
ಬೆಂಗಳೂರು (ಫೆ.11): ಕನ್ನಡದಲ್ಲಿ ಮಾತನಾಡುತ್ತಾ ಕೊಡಗಿನ ಕಾಫಿ ತೋಟದ ಸವಿನೆನಪು ಹಂಚಿಕೊಂಡು, ಕರ್ನಾಟಕ ರಾಜ್ಯದಲ್ಲಿ ಮುಂದಿನ 5 ವರ್ಷಗಳಲ್ಲಿ ಬರೋಬ್ಬರಿ 40 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆ ಮಾಡುವುದಾಗಿ ಉದ್ಯಮಿ ಆನಂದ ಮಹಿಂದ್ರಾ ಹೇಳಿದರು.
ಕರ್ನಾಟಕ ಸರ್ಕಾರದಿಂದ ಆಯೋಜನೆ ಮಾಡಲಾಗಿರುವ ಹೂಡಿಕೆದಾರರ ಸಮಾವೇಶದಲ್ಲಿ (Invest Karnataka) ಭಾಗವಹಿಸಿದ್ದ ಉದ್ಯಮಿ ಆನಂದ್ ಮಹೀಂದ್ರ ಕನ್ನಡದಲ್ಲೇ ಮಾತು ಆರಂಭಿಸಿದರು. ಅವರು 60 ವರ್ಷಗಳ ನೆನಪಿನಾಳಕ್ಕೆ ಜಾರಿ, 1960ರ ಸುಮಾರಿನಲ್ಲಿ ತಾವು ತಮ್ಮ ತಂದೆ-ತಾಯಿಗಳೊಂದಿಗೆ ಕೊಡಗಿನ ಕುಟ್ಟದಲ್ಲಿ ಬೆಳೆದ ದಿನಗಳ ಅನುಭವಗಳನ್ನು ಹಂಚಿಕೊಂಡರು. ನಂತರ, ಪಂಜಾಬಿನವರಾದ ತಾವು ಇಲ್ಲಿನ ಕಾಫಿ ಪ್ಲಾಂಟೇಶನ್ ನಲ್ಲಿ ಕಲಿತ ಪಾಠಗಳನ್ನೇ ಉದ್ಯಮದಲ್ಲೂ ಅಳವಡಿಸಿಕೊಂಡಿರುವುದಾಗಿ ಹೇಳಿದರು. ಕೆಲವು ಮಾತುಗಳನ್ನು ಕನ್ನಡದಲ್ಲೇ ಮಾತನಾಡುವ ಮೂಲಕ ಕರ್ನಾಟಕದಲ್ಲಿ ದೊಡ್ಡ ಮಟ್ಟದ ಹೂಡಿಕೆ ಮಾಡುವ ಮೂಲಕ ಉದ್ಯಮಕ್ಕೆ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ಸರ್ಕಾರಕ್ಕೆ ಭರವಸೆ ನೀಡಿದರು.
ಮುಂದಿನ 5 ವರ್ಷಗಳಲ್ಲಿ ತಾವು ರಾಜ್ಯದಲ್ಲಿ ಮರುಬಳಕೆ ಇಂಧನ, ಪ್ರವಾಸ ಮತ್ತು ಆತಿಥ್ಯೋದ್ಯಮ, ವೈಮಾಂತರಿಕ್ಷ ಮತ್ತು ರಕ್ಷಣೆ, ವಿದ್ಯುಚ್ಚಾಲಿತ ತ್ರಿಚಕ್ರ ವಾಹನ ತಯಾರಿಕೆ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರಗಳಲ್ಲಿ 40 ಸಾವಿರ ಕೋಟಿ ರೂ. ಬಂಡವಾಳ ಹೂಡುವುದಾಗಿ ಘೋಷಿಸಿದರು. ಮಹೀಂದ್ರ ಸಮೂಹವು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಬೆಂಗಳೂರಿನಲ್ಲಿ ಸದ್ಯಕ್ಕೆ 5,000 ಕೋಟಿ ರೂ. ಮೊತ್ತದ ಯೋಜನೆಗಳನ್ನು ಕೈಗೊಂಡಿದೆ. ಮುಂದಿನ ದಿನಗಳಲ್ಲಿ 6,000 ಕೋಟಿ ರೂ. ಹೂಡುವುದಾಗಿ ಅವರು ಪ್ರಕಟಿಸಿದರು. ಕೊನೆಯಲ್ಲಿ `ಕರ್ನಾಟಕಕ್ಕೆ ಧನ್ಯವಾದಗಳು’ ಎನ್ನುವ ಮೂಲಕ ಕನ್ನಡದಲ್ಲೇ ಮಾತು ಮುಗಿಸಿ, ಎಲ್ಲರ ಮನ ಗೆದ್ದರು.
1 ಲಕ್ಷ ಕೋಟಿ ರೂ. ಹೂಡಿಕೆ: ಸಜ್ಜನ್ ಜಿಂದಾಲ್: ತಮ್ಮ ನೇತೃತ್ವದ ಜಿಂದಾಲ್ ಸಮೂಹವು ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಒಟ್ಟು 1 ಲಕ್ಷ ಕೋಟಿ ರೂ.ಗೂ ಹೆಚ್ಚಿನ ಬಂಡವಾಳ ತೊಡಗಿಸಲಿದೆ. ಇದರಲ್ಲಿ ಉಕ್ಕು ಉತ್ಪಾದನೆ ವಲಯದಲ್ಲಿ 45 ಸಾವಿರ ಕೋಟಿ ರೂ. ಮತ್ತು ಆತಿಥ್ಯೋದ್ಯಮ, ಸೌರವಿದ್ಯುತ್, ಪರಿಸರಸ್ನೇಹಿ ಇಂಧನ ಮತ್ತು ಗ್ರೀನ್ ಹೈಡ್ರೋಜನ್ ಕ್ಷೇತ್ರಗಳಲ್ಲಿ 56 ಸಾವಿರ ಕೋಟಿ ರೂ. ಹೂಡಲಾಗುವುದು ಎಂದು ಉದ್ಯಮಿ ಸಜ್ಜನ್ ಜಿಂದಾಲ್ ಹೇಳಿದರು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.