RBI ನಿರ್ಬಂಧ, ಕುಸಿದ ಕೋಟಕ್ ಮಹೀಂದ್ರ ಬ್ಯಾಂಕ್ ಷೇರು; ಆಕ್ಸಿಸ್ ಈಗ ದೇಶದ ನಾಲ್ಕನೇ ಅತೀದೊಡ್ಡ ಬ್ಯಾಂಕ್

By Suvarna News  |  First Published Apr 25, 2024, 1:35 PM IST

ಆರ್ ಬಿಐ ನಿರ್ಬಂಧದ ಬೆನ್ನಲ್ಲೇ ಕೋಟಕ್ ಮಹೀಂದ್ರ ಬ್ಯಾಂಕಿನ ಷೇರುಗಳು ಇಂದು ತೀವ್ರ ಕುಸಿತ ಕಂಡಿವೆ.ಪರಿಣಾಮ ಮಾರುಕಟ್ಟೆ ಬಂಡವಾಳದಲ್ಲಿ ಆಕ್ಸಿಸ್ ಬ್ಯಾಂಕ್ ಕೋಟಕ್ ಮಹೀಂದ್ರ ಬ್ಯಾಂಕ್ ಅನ್ನು ಹಿಂದಿಕ್ಕಿ, ದೇಶದ ನಾಲ್ಕನೇ ಅತೀದೊಡ್ಡ ಬ್ಯಾಂಕ್  ಆಗಿ ಗುರುತಿಸಲ್ಪಟ್ಟಿದೆ. 
 


ನವದೆಹಲಿ (ಏ.25): ಮಾರುಕಟ್ಟೆ ಬಂಡವಾಳದಲ್ಲಿ ಗುರುವಾರ ಕೋಟಕ್ ಮಹೀಂದ್ರ ಬ್ಯಾಂಕ್ ಅನ್ನು ಹಿಂದಿಕ್ಕಿರುವ ಆಕ್ಸಿಸ್ ಬ್ಯಾಂಕ್, ದೇಶದ ನಾಲ್ಕನೇ ಅತೀದೊಡ್ಡ ಬ್ಯಾಂಕ್ ಆಗಿ ಗುರುತಿಸಿಕೊಂಡಿದೆ. ಆನ್ ಲೈನ್ ನಲ್ಲಿ ಹೊಸ ಗ್ರಾಹಕರ ಸೇರ್ಪಡೆಗೆ ಹಾಗೂ ಕ್ರೆಡಿಟ್ ಕಾರ್ಡ್ ವಿತರಣೆಗೆ ಆರ್ ಬಿಐ ಬುಧವಾರ (ಏ.24) ನಿರ್ಬಂಧ ವಿಧಿಸಿದ ಬೆನ್ನಲ್ಲೇ ಕೋಟಕ್ ಮಹೀಂದ್ರ ಬ್ಯಾಂಕಿನ ಷೇರುಗಳಲ್ಲಿ ಶೇ.10ರಷ್ಟು ಇಳಿಕೆ ಕಂಡುಬಂದಿದೆ. ಇನ್ನೊಂದೆಡೆ ನಾಲ್ಕನೇ ತ್ರೈಮಾಸಿಕದ ದೃಢ ಫಲಿತಾಂಶದ ಹಿನ್ನೆಲೆಯಲ್ಲಿ ಆಕ್ಸಿಸ್ ಬ್ಯಾಂಕ್ ಷೇರುಗಳಲ್ಲಿ ಅಂದಾಜು ಶೇ.5ರಷ್ಟು ಏರಿಕೆ ಕಂಡುಬಂದಿದೆ.  ಕೋಟಕ್ ಮಹೀಂದ್ರ ಬ್ಯಾಂಕಿನ ಷೇರುಗಳಲ್ಲಿ ಇಂದು ಶೇ.10ರಷ್ಟು ಇಳಿಕೆ ಕಂಡುಬಂದ ಹಿನ್ನೆಲೆಯಲ್ಲಿ ಮಾರುಕಟ್ಟೆ ಬಂಡವಾಳ ಪ್ರಸ್ತುತ 3.29 ಲಕ್ಷ ಕೋಟಿ ರೂ. ಇದೆ. ಇನ್ನೊಂದೆಡೆ ನಾಲ್ಕನೇ ತ್ರೈಮಾಸಿಕದ ನಿವ್ವಳ ಲಾಭಾಂಶವನ್ನು ಪ್ರಕಟಿಸಿದ ಬಳಿಕ ಆಕ್ಸಿಸ್ ಬ್ಯಾಂಕ್ ಷೇರುಗಳು ಶೇ.4.82ರಷ್ಟು ಏರಿಕೆ ಕಂಡ ಕಾರಣ ಮಾರುಕಟ್ಟೆ ಬಂಡವಾಳ 3.43 ಲಕ್ಷ ಕೋಟಿ ರೂ. ಇದೆ. ಒಂದು ವರ್ಷದ ಹಿಂದೆ ಆಕ್ಸಿಸ್ ಬ್ಯಾಂಕ್ 5,728 ಕೋಟಿ ರೂ. ನಷ್ಟ ಅನುಭವಿಸಿತ್ತು. ಆದರೆ, ಈ ವರ್ಷ 7,129 ಕೋಟಿ ರೂ. ಲಾಭ ಗಳಿಸಿದೆ.

