ಉದ್ಯೋಗಿಗಳು EPF ಎರಡು ಖಾತೆ ತೆರೆಯೋದು ಅಗತ್ಯವೇ? ಇಲ್ಲಿದೆ ಮಾಹಿತಿ

By Suvarna News  |  First Published Sep 8, 2021, 10:24 AM IST

ಕೇಂದ್ರ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಹೆಚ್ಚುವರಿ ಇಪಿಎಫ್ ಕೊಡುಗೆ ಮೇಲಿನ ಬಡ್ಡಿಗೆ ತೆರಿಗೆ ವಿಧಿಸೋ ಬಗ್ಗೆ ಈಗಾಗಲೇ ಅಧಿಸೂಚನೆ ಹೊರಡಿಸಿದೆ. ಇದಕ್ಕೆ ಸಂಬಂಧಿಸಿ ಉದ್ಯೋಗಿ ಎರಡು ಪಿಎಫ್ ಖಾತೆ ತೆರೆಯಬೇಕೆ? ಇದು ಯಾರಿಗೆ ಅನ್ವಯಿಸುತ್ತೆ ಎಂಬ ಸಂದೇಹಗಳಿಗೆ ಇಲ್ಲಿದೆ ಉತ್ತರ.


ನೌಕರರ ಭವಿಷ್ಯ ನಿಧಿ (ಇಪಿಎಫ್) ಹಾಗೂ ಸ್ವಯಂ ಭವಿಷ್ಯ ನಿಧಿ (ವಿಪಿಎಫ್) ಕೊಡುಗೆ ವಾರ್ಷಿಕ 2.5ಲಕ್ಷ ರೂ. ಮೀರಿರೋ ಉದ್ಯೋಗಿಗಳು ಇನ್ನು ಮುಂದೆ ಎರಡು ಪ್ರತ್ಯೇಕ ಪಿಎಫ್ ಖಾತೆಗಳನ್ನು ನಿರ್ವಹಿಸೋದು ಅಗತ್ಯ.  ಏಕೆಂದ್ರೆ ವಾರ್ಷಿಕ 2.5ಲಕ್ಷ ರೂ. ಮೀರಿದ ಕೊಡುಗೆ ಮೇಲೆ ವಿಧಿಸೋ ಬಡ್ಡಿಗೆ ಇನ್ನು ಮುಂದೆ ತೆರಿಗೆ ಬೀಳಲಿದೆ. ಹೀಗಾಗಿ ಇಪಿಎಫ್ ಖಾತೆಯಲ್ಲಿ ಇನ್ನು ಮುಂದೆ ಎರಡು ಭಾಗಗಳಿರಲಿವೆ- ಒಂದು ತೆರಿಗೆಗೊಳಪಡದ ಕೊಡುಗೆ ಹಾಗೂ ಇನ್ನೊಂದು ತೆರಿಗೆಗೊಳಪಡೋ ಕೊಡುಗೆ. 

ಸೆ.1ರ ಈ ಆರ್ಥಿಕ ಬದಲಾವಣೆಗಳು ನಿಮ್ಮ ಜೇಬಿನ ಮೇಲೆ ಪರಿಣಾಮ ಬೀರಬಲ್ಲವು!

Tap to resize

Latest Videos

undefined

ಬಜೆಟ್ನಲ್ಲಿ ಘೋಷಣೆ                                                                                                                                                                                                         
ನೌಕರರ  ಭವಿಷ್ಯ ನಿಧಿ (ಇಪಿಎಫ್) ಹಾಗೂ ಸ್ವಯಂ ಭವಿಷ್ಯ ನಿಧಿ (ವಿಪಿಎಫ್) ಕೊಡುಗೆ ವಾರ್ಷಿಕ 2.5ಲಕ್ಷ ರೂ.(ಸರ್ಕಾರಿ ನೌಕರರಿಗೆ 5ಲಕ್ಷ ರೂ.) ಮೀರಿದರೆ, ಅದರ ಮೇಲಿನ ಬಡ್ಡಿಗೆ ತೆರಿಗೆ ವಿಧಿಸಲಾಗೋದು ಎಂದು 2021 ನೇ ಸಾಲಿನ ಬಜೆಟ್ನಲ್ಲಿ ಕೇಂದ್ರ ಸರ್ಕಾರ ಘೋಷಿಸಿತ್ತು. ಹೆಚ್ಚುವರಿ ಇಪಿಎಫ್ ಕೊಡುಗೆ ಮೇಲಿನ ಬಡ್ಡಿಗೆ ತೆರಿಗೆ ವಿಧಿಸೋ ನಿಯಮಗಳ ಬಗ್ಗೆ ಕೇಂದ್ರ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) 2021ರ ಆಗಸ್ಟ್ 31ರಂದು ಅಧಿಸೂಚನೆ ಕೂಡ ಹೊರಡಿಸಿದೆ.  

