5 ಸಾವಿರದಿಂದ 46 ಸಾವಿರ ಕೋಟಿ ರೂಪಾಯಿಯ ಸಾಮ್ರಾಜ್ಯ ಕಟ್ಟಿದ್ದ ಬಿಗ್‌ ಬುಲ್‌ ರಾಕೇಶ್‌ ಜುಂಜುನ್‌ವಾಲಾ!

By Santosh NaikFirst Published Aug 14, 2022, 11:00 AM IST
Highlights

ಮುಂಬೈನ ದಲಾಲ್‌ ಸ್ಟ್ರೀಟ್‌ನಲ್ಲಿ ಬಿಗ್‌ ಬುಲ್‌ ಎನ್ನುವ ಹೆಸರಿನಿಂದಲೇ ಗುರುತಿಸಿಕೊಂಡಿದ್ದ ರಾಕೇಶ್‌ ಜುಂಜುನ್‌ವಾಲಾ ತಮ್ಮ 62ನೇ ವರ್ಷದಲ್ಲಿ ಸಾವು ಕಂಡಿದ್ದಾರೆ. ಕೈಯಲ್ಲಿ ಬರೀ 5 ಸಾವಿರ ರೂಪಾಯಿ ಇರಿಸಿಕೊಂಡು ಷೇರ್‌ ಮಾರುಕಟ್ಟೆಯ ವ್ಯವಹಾರಕ್ಕೆ ಇಳಿದಿದ್ದ ರಾಕೇಶ್‌ ಜುಂಜುನ್‌ವಾಲಾ, 46 ಸಾವಿರ ಕೋಟಿಯ ಷೇರು ಹೂಡಿಕೆಯ ವ್ಯವಹಾರ ಕಟ್ಟಿದ್ದೇ ಒಂದು ರೋಚಕ ಕಥೆ.

ಬೆಂಗಳೂರು (ಆ.14): ದೇಶದ ಷೇರು ಮಾರುಕಟ್ಟೆಯ ವ್ಯವಹಾರದಿಂದ ಬಿಗ್‌ ಬುಲ್‌ ಎನ್ನುವ ಖ್ಯಾತಿ ಪಡೆದುಕೊಂಡಿದ್ದ ರಾಕೇಶ್‌ ಜುಂಜುನ್‌ವಾಲಾ, ಭಾನುವಾರ ನಿಧನರಾದರು. ಕೆಲ ಕಾಲದಿಂದ ಅನಾರೋಗ್ಯದಲ್ಲಿದ್ದ ಜುಂಜುನ್‌ವಾಲಾ, ಮುಂಬೈನ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಯಲ್ಲಿ ಮುಂಜಾನೆ 6.45ರ ಸುಮಾರಿಗೆ ಹೃದಯಾಘಾತದಿಂದಾಗಿ ಅಸುನೀಗಿದರು. ಕೇವಲ 5 ಸಾವಿರ ರೂಪಾಯಿಯೊಂದಿಗೆ ಷೇರು ಮಾರುಕಟ್ಟೆ ವ್ಯವಹಾರಕ್ಕೆ ಇಳಿದಿದ್ದ ರಾಕೇಶ್‌ ಜುಂಜುನ್‌ವಾಲಾ, 1960ರ ಜುಲೈ 5 ರಂದು ರಾಜಸ್ಥಾನಿ ಕುಟುಂಬದಲ್ಲಿ ಜನಿಸಿದ್ದರು. ಇತ್ತೀಚೆಗೆ ಅಕ್ಸಾ ಏರ್‌ಲೈನ್ಸ್ಅನ್ನೂ ಆರಂಭ ಮಾಡಿದ್ದ ರಾಕೇಶ್‌ ಜುಂಜುನ್‌ವಾಲಾ, ಅತೀ ಕಡಿಮೆ ದರದಲ್ಲಿ ಏರ್‌ ಟ್ರಾವೆಲ್‌ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿದ್ದರು. ಅಂದಾಜು 1985ರಲ್ಲಿ ಷೇರು ಮಾರುಕಟ್ಟೆಯ ವ್ಯವಹಾರ ಆರಂಭಿಸಿದಾಗ ಅವರಲ್ಲಿದ್ದ ಹಣ ಬರೀ 5 ಸಾವಿರ, ಇಂದು ಇದೇ ಐದು ಸಾವಿರ ಅಂದಾಜು 46.18 ಸಾವಿರ ಕೋಟಿಯ ಷೇರು ಹೂಡಿಕೆಯಾಗಿ ಬೆಳೆಯುವ ಮೂಲಕ, ಭಾರತದ ಹೂಡಿಕೆ ವಲಯದ ದೈತ್ಯ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು. ಷೇರು ಮಾರುಕಟ್ಟೆಯ ವ್ಯವಹಾರದಲ್ಲಿ ಬೇರ್‌ ಆಗಿಯೇ ಆರಂಭದಲ್ಲಿ ಗುರುತಿಸಿಕೊಂಡಿದ್ದ ಅವರು, 1992ರಲ್ಲಿ ಹರ್ಷದ್‌ ಮೆಹ್ತಾ ಹಗರಣ ಅನಾವರಣಗೊಂಡ ವೇಳೆ ಶಾರ್ಟ್‌ ಸೆಲ್ಲಿಂಗ್‌ನಿಂದ ದೊಡ್ಡ ಪ್ರಮಾಣ ಲಾಭ ಗಳಿಸಿದ್ದರು. ರಾಕೇಶ್‌ ಜುಂಜುನ್‌ವಾಲಾ ನಿಧನಕ್ಕೆ ಸ್ವತಃ ಪ್ರಧಾನಿ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ರಾಕೇಶ್‌ ಜುಂಜುನ್‌ವಾಲಾ 36ನೇ ಸ್ಥಾನದಲ್ಲಿದ್ದರು.