ಭಾರತದಲ್ಲಿ ಎಚ್ ಡಿಎಫ್ ಸಿ ಬ್ಯಾಂಕ್ ಅತೀದೊಡ್ಡ ಬ್ಯಾಂಕ್ ಆಗಿದೆ. ಇದರ ಮಾರುಕಟ್ಟೆ ಬಂಡವಾಳ 11.5 ಲಕ್ಷ ಕೋಟಿ ರೂ. ಇದೆ. ನಂತರದ ಸ್ಥಾನದಲ್ಲಿ ಐಸಿಐಸಿಐ ಬ್ಯಾಂಕ್ ಇದ್ದು, ಮಾರುಕಟ್ಟೆ ಬಂಡವಾಳ 7.78 ಲಕ್ಷ ಕೋಟಿ ರೂ. ಇದೆ. ಇನ್ನು ಮೂರನೇ ಸ್ಥಾನದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದ್ದು,  6.99 ಲಕ್ಷ ಕೋಟಿ ರೂ. ಮಾರುಕಟ್ಟೆ ಬಂಡವಾಳ ಹೊಂದಿದೆ. 

Tap to resize

Latest Videos

ಕೋಟಕ್ ಮಹೀಂದ್ರ ಬ್ಯಾಂಕಿಗೆ ಆರ್ ಬಿಐ ನಿರ್ಬಂಧ; ಆನ್ ಲೈನ್ ಅಥವಾ ಮೊಬೈಲ್ ಮುಖಾಂತರ ಹೊಸ ಗ್ರಾಹಕರ ಸೇರ್ಪಡೆಗೆ ತಡೆ

ಕೋಟಕ್ ಮಹೀಂದ್ರ ಬ್ಯಾಂಕ್ ಹೊರತುಪಡಿಸಿ ಇತರ ಎಲ್ಲ ಬ್ಯಾಂಕ್ ಗಳು ಗುರುವಾರ ಮಾರುಕಟ್ಟೆಯಲ್ಲಿ ಮೇಲ್ಮಟ್ಟದಲ್ಲಿ ಟ್ರೇಡಿಂಗ್ ಆಗುತ್ತಿವೆ.ಗುರುವಾರ ಮಧ್ಯಾಹ್ನ 12.52ಕ್ಕೆ ಬಿಎಸ್ ಇಯಲ್ಲಿ ಕೋಟಕ್ ಮಹೀಂದ್ರ ಬ್ಯಾಂಕಿನ ಷೇರು ಶೇ.10.8ರಷ್ಟು ಅಂದ್ರೆ 1,643.70ರೂ. ನಲ್ಲಿ ಟ್ರೇಡ್ ಆಗುತ್ತಿತ್ತು. ಇನ್ನೊಂದೆಡೆ ಇದೇ ಸಮಯದಲ್ಲಿ ಆಕ್ಸಿಸ್ ಬ್ಯಾಂಕ್ ಷೇರು  ಶೇ.5.89ರಷ್ಟು ಜಿಗಿತ ಕಂಡಿದ್ದು,  ಬಿಎಸ್ ಇಯಲ್ಲಿ 1,125.85ರೂ.ನಲ್ಲಿ ಟ್ರೇಡ್ ಆಗುತ್ತಿತ್ತು. 

