ಲಾಕ್‌ಡೌನ್‌ನಿಂದ ಹುಟ್ಟಿ, ಕಪೆಕ್‌ನಿಂದ ಬೆಳೆದು ನಿಂತ ಉದ್ಯಮ: ರುಚಿತ್ ಬ್ರ್ಯಾಂಡ್ ಯಶೋಗಾಥೆ

Published : Jul 18, 2025, 12:50 PM ISTUpdated : Jul 18, 2025, 12:56 PM IST
bidar brothers

ಸಾರಾಂಶ

ರುಚಿತ್ ಬಿ ಆಹಾರ ಉತ್ಪನ್ನಗಳು ಒಂದು ಬ್ರ್ಯಾಂಡ್ ಆಗಿ ಬೆಳೆಯತೊಡಗಿದೆ. ಕರ್ನಾಟಕದ ಮೂಲೆ ಮೂಲೆಗಳಿಗೂ ತಲುಪುತ್ತಿರುವ ರುಚಿತ್ ಬಿ ಉತ್ಪನ್ನಗಳು ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲೂ ಬೇಡಿಕೆ ಗಿಟ್ಟಿಸಿಕೊಂಡಿವೆ.

ಕೋವಿಡ್ ಹಾವಳಿಯಿಂದ ಎದುರಾದ ಲಾಕ್ಡೌನ್ ಇಂಜಿನಿಯರ್ ಸಹೋದರರಿಬ್ಬರನ್ನ ಊರು ಸೇರುವಂತೆ ಮಾಡಿತು. ಒಬ್ಬ ಸಹೋದರ ಕುವೈತ್ನಲ್ಲಿದ್ದ ಉದ್ಯೋಗ ಬಿಟ್ಟು ಕರ್ನಾಟಕ ಗಡಿ ಜಿಲ್ಲೆ ಬೀದರ್ಗೆ ಬಂದರೆ, ಬೆಂಗಳೂರಲ್ಲಿ ನೆಲೆಸಿದ್ದ ಮತ್ತೊಬ್ಬ ಸಾಫ್ಟ್ವೇರ್ ಇಂಜಿನಿಯರಿಂಗ್ ಉದ್ಯೋಗ ಮಾಡ್ತಿದ್ದ ಸಹೋದರನೂ ಊರು ಸೇರಿದ್ದರು. ಆ ಇಬ್ಬರು ಸಹೋದರರು ಕೋವಿಡ್ ಹಾವಳಿಯಿಂದ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲೆಂದೇ ಮನೆಯಲ್ಲಿದ್ದ ಸಿರಿಧಾನ್ಯಗಳಿಂದ ಶುರು ಮಾಡಿದ ಆಹಾರವೀಗ ರುಚಿತ್ ಬಿ ಹೆಸರಿನಲ್ಲಿ ಜನಪ್ರಿಯ ಆರೋಗ್ಯ ವರ್ಧನೆಯ ಪೇಯವಾಗಿ ಪ್ರಸಿದ್ಧಿಗೊಂಡಿದೆ. ರುಚಿತ್ ಬಿ ಆಹಾರ ಉತ್ಪನ್ನಗಳು ಒಂದು ಬ್ರ್ಯಾಂಡ್ ಆಗಿ ಬೆಳೆಯತೊಡಗಿದೆ. ಕರ್ನಾಟಕದ ಮೂಲೆ ಮೂಲೆಗಳಿಗೂ ತಲುಪುತ್ತಿರುವ ರುಚಿತ್ ಬಿ ಉತ್ಪನ್ನಗಳು ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲೂ ಬೇಡಿಕೆ ಗಿಟ್ಟಿಸಿಕೊಂಡಿವೆ.

