲಾಗುತ್ತಿರುತ್ತವೆ.
ಲೋಹದ ಒಳಗೆ ಜೋಡಿಸಲ್ಪಡುವ ಈ ಆಪ್ಟಿಕಲ್ ಕೇಬಲ್‌ಗಳ ಅಳವಡಿಕೆ ಮತ್ತು 1.4 ಮಿಲಿಯನ್ ಕಿಲೋಮೀಟರ್‌ಗಳಷ್ಟು ಉದ್ದಕ್ಕೆ ಪೂರೈಸುವಲ್ಲಿ ಫ್ರಾನ್ಸ್, ಅಮೆರಿಕಾ, ಮತ್ತು ಜಪಾನ್‌ಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ ಕೇಬಲ್‌ಗಳು ವಿವಿಧ ಖಂಡಗಳ ನಡುವೆ ನಿರಂತರ ಮತ್ತು ನಂಬಿಕಾರ್ಹ ಅಂತರ್ಜಾಲ ಸೇವೆ ಒದಗಿಸುತ್ತವೆ. ಅಮೆರಿಕಾದ ಸಬ್‌ಕಾಮ್, ಜಪಾನಿನ ಎನ್ಇಸಿ ಕಾರ್ಪೋರೇಷನ್, ಫ್ರೆಂಚ್ ಅಲ್ಕಾಟೆಲ್ ಸಬ್‌ಮರೀನ್ ನೆಟ್‌ವರ್ಕ್ಸ್ ಮತ್ತು ಚೀನಾದ ಎಚ್ಎಂಎನ್ ಟೆಕ್ ಸಂಸ್ಥೆಗಳು ಕೇಬಲ್ ಉದ್ಯಮದ ಪ್ರಮುಖ ಸಂಸ್ಥೆಗಳಾಗಿವೆ.
ಇನ್ನು ಇತ್ತೀಚಿನ ವರ್ಷಗಳಲ್ಲಿ, ತಂತ್ರಜ್ಞಾನ ಸಂಸ್ಥೆಗಳಾದ ಗೂಗಲ್, ಮೆಟಾ ಮತ್ತು ಮೈಕ್ರೋಸಾಫ್ಟ್‌ಗಳೂ ಸಹ ಹೊಸದಾದ ಆಪ್ಟಿಕ್ ಫೈಬರ್ ವ್ಯವಸ್ಥೆಗಳನ್ನು ರೂಪಿಸುವ ನಿಟ್ಟಿನಲ್ಲಿ ಹೂಡಿಕೆ ನಡೆಸುತ್ತಿವೆ. ಇದಕ್ಕೆ ಅವುಗಳ ಸೇವೆಗಳು ಅಂತರ್ಜಾಲದ ಮೇಲೆ ಅವಲಂಬಿತವಾಗಿರುವುದು ಕಾರಣವಾಗಿದೆ. ಈ ತಾಂತ್ರಿಕ ದೈತ್ಯ ಸಂಸ್ಥೆಗಳು ಕೇಬಲ್‌ಗಳ ಮೇಲಿನ 35% ಹೂಡಿಕೆಗೆ ಕಾರಣವಾಗಿವೆ.
ಸಾಮಾನ್ಯವಾಗಿ, ಸಾಗರದಾಳದ ಕೇಬಲ್‌ಗಳು ಬಹಳಷ್ಟು ತೆಳ್ಳಗಿದ್ದು, ಉದ್ಯಾನದಲ್ಲಿ ಬಳಸುವ ನೀರಿನ ಕೊಳವೆಗಳಿಗೆ ಹೋಲಿಸಬಹುದು. ಹೆಚ್ಚು ಸುರಕ್ಷಿತ ಸ್ಥಳಗಳಲ್ಲಿ ಇದರ ವ್ಯಾಸ ಗರಿಷ್ಠ 5 ಸೆಂಟಿಮೀಟರ್ ತಲುಪಬಹುದು. ಇವುಗಳ ಗಾತ್ರದಲ್ಲೂ ವ್ಯತ್ಯಾಸಗಳಿರುತ್ತವೆ. ಕೆಲವು ಕೇಬಲ್‌ಗಳು ಸಣ್ಣ ಗಾತ್ರದವಾಗಿದ್ದು, ಕೆಲವು ಕಿಲೋಮೀಟರ್‌ಗಳಷ್ಟು ಉದ್ದವಿರಬಹುದು. ಇನ್ನುಳಿದ ಕೇಬಲ್‌ಗಳು ಅತ್ಯಂತ ದೀರ್ಘವಾಗಿರುತ್ತವೆ. ಉದಾಹರಣೆಗೆ, 2 ಆಫ್ರಿಕಾ ಕೇಬಲ್ ಗಮನಾರ್ಹವಾದ 45,000 ಕಿಲೋಮೀಟರ್‌ಗಳಷ್ಟು ಉದ್ದವಾಗಿದೆ.
