ಖಾಸಗೀಕರಣ ವಿರೋಧಿಸಿ ಬ್ಯಾಂಕ್‌ ಸೇವೆ ಸ್ಥಗಿತ

By Kannadaprabha NewsFirst Published Mar 16, 2021, 7:26 AM IST
Highlights

ಬ್ಯಾಂಕ್ ನೌಕರರು ಸೇವೆಯನ್ನು ಸ್ಥಗಿತಗೊಳಿಸಿ ಕೇಂದ್ರ ಸರ್ಕಾರ ಹಾಗೂ ಆರ್‌ಬಿಐ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಇಂದೂ ಕೂಡ ಪ್ರತಿಭಟನೆ ನಡೆಸಲಿದ್ದಾರೆ. 

 ಬೆಂಗಳೂರು (ಮಾ.16): ರಾಷ್ಟ್ರೀಕೃತ ಬ್ಯಾಂಕುಗಳ ಖಾಸಗೀಕರಣ ವಿರೋಧಿಸಿ ಸೋಮವಾರ ನಗರದ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ನೂರಾರು ನೌಕರರು ಸೇವೆಯನ್ನು ಸ್ಥಗಿತಗೊಳಿಸಿ ಕೇಂದ್ರ ಸರ್ಕಾರ ಹಾಗೂ ಆರ್‌ಬಿಐ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಹಾಗೂ ಆರ್‌ಬಿಐ ನೀತಿಗಳನ್ನು ಖಂಡಿಸಿ ಒಂಬತ್ತು ಸಂಘಟನೆಗಳ ನೇತೃತ್ವದ ಸಂಯುಕ್ತ ರಂಗ ಮಾ.15 ಮತ್ತು 16ರಂದು ಎರಡು ದಿನಗಳ ಬ್ಯಾಂಕ್‌ ಬಂದ್‌ಗೆ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಬ್ಯಾಂಕ್‌ ಸೇವೆ ಸ್ಥಗಿತಗೊಂಡಿದೆ. ಅದರಂತೆ ನಗರದಲ್ಲಿಯೂ ವಿವಿಧ ಬ್ಯಾಂಕುಗಳ ನೌಕರರು ಹೋರಾಟ ನಡೆಸುವ ಮೂಲಕ ಸಾಥ್‌ ನೀಡಿದರು.

ವಿಲೀನಗೊಂಡ ಬ್ಯಾಂಕ್‌ ಚೆಕ್‌ ಏ.1ರಿಂದ ಅಮಾನ್ಯ!

ಬ್ಯಾಂಕ್‌ ಯೂನಿಯನ್‌ ಸಂಯುಕ್ತ ವೇದಿಕೆಯ ರಾಜ್ಯ ಸಂಚಾಲಕ ಶ್ರೀನಿವಾಸ್‌ ಎಸ್‌.ಕೆ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕುಗಳನ್ನು ಬಂಡವಾಳಶಾಹಿಗಳ ಕಪಿಮುಷ್ಟಿಗೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇದು ಜನ ಮತ್ತು ಬ್ಯಾಂಕ್‌ ಉದ್ಯೋಗಿಗಳ ವಿರುದ್ಧದ ನೀತಿಯಾಗಿದೆ. ಸಾರ್ವಜನಿಕ ರಂಗದ ಎರಡು ಬ್ಯಾಂಕುಗಳು ಮತ್ತು ಒಂದು ವಿಮಾ ಕಂಪನಿಯನ್ನು ಖಾಸಗೀಕರಣ ಮಾಡುವುದಾಗಿ ಕೇಂದ್ರ ಸರ್ಕಾರವು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಘೋಷಿಸಿದೆ. ಇದು ಬಂಡವಾಳಶಾಹಿಗಳ ಕುತಂತ್ರವಾಗಿದ್ದು, ಭವಿಷ್ಯದಲ್ಲಿ ಖಾಸಗಿಯವರು ಹೇಳಿದ ಹಾಗೆ ಸಾರ್ವಜನಿಕರು ಕೇಳಬೇಕಾದ ಪರಿಸ್ಥಿತಿ ಎದುರಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಖಾಸಗೀಕರಣ ಮಾಡಿದರೆ ಮುಂದಿನ ದಿನಗಳಲ್ಲಿ ಕೃಷಿ ಸಾಲ, ಮನೆ ಸಾಲ ಹಾಗೂ ಶಿಕ್ಷಣದ ಮೇಲಿನ ಸಾಲದ ಬಡ್ಡಿ ಪ್ರಮಾಣ ಜಾಸ್ತಿಯಾಗಲಿದೆ. ವಿಶ್ವದ ಬೇರೆ ದೇಶಗಳು ಖಾಸಗಿ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡಲು ಚಿಂತನೆ ಮಾಡುತ್ತಿವೆ. ಆದರೆ, ನಮ್ಮ ದೇಶದಲ್ಲಿ ಖಾಸಗೀಕರಣ ಮಾಡಲು ಹೊರಟಿದ್ದಾರೆ. ಕೇಂದ್ರ ಸರ್ಕಾರವು ಈ ಬ್ಯಾಂಕುಗಳಲ್ಲಿರುವ ಜನ ಸಾಮಾನ್ಯರ ಠೇವಣಿ ಮೇಲೆ ವಕ್ರದೃಷ್ಟಿಬೀರಿದೆ ಎಂದು ದೂರಿದರು.