ವೃತ್ತಿಯಲ್ಲಿ ಚಾರ್ಟೆಡ್‌ ಅಕೌಂಟೆಂಟ್‌ ಆಗಿದ್ದ ರಾಕೇಶ್‌ ಜುಂಜುನ್‌ವಾಲಾ ಅವರ ಪತ್ನಿ ರೇಖಾ ಜುಂಜುನ್‌ವಾಲಾ ಕೂಡ ಹೂಡಿಕೆ ವಲಯದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಮಗಳು ನಿಶ್ತ್‌, ಪುತ್ರರಾದ ಆಯರ್ಮಾನ್‌ ಹಾಗೂ ಆಯರ್ವವೀರ್‌ರನ್ನು ಅಗಲಿದ್ದಾರೆ. 1985ರಲ್ಲಿ ಬರೀ ಐದು ಸಾವಿರದಲ್ಲಿ ಖರೀದಿ ಮಾಡಿದ್ದ ಷೇರುಗಳಿಂದ 1986ರಲ್ಲಿ ಮೊದಲ ಬಾರಿಗೆ ಅವರು ಲಾಭ ಸಂಪಾದನೆ ಮಾಡಿದ್ದರು. ಅದಾದ ಬಳಿಕ, ಇಂದು ಅಂದಾಜು 764 ರೂಪಾಯಿ ಆಗಿರುವ ಟಾಟಾ ಟೀ ಷೇರನ್ನು ಅಂದು ಬರೀ 43 ರೂಪಾಯಿಗೆ 5 ಸಾವಿರ ಷೇರುಗಳನ್ನು ಖರೀದಿ ಮಾಡಿದ್ದರು. ಮೂರು ತಿಂಗಳ ಬಳಿಕ ಟಾಟಾ ಟೀ ಷೇರಿಇನ ಮೌಲ್ಯ 143 ರೂಪಾಯಿಗೆ ಏರಿದ್ದಾಗ ಅವುಗಳನ್ನು ಮಾರಾಟ ಮಾಡಿ ದೊಡ್ಡ ಮಟ್ಟದ ಲಾಭ ಗಳಿಸಿದ್ದರು. ತಾವು ಹಾಕಿದ್ದ ಮೌಲ್ಯದ ಮೂರು ಪಟ್ಟು ಲಾಭವನ್ನು ಅವರು ಇದರಲ್ಲಿ ಗಳಿಸಿದ್ದರು.