ಕುವೈತ್ನಿಂದ ಹಿಂದಿರುಗಿದ ಸಂಜೀವ್ಕುಮಾರ್ ಬಹಸನ್ ಹಾಗೂ ಬೆಂಗಳೂರಿನಿಂದ ಹಿಂದಿರುಗಿದ ಶಶಿಧರ್ ಬಹಸನ್ ಅವ್ರಿಬ್ಬರ ಯೋಶೋಗಾಥೆ ಇದು. ಇವರ ಮನೆ ರುಚಿಯನ್ನ ಬ್ರ್ಯಾಂಡ್ ಆಗಿಸಿದ್ದು ಮಾತ್ರ ಕಪೆಕ್ ಎಂದೇ ಹೆಸರಾಗಿರುವ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗು ರಫ್ತು ನಿಗಮ. ಮನೆಯವರಿಗಾಗಿ ಶುರು ಮಾಡಿದ ಸಿರಿಧಾನ್ಯದ ಗಂಜಿ ಪೌಡರ್ ಅನ್ನು ಅಕ್ಕಪಕ್ಕದ ಮನೆಯವರಿಗೆ, ಸಂಬಂಧಿಕರಿಗೆಲ್ಲಾ ಹಂಚಿದರು. ಅವರಿಂದ ವ್ಯಕ್ತವಾದ ಅಭಿಪ್ರಾಯ ಮತ್ತು ಬೇಡಿಕೆ ನೋಡಿಕೊಂಡು ಮತ್ತಷ್ಟು ಸಿರಿಧಾನ್ಯ ಖರೀದಿಸಿ ಮಾಡಿ ಸಣ್ಣ ಪ್ರಮಾಣದಲ್ಲಿ ಮಾರತೊಡಗಿದರು. ತಿರುಗಿ ಕೇಳುವ ಗ್ರಾಹಕರ ಸಂಖ್ಯೆ ಹೆಚ್ಚಿದ್ದು ನೋಡಿ ಕೆಲವು ವ್ಯಾಪಾರಿ ಮೇಳಗಳಲ್ಲಿ ಅಂಗಡಿ ಹಾಕಿ ಮಾರಲು ಮುಂದಾದರು ಸಂಜೀವ್ ಬಹಸನ್ ಮತ್ತು ಶಶಿಧರ್ ಬಹಸನ್. ಅಂತದ್ದೇ ಒಂದು ವ್ಯಾಪಾರಿ ಮೇಳದಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳಿಂದ ಕಪೆಕ್ನ ಪಿಎಂಎಫ್ಇ ಯೋಜನೆಯ ಬಗ್ಗೆ ಮಾಹಿತಿ ಸಿಕ್ಕಿತು.

ರಾಜ್ಯ ಮತ್ತು ಕೇಂದ್ರ ಸರ್ಕಾರದ ಜಂಟಿ ಯೋಜನೆಯಾದ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವ ಯೋಜನೆಯ (PMFME) ಮೂಲಕ 30 ಲಕ್ಷ ರೂಪಾಯಿ ವೆಚ್ಚದಲ್ಲಿ ಇದರ ಉತ್ಪಾದನಾ ಘಟಕ ಆರಂಭಿಸಿದರು. 30 ಲಕ್ಷ ರೂಪಾಯಿಯ ಪೈಕಿ 15 ಲಕ್ಷ ರೂಪಾಯಿ ಸಬ್ಸಿಡಿಯನ್ನ ಯೋಜನೆ ಮೂಲಕ ಕಪೆಕ್ ಮಂಜೂರು ಮಾಡಿತು. 15 ಲಕ್ಷ ರೂಪಾಯಿಯ ಪೈಕಿ ರಾಜ್ಯ ಸರ್ಕಾರ 9 ಲಕ್ಷ ರೂಪಾಯಿ ಹಾಗೂ ಕೇಂದ್ರ ಸರ್ಕಾರ 6 ಲಕ್ಷ ರೂಪಾಯಿ ನೀಡಿತು. ಕಪೆಕ್ ಮೂಲಕ ಸರ್ಕಾರ ನೀಡಿದ ನೆರವು ನಾವು ಉದ್ಯಮಿಯಾಗಲು ಅಡಿಪಾಯ ಹಾಕಿತು ಎಂದು ಕನ್ನಡಪ್ರಭದ ಜೊತೆ ಅನುಭವ ಹಂಚಿಕೊಂಡರು ರುಚಿತ್ ಬಿ ಸಂಸ್ಥಾಪಕ ಸಂಜೀವ್ ಕುಮಾರ್ ಬಹಸನ್.