ಐಐಎಸ್‌ಸಿ ಸ್ಥಾಪನೆ ಮತ್ತು ಮಹಿಳಾ ಸಬಲೀಕರಣದ ಹಿಂದಿನ ಶಕ್ತಿ ಮಹಾರಾಣಿ ಕೆಂಪನಂಜಮ್ಮಣ್ಣಿ: ಲೇಖಕ ಗಿರೀಶ್ ಲಿಂಗಣ್ಣ ಬರಹ
ಸಮುದ್ರದ ತಳದಲ್ಲಿ ಕೇಬಲ್‌ಗಳು ಯಾವಾಗ ಅಳವಡಿಸಲ್ಪಟ್ಟವು ಎನ್ನುವುದರ ಮೇಲೆ ಕೇಬಲ್‌ಗಳ ಮೂಲಕ ಮಾಹಿತಿ ಪ್ರಸರಣದ ವೇಗ ಅವಲಂಬಿತವಾಗಿರುತ್ತದೆ. ಹೊಸದಾದ ಕೇಬಲ್‌ಗಳು ಹಳೆಯ ಕೇಬಲ್‌ಗಳಿಗಿಂತ ಹೆಚ್ಚಿನ ಮಾಹಿತಿ ಪ್ರಸರಣ ನಡೆಸುತ್ತವೆ. ಉದಾಹರಣೆಗೆ, 2018ರಲ್ಲಿ ಅಳವಡಿಸಲ್ಪಟ್ಟ ಮರಿಯಾ ಕೇಬಲ್ ಪ್ರತಿ ಸೆಕೆಂಡಿಗೆ 224 ಟೆರಾಬಿಟ್ಸ್ ಮಾಹಿತಿಗಳನ್ನು ರವಾನಿಸಬಲ್ಲದು.
ಹಿಂದೆ ಕನ್ಸರ್ವೇಟಿವ್ ಪಕ್ಷದ ಸಂಸದರಾಗಿದ್ದ, ಈಗ ಬ್ರಿಟನ್ ಪ್ರಧಾನಿಯಾಗಿರುವ ರಿಷಿ ಸುನಾಕ್ ಅವರು ಕೇಬಲ್ ವ್ಯವಸ್ಥೆಯ ಜೊತೆಗೆ ತಲೆದೋರಬಲ್ಲ ಅಪಾಯಗಳ ಕುರಿತು ವರದಿಯೊಂದನ್ನು ಪ್ರಕಟಿಸಿದ್ದರು. ಈ ಕೇಬಲ್‌ಗಳಿಗೆ ಸೂಕ್ತ ಭದ್ರತೆ ಇಲ್ಲದಿರುವ ಕಾರಣ, ಭೂಮಿಯ ಮೇಲೆ ಮತ್ತು ಸಮುದ್ರದ ಆಳದಲ್ಲಿ ಶತ್ರು ರಾಷ್ಟ್ರಗಳು ಮತ್ತು ಭಯೋತ್ಪಾದಕರು ದಾಳಿ ನಡೆಸುವ ಅಪಾಯಗಳಿವೆ ಎಂದು ರಿಷಿ ಸುನಾಕ್ ಎಚ್ಚರಿಕೆ ನೀಡಿದ್ದರು.
ಹಲವು ವರ್ಷಗಳ ಕಾಲ, ರಷ್ಯನ್ ಫೆಡರೇಶನ್‌ಗೆ ಸಂಬಂಧಿಸಿದಂತೆ, ಹಿರಿಯ ನ್ಯಾಟೋ ಅಧಿಕಾರಿಯೊಬ್ಬರು ಫೈಬರ್ ಆಪ್ಟಿಕ್ ಕೇಬಲ್‌ಗಳಿಗೆ ಉಂಟಾಗಬಹುದಾದ ಹಾನಿಯ ಕುರಿತು ಎಚ್ಚರಿಸುತ್ತಾ ಬಂದಿದ್ದರು. ಕೆಂಪು ಸಮುದ್ರದಲ್ಲಿ ಇತ್ತೀಚೆಗೆ ಉಂಟಾಗಿರುವ ಹಾನಿಗಳು ಆ ಎಚ್ಚರಿಕೆಗಳಿಗೆ ಹಿಡಿದ ಕನ್ನಡಿಯಾಗಿದೆ. 2017ರಲ್ಲಿ, ಯುಕೆಯ ಮಾಜಿ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಸರ್ ಸ್ಟುವರ್ಟ್ ಪೀಚ್ ಅವರು ರಷ್ಯಾಗೆ ಅಂತರ್ಜಾಲ ಕೇಬಲ್‌ಗಳ ಮೇಲೆ ದಾಳಿ ನಡೆಸುವ ಸಾಮರ್ಥ್ಯವಿದ್ದು, ಇದರ ಪರಿಣಾಮ ಗಂಭೀರವಾಗಿರಲಿದೆ ಎಂದು ಎಚ್ಚರಿಸಿದ್ದರು.
ಆ ಅವಧಿಯಲ್ಲಿ, ಉತ್ತರ ಅಟ್ಲಾಂಟಿಕ್ ಸಮುದ್ರದಲ್ಲಿ, ಅದರಲ್ಲೂ ಗ್ರೀನ್‌ಲ್ಯಾಂಡ್, ಐಸ್‌ಲ್ಯಾಂಡ್ ಮತ್ತು ಯುಕೆ ನಡುವಿನ ಸಮುದ್ರ ಪ್ರದೇಶವಾದ ಜಿಐಯುಕೆ ಗ್ಯಾಪ್‌ನಲ್ಲಿ ಹೆಚ್ಚುತ್ತಿದ್ದ ರಷ್ಯನ್ ಜಲಾಂತರ್ಗಾಮಿಗಳನ್ನು ಯುಕೆಯ ರಕ್ಷಣಾ ಸಚಿವಾಲಯ ಗಮನಿಸಿತ್ತು. ಈ ಪ್ರದೇಶ ರಷ್ಯಾಗೆ ನ್ಯಾಟೋ ಸದಸ್ಯ ರಾಷ್ಟ್ರಗಳ ಮೇಲೆ ಅಸಾಂಪ್ರದಾಯಿಕ ಮಾಹಿತಿ ದಾಳಿಗಳನ್ನು ನಡೆಸಲು ಸೂಕ್ತ ತಾಣವಾಗಿದೆ ಎಂದು ರಕ್ಷಣಾ ಸಚಿವಾಲಯ ಅಭಿಪ್ರಾಯ ಪಟ್ಟಿತ್ತು.
ಸೌರ ಚಟುವಟಿಕೆಗಳ ಅಧ್ಯಯನಕ್ಕೆ ಸಜ್ಜಾದ ಆದಿತ್ಯ ಎಲ್1 ಬಗ್ಗೆ ಒಂದಿಷ್ಟು..!
ಉತ್ತರ ಅಟ್ಲಾಂಟಿಕ್ ಸಮುದ್ರದಲ್ಲಿ ಅಂತರ್ಜಾಲ ಕೇಬಲ್‌ಗಳ ಬಳಿ ರಷ್ಯನ್ ಜಲಾಂತರ್ಗಾಮಿಗಳ ಉಪಸ್ಥಿತಿ ಹೆಚ್ಚುತ್ತಿದೆ ಎನ್ನುವುದನ್ನು ಅಮೆರಿಕನ್ ನೌಕಾಪಡೆಯೂ ಸೂಚಿಸಿತ್ತು. ಇದರ ಪರಿಣಾಮವಾಗಿ, ನ್ಯಾಟೋ ರಷ್ಯನ್ ಜಲಾಂತರ್ಗಾಮಿಗಳ ಚಟುವಟಿಕೆಗಳನ್ನು ಗಮನಿಸಲು ಹೆಚ್ಚಿನ ಮಿಲಿಟರಿ ವಿಮಾನಗಳನ್ನು ನಿಯೋಜಿಸಿ, ಕಣ್ಗಾವಲು ಹೆಚ್ಚಿಸಲು ನಿರ್ಧರಿಸಿತು.
ಫೆಬ್ರವರಿ 24, 2022ರ ಬಳಿಕ, ಮಾಸ್ಕೋ ತನ್ನ ಬೆದರಿಕೆಗಳನ್ನು ಇನ್ನಷ್ಟು ತೀಕ್ಷ್ಣಗೊಳಿಸಿ ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯ ಸಾಧ್ಯತೆಯ ಕುರಿತು ಸುಳಿವು ನೀಡಿತ್ತು. ಇಂತಹ ಬೆದರಿಕೆಯನ್ನು ಒಡ್ಡುವ ಮೂಲಕ ರಷ್ಯಾ ಉಕ್ರೇನ್‌ಗೆ ಲಭಿಸುವ ನೆರವನ್ನು ತಡೆಯುವ ಪ್ರಯತ್ನ ನಡೆಸುತ್ತಾ, ಜಾಗತಿಕ ಮಾಹಿತಿ ಪ್ರಸರಣ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವಂತಹ ಚಟುವಟಿಕೆಗಳನ್ನು ಕೈಗೊಳ್ಳುವ ಸಾಧ್ಯತೆಗಳಿವೆ.
