ಜವಳಿ ಉದ್ಯಮಕ್ಕೆ ಕೇಂದ್ರದ ಟಾನಿ​ಕ್‌: 5 ವರ್ಷದ ಮಟ್ಟಿ​ಗೆ 10,000 ಕೋಟಿ ಪ್ರೋತ್ಸಾಹ ಧನ!

By Kannadaprabha NewsFirst Published Sep 9, 2021, 8:11 AM IST
Highlights

* 5 ವರ್ಷದ ಮಟ್ಟಿ​ಗೆ 10,000 ಕೋಟಿ ಪ್ರೋತ್ಸಾಹ ಧನ

* ಜವಳಿ ಉದ್ಯಮಕ್ಕೆ ಕೇಂದ್ರದ ಟಾನಿ​ಕ್‌

* ಕೇಂದ್ರ ಸಚಿವ ಸಂಪುಟ ನಿರ್ಧಾ​ರ

* 7.5 ಲಕ್ಷ ಜನರಿಗೆ ಉದ್ಯೋಗ ಸಿಗುವ ನಿರೀಕ್ಷೆ

ನವದೆಹಲಿ(ಸೆ.09): ಕೇಂದ್ರ ಸರ್ಕಾರ ಜವಳಿ ಉದ್ಯಮದಲ್ಲಿ ಉತ್ಪಾದನೆ ಮತ್ತು ರಫ್ತು ಹೆಚ್ಚಿಸಲು 10,683 ಕೋಟಿ ರು. ಉತ್ಪಾದನೆ ಆಧಾರಿತ ಪ್ರೋತ್ಸಾಹ ಧನ ಯೋಜನೆಗೆ ಅನುಮೋದನೆ ನೀಡಿದೆ. ಈ ಯೋಜನೆಯಿಂದ ನೇರವಾಗಿ 7.5 ಲಕ್ಷ ಜನರಿಗೆ ಉದ್ಯೋಗ ದೊರೆಯುವ ನಿರೀಕ್ಷೆ ಇದ್ದು, ಪರೋಕ್ಷವಾಗಿ ಲಕ್ಷಾಂತರ ಮಂದಿಗೆ ಉದ್ಯೋಗಾವಕಾಶ ಸೃಷ್ಟಿಆಗಲಿದೆ.

ಮುಂದಿನ 5 ವರ್ಷಗಳ ಅವಧಿಯಲ್ಲಿ ಸರ್ಕಾರ ಜವಳಿ ಕ್ಷೇತ್ರಕ್ಕೆ ಪ್ರೋತ್ಸಾಹ ಧನವನ್ನುಹಂಚಿಕೆ ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯ ವೇಳೆ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.ಈ ಸಂಬಂಧ ಇನ್ನೊಂದು ವಾರದ ಒಳಗಾಗಿ ಸಚಿವಾಲಯ ಅಧಿಸೂಚನೆ ಹೊರಡಿಸಲಿದ್ದು, ತಿಂಗಳಾಂತ್ಯದ ವೇಳೆಗೆ ವಿಸ್ತೃತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಿದೆ.

ಯಾರಿಗೆ ಪ್ರಯೋ​ಜ​ನ?:

ಎಎಂಎಫ್‌ ಫ್ಯಾಬ್ರಿಕ್‌ ಉಡುಪು, ಎಎಂಎಫ್‌ ಬಟ್ಟೆಗಳು, ತಾಂತ್ರಿಕ ಜವಳಿಗೆ ಸಂಬಂಧಿಸಿದ 10 ವಿಭಾಗಗಳಲ್ಲಿ ಉತ್ಪಾದನೆ ಆಧಾರಿತ ಪ್ರೋತ್ಸಾಹ ಧನ ನೀಡಲು ಸಂಪುಟ ಸಭೆ ಅನುಮೋದನೆ ನೀಡಿದೆ.

ಮೊದಲ ಹಂತ​ದಲ್ಲಿ, ಅಧಿಸೂಚಿತ ಮಾನವ ನಿರ್ಮಿತ ಫ್ಯಾಬ್ರಿಕ್ಸ್‌, ಗಾರ್ಮೆಂಟ್ಸ್‌ ಮತ್ತು ತಾಂತ್ರಿಕ ಉತ್ಪನ್ನಗಳ ತಯಾರಿಕೆಗಾಗಿ ಘಟಕಗಳು, ಯಂತ್ರೋಪಕರಣಗಳು, ಸಲಕರಣೆಗಳಲ್ಲಿ 300 ಕೋಟಿ ರು. ಮೇಲ್ಪಟ್ಟು ಹೂಡಿಕೆ ಮಾಡುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಪ್ರೋತ್ಸಾಹಧನಕ್ಕಾಗಿ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಎರಡನೇ ಹಂತದಲ್ಲಿ, ಜವಳಿ ಉದ್ಯಮದಲ್ಲಿ ಕನಿಷ್ಠ 100 ಕೋಟಿ ರು. ಹೂಡಿಕೆ ಮಾಡಲು ಬಯಸುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಈ ಯೋಜನೆಯಲ್ಲಿ ಭಾಗವಹಿಸಲು ಅರ್ಜಿ ಸಲ್ಲಿಸಬಹುದಾಗಿದೆ.

ಅತ್ಯುತ್ತಮ ಗುಣಮಟ್ಟದ ಎಂಎಂಎಫ್‌ ಫ್ಯಾಬ್ರಿಕ್‌, ಗಾರ್ಮೆಂಟ್ಸ್‌ ಮತ್ತು ತಾಂತ್ರಿಕ ಉತ್ಪನ್ನಗಳ ಉತ್ಪಾದನೆ ಹೆಚ್ಚಳಕ್ಕೆ ಈ ಯೋಜನೆ ಸಹಕಾರಿ ಆಗಲಿದೆ. ಮುಂದಿನ 5 ವರ್ಷಗಳಲ್ಲಿ ಜವಳಿ ಉದ್ಯಮದಲ್ಲಿ 19,000 ಕೋಟಿ ರು. ಬಂಡವಾಳ ಹೂಡಿಕೆ ಹಾಗೂ 3 ಲಕ್ಷ ಕೋಟಿಗೂ ಅಧಿಕ ವಹಿವಾಟನ್ನು ಎದುರು ನೋಡುತ್ತಿದೆ. ಈ ಯೋಜನೆಯಿಂದ ಅಗುಜರಾತ್‌, ಮಹಾರಾಷ್ಟ್ರ, ಉತ್ತರ ಪ್ರದೇಶ, ತಮಿಳುನಾಡು, ಪಂಜಾಬ್‌, ಒಡಿಶಾ ರಾಜ್ಯಗಳ ಜವಳಿ ಉದ್ಯಮಗಳಿಗೆ ಪ್ರಯೋಜನವಾಗಲಿದೆ

click me!