ಕೋವಿಡ್ ನಿಂದ ಅನೇಕ ನಷ್ಟಗಳಾಗಿವೆ. ಆದರೆ, ನಮ್ಮ ಜೀವನಕ್ಕೆ ಹೊಸ ಬೆಳಕು ಬರಲು ಕೋವಿಡ್ ಕಾರಣವಾಯಿತು. ಅನಿವಾರ್ಯಕ್ಕೆ ಶುರು ಮಾಡಿದ ಸಿರಿಧಾನ್ಯ ಪೌಡರ್ ಉತ್ಪಾದನೆ ದೊಡ್ಡದಾಗಿ ಬೆಳೆಯಲು ಕಪೆಕ್ ನೀಡಿದ ನೆರವು ಕಾರಣವಾಗಿದೆ. ಕಪೆಕ್ ನೆರವಿಗೆ ಬರುವ ಮುನ್ನ ಮಾರ್ಕೆಟಿಂಗ್ ನಮ್ಮ ದೊಡ್ಡ ಸಮಸ್ಯೆಯಾಗಿತ್ತು. ಕಪೆಕ್ ನಮ್ಮ ಉತ್ಪನ್ನ ಉತ್ಪಾದನೆಗೆ ಆರ್ಥಿಕವಾಗಿ ನೆರವಾಗಿದ್ದಲ್ಲದೇ, ಮಾರ್ಕೆಟಿಂಗ್ಗೆ ಅವರು ನೀಡುವ ಮೇಳಗಳಲ್ಲಿನ ಅವಕಾಶ ದೊಡ್ಡ ಮಟ್ಟದ ಸಹಕಾರ ನೀಡಿದೆ. ದೆಹಲಿ, ಚನ್ನೈ, ಹೈದ್ರಾಬಾದ್, ಬೆಂಗಳೂರು ಸೇರಿದಂತೆ ಹಲವು ಮೇಳಗಳಲ್ಲಿ ನಮ್ಮ ಉತ್ಪನ್ನ ಮಾರ್ಕೆಟಿಂಗ್ಗೆ ಕಪೆಕ್ ಸಹಕಾರ ನೀಡಿದೆ ಎಂದವರು ರುಚಿತ್ ಬಿಯ ಮತ್ತೊರ್ವ ಸಂಸ್ಥಾಪಕ ಶಶಿಧರ್ ಬಹಸನ್.

ರೈತರಿಗೂ ನೆರವು: ಸ್ವತಃ ನಾವೇ ನವಣೆ ಮತ್ತು ಸಾಮೆ ಬೆಳೆಯುತ್ತಿದ್ದೇವೆ. ಇದಲ್ಲದೆ ಕೃಷಿ ವಿಜ್ಞಾನ ಕೇಂದ್ರದಿಂದ ನಮಗೆ ಪರಿಚಿತ ರೈತರಿಗೂ ಬಿತ್ತನೆ ಬೀಜ ಕೊಡಿಸಿ, ಸಿರಿ ಧಾನ್ಯ ಬೆಳೆಯಲು ಪ್ರೋತ್ಸಾಹಿಸುತ್ತಿದ್ದೇವೆ. ರೈತರಿಂದ ನಾವೇ ಕೊಳ್ಳುವ ಮೂಲಕ ಸಿರಿಧಾನ್ಯಕ್ಕೆ ಗ್ಯಾರಂಟಿ ಬೆಲೆ, ಮಾರುಕಟ್ಟೆ ಸೃಷ್ಟಿಸುವ ಪ್ರಯತ್ನದಲ್ಲಿದ್ದೇವೆ. ರೈತರು ಬೆಳೆಯುವುದರ ಜೊತೆಗೆ ಸಿರಿಧಾನ್ಯ ಬಳಕೆಯೂ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಸಂಬಳಕ್ಕೆ ದುಡಿಯುವುದಕ್ಕಿಂತ ಸ್ವಂತ ಉದ್ಯೋಗ, ಉದ್ಯಮ ಖುಷಿ ನೀಡುತ್ತಿದೆ. 15 ಜನರಿಗೆ ನೇರ ಉದ್ಯೋಗವನ್ನೂ ನೀಡಿದ್ದೇವೆ ಎಂದು ಸಹೋದರರಿಬ್ಬರು ತಮ್ಮ ಯಶಸ್ವಿ ಪಯಣ ವಿವರಿಸುತ್ತಾ ಹೋದರು.

