
ನವದೆಹಲಿ (ಆ.30): ಭಾರತದ ಕೋಟ್ಯಧಿಪತಿಗಳಲ್ಲಿ ಒಬ್ಬರಾದ ಗೌತಮ್ ಅದಾನಿ 137.4 ಬಿಲಿಯನ್ ಡಾಲರ್ (ಸುಮಾರು 11 ಲಕ್ಷ ಕೋಟಿ) ನಿವ್ವಳ ಮೌಲ್ಯದೊಂದಿಗೆ ವಿಶ್ವದ ಮೂರನೇ ಶ್ರೀಮಂತ ಉದ್ಯಮಿ ಎನಿಸಿಕೊಮಡಿದ್ದಾರೆ. ಅವರು ಪ್ರಖ್ಯಾತ ಲೂಯಿಸ್ ವಿಟಾನ್ ಬ್ರ್ಯಾಂಡ್‌ನ ಸಂಸ್ಥಾಪಕ ಫ್ರಾನ್ಸ್‌ನ ಬರ್ನಾಡ್ ಅರ್ನಾಲ್ಟ್ ಅವರನ್ನು ಹಿಂದಿಕ್ಕಿ ಈ ಸ್ಥಾನವನ್ನು ಸಾಧಿಸಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನಲ್ಲಿ ವಿಶ್ವದ ಅಗ್ರ ಮೂರು ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಪ್ರವೇಶ ಪಡೆದ ಮೊದಲ ಏಷ್ಯಾದ ವ್ಯಕ್ತಿ ಎನ್ನುವ ಗೌರವಕ್ಕೆ ಗೌತಮ್ ಅದಾನಿ ಪಾತ್ರರಾಗಿದ್ದಾರೆ. ಪ್ರಸ್ತುತ ಗೌತಮ್ ಅದಾನಿ ಶ್ರೇಯಾಂಕದಲ್ಲಿ ಮಸ್ಕ್ ಮತ್ತು ಬೆಜೋಸ್ ಅವರಿಗಿಂತ ಹಿಂದಿದ್ದಾರೆ. ಟೆಸ್ಲಾ ಸಂಸ್ಥಾಪಕ ಎಲೋನ್ ಮಸ್ಕ್ 251 ಶತಕೋಟಿ ಅಮೆರಿಕನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ, 153 ಶತಕೋಟಿ ಅಮೆರಿಕನ್ ಡಾಲರ್‌ನೊಂದಿಗೆ ಬೆಜೋಸ್ ಎರಡನೇ ಸ್ಥಾನದಲ್ಲಿದ್ದಾರೆ. ಟಾಪ್-10 ಪಟ್ಟಿಯಲ್ಲಿರುವ ಏಕೈಕ ಭಾರತೀಯ ಗೌತಮ್ ಅದಾನಿ ಆಗಿದ್ದಾರೆ. ರಿಲಯನ್ಸ್ ಅಧ್ಯಕ್ಷ ಮುಖೇಶ್ ಅಂಬಾನಿ 91.9 ಬಿಲಿಯನ್ ಡಾಲರ್ (7.3 ಲಕ್ಷ ಕೋಟಿ ರೂ.) ನಿವ್ವಳ ಮೌಲ್ಯದೊಂದಿಗೆ 11 ನೇ ಸ್ಥಾನದಲ್ಲಿದ್ದಾರೆ.
