ಕನಸಾಗಿಯೇ ಉಳಿದ ವಿಮಾನ ನಿಲ್ದಾಣ, ದ್ರಾಕ್ಷಿ ಅಭಿವೃದ್ಧಿ ಮಂಡಳಿ, ಸರ್ಕಾರಿ ಕಾಲೇಜು| ನೀರಿನ ಯೋಜನೆಗೆ ಅನುದಾನ ಮೀಸಲು ಬಿಟ್ಟರೆ ಜಿಲ್ಲೆಗೆ ಬೇರೇನೂ ಇಲ್ಲ| ಜಲಧಾರೆ ಯೋಜನೆ ಅಡಿ ಮಂಡ್ಯ, ವಿಜಯಪುರ ಜಿಲ್ಲೆಯಲ್ಲಿ ಶಾಶ್ವತ ಕುಡಿಯುವ ನೀರಿನ ಬೃಹತ್ ಯೋಜನೆ ಅನುಷ್ಠಾನಕ್ಕೆ 700 ಕೋಟಿ ಬಜೆಟ್‌ನಲ್ಲಿ ಮೀಸಲು|
ರುದ್ರಪ್ಪ ಆಸಂಗಿ
ವಿಜಯಪುರ(ಮಾ.06): ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ಹಿಂದುಳಿದ ವಿಜಯಪುರ ಜಿಲ್ಲೆಗೆ ಯಾವುದೇ ವಿಶೇಷ ಕೊಡುಗೆ ನೀಡದೆ ಇರುವುದರಿಂದಾಗಿ ಜಿಲ್ಲಾ ಜನರ ಕನಸು ನುಚ್ಚು ನೂರಾಗಿವೆ.
undefined
ವಿಜಯಪುರ ನಗರದಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಬಜೆಟ್‌ನಲ್ಲಿ ಘೋಷಣೆಯಾಗುತ್ತದೆ ಎಂದು ನಂಬಿದ್ದರು. ಆದರೆ ಈ ಹಿಂದೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ವೇಳೆ ವಿಜಯಪುರ ಹೊರವಲಯದ ಬುರಣಾಪುರ ಬಳಿ ವಿಮಾನ ನಿಲ್ದಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಈ ಸಲದ ಬಜೆಟ್‌ನಲ್ಲಿ ಮುಖ್ಯಮಂತ್ರಿ ವಿಮಾನ ನಿಲ್ದಾಣ ಸ್ಥಾಪನೆ ಬಗ್ಗೆ ಪ್ರಸ್ತಾಪಿಸಿ ನನೆಗುದಿಗೆ ಬಿದ್ದಿದ್ದ ವಿಮಾನ ನಿಲ್ದಾಣ ಯೋಜನೆಗೆ ಚಾಲನೆ ನೀಡಬಹುದು ಎಂಬ ಜನರ ನಿರೀಕ್ಷೆ ಸುಳ್ಳಾಗಿದೆ. ಮತ್ತೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರೂ ವಿಮಾನ ನಿಲ್ದಾಣ ನಿರ್ಮಾಣದ ಬಗ್ಗೆ ಬಜೆಟ್‌ನಲ್ಲಿ ಕಿಂಚಿತ್ತೂ ಪ್ರಸ್ತಾಪಿಸಿಲ್ಲ. ಇದು ವಿಜಯಪುರ ಜಿಲ್ಲೆಯ ಜನತೆಗೆ ನಿರಾಸೆ ಮೂಡಿಸಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ವಿಜಯಪುರ ಜಿಲ್ಲೆ ದ್ರಾಕ್ಷಿ ಅದರಲ್ಲೂ ವಿಶೇಷವಾಗಿ ಒಣ ದ್ರಾಕ್ಷಿ (ಮಣೂಕು)ಗೆ ಹೆಚ್ಚು ಪ್ರಸಿದ್ಧಿಯಾಗಿದೆ. ದ್ರಾಕ್ಷಿ ಬೆಳೆಗಾರರ ಪುನಶ್ಚೇತನಕ್ಕೆ ಪ್ಯಾಕೇಜ್ ಹಾಗೂ ದ್ರಾಕ್ಷಿ ಅಭಿವೃದ್ಧಿ ಮಂಡಳಿ ಘೋಷಣೆಯಾಗಬಹುದು ಎಂದು ದ್ರಾಕ್ಷಿ ಬೆಳೆಗಾರರು ನಂಬಿಕೊಂಡಿದ್ದರು. ಆದರೆ ದ್ರಾಕ್ಷಿ ಬೆಳೆಗಾರರಿಗೆ ಈ ಬಾರಿಯೂ ದ್ರಾಕ್ಷಿ ಹುಳಿಯಾಗಿದೆ.
ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪನೆ ಬಗ್ಗೆ ಬಹುದಿನಗಳ ಬೇಡಿಕೆ ಈ ಸಲದ ಬಜೆಟ್‌ನಲ್ಲಿ ಈಡೇರಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಬಜೆಟ್‌ನಲ್ಲಿ ಈ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಹೀಗಾಗಿ ಜಿಲ್ಲೆಯ ಜನರ ಕನಸು ನನಸಾಗದೆ ಕನಸಾಗಿಯೇ ಉಳಿಯುವಂತಾಗಿದೆ.
ವಿಜಯಪುರ ಜಿಲ್ಲೆ ಐತಿಹಾಸಿಕ ತಾಣಗಳಿಗೆ ಪ್ರಸಿದ್ಧಿಯಾಗಿದೆ. ಇಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಸಾಕಷ್ಟು ಅವಕಾಶಗಳಿವೆ. ಆದರೂ ಯಡಿಯೂರಪ್ಪ ಬಜೆಟ್‌ನಲ್ಲಿ ಈ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ. ಇದು ಕೂಡ ಜಿಲ್ಲಾ ಜನರಲ್ಲಿ ನಿರಾಶೆ ಮೂಡಿಸಿದೆ.
ಆಲಮಟ್ಟಿ ಅಣೆಕಟ್ಟೆಯನ್ನು 519.60 ಮೀಟರ್‌ನಿಂದ 524.256 ಮೀಟರ್‌ಗೆ ಹೆಚ್ಚಿಸಲು ಅನುವು ಆಗುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪವಿಲ್ಲ. ಹೀಗಾಗಿ ವಿಜಯಪುರ ಜಿಲ್ಲೆಯಲ್ಲಿನ ನೀರಾವರಿ ಯೋಜನೆಗಳು ಮತ್ತೆ ನನೆಗುದಿಗೆ ಬೀಳುವಂತಾಗಿದೆ. ಯುಕೆಪಿ-3ರ ಹಂತದ ಯೋಜನೆಗಳಿಗೆ ಅನುದಾನ ನೀಡಿಲ್ಲ. ಹೀಗಾಗಿ ವಿಜಯಪುರ ಜಿಲ್ಲೆಯಲ್ಲಿ ಸಮಗ್ರ ನೀರಾವರಿ ಕನಸು ತಿರುಕನ ಕನಸಾಗಿದೆ.
ರಾಜ್ಯದಲ್ಲೇ ಏಕೈಕ ಅಕ್ಕ ಮಹಾದೇವಿ ಮಹಿಳಾ ವಿವಿ ವಿಜಯಪುರದಲ್ಲಿ ಇದೆ. ಈ ಮಹಿಳಾ ವಿವಿ ಅಭಿವೃದ್ಧಿಗೆ ಅನುದಾನ ಪ್ರಸ್ತಾಪವಿಲ್ಲ. ಹೀಗಾಗಿ ಮಹಿಳಾ ಸಬಲೀಕರಣಕ್ಕೆ ನಿರೀಕ್ಷಿತ ವೇಗ ಸಿಗದೆ ಹಿನ್ನಡೆಯಾಗುವುದರಲ್ಲಿ ಸಂದೇಹವಿಲ್ಲ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಜಯಪುರ ಜಿಲ್ಲೆಯ ಜನರಿಗೆ ಮೂಗಿಗೆ ತುಪ್ಪ ಸವರು ಹಾಗೆಯೇ ಜಲಧಾರೆ ಯೋಜನೆ ಅಡಿ ಮಂಡ್ಯ, ವಿಜಯಪುರ ಜಿಲ್ಲೆಯಲ್ಲಿ ಶಾಶ್ವತ ಕುಡಿಯುವ ನೀರಿನ ಬೃಹತ್ ಯೋಜನೆ ಅನುಷ್ಠಾನಕ್ಕೆ . 700 ಕೋಟಿ ಬಜೆಟ್‌ನಲ್ಲಿ ಮೀಸಲು ಇಡಲಾಗಿದೆ. ಏಷಿಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್ (ಎಐಐಬಿ) ನೆರವಿನ ಮೇರೆಗೆ ಈ ಯೋಜನೆ ಅನುಷ್ಠಾನಕ್ಕೆ ನಿರ್ಧರಿಸಲಾಗಿದೆ. ಇದನ್ನು ಹೊರತು ಪಡಿಸಿದರೆ ವಿಜಯಪುರ ಜಿಲ್ಲೆಗೆ ಏನನ್ನೂ ನೀಡಿಲ್ಲ.
