Price Hike: ಬ್ರೆಡ್,ಬಿಸ್ಕೆಟ್,ಚಪಾತಿಯನ್ನೂ ಬಿಡದ ಬೆಲೆಯೇರಿಕೆ ಭೂತ; ಗೋಧಿ ಹಿಟ್ಟಿನ ಬೆಲೆ ಗಗನಕ್ಕೆ!

By Suvarna NewsFirst Published May 10, 2022, 11:51 AM IST
Highlights

*ಗೋಧಿ ಹಿಟ್ಟಿನ ಬೆಲೆ 12 ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ಏರಿಕೆ
* ಏಪ್ರಿಲ್ ನಲ್ಲಿ ಭಾರತದಲ್ಲಿ ಗೋಧಿ ಹಿಟ್ಟಿನ ಸರಾಸರಿ ದರ ಕೆಜಿಗೆ 32.38 ರೂ. 
*ಕಳೆದ ಒಂದು ವರ್ಷ ಅವಧಿಯಲ್ಲಿ ಗೋಧಿ ಹಿಟ್ಟಿನ ಬೆಲೆಯಲ್ಲಿ ಶೇ.9.15ರಷ್ಟು ಹೆಚ್ಚಳ

ನವದೆಹಲಿ (ಮೇ 10): ಉತ್ಪಾದನೆಯಲ್ಲಿ ಇಳಿಕೆ ಹಾಗೂ ರಷ್ಯಾ (Russia)-ಉಕ್ರೇನ್ (Ukraine)ಯುದ್ಧದ ಪರಿಣಾಮ ಭಾರತದ ಅಡುಗೆಮನೆಯಲ್ಲಿ ಹೆಚ್ಚುಕಡಿಮೆ ಪ್ರತಿದಿನ ಬಳಸಲ್ಪಡುವ ಗೋಧಿ ಹಿಟ್ಟಿನ (Wheat Flour) ದರ ಗಗನಕ್ಕೇರಿದೆ. ಈಗಾಗಲೇ ಅಡುಗೆ ಎಣ್ಣೆ (Edible oil), ಬೇಳೆ ಕಾಳುಗಳು, ತರಕಾರಿ (Vegetable) ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ತತ್ತರಿಸಿರುವ ಜನರಿಗೆ ಗೋಧಿ ಹಿಟ್ಟಿನ ಬೆಲೆ ಜೇಬಿನ ಹೊರೆಯನ್ನು ಮತ್ತಷ್ಟು ಹೆಚ್ಚಿಸಿದೆ. ಅಷ್ಟೇ ಅಲ್ಲ, ಗೋಧಿ ಹಿಟ್ಟು ಬಳಸಿ ಸಿದ್ಧಪಡಿಸುವ ಖಾದ್ಯಗಳಾದ ಬ್ರೆಡ್ (Bread), ಬಿಸ್ಕೆಟ್ಸ್ (Biscuits) ದರ ಕೂಡ ಸರ್ವಕಾಲಿಕ ಏರಿಕೆ ಕಂಡಿವೆ. ಏಪ್ರಿಲ್ ನಲ್ಲಿ ಭಾರತದಲ್ಲಿ ಗೋಧಿ ಹಿಟ್ಟಿನ  ಮಾಸಿಕ ಸರಾಸರಿ ದರ ಕೆಜಿಗೆ 32.38 ರೂ. ತಲುಪಿದ್ದು, 2010ರ ಜನವರಿ ಬಳಿಕ ದಾಖಲಾದ ಅತ್ಯಧಿಕ ಬೆಲೆಯಾಗಿದೆ.

ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣ ಸಚಿವಾಲಯಕ್ಕೆ ರಾಜ್ಯಗಳ ನಾಗರಿಕ ಪೂರೈಕೆ ಇಲಾಖೆಗಳು ಸಲ್ಲಿಕೆ ಮಾಡಿದ ಅಂಕಿಅಂಶಗಳ ಪ್ರಕಾರ ಕಳೆದ ಶನಿವಾರ ಗೋಧಿ ಹಿಟ್ಟಿನ ಅಖಿಲ ಭಾರತ ಸರಾಸರಿ ರಿಟೇಲ್ ದರ ