ಖಾದ್ಯ ತೈಲ ದರ ಇಳಿಸಲು 11,040 ಕೋಟಿ ಹೂಡಿಕೆ!

By Suvarna NewsFirst Published Aug 19, 2021, 11:11 AM IST
Highlights

* ಹೊಸ ಖಾದ್ಯತೈಲ ನೀತಿಗೆ ಕೇಂದ್ರ ಸಂಪುಟ ಅಸ್ತು

* ಖಾದ್ಯ ತೈಲ ದರ ಇಳಿಸಲು 11,040 ಕೋಟಿ ಹೂಡಿಕೆ

ನವದೆಹಲಿ(ಆ.19): ಅಡುಗೆ ಎಣ್ಣೆ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಿಂದ ರಾಷ್ಟ್ರೀಯ ಅಡುಗೆ ಎಣ್ಣೆ ಯೋಜನೆ (ತಾಳೆ ಎಣ್ಣೆ)ಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಮುಂದಿನ 5 ವರ್ಷದಲ್ಲಿ ತಾಳೆ ಬೆಳೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರ 11,040 ಕೋಟಿ ರು. ಹೂಡಿಕೆ ಮಾಡಲಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಅಡುಗೆ ಎಣ್ಣೆ ದರಗಳು ಇಳಿಕೆ ಆಗುವ ನಿರೀಕ್ಷೆ ಇದೆ. ಆ.15ರಂದು ಸ್ವಾತಂತ್ರ್ಯೋತ್ಸವದ ಭಾಷಣದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಅಡುಗೆ ಎಣ್ಣೆ ಯೋಜನೆ (ತಾಳೆ ಎಣ್ಣೆ)ಯನ್ನು ಘೋಷಣೆ ಮಾಡಿದ್ದರು.

ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಅನುರಾಗ್‌ ಠಾಕೂರ್‌, ರಾಷ್ಟ್ರೀಯ ಅಡುಗೆ ಎಣ್ಣೆ ಯೋಜನೆಯ ಅಡಿಯಲ್ಲಿ ಈಶಾನ್ಯ ಭಾಗದ ರಾಜ್ಯಗಳು, ಅಂಡಮಾನ್‌ ಮತ್ತು ನಿಕೋಬಾರ್‌ನಲ್ಲಿ ತಾಳೆ ಬೆಳೆಯನ್ನು ಬೆಳೆಯಲು ಒತ್ತು ನೀಡಲಾಗುವುದು. ಇದರಲ್ಲಿ ಕೇಂದ್ರ ಸರ್ಕಾರದ ಪಾಲು 8,844 ಕೋಟಿ ರು. ಹಾಗೂ ರಾಜ್ಯ ಸರ್ಕಾರಗಳ ಪಾಲು 2,196 ಕೋಟಿ ರು. ಆಗಿದೆ. 2025​-26ರ ವೇಳೆಗೆ ಹೆಚ್ಚುವರಿ 6.5 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ 11.20 ಲಕ್ಷ ಟನ್‌ ತಾಳೆ ಬೆಳೆಯುವ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದ್ದಾರೆ.

ಭಾರತ ಅಡುಗೆ ಎಣ್ಣೆಗಳಿಗಾಗಿ ಆಮದಿನ ಮೇಲೆಯೇ ಹೆಚ್ಚಾಗಿ ಅವಲಂಬಿತವಾಗಿದೆ. ಪ್ರಸ್ತುತ ತಾಳೆ ಎಣ್ಣೆ ವಿಶ್ವದಲ್ಲೇ ಅತಿ ಹೆಚ್ಚು ಬಳಕೆ ಆಗುತ್ತಿರುವ ಖಾದ್ಯ ತೈಲವಾಗಿದೆ. ಭಾರತ ತಾಳೆ ಎಣ್ಣೆಯ ಅತಿ ಹೆಚ್ಚು ಬಳಕೆದಾರ ದೇಶ ಎನಿಸಿದೆ. ಭಾರತ ಒಟ್ಟಾರೆಯಾಗಿ ಆಮದು ಮಾಡಿಕೊಳ್ಳುವ ಖಾದ್ಯ ತೈಲದ ಪೈಕಿ ತಾಳೆ ಎಣ್ಣೆಯ ಪಾಲು ಶೇ.55ರಷ್ಟಿದೆ. ಮಲೇಷ್ಯಾ, ಬ್ರೆಜಿಲ್‌, ಅರ್ಜೆಂಟೀನಾದಿಂದ ಹೆಚ್ಚಿನ ಪ್ರಮಾಣದ ತಾಳೆ ಎಣ್ಣೆಯನ್ನು ಭಾರತ ಆಮದು ಮಾಡಿಕೊಳ್ಳುತ್ತಿದ್ದರೆ, ರಷ್ಯಾ ಮತ್ತು ಉಕ್ರೇನ್‌ನಿಂದ ಸೂರ್ಯಕಾಂತಿ ಎಣ್ಣೆಯನ್ನು ತರಿಸಿಕೊಳ್ಳುತ್ತಿದೆ.

click me!