ಟೈಟಾನ್‌ ಫೇವರಿಟ್‌ ಸ್ಟಾಕ್‌, ಒಂದೇ ದಿನದಲ್ಲಿ 900 ಕೋಟಿ: ರಾಕೇಶ್‌ ಜುಂಜುನ್‌ವಾಲಾ ಪಾಲಿಗೆ ಟಾಟಾ ಕಂಪನಿಯ ಷೇರುಗಳು ದೊಡ್ಡ ಮಟ್ಟದ ಲಾಭ ಗಳಿಸಿದ್ದವು. ಕಳೆದ ಮಾರ್ಚ್‌ ಕ್ವಾರ್ಟರ್‌ ವೇಳೆಗೆ, ಟೈಟಾನ್‌ ಕಂಪನಿಯಲ್ಲಿ ಅವರ ಹೂಡಿಕೆ ಬರೋಬ್ಬರಿ 9,174 ಕೋಟಿ ರೂಪಾಯಿ, ಅದರೊಂದಿಗೆ ಸ್ಟಾರ್‌ ಹೆಲ್ತ್‌ ಕಂಪನಿಯಲ್ಲಿ 5372 ಕೋಟಿ ರೂಪಾಯಿ, ಮೆಟ್ರೋ ಬ್ರ್ಯಾಂಡ್‌ನಲ್ಲಿ 2194 ಕೋಟಿ ರೂಪಾಯಿ,ಟಾಟಾ ಮೋಟಾರ್ಸ್‌ನಲ್ಲಿ 1606 ಕೋಟಿ ರೂಪಾಯಿ ಹಾಗೂ ಕ್ರಿಸಿಲ್‌ನಲ್ಲಿ 1274 ಕೋಟಿ ರೂಪಾಯಿಯನ್ನು ಹೂಡಿಕೆ ಮಾಡಿದ್ದಾರೆ. 2017ರಲ್ಲಿ ಟೈಟಾನ್‌ನ ಷೇರುಗಳೊಂದರಿಂದಲೇ ಒಂದೇ ದಿನದಲ್ಲಿ 900 ಕೋಟಿ ರೂಪಾಯಿ ಆದಾಯವನ್ನು ಗಳಿಸಿದ್ದರು. 

Rakesh Jhunjhunwala ವಿಧಿವಶ: ಬಿಗ್‌ ಬುಲ್‌ ನಿಧನಕ್ಕೆ ಪ್ರಧಾನಿ ಮೋದಿ ಸೇರಿ ಗಣ್ಯರ ಸಂತಾಪ

ಸಿಂಪಲ್‌ ವ್ಯಕ್ತಿತ್ವ, ರಾರೆ ಎಂಟರ್‌ಪ್ರೈಸ್‌ ಮೂಲಕ ಸಿನಿಮಾ ನಿರ್ಮಾಣ: ಕಳೆದ ಬಾರಿ ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದ ವೇಳೆ ಇಸ್ತ್ರೀ ಇಲ್ಲದ ಶರ್ಟ್‌ ಧರಿಸಿ ಹೋಗಿದ್ದಕ್ಕೆ ನೆಟಿಜನ್ಸ್‌ಗಳಿಂದ ಟ್ರೋಲ್‌ಗೆ ಒಳಗಾಗಿದ್ದರು. ಕೊನೆಗೆ ಇದಕ್ಕೆ ಅವರು ಕಾರಣವನ್ನೂ ನೀಡಿದರಾದರೂ, ರಾಕೇಶ್‌ ಜುಂಜುನ್‌ವಾಲಾ ಬದುಕಿದ್ದಷ್ಟು ದಿನ ಸಿಂಪಲ್‌ ಆಗಿಯೇ ಇದ್ದರು. ಫೈವ್‌ ಸ್ಟಾರ್‌ ಹೋಟೆಲ್‌ಗಳಲ್ಲಿ ತಿನ್ನುವುದನ್ನು ಇಷ್ಟಪಡದ ಅವರು, ಬೀದಿ ಬದಿಯಲ್ಲಿ ನಿಂತು ದೋಸೆ, ಪಾವ್‌ಬಾಜಿ ತಿನ್ನುವ ಅಭ್ಯಾಸವಿತ್ತು. ಅದರೊಂದಿಗೆ ಇಂಗ್ಲೀಷ್‌ ವಿಂಗ್ಲೀಷ್‌, ಶಮಿತಾಭ್‌, ಕಿ ಆಂಡ್‌ ಕಾದಂಥ ಬಾಲಿವುಡ್‌ ಚಿತ್ರಗಳ ನಿರ್ಮಾಣವನ್ನೂ ಇವರು ಮಾಡಿದ್ದರು. ರಾರೆ ಎಂಟರ್‌ಪ್ರೈಸಸ್‌ ಮೂಲಕ ಇವುಗಳ ನಿರ್ಮಾಣ ಮಾಡಿದ್ದರು. ಇದರಲ್ಲಿ ರಾ ಎಂದರೆ ರಾಕೇಶ್‌ ಹಾಗೂ ರೇ ಎಂದರೆ ರೇಖಾ ಎಂದರ್ಥ.