ಸಿಬಿಡಿಟಿ ಅಧಿಸೂಚನೆಯಲ್ಲೇನಿದೆ?
ಸಿಬಿಡಿಟಿ ಅಧಿಸೂಚನೆ ಪ್ರಕಾರ ನೌಕರರ ಭವಿಷ್ಯ ನಿಧಿ (ಇಪಿಎಫ್) ಖಾತೆಯಲ್ಲೇ ಎರಡು ಭಾಗಗಳನ್ನು ಸೃಷ್ಟಿಸಲಾಗುತ್ತದೆ. ಒಂದರಲ್ಲಿ ತೆರಿಗೆ ವಿಧಿಸೋ ಹಾಗೂ ಇನ್ನೊಂದರಲ್ಲಿ ತೆರಿಗೆಮುಕ್ತ ಮೊತ್ತದ ಮಾಹಿತಿಯನ್ನು ನೀಡಲಾಗುತ್ತದೆ. ಈ ನಿಯಮವು 2021-22ನೇ ಹಣಕಾಸು ಸಾಲಿನಿಂದಲೇ ಜಾರಿಗೆ ಬರಲಿದೆ. 

ಇಪಿಎಫ್ಗೆ ಹೇಗೆ ತೆರಿಗೆ ವಿಧಿಸಲಾಗುತ್ತದೆ?
ಪ್ರತಿ ತಿಂಗಳು ಉದ್ಯೋಗಿಗಳ ವೇತನದ ಶೇ.12ರಷ್ಟು ಪಾಲು ಅವರ ಇಪಿಎಫ್ ಖಾತೆಗೆ ಜಮಾ ಆಗುತ್ತದೆ. ಇಷ್ಟೇ ಮೊತ್ತದ ಹಣವನ್ನು ಉದ್ಯೋಗದಾತ ಸಂಸ್ಥೆ ಕೂಡ ತನ್ನಉದ್ಯೋಗಿಯ ಖಾತೆಗೆ ಕೊಡುಗೆಯಾಗಿ ನೀಡುತ್ತದೆ. ಒಂದು ಹಣಕಾಸು ವರ್ಷದಲ್ಲಿ ಇಪಿಎಫ್ ಖಾತೆಗೆ ನಿಮ್ಮ ಕೊಡುಗೆ 2.5ಲಕ್ಷ ರೂ.ಗಿಂತ ಹೆಚ್ಚಿದ್ದಲ್ಲಿ ಆ ಹೆಚ್ಚುವರಿ ಮೊತ್ತದ ಮೇಲಿನ ಬಡ್ಡಿಗೆ ಸ್ಲ್ಯಾಬ್ ಆಧಾರದಲ್ಲಿ ತೆರಿಗೆ ವಿಧಿಸಲಾಗುತ್ತದೆ. ಉದಾಹರಣೆಗೆ ಒಬ್ಬ ಉದ್ಯೋಗಿಯ ಇಪಿಎಫ್ ಖಾತೆಯಲ್ಲಿ 10 ಲಕ್ಷ ರೂ. ಇದೆ. ಆತ ಇಪಿಎಫ್ಗೆ 4 ಲಕ್ಷ ರೂ. ಕೊಡುಗೆ ನೀಡುತ್ತಾನೆ. ಆತನ ಉದ್ಯೋಗದಾತ ಕೂಡ ಅಷ್ಟೇ ಮೊತ್ತದ ಕೊಡುಗೆಯನ್ನು ಇಪಿಎಫ್ಗೆ ನೀಡುತ್ತಾನೆ. ಈಗ ಈ ಕೊಡುಗೆಯನ್ನು ಈ ಕೆಳಗಿನಂತೆ ವಿಂಗಡಿಸಬಹುದು.
ತೆರಿಗೆಗೊಳಪಡೋ ಕೊಡುಗೆ    
1.50ಲಕ್ಷ ರೂ.(4ಲಕ್ಷ ರೂ.-2.5ಲಕ್ಷ ರೂ.)
ಜೊತೆಗೆ 1.50ಲಕ್ಷ ರೂ.ಗೆ ಲಭಿಸೋ ಬಡ್ಡಿ
ತೆರಿಗೆಮುಕ್ತ ಕೊಡುಗೆ
12.50ಲಕ್ಷ ರೂ. (10ಲಕ್ಷ ರೂ.+2.50ಲಕ್ಷ ರೂ.)
ಜೊತೆಗೆ 12.50ಲಕ್ಷ ರೂ.ಗೆ ಲಭಿಸೋ ಬಡ್ಡಿ

ಡಿಜಿಟಲ್‌ ಗೋಲ್ಡ್‌ ಅಂದ್ರೇನು? ಖರೀದಿಸೋದು ಹೇಗೆ?