ಕಳೆದ ತಿಂಗಳು, ಅದಾನಿ ಬ್ಲೂಮ್‌ಬರ್ಗ್ ಬಿಲಿಯನರೇರ್ ಇಂಡೆಕ್ಸ್‌ನಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿದ್ದರು. ಆ ಮೂಲಕ ಕಳೆದ ತಿಂಗಲ್ಲೇ ಅವರನ್ನು ಮೈಕ್ರೋಸಾಫ್ಟ್‌ನ ಸಂಸ್ಥಾಪಕ ಬಿಲ್ ಗೇಟ್ಸ್ ಅವರನ್ನು ಹಿಂದಿಕ್ಕಿದರು. ಅದಾನಿ 2022ರಲ್ಲೇ ತನ್ನ ನಿವ್ವಳ ಮೌಲ್ಯಕ್ಕೆ 60.9 ಬಿಲಿಯನ್ ಅಮೆರಿಕನ್ ಡಾಲರ್ ಸೇರಿಸಿದ್ದಾರೆ. ಇದು ಯಾವುದೇ ಉದ್ಯಮಿಗಿಂತಲೂ 5 ಪಟ್ಟು ಹೆಚ್ಚಾಗಿದೆ. ಕಳೆದ ಫೆಬ್ರವರಿಯಲ್ಲಿ ಏಷ್ಯಾದ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಮುಖೇಶ್ ಅಂಬಾನಿಯವರನ್ನು ಹಿಂದಿಕ್ಕಿದ್ದರು.
ಅದಾನಿಯವರ ನಿವ್ವಳ ಮೌಲ್ಯವು ಏಪ್ರಿಲ್ 2021 ರಲ್ಲಿ 57 ಶತಕೋಟಿ ಅಮೆರಿಕನ್ ಡಾಲರ್ ಆಗಿತ್ತು, ಏಪ್ರಿಲ್ 4 ರಂದು ಅದಾನಿ ಸೆಂಟಿಬಿಲಿಯನೇರ್ಸ್ ಕ್ಲಬ್‌ಗೆ ಸೇರಿಕೊಂಡರು. 100 ಶತಕೋಟಿ ಅಮೆರಿಕನ್ ಡಾಲರ್‌ಗಿಂತ ಹೆಚ್ಚಿನ ನಿವ್ವಳ ಮೌಲ್ಯವನ್ನು ಹೊಂದಿರುವ ವ್ಯಕ್ತಿಗಳನ್ನು ಸೆಂಟಿಬಿಲಿಯನೇರ್‌ಗಳು ಎಂದು ಕರೆಯಲಾಗುತ್ತದೆ. ಒಂದು ವರ್ಷದ ಹಿಂದೆ, ಏಪ್ರಿಲ್ 2021 ರಲ್ಲಿ, ಅದಾನಿ ನಿವ್ವಳ ಮೌಲ್ಯವು 57 ಬಿಲಿಯನ್ ಅಮೆರಿಕನ್ ಡಾಲರ್ ಆಗಿತ್ತು. 2021-2022ರ ಆರ್ಥಿಕ ವರ್ಷದಲ್ಲಿ ಅದಾನಿಯವರ ನಿವ್ವಳ ಮೌಲ್ಯವು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆದಿದೆ ಎಂದು ಬ್ಲೂಮ್‌ಬರ್ಗ್ ತನ್ನ ವರದಿಯ ಮೂಲಕ ತಿಳಿಸಿದೆ. ಅದಾನಿ ಗ್ರೂಪ್ ಈವರೆಗೂ ಏಳು ಸಾರ್ವಜನಿಕವಾಗಿ ಲಿಸ್ಟ್ ಮಾಡಲಾದ ಕಂಪನಿಯನ್ನು ಹೊಂದಿದೆ.
ಗೃಹ ಸಚಿವಾಲಯದ ಮಹತ್ವದ ನಿರ್ಧಾರ, ಉದ್ಯಮಿ ಗೌತಮ್ ಅದಾನಿಗೆ Z ವರ್ಗದ ಭದ್ರತೆ!