21 ಉತ್ಪನ್ನಗಳು - 100 ಹೊಸಬರು: ಕೆಐಎಡಿಬಿಯಿಂದ ಮೊದಲಿಗೆ ಅರ್ಧ ಎಕರೆ ಭೂಮಿ ಅಲಾಟ್ ಆಗಿತ್ತು. ಈಗ ನಮ್ಮ ಯೋಜನೆಗಳನ್ನು ನೋಡಿ ಇನ್ನರ್ಧ ಎಕರೆ ನೀಡಿದ್ದಾರೆ. ಒಟ್ಟು ಒಂದು ಎಕರೆ ಜಾಗದಲ್ಲಿ ನಮ್ಮ ಪ್ರೊಸೆಸಿಂಗ್ ಅಂಡ್ ಪ್ಯಾಕೇಜಿಂಗ್ ಯೂನಿಟ್ ಮಾಡಿದ್ದೇವೆ. ಸಿರಿಧಾನ್ಯದ ಗಂಜಿ ಪೌಡರ್ನಿಂದ ಶುರುವಾದ ನಮ್ಮ ರುಚಿತ್ ಬಿ ಉದ್ಯಮವು ಸಿರಿಧಾನ್ಯದ ಇಡ್ಲಿ, ದೋಸೆ ಮಿಕ್ಸ್ ಸೇರಿದಂತೆ 21 ಬಗೆಯ ಉತ್ಪನ್ನಗಳನ್ನು ರೆಡಿ ಮಾಡಿ ಮಾರುತ್ತಿದ್ದೇವೆ. ರುಚಿತ್ ಬಿ ಬ್ರ್ಯಾಂಡ್ನ ಸಿರಿಧಾನ್ಯ ಪೌಡರ್, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕುಕ್ಕೀಸ್ ಹಾಗು ಶುಂಠಿ ಪೌಡರ್ ಅತೀ ಬೇಡಿಕೆ ಹೊಂದಿವೆ. ಐಟಿಸಿ ಕಂಪನಿಗೆ ಜೋಳದ ಗ್ರಿಟ್ಸ್ ಅರ್ಥಾತ್ ಜೋಳದ ನುಚ್ಚು ಪೂರೈಸುವ ಕೆಲಸವನ್ನೂ ಮಾಡುತ್ತಿದ್ದೇವೆ ಎಂದರು ಸಂಜೀವ್.

ಪ್ರತಿ ತಿಂಗಳು ನೂರು ಹೊಸ ಗ್ರಾಹಕರನ್ನು ತಲುಪಲು ಗುರಿ ಹಾಕಿಕೊಂಡು ಕೆಲಸ ಮಾಡುತ್ತಿದ್ದೇವೆ. ಒಬ್ಬರು ಪ್ರೊಡಕ್ಷನ್ ನೋಡಿಕೊಂಡರೆ ಮತ್ತೊಬ್ಬರು ಮಾರ್ಕೆಟಿಂಗ್ ನೋಡಿಕೊಳ್ತೇವೆ. ಹೆಚ್ಚೆಚ್ಚು ಎಕ್ಸಪೋಗಳಲ್ಲಿ ಪಾಲ್ಗೊಳ್ಳಲು ನಾವು ಆದ್ಯತೆ ನೀಡುತ್ತೇವೆ. ಪರಿಚಿತ ಶಾಲೆಗಳಲ್ಲಿ ಮಕ್ಕಳು ಹಾಗು ಪೋಷಕರಿಗೆ ಇದನ್ನು ಪರಿಚಯಿಸುತ್ತಿದದೇವೆ. ಪ್ರತಿ 100 ಹೊಸ ಗ್ರಾಹಕರಲ್ಲಿ ಶೇ. 70ಕ್ಕೂ ಹೆಚ್ಚು ಜನ ಕಾಯಂ ಗ್ರಾಹಕರಾಗಿ ಬದಲಾಗುತ್ತಿದ್ದಾರೆ ಎಂದು ಹರ್ಷದಿಂದ ನುಡಿದರು ಸಂಜೀವ್.