ಹೆಚ್ಚುವರಿ ಕೆಲಸ
ಹೊಸ ವ್ಯವಸ್ಥೆಯನ್ನು ಪರಿಚಯಿಸಿದಾಗ ಅದಕ್ಕೆ ಹೊಂದಿಕೊಳ್ಳಲು ಒಂದಿಷ್ಟು ಸಮಯ ಬೇಕಾಗುತ್ತದೆ. ಅದೇರೀತಿ ಇಪಿಎಫ್ ಖಾತೆಯಲ್ಲಿರೋ ಹಣದ ಬಡ್ಡಿ ಮೇಲೆ ವಿಧಿಸಲಾಗೋ ತೆರಿಗೆ ಲೆಕ್ಕಾಚಾರ ಕೂಡ ಉದ್ಯೋಗದಾತ ಸಂಸ್ಥೆಗಳಿಗೆ, ಉದ್ಯೋಗಿಗಳಿಗೆ, ಇಪಿಎಫ್ ಸಿಬ್ಬಂದಿ ಎಲ್ಲರಿಗೂ ಹೆಚ್ಚುವರಿ ಹೊರೆಯೇ ಆಗಿದೆ. ಇಪಿಎಫ್ ಸ್ಟೇಟ್ಮೆಂಟ್ ಮಾದರಿಯಲ್ಲಿ ಬದಲಾವಣೆ ತರಬೇಕಾದ ಅಗತ್ಯವೂ ಎದುರಾಗಬಹುದು. ಇನ್ನು ಉದ್ಯೋಗಿಗಳು ಕೂಡ ತೆರಿಗೆ ವಿಧಿಸಿದ್ದು ಎಷ್ಟು ಮೊತ್ತಕ್ಕೆ ಎಂಬುದನ್ನು ಖಚಿತಪಡಿಸಿಕೊಳ್ಳಲು ತಜ್ಞರ ಮೊರೆ ಹೋಗಬೇಕಾಗಬಹುದು. 
 

ಟಿಡಿಎಸ್ ಸರ್ಟಿಫಿಕೇಟ್
ಆದಾಯ ತೆರಿಗೆ ಕಾಯ್ದೆ ಅನ್ವಯ ಟಿಡಿಎಸ್ ಕಡಿತಕ್ಕೊಳಪಟ್ಟ ಪ್ರತಿ ವ್ಯಕ್ತಿಗೆ ಆ ಸಂಸ್ಥೆ ಅಥವಾ ವ್ಯಕ್ತಿನ ಟಿಡಿಎಸ್ ಸರ್ಟಿಫಿಕೇಟ್ ನೀಡಬೇಕು. ಈ ಟಿಡಿಎಸ್ ಸರ್ಟಿಫಿಕೇಟ್ ಅನ್ನು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸೋವಾಗ ಹಾಜರುಪಡಿಸೋ ಮೂಲಕ ಹಣವನ್ನು ಹಿಂಪಡೆಯಬಹುದು. ಹೀಗಾಗಿ ಇಪಿಎಫ್ಒ ಕೂಡ ತೆರಿಗೆ ಕಡಿತಗೊಳಿಸಿದ ಅಥವಾ ಹಿಡಿದಿಟ್ಟಿರೋ ಉದ್ಯೋಗಿಗೆ  ಟಿಡಿಎಸ್ ಸರ್ಟಿಫಿಕೇಟ್ ನೀಡಬೇಕಾಗುತ್ತದೆ. 

ಸೆ. 30ರೊಳಗೆ ತಪ್ಪದೆ ಈ 5 ಕೆಲಸಗಳನ್ನು ಮಾಡಿ ಮುಗಿಸಿ!

ತೆರಿಗೆ ಉಳಿಸೋದು ಹೇಗೆ? 
ಇಪಿಎಫ್ಗೆ ತೆರಿಗೆಮುಕ್ತ ಮೊತ್ತಕ್ಕಿಂತ ಹೆಚ್ಚಿನ ಕೊಡುಗೆ ನೀಡೋ ಹೂಡಿಕೆದಾರರು ಇನ್ನು ಮುಂದೆ ತಮ್ಮ ಹೂಡಿಕೆ ಯೋಜನೆಯನ್ನು ಪರಿಷ್ಕರಿಸೋದು ಅಗತ್ಯ. ಇಪಿಎಫ್ಗೆ ಹೂಡಿಕೆ ಮಾಡುತ್ತಿದ್ದ ಹೆಚ್ಚುವರಿ ಹಣವನ್ನು ಪರ್ಯಾಯ ಯೋಜನೆ ಅಥವಾ ಕ್ಷೇತ್ರಗಳಲ್ಲಿ ಹೂಡಿಕೆ ಮಾಡೋದು ಉತ್ತಮ. 

click me!