ಅದಾನಿ ಗ್ರೂಪ್ ತನ್ನ ಅಂಗಸಂಸ್ಥೆಯಾದ ವಿಶ್ವಪ್ರಧನ್ ಕಮರ್ಷಿಯಲ್ ಪ್ರೈವೇಟ್ ಲಿಮಿಟೆಡ್ (VPCPL) ಮೂಲಕ ಎನ್‌ಡಿಟಿವಿ ಯ ಪ್ರವರ್ತಕ ಕಂಪನಿಯಾದ ಆರ್‌ಆರ್‌ಪಿಆರ್ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್‌ನ 99.99% ಷೇರುಗಳನ್ನು ಖರೀದಿಸಲು ಪ್ರಯತ್ನಿಸಿದೆ. ಆದಾಗ್ಯೂ, ಕೆಲವು ಕಾನೂನು ಕಾರಣಗಳಿಂದ ಈ ವಿಷಯವು ಇನ್ನೂ ಬಾಕಿ ಉಳಿದುಕೊಂಡಿದೆ. ಮೇ ತಿಂಗಳಲ್ಲಿ ಗೌತಮ್ ಅದಾನಿ ಕಂಪನಿಯು ಹಾಲ್ಸಿಮ್‌ನ ಭಾರತೀಯ ಸಿಮೆಂಟ್ ವ್ಯವಹಾರವನ್ನು ಖರೀದಿಸಲು ಘೋಷಣೆ ಮಾಡಿತ್ತು. ಈ ಕುರಿತಾಗಿ 10.5 ಶತಕೋಟಿ ಅಮೆರಿಕನ್ ಡಾಲರ್‌ಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಒಪ್ಪಂದದೊಂದಿಗೆ, ಅದಾನಿ ಸಮೂಹವು ಭಾರತೀಯ ಸಿಮೆಂಟ್ ಮಾರುಕಟ್ಟೆಯಲ್ಲಿ ಕೆಲವೇ ಕ್ಷಣದಲ್ಲಿಯೇ 2ನೇ ಸ್ಥಾನಕ್ಕೇರಿತ್ತು.
ವಿಶ್ವದ 4ನೇ ಅತಿ ಶ್ರೀಮಂತ ವ್ಯಕ್ತಿ ಅದಾನಿಗೆ ಎಸ್‌ಬಿಐನಿಂದ 14 ಸಾವಿರ ಕೋಟಿ ಸಾಲ ಬೇಕಂತೆ..!
ಭಾರತದ ಅತಿ ದೊಡ್ಡ ಖಾಸಗಿ ಪೋರ್ಟ್ ಆಪರೇಟರ್: ಅದಾನಿ ಪೋರ್ಟ್ಸ್ ಅಂಡ್ ಸ್ಪೆಷಲ್ ಎಕನಾಮಿಕ್ ಝೋನ್ ಲಿಮಿಟೆಡ್ (APSEZ Ltd.) ಭಾರತದ ಅತಿದೊಡ್ಡ ಖಾಸಗಿ ಪೋರ್ಟ್ ಆಪರೇಟರ್ ಮತ್ತು ಎಂಡ್-ಟು-ಎಂಡ್ ಲಾಜಿಸ್ಟಿಕ್ಸ್ ಪೂರೈಕೆದಾರ ಕಂಪನಿ ಎನಿಸಿದೆ. ಎರಡು ದಶಕಗಳಿಗಿಂತಲೂ ಕಡಿಮೆ ಅವಧಿಯಲ್ಲಿ, ಇದು ಭಾರತದಾದ್ಯಂತ ಬಂದರು ಮೂಲಸೌಕರ್ಯ ಮತ್ತು ಸೇವೆಗಳ ಪೋರ್ಟ್‌ಫೋಲಿಯೊವನ್ನು ನಿರ್ಮಿಸಿದೆ. ಅದರ 13 ಆಯಕಟ್ಟಿನ ಬಂದರುಗಳು ಮತ್ತು ಟರ್ಮಿನಲ್‌ಗಳು ದೇಶದ ಬಂದರು ಸಾಮರ್ಥ್ಯದ 24% ಅನ್ನು ಈ ಕಂಪನಿಗಳು ಪ್ರತಿನಿಧಿಸುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.