1947ರಿಂದ 1959ರ ವರೆಗೆ ಸುಮಾರು 560 ಖಾಸಗಿ ಬ್ಯಾಂಕುಗಳು ನಷ್ಟದಿಂದ ಮುಚ್ಚಿದ್ದವು. ಇದನ್ನು ಮನಗಂಡು 1969ರಲ್ಲಿ ಕೇಂದ್ರ ಸರ್ಕಾರವು ಸಾರ್ವಜನಿಕರ ಹಿತರಕ್ಷಣೆ, ಆರ್ಥಿಕತೆ ಮತ್ತು ಸಾಮಾಜಿಕ ಭದ್ರತೆ ದೃಷ್ಟಿಯಿಂದ 19 ಬ್ಯಾಂಕುಗಳು ಮತ್ತು ನಂತರ 1980ರಲ್ಲಿ ಎಂಟು ಬ್ಯಾ ಂಕುಗಳನ್ನು ರಾಷ್ಟ್ರೀಕರಣ ಮಾಡಲಾಯಿತು. ಅಲ್ಲಿಂದ ಜನಸಾಮಾನ್ಯರ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಿಕೊಂಡು ಬರುತ್ತಿರುವ ಬ್ಯಾಂಕುಗಳನ್ನು ಇದೀಗ ಕೇಂದ್ರ ಸರ್ಕಾರ ಖಾಸಗೀಕರಣಕ್ಕೆ ಮುಂದಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಖಾಸಗೀಕರಣದಿಂದ ಬ್ಯಾಂಕ್‌ ನೌಕರರ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರಲಿದೆ. ಯಾವುದೇ ಕಾರಣಕ್ಕೂ ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡಲು ಬಿಡಬಾರದು. ಕೃಷಿ ವಿರೋಧಿ ಕಾಯ್ದೆ ಖಂಡಿಸಿ ಹಲವಾರು ತಿಂಗಳುಗಳಿಂದ ರೈತರು ನಡೆಸುತ್ತಿರುವ ಹೋರಾಟದ ಮಾದರಿಯಲ್ಲಿಯೇ ಬ್ಯಾಂಕ್‌ ನೌಕರರು ಕೂಡ ಒಗ್ಗಟ್ಟಿನಿಂದ ಹೋರಾಟ ನಡೆಸಿದಾಗ ಮಾತ್ರ ನ್ಯಾಯ ದೊರೆಯಲಿದೆ ಎಂದರು.

ಸಾರ್ವಜನಿಕರಿಗೆ ತೊಂದರೆ

ಬ್ಯಾಂಕ್‌ಗಳು ತನ್ನ ಸೇವೆಗಳನ್ನು ಸ್ಥಗಿತಗೊಳಿಸಿ ಹೋರಾಟ ನಡೆಸಿದ ಪರಿಣಾಮ, ನಾಗರಿಕರು, ವ್ಯಾಪಾರಸ್ಥರು ಹಾಗೂ ವಿವಿಧ ಕ್ಷೇತ್ರಗಳು ಸಮಸ್ಯೆ ಎದುರಿಸಬೇಕಾಯಿತು. ಬ್ಯಾಂಕ್‌ಗಳ ಹೋರಾಟ ತಿಳಿಯದೆ ಎಂದಿನಂತೆ ಬ್ಯಾಂಕಿಗೆ ಬಂದಂತಹ ನಾಗರಿಕರು ಅಸಮಾಧಾನದಿಂದ ಹಿಂತಿರುಗಬೇಕಾದ ಘಟನೆಗಳು ನಡೆದವು.

click me!