
ನವದೆಹಲಿ: ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಕಂಪನಿಗಳಾದ ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ ಹೊಂದಿರುವ ಆಸ್ತಿ ಕೇಳಿ ದೇಶದ ಜನತೆ ಶಾಕ್ ಆಗಿದ್ದಾರೆ. ಬಿಎಸ್‌ಎನ್‌ಎಲ್ ಭೂಮಿ, ಕಟ್ಟಡ, ಟವರ್ ಸೇರಿದಂತೆ ವಿವಿಧ ಮೂಲಗಳಿಂದ ಅಧಿಕ ಆದಾಯವನ್ನು ಹೊಂದಿದೆ. ಈ ಎರಡು ಕಂಪನಿಗಳ ಕೋರ್ ಮತ್ತು ನಾನ್-ಕೋರ್ ಆಸ್ತಿಗಳನ್ನು ಮಾರಾಟ ಮಾಡುವ ಹಾಗೂ ಗುತ್ತಿಗೆ ನೀಡುವ ಮೂಲಕ ಸರ್ಕಾರ ಅಧಿಕ ಮೊತ್ತವನ್ನು ಗಳಿಸುತ್ತಿದೆ. ಲೋಕಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಸಂವಹನ ಖಾತೆ ರಾಜ್ಯ ಸಚಿವ ಡಾ.ಚಂದ್ರಶೇಖರ್ ಪೆಮ್ಮಸಾನಿ ಸಂಸತ್ತಿನಲ್ಲಿ ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ ಗಳಿಸಿದ ಆಸ್ತಿ ಎಷ್ಟು ಎಂಬುದರ ಮಾಹಿತಿಯನ್ನು ನೀಡಿದ್ದಾರೆ.
2019ರಿಂದ ಭೂಮಿ, ಕಟ್ಟಡಗಳು, ಟವರ್ ಮತ್ತು ಫೈಬರ್ ಗಳಿಕೆಯಿಂದಾಗಿ ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ ಒಟ್ಟು 12,984.86 ಕೋಟಿ ರೂಪಾಯಿ ಹಣ ಗಳಿಸಿದೆ. ಬಿಎಸ್‌ಎನ್‌ಎಲ್ ಜನವರಿ 2025ರವರೆಗೆ ಭೂಮಿ ಮತ್ತು ಕಟ್ಟಡಗಳಿಂದ 2,387.82 ಕೋಟಿ ರೂಪಾಯಿ ಮತ್ತು ಎಂಟಿಎನ್‌ಎಲ್‌ನಿಂದ 2,134.61 ಕೋಟಿ ರೂಪಾಯಿ ಗಳಿಸಿದೆ ಎಂದು ಡಾ.ಚಂದ್ರಶೇಖರ್ ಪೆಮ್ಮಸಾನಿ ಹೇಳಿದ್ದಾರೆ. ಜನವರಿ 2025ರವರೆಗೆ ಟವರ್ ಮತ್ತು ಫೈಬರ್ ಸೇರಿದಂತೆ ಇತರೆ ಆಸ್ತಿಗಳ ಮೂಲಕ ಬಿಎಸ್ಎನ್‌ಎಲ್ 8,204.18 ಕೋಟಿ ರೂಪಾಯಿ ಮತ್ತು ಎಂಟಿಎನ್‌ಎಲ್ 258.25 ಕೋಟಿ ರೂಪಾಯಿ ಗಳಿಸಿದೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ಡಾ.ಚಂದ್ರಶೇಖರ್ ಪೆಮ್ಮಸಾನಿ, ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ ಸಂಸ್ಥೆಗಳನ್ನು ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಲ್ಲ ಎಂದು ಸ್ಪಷ್ಟಪಡಿಸಿದರು. 2024ರಿಂದ ಬಿಎಸ್‌ಎನ್‌ಎಲ್ ಲಾಭದಲ್ಲಿದ್ದು, ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ.