ದೇಶದ ಅತೀದೊಡ್ಡ ಬ್ಯಾಂಕ್ ಎಚ್ ಡಿಎಫ್ ಸಿ ಬ್ಯಾಂಕ್ ಷೇರು ಕೂಡ ಶೇ.0.09ರಷ್ಟು ಏರಿಕೆ ಕಂಡಿದ್ದು, ಬಿಎಸ್ ಇಯಲ್ಲಿ ಒಂದು ಷೇರು 1,512.3 ರೂ.ನಲ್ಲಿ ಟ್ರೇಡ್ ಆಗುತ್ತಿದೆ. ಐಸಿಐಸಿಐ ಬ್ಯಾಂಕಿನ ಷೇರು ಕೂಡ ಶೇ.1.24ರಷ್ಟು ಏರಿಕೆ ಕಂಡಿದ್ದು, 1,110.5ರೂ. ನಲ್ಲಿ ಟ್ರೇಡ್ ಆಗುತ್ತಿದೆ. ಇನ್ನು ಬಿಎಸ್ ಇಯಲ್ಲಿ ಎಸ್ ಬಿಐ ಷೇರು ಕೂಡ ಏರುಗತಿಯಲ್ಲಿದ್ದು,  785.75ರೂ. ನಲ್ಲಿ ಟ್ರೇಡ್ ಆಗುತ್ತಿದೆ. 

ಬ್ಯಾಂಕ್ ಎಫ್ ಡಿ ಬಡ್ಡಿದರದಲ್ಲಿ ಬದಲಾವಣೆ;ಎಸ್ ಬಿಐ, ಪಿಎನ್ ಬಿ, ಎಚ್ ಡಿಎಫ್ ಸಿ, ಐಸಿಐಸಿಐ ಬ್ಯಾಂಕುಗಳಲ್ಲಿ ಎಷ್ಟಿದೆ?

ಆನ್ ಲೈನ್ ಹಾಗೂ ಮೊಬೈಲ್ ಬ್ಯಾಂಕಿಂಗ್ ಚಾನೆಲ್ ಮುಖಾಂತರ ಹೊಸ ಗ್ರಾಹಕರ ಸೇರ್ಪಡೆ ಸ್ಥಗಿತಗೊಳಿಸುವಂತೆ ಆರ್ ಬಿಐ ಕೋಟಕ್ ಮಹೀಂದ್ರ ಬ್ಯಾಂಕಿಗೆ ಬುಧವಾರ (ಏ.24) ನಿರ್ದೇಶನ ನೀಡಿದೆ. ಅಲ್ಲದೆ, ಹೊಸ ಕ್ರೆಡಿಟ್ ಕಾರ್ಡ್ ಗಳನ್ನು ವಿತರಣೆ ಮಾಡದಂತೆಯೂ ನಿರ್ಬಂಧ ವಿಧಿಸಿದೆ. ಆದರೆ, ಈಗಾಗಲೇ ಇರುವ ಗ್ರಾಹಕರಿಗೆ ಹಾಗೂ ಕ್ರೆಡಿಟ್ ಕಾರ್ಡ್ ಗಳಿಗೆ ಸೇವೆ ಮುಂದುವರಿಸುವಂತೆ ನಿರ್ದೇಶನ ನೀಡಿದೆ.

2022 ಹಾಗೂ 2023ರಲ್ಲಿ ಕೇಂದ್ರ ಬ್ಯಾಂಕ್ ನಡೆಸಿದ ಐಟಿ ಪರಿಶೀಲನೆ ಸಂದರ್ಭದಲ್ಲಿ ಬ್ಯಾಂಕ್ ವಿರುದ್ಧ ಒಂದಿಷ್ಟು ಕಳವಳಕಾರಿ ಅಂಶಗಳು ಪತ್ತೆಯಾದ ಹಿನ್ನೆಲೆಯಲ್ಲಿ ಆರ್ ಬಿಐ ಈ ಕ್ರಮ ಕೈಗೊಂಡಿದೆ. 

click me!