ಬಜೆಟ್‌ನಲ್ಲಿ ಕೃಷ್ಣಾ ಯೋಜನೆ ಕೃಷ್ಣಾರ್ಪಣೆ
ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆಗೆ 20 ಸಾವಿರ ಕೋಟಿ ಇರಿಸಲಾಗುವುದು ಎಂದು ಬಿಜೆಪಿಯವರು ಹೇಳಿದ್ದರು. ಇದೀಗ ಆ ಹಣ ಬಜೆಟ್‌ನಲ್ಲಿ ಮಾಯಾವಾಗುವ ಮೂಲಕ ಉತ್ತರ ಕರ್ನಾಟಕ ಜೀವನಾಡಿ ಕೃಷ್ಣಾ ಯೋಜನೆಯನ್ನು ಕೃಷ್ಣಾರ್ಪಣೆ ಮಾಡಿದೆ ಎಂದು ಕಾಂಗ್ರೆಸ್ ಮುಖಂಡ, ಶಾಸಕ ಎಂ.ಬಿ.ಪಾಟೀಲ ಕಿಡಿಕಾರಿದ್ದಾರೆ.
ಕೃಷ್ಣಾ ತೀರದಿಂದ ಇಬ್ಬರು ಡಿಸಿಎಂ ಇದ್ದು, ಅವರಾದರೂ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಬಹುದಿತ್ತು. ಡಿಸಿಎಂ ಗೋವಿಂದ ಕಾರಜೋಳ ಕೃಷ್ಣಾ ಮೇಲ್ದಂಡೆ ಯೋಜನೆಗೆ 20 ಸಾವಿರ ಕೋಟಿ ಈ ಬಜೆಟ್‌ನಲ್ಲಿ ಒದಗಿಸಲಾಗುವುದು ಎಂದು ಪದೇಪದೆ ಹೇಳಿದ್ದರು. ಹಾಗಿದ್ದರೆ ಆ ಹಣ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದ್ದಾರೆ.
ಹಿಂದಿನ ಕಾಂಗ್ರೆಸ್ ಸರ್ಕಾರ ಪ್ರತಿ ವರ್ಷವೂ ಬಜೆಟ್‌ನಲ್ಲಿ ರಾಜ್ಯದ ಎಲ್ಲ ನೀರಾವರಿ ಯೋಜನೆಗಳಿಗೆ ಹಾಗೂ ವಿಶೇಷವಾಗಿ ಕೃಷ್ಣಾ ಯೋಜನೆಗೆ ಹೆಚ್ಚು ಒತ್ತು ನೀಡಿತ್ತು. ಆ ಯೋಜನೆಗಳನ್ನು ಮುಂದುವರಿಸುವ ಬದಲು ಸ್ಥಗಿತಗೊಳಿಸಿದ ಕೀರ್ತಿ ಈ ಬಿಜೆಪಿ ಸರ್ಕಾರಕ್ಕೆ ಸಲ್ಲಬೇಕು ಎಂದಿದ್ದಾರೆ.
ಕೇಂದ್ರ ಸರ್ಕಾರದಿಂದಲೂ ರಾಜ್ಯದ ಪಾಲಿಗೆ ಬರಬೇಕಾದ ನ್ಯಾಯಯುತ ಅನುದಾನ ಬಂದಿಲ್ಲ. ರಾಜ್ಯದಿಂದ ಆಯ್ಕೆಯಾದ ಸಂಸದರು ಈ ಬಗ್ಗೆ ಧ್ವನಿ ಎತ್ತದೆ ಮೌನವಾಗಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಕೇಂದ್ರವೂ ನೆರವು ನೀಡುತ್ತಿಲ್ಲ. ರಾಜ್ಯದ ಬಜೆಟ್‌ನಲ್ಲಿ ಅನುದಾನವನ್ನು ಸಾಕಷ್ಟು ಇಟ್ಟಿಲ್ಲ. ಹೀಗಾದರೆ ಕರ್ನಾಟಕಕ್ಕೆ ದುಸ್ಥಿತಿ ಬರಲಿದೆ. ಇದರಿಂದ ಎಲ್ಲ ಅಭಿವೃದ್ಧಿ ಕುಂಠಿತವಾಗಲಿವೆ ಎಂದು ಬಜೆಟ್ ಕುರಿತು ಪಾಟೀಲ ಪ್ರತಿಕ್ರಿಯಿಸಿದ್ದಾರೆ.