10 ನಿಮಿಷದಲ್ಲಿ 850 ಕೋಟಿ ಸಂಪಾದಿಸಿದ ಉದ್ಯಮಿ !

ದೇಶದ ಮೂರನೇ ದೊಡ್ಡ ಹೂಡಿಕೆದಾರರು: ಮಾರ್ಚ್‌ ಅವಧಿಯ ಮಾಹಿತಿ ಪ್ರಕಾರ, ರಾಕೇಶ್‌ ಜುಂಜುನ್‌ವಾಲಾ ದೇಶದ ಮೂರನೇ ಅತೀದೊಡ್ಡ ಹೂಡಿಕೆದಾರರು. ಒಟ್ಟು 26.15 ಸಾವಿರ ಕೋಟಿರೂ ಹಣವನ್ನು ಈಗಾಗಲೇ ವಿವಿಧ ಕಂಪನಿಗಳ ಮೇಲೆ ಹೂಡಿಕೆ ಮಾಡಿದ್ದಾರೆ. ಅಜೀಂ ಪ್ರೇಮ್‌ಜೀ ಹಾಗೂ ಅವರ ಕಂಪನಿಗಳು ಒಟ್ಟು 1.67 ಲಕ್ಷ ಕೋಟಿ ಹಣವನ್ನು ಹೂಡಿಕೆ ಮಾಡಿ ಅಗ್ರಸ್ಥಾನದಲ್ಲಿದ್ದರೆ. ಡಿ ಮಾರ್ಟ್‌ನ ಸಂಸ್ಥಾಪಕ ರಾಧಾಕೃಷ್ಣ ಧಮಾನಿ 1.48 ಲಕ್ಷ ಹಣವನ್ನು ಹೂಡಿಕೆ ಮಾಡಿ ಮೊದಲ ಎರಡು ಸ್ಥಾನಗಳಲ್ಲಿದ್ದಾರೆ.

ರಾಕೇಶ್‌ ಜುಂಜುನ್‌ವಾಲಾ ಅವರ ಸೂಪರ್‌ ಕೋಟ್ಸ್‌

- ನಾನು ಸ್ವಭಾವದಲ್ಲಿ ಆಶಾವಾದಿಯಾಗಿದ್ದೇನೆ. ಆದರೆ, ನಾನು ಕೂಡ ತಪ್ಪು ಮಾಡಬಹುದು ಎನ್ನುವ ಅಧಿಕಾರವನ್ನು ನನ್ನೊಂದಿಗೆ ಇರಿಸಿಕೊಂಡಿರುತ್ತೇನೆ. 

- ಜನರು ನಿಮ್ಮನ್ನು ಹೊಗಳುತ್ತಿರುವಾಗ ನೀವು ಸಮಾಧಾನದಿಂದ ಇರಬೇಕು. ಏಕೆಂದರೆ, ನಿಮ್ಮ ಉತ್ತಮ ಸಮಯ ಇದ್ದಾಗಲೇ, ಕಂಡುಕೇಳರಿಯದ ದೊಡ್ಡ ತಪ್ಪನ್ನು ನೀವು ಮಾಡಿರುತ್ತೀರಿ.

- ಷೇರು ಮಾರುಕಟ್ಟೆ ವ್ಯವಹಾರ ಎನ್ನುವುದು ಹವಾಮಾನದ ರೀತಿ. ನಿಮಗೆ ಇಷ್ಟ ಇದೆಯೋ ಇಲ್ಲವೋ, ಅದನ್ನು ಅನುಭವಿಸಲೇಬೇಕು.

click me!