'ದುಡ್ಡಿಲ್ಲದ ಸರ್ಕಾರ ಎಂಬಂತೆ ಸಾಬೀತುಪಡಿಸಿದ BSY ಬಜೆಟ್‌'

Kannadaprabha News   | Asianet News
Published : Mar 06, 2020, 01:11 PM IST
'ದುಡ್ಡಿಲ್ಲದ ಸರ್ಕಾರ ಎಂಬಂತೆ ಸಾಬೀತುಪಡಿಸಿದ BSY ಬಜೆಟ್‌'

ಸಾರಾಂಶ

ಅನುಭವ ಮಂಟಪಕ್ಕೆ ಅನುದಾನ ಘೋಷಿಸಿ ಮೂಗಿಗೆ ತುಪ್ಪ ಸವರಿಸಿದ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ| ನೀರಸ ಬಜೆಟ್‌, ಬೀದರ್‌ ಕಡೆಗಣಿಸಿದ ಸರ್ಕಾರ| ಜಿಲ್ಲೆಯ ಅಭಿವೃದ್ಧಿ ನಿರೀಕ್ಷೆಗಳು ಸಂಪೂರ್ಣ ಹುಸಿ| 

ಅಪ್ಪಾರಾವ್‌ ಸೌದಿ

ಬೀದರ್‌(ಮಾ.06): ರಾಜ್ಯ ಬಜೆಟ್‌ ಮೇಲಿದ್ದ ಜಿಲ್ಲೆಯ ನೂರಾರು ನಿರೀಕ್ಷೆಗಳು ನುಚ್ಚು ನೂರಾಗಿವೆ. ಅಭಿವೃದ್ಧಿಗೆ ಪೂರಕ ಚಿಂತನೆಗಳು ಶೂನ್ಯ ಸಂಪಾದಿಸಿವೆ. ಬಿಎಸ್‌ವೈ ಹೊಗಳಿ ಅಟ್ಟಕ್ಕೇರಿಸಿದ್ದ ಜಿಲ್ಲೆಯ ಕಮಲ ಪಾಳಯಕ್ಕೆ ಹೇಳಿಕೊಳ್ಳಲು ಬಸವಕಲ್ಯಾಣದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಅನುಭವ ಮಂಟಪಕ್ಕೆ ಅನುದಾನ ಘೋಷಿಸಿ ಮೂಗಿಗೆ ತುಪ್ಪ ಸವರಲಾಗಿದೆ. ದುಡ್ಡಿಲ್ಲದ ಸರ್ಕಾರ ಎಂಬಂತೆ ಸಾಬೀತುಪಡಿಸಿದಂತಿರುವ ಈ ಬಜೆಟ್‌ ಸ್ವರೂಪ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಗುರುವಾರ ರಾಜ್ಯ ಬಜೆಟ್‌ ಮಂಡನೆಯಾಗಿದ್ದು, ಜಿಲ್ಲೆಗೆ ಕೃಷಿ ಕಾಲೇಜು, ಸಿಪೆಟ್‌ಗೆ 10 ಕೋಟಿ ರು. ಮಂಜೂರಾತಿ, ಬಹು ದಿನಗಳ ಕನಸಾದ ಮಹಿಳಾ ಪೊಲೀಸ್‌ ತರಬೇತಿ ಕೇಂದ್ರ, ನೀರಾವರಿಗೆ ಪ್ರತ್ಯೇಕ ನಿಧಿ ಕೇವಲ ಹೇಳಿಕೆ, ಕೊಚ್ಚಿಕೊಳ್ಳಲು ಮಾತ್ರ ಎಂಬುದು ಸಾಬೀತಾಗಿದೆ.

ಬಾಯಾರಿಕೆ ನೀಗಿಸುವ ಭರವಸೆ ಹುಸಿ:

ಪಶು ಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಸ್ವಕ್ಷೇತ್ರ ಔರಾದ್‌ ಪಟ್ಟಣ ಹಾಗೂ ಮಾರ್ಗ ಮಧ್ಯದ 17 ಗ್ರಾಮಗಳಿಗೆ ಮಾಂಜ್ರಾ ನದಿಯಿಂದ ಪೈಪ್‌ಲೈನ್‌ ಮೂಲಕ ನೀರು ಪೂರೈಕೆ ಯೋಜನೆಗೆ ಈ ಬಜೆಟ್‌ನಲ್ಲಿ ಸ್ಥಾನ ಸಿಕ್ಕಿ, ಈ ಹಿಂದಿನ ಸರ್ಕಾರಗಳಲ್ಲಿ ಜಗಳ ಕಾಯುತ್ತಿದ್ದ ಪ್ರಭು ಚವ್ಹಾಣ ಈ ಬಾರಿ ತಮ್ಮದೇ ಆಡಳಿತದಲ್ಲಿ ಜನರ ಬಾಯಾರಿಕೆ ನೀಗಿಸಲಿದ್ದಾರೆ ಎಂಬ ಭರವಸೆ ಹುಸಿಯಾಗಿದೆ.