17 ವರ್ಷದ ಬಳಿಕ ಲಾಭಕ್ಕೆ ಮರಳಿದ ಬಿಎಸ್‌ಎನ್‌ಎಲ್
ಇತ್ತೀಚೆಗೆ ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಈ ಹಣಕಾಸಿನ ವರ್ಷದಲ್ಲಿ ಅಕ್ಟೋಬರ್ -ಡಿಸೆಂಬರ್ ತ್ರೈಮಾಸಿಕದಲ್ಲಿ ಬಿಎಸ್‌ಎನ್ಎಲ್ 262 ಕೋಟಿ ರೂಪಾಯಿ ಲಾಭಗಳಿಸಿದೆ ಎಂದು ಮಾಹಿತಿ ನೀಡಿದ್ದರು. ಈ ವೇಳೆ ಕಂಪನಿಯು 17 ವರ್ಷದ ಬಳಿಕ ಲಾಭಕ್ಕೆ ಮರಳಿದೆ ಎಂದು ಹೇಳಿದ್ದರು. ಕಳೆದ ಒಂದು ವರ್ಷದಲ್ಲಿ ಬಿಎಸ್ಎನ್‌ಎಲ್ ಹಲವು ಕ್ಷೇತ್ರಗಳಲ್ಲಿ ಸುಧಾರಣೆ ಸಾಧಿಸಿದೆ. ಮೊಬೈಲ್, ಫೈಬರ್ ಟಿ ದಿ ಹೋಮ್ (FTTH) ಮತ್ತು ಲೀಸ್ಡ್ ಲೈನಾ ಸೇವಾ ಕ್ಷೇತ್ರದಲ್ಲಿ ಶೇ. 14 ರಿಂದ ಶೇ.18ರಷ್ಟು ಬೆಳವಣಿಗೆ ದಾಖಲಿಸಿದೆ ಎಂದು ಜ್ಯೋತಿರಾದಿತ್ಯಾ ಸಿಂಧಿಯಾ ಹೇಳಿದ್ದರು.
ಇದನ್ನೂ ಓದಿ: ಜಿಯೋ, ಏರ್‌ಟೆಲ್‌ಗೆ ಸೆಡ್ಡು ಹೊಡೆದ ಬಿಎಸ್‌ಎನ್ಎಲ್; ಅತೀ ಕಡಿಮೆ ಬೆಲೆ 90 ದಿನದ ಪ್ಲಾನ್
ಬಿಎಸ್‌ಎನ್‌ಎಲ್‌ಗೆ ಸರ್ಕಾರದಿಂದ ಅನುದಾನ
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಮತ್ತು ಮಹಾನಗರ ಟೆಲಿಫೋನ್ ನಿಗಮ್ ಲಿಮಿಟೆಡ್ (MTNL)-ತಮ್ಮ 4G ರೋಲ್ಔಟ್ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಅನುದಾನ ನೀಡುತ್ತಿದೆ. ವರದಿಗಳ ಪ್ರಕಾರ, BSNL 4G ವಿಸ್ತರಣೆಗೆ ಹೆಚ್ಚುವರಿ 6,000 ಕೋಟಿ ರೂ.ಗಳನ್ನು ವಿನಿಯೋಗಿಸಲು ಸರ್ಕಾರ ನಿರ್ಧರಿಸಿದೆ. ದೆಹಲಿ ಮತ್ತು ಮುಂಬೈ ಮಹಾನಗರಗಳಲ್ಲಿ ಟೆಲಿಕಾಂ ಸೇವೆ ನೀಡುತ್ತಿರುವ MTNL ಕೆಲ ತಿಂಗಳ ಹಿಂದೆ BSNL ಜೊತೆ ಒಪ್ಪಂದ ಮಾಡಿಕೊಂಡಿತ್ತು.
ಇದನ್ನೂ ಓದಿ: BSNL ಮೇಲೆ ಹಣದ ಮಳೆ ಸುರಿಸಿದ ಸರ್ಕಾರ ; ಕೇಂದ್ರ ಕೊಟ್ಟ ಅನುದಾನ ಕೇಳಿ ಅಂಬಾನಿ, ಏರ್‌ಟೆಲ್ ಶಾಕ್ & ಶೇಕ್!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.