ವಿದೇಶಕ್ಕೂ ಕಳಿಸಲು ಸಿದ್ಧತೆ: ರುಚಿತ್ ಬಿ ಉತ್ಪನ್ನಗಳಿಗೆ ವಿದೇಶಗಳಲ್ಲೂ ಬೇಡಿಕೆ ಬರಲು ಆರಂಭಿಸಿದೆ. ರಫ್ತು ಆರಂಭಿಸಲು ಕಪೆಕ್ ಕೆಲವು ತರಬೇತಿಗಳನ್ನು ನೀಡಿ ಹಲವರನ್ನು ಪರಿಚಯಿಸಿದೆ. ಇದರಿಂದಾಗಿ ಜರ್ಮನ್ ಕಂಪನಿಯೊಂದರಿಂದ ಬೇಡಿಕೆ ಬಂದಿದೆ. ಅದಕ್ಕೆ ತಕ್ಕ ಹಾಗೆ ಉತ್ಪನ್ನ ತಯಾರಿ ಮಾಡಲು ಸಿದ್ಧತೆ ಮಾಡಿದ್ದೇವೆ. ಮುಂದಿನ ವರ್ಷದ ಹೊತ್ತಿಗೆ ರಫ್ತು ಆರಂಭಿಸುವ ಗುರಿ ಹೊಂದಿದ್ದೇವೆ. ಕಳೆದ ವರ್ಷ 60 ಲಕ್ಷ ವಹಿವಾಟು ನಡೆಸಿದ್ದೆವು. ಈ ವರ್ಷ ಅದು ಎರಡು ಕೋಟಿ ದಾಟಲಿದೆ. ಮುಂದಿನ ವರ್ಷ ಅದು ಐದು ಕೋಟಿ ತಲುಪಿಸುವ ಗುರಿ ಹಾಕಿಕೊಂಡಿದ್ದೇವೆ ಎಂದರು ಶಶಿಧರ್ ಬಹಸನ್. ರುಚಿತ್ ಬಿ ಉತ್ಪನ್ನಗಳಿಗಾಗಿ ಸಂಪರ್ಕಿಸಿ - ಸಂಜೀವ್ ಕುಮಾರ್ ಬಹಸನ್ - 95351-37177

ನೀವೂ ಉದ್ಯಮಿಗಳಾಗಿ: ಕಿರು ಆಹಾರ ಸಂಸ್ಕರಣಾ ಉದ್ಯಮಗಳಿಗೆ ರಾಜ್ಯ ಸರ್ಕಾರ 9 ಲಕ್ಷ ಹಾಗೂ ಕೇಂದ್ರ ಸರ್ಕಾರ 6 ಲಕ್ಷ ಸೇರಿ ಒಟ್ಟು 15 ಲಕ್ಷ ರೂಪಾಯಿವರೆಗೂ ಸಹಾಯಧನ ದೊರೆಯಲಿದೆ. ಹೊಸ ಉದ್ಯಮ ಅಥವಾ ಉದ್ಯಮ ವಿಸ್ತರಣೆಗೂ ಯೋಜನೆಯಲ್ಲಿ ಅವಕಾಶವಿದೆ. ಬೆಲ್ಲ ತಯಾರಿಕೆ ಸೇರಿದಂತೆ 200ಕ್ಕೂ ಹೆಚ್ಚು ಉತ್ಪನ್ನಗಳು ಇದರ ಲಾಭ ಪಡೆಯಬಹುದು. ಆಹಾರ ಉದ್ಯಮಿಗಳಾಗಲು ಸಾಲ ಸಬ್ಸಿಡಿ ಪಡೆಯಲು ಹಾಗೂ ಮತ್ತಿತರ ವಿವರಗಳಿಗಾಗಿ ಕಪೆಕ್ ಹೆಲ್ಪ್ಲೈನ್ ಸಂಪರ್ಕಿಸಿ - 080 - 22243082. ಕೆಲಸದ ದಿನಗಳಂದು ಬೆಳಗ್ಗೆ 10.30 ರಿಂದ ಸಂಜೆ 4ರವರೆಗೆ ಸಂಪರ್ಕಿಸಿ ಮಾಹಿತಿ ಪಡೆಯಿರಿ. www.kappec.karnataka.gov.in ವೆಬ್ಸೈಟ್ನಲ್ಲೂ ಮಾಹಿತಿ ಪಡೆಯಬಹುದು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!