ಜಿಲ್ಲೆಯ ರೈತರ ಪಾಲಿಗೆ ಬರೆ:

ಬಿಎಸ್‌ಎಸ್‌ಕೆ ಪುನಾರಂಭಕ್ಕೆ ನಿರ್ಧಾರವಾಗಲಿ, ಕಾರಂಜಾ ಸಂತ್ರಸ್ತರ ಕೂಗು ಇಲ್ಲವೇ ಇಲ್ಲ. ಕೆರೆ ಅಭಿವೃದ್ಧಿ, ಕೆರೆಗೆ ನೀರು ತುಂಬುವ ಅಂತರ್ಜಲ ಹೆಚ್ಚಳ ಕುರಿತು ಕಳೆದ ಬಜೆಟ್‌ನಲ್ಲಿ ಮಾಡಿದ್ದ ಘೋಷಣೆಗೆ ಮಂಜೂರಾತಿ ಇರಲಿ, ಹೆಸರೂ ಎತ್ತದಂತೆ ಜಿಲ್ಲೆಯ ರೈತರ ಪಾಲಿಗೆ ಬರೆ ಎಳೆದಂತಾಗಿದೆ. ಎಂದಿನಂತೆ ಐತಿಹಾಸಿಕ ಪ್ರವಾಸೋದ್ಯಮದತ್ತ ಸರ್ಕಾರ ಇಣುಕಿ ನೋಡುವ ಪ್ರಯತ್ನವನ್ನೂ ಈ ಬಜೆಟ್‌ನಲ್ಲಿ ತೋರಲಾಗಿಲ್ಲ. ಕೃಷಿ, ಕಾಲೇಜು ಘೋಷಣೆಯ ಭರವಸೆ ಜಿಲ್ಲೆಯ ಪ್ರತಿಯೊಬ್ಬರಿಗೂ ಇತ್ತಾದರೂ ಅದು ಲೆಕ್ಕಕ್ಕೆ ಇಲ್ಲದಂತಾಗಿದೆ.

ನಿರೀಕ್ಷೆ ಎಳ್ಳಷ್ಟೂ ಈಡೇರಿಲ್ಲ:

ಹೇಳಿಕೊಂಡು, ಹೊಗಳಲೂ ಬಿಜೆಪಿ ನಾಯಕರು ಹಿಂಜರಿಯುವಂಥ ದುಸ್ಥಿತಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಮಂಡಿಸಿದ ಬಜೆಟ್‌ ತಂದಿಟ್ಟಿದೆ. ಬಜೆಟ್‌ ಮೇಲಿನ ನಿರೀಕ್ಷೆ ಎಳ್ಳಷ್ಟೂಈಡೇರದೆ, ಈ ವರ್ಷದ ಅಭಿವೃದ್ಧಿ ಚಿಂತನೆಗಳಿಗೆ ಹೊಸ ಟಚ್‌ ನೀಡುವ ಪ್ರಯತ್ನವಾಗದೆ, ಅನುಭವ ಮಂಟಪ ಹೊರತುಪಡಿಸಿದ್ರೆ ಸರ್ಕಾರದ ಬಜೆಟ್‌ ಬೀದರ್‌ಗೆ ಶೂನ್ಯ ಎಂಬುವುದನ್ನು ಸಾಬೀತು ಪಡಿಸಿದೆ.

ಬಿಎಸ್‌ಎಸ್‌ಕೆ ಪುನಶ್ಚೇತನಕ್ಕೆ ಅನುದಾನವಿಲ್ಲ

ಆರ್ಥಿಕ ಸಂಕಷ್ಟದಿಂದ ಬೀಗ ಜಡಿದುಕೊಂಡಿರುವ ಬಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕಾಗಿ ಕನಿಷ್ಠ 100 ಕೋಟಿ ರು.ಗಳನ್ನು ಬಜೆಟ್‌ನಲ್ಲಿ ಘೋಷಿಸಲಿ ಅಥವಾ ಅದರ ಪುನರುಜ್ಜೀವನಕ್ಕೆ ಮತ್ಯಾವುದೇ ದಾರಿ ಹೇಳುವ ಭರವಸೆಯೂ ಇಲ್ಲ. ಬಚಾವತ್‌ ಆಯೋಗದ ತೀರ್ಪಿನಂತೆ ಜಿಲ್ಲೆಯ ಮಾಂಜ್ರಾ ನದಿಯಿಂದ ಗೋದಾವರಿ ನದಿಯ ಕರ್ನಾಟಕದ ಪಾಲಿನ ನೀರು ಬಳಸಿಕೊಳ್ಳಲು ಬ್ಯಾರೇಜುಗಳ ನಿರ್ಮಾಣಕ್ಕೆ ಮುಂದಾಗುವ ಘೋಷಣೆ ಮಾಡಿದ್ದೆಯಾದಲ್ಲಿ ಐತಿಹಾಸಿಕ ಹಾಗೂ ಜಿಲ್ಲೆಯ ರೈತರ ಪಾಲಿಗೆ ಸದಾ ಸ್ಮರಣೀಯವಾಗುತ್ತಿದ್ದ ಚಿಂತನೆ ಚೂರು ಚೂರಾಗಿದೆ. ಕೈಗಾರಿಕೋದ್ಯಮ ಬೆಂಗಳೂರು, ಹುಬ್ಬಳ್ಳಿ, ಧಾರವಾಡ ಅಷ್ಟೇ ಅಲ್ಲ, ಬೀದರ್‌ಗೂ ಅಗತ್ಯವಿದೆ ಎಂಬುವುದನ್ನು ಸರ್ಕಾರ ತನ್ನ ಬಜೆಟ್‌ ಮೂಲಕ ಸಾರುತ್ತದೆ ಎಂಬ ಭರವಸೆ ಹೊತ್ತಿದ್ದ ಜಿಲ್ಲೆಯ ಜನತೆ ಹಾಗೂ ಬಿಜೆಪಿಯ ಪ್ರಮುಖರ ಆಸೆಯ ಮೇಲೂ ತಣ್ಣೀರು ಸುರಿಯಲಾಗಿದೆ. ಬಜೆಟ್‌ ಪುಟಗಳಲ್ಲಿ 20ಕ್ಕೂ ಹೆಚ್ಚು ಪುಟಗಳು ಬೆಂಗಳೂರು ಅಭಿವೃದ್ಧಿಯ ಬಣ್ಣಗಳನ್ನು ಬಣ್ಣಿಸಿವೆ.
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್
ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!