
ನವದೆಹಲಿ[ಮಾ.14]: ತೀವ್ರ ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ಭಾರತ ಸಂಚಾರ ನಿಗಮ ನಿಯಮಿತ (ಬಿಎಸ್‌ಎನ್‌ಎಲ್)ದ ಇತಿಹಾಸದಲ್ಲಿ ಇದೇ ಮೊದಲ ಬಾರಿ ನೌಕರರಿಗೆ ಮಾಸಿಕ ವೇತನ ದೊರೆತಿಲ್ಲ. ದೇಶಾದ್ಯಂತ ಇರುವ ಬಿಎಸ್‌ಎನ್‌ಎಲ್‌ನ ಸುಮಾರು 1.76 ಲಕ್ಷ ನೌಕರರಿಗೆ ಫೆಬ್ರವರಿ ತಿಂಗಳ ಸಂಬಳ ನೀಡಲಾಗಿಲ್ಲ ಎಂದು ತಿಳಿದುಬಂದಿದೆ.
ನಷ್ಟದ ಜೊತೆಗೆ ಬಿಎಸ್‌ಎನ್‌ಎಲ್ ಕಂಪನಿಯು ಜಿಯೋದಂತಹ ಖಾಸಗಿ ದೂರಸಂಪರ್ಕ ಕಂಪನಿಗಳಿಂದ ತೀವ್ರ ಪೈಪೋಟಿಯನ್ನೂ ಎದುರಿಸುತ್ತಿದೆ. ಆರ್ಥಿಕ ಸಮಸ್ಯೆ ಈಗ ಇನ್ನಷ್ಟುಗಂಭೀರವಾಗಿದ್ದು, ಅದರ ಪರಿಣಾಮವಾಗಿ ಫೆಬ್ರವರಿ ತಿಂಗಳದ ವೇತನ ಪಾವತಿಸಿಲ್ಲ. ಸಾಮಾನ್ಯವಾಗಿ ಬಿಎಸ್‌ಎನ್‌ಎಲ್ ನೌಕರರಿಗೆ ತಿಂಗಳ ಕೊನೆಯ ದಿನ ಅಥವಾ ಮುಂದಿನ ತಿಂಗಳದ ಮೊದಲ ದಿನ ಸಂಬಳ ಪಾವತಿಸಲಾಗುತ್ತದೆ. ಆದರೆ, ಮಾಚ್‌ರ್ 10 ಕಳೆದರೂ ನೌಕರರಿಗೆ ಫೆಬ್ರವರಿಯ ವೇತನ ಪಾವತಿಸಿಲ್ಲ. ಇದರಿಂದಾಗಿ ನೌಕರರು ಆತಂಕಕ್ಕೆ ಸಿಲುಕಿದ್ದಾರೆ.
ದೇಶದಲ್ಲಿರುವ 20 ದೂರಸಂಪರ್ಕ ವೃತ್ತಗಳಲ್ಲಿನ ನೌಕರರಿಗೆ ವೇತನ ನೀಡಲು ಬಿಎಸ್‌ಎನ್‌ಎಲ್‌ಗೆ ಪ್ರತಿ ತಿಂಗಳು 1200 ಕೋಟಿ ರು. ಬೇಕಾಗುತ್ತದೆ. ಸಂಸ್ಥೆಯ ಆದಾಯದ ಶೇ.55 ಭಾಗ ನೌಕರರ ಸಂಬಳಕ್ಕೇ ಹೋಗುತ್ತದೆ. ಪ್ರತಿ ವರ್ಷ ವೇತನದ ಖರ್ಚು ಶೇ.8ರಷ್ಟುಹೆಚ್ಚಾಗುತ್ತಿದ್ದು, ಆದಾಯ ಮಾತ್ರ ಹೆಚ್ಚುತ್ತಿಲ್ಲ. ಹೀಗಾಗಿ ಬಿಎಸ್‌ಎನ್‌ಎಲ್ ನಷ್ಟಕ್ಕೆ ಸಿಲುಕಿದೆ.
ಕಂಪನಿಯ ಕಾರ್ಮಿಕ ಸಂಘಟನೆಗಳು ವೇತನ ಪಾವತಿಸುವ ಕುರಿತು ದೂರಸಂಪರ್ಕ ಸಚಿವ ಮನೋಜ್ ಮಿಶ್ರಾ ಅವರಿಗೆ ಪತ್ರ ಬರೆದಿವೆ. ಈ ಮಧ್ಯೆ, ಬಿಎಸ್‌ಎನ್‌ಎಲ್‌ನ ಕೇರಳ, ಜಮ್ಮು ಕಾಶ್ಮೀರ, ಒಡಿಶಾ ಹಾಗೂ ಕಾರ್ಪೊರೇಟ್ ಕಚೇರಿಯಲ್ಲಿ ವೇತನ ಪಾವತಿಸಲು ಆರಂಭಿಸಲಾಗಿದೆ ಎಂದು ತಿಳಿದುಬಂದಿದೆ. ಜೊತೆಗೆ, ಮಾಚ್‌ರ್ ತಿಂಗಳ ವೇತನ ಕೂಡ ವಿಳಂಬವಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.