ಸಾಗರದ ತಳದಲ್ಲಿರುವ ಕೇಬಲ್‌ಗಳು ಹಾನಿಗೊಳಗಾಗುವುದು ಸಹಜ ಎನ್ನುವುದು ತಜ್ಞರ ಅಭಿಪ್ರಾಯ. ಇದಕ್ಕೆ ಸಮುದ್ರದ ತಳದಲ್ಲಿ ಸಂಭವಿಸುವ ಭೂಕಂಪಗಳು, ಬಂಡೆಗಳ ಕುಸಿತಗಳು, ಮತ್ತು ಹಡಗುಗಳ ಲಂಗರುಗಳೊಡನೆ ಉಜ್ಜಾಡುವುದು ಪ್ರಮುಖ ಕಾರಣಗಳಾಗಿವೆ. ಒಟ್ಟಾರೆಯಾಗಿ, ಯುರೋಪ್, ಅಮೆರಿಕಾ, ಪೂರ್ವ ಏಷ್ಯಾಗಳ ಸಮುದ್ರದಾಳದಲ್ಲಿ ಒಂದೇ ಪ್ರದೇಶದಲ್ಲಿ ಹಲವಾರು ಕೇಬಲ್‌ಗಳು ಇರುವುದರಿಂದ, ಅಟ್ಲಾಂಟಿಕ್ ಸಮುದ್ರದಾಳದಲ್ಲಿ ಒಂದಷ್ಟು ಕೇಬಲ್‌ಗಳು ಹಾನಿಗೊಳಗಾದರೆ ಜಾಗತಿಕ ಅಂತರ್ಜಾಲ ಸ್ಥಗಿತಗೊಳ್ಳುವುದಿಲ್ಲ.
ಬಾಂಗ್ಲಾದೇಶದ ನೂತನ, ದಿಟ್ಟ ಹೆಜ್ಜೆಯೆಡೆಗೊಂದು ನೋಟ: ಬಿಎನ್ಎಸ್ ಶೇಖ್ ಹಸೀನಾ ಪರಿಚಯ
ಒಂದು ವೇಳೆ ರಷ್ಯಾ ಏನಾದರೂ ಅಮೆರಿಕಾಗೆ ಪೂರ್ವ ಮತ್ತು ಪಶ್ಚಿಮ ಕರಾವಳಿಯಿಂದ ಸಂಪರ್ಕ ಕಲ್ಪಿಸುವ ಎಲ್ಲ ಕೇಬಲ್‌ಗಳನ್ನು ಹಾಳುಗೆಡವಿದರೂ, ಜಾಗತಿಕ ಅಂತರ್ಜಾಲ ಸಂಪರ್ಕ ಕಡಿತಗೊಳ್ಳುವುದಿಲ್ಲ. ಅಂತಹ ಸನ್ನಿವೇಶ ಎದುರಾದರೆ, ಅದರಿಂದಾಗಿ ಅಮೆರಿಕನ್ನರಿಗೆ ಜಗತ್ತಿನಾದ್ಯಂತ ವಿವಿಧ ಪ್ರದೇಶಗಳಲ್ಲಿರುವ ತಮ್ಮ ಪ್ರೀತಿಪಾತ್ರರೊಡನೆ ಸಂಪರ್ಕ ಹೊಂದಲು ತಾತ್ಕಾಲಿಕವಾಗಿ ಕಷ್ಟವಾಗುತ್ತದೆ. ಅದರೊಡನೆ, ಫೇಸ್‌ಬುಕ್, ಇನ್ಸ್ಟಾಗ್ರಾಮ್‌ನಂತಹ ಸಾಮಾಜಿಕ ಜಾಲತಾಣಗಳ ಬಳಕೆದಾರರಿಗೆ ತಾತ್ಕಾಲಿಕವಾಗಿ ತಮ್ಮ ಚಿತ್ರಗಳು, ವೀಡಿಯೋಗಳನ್ನು ಹಂಚಿಕೊಳ್ಳಲು ಅಸಾಧ್ಯವಾಗುತ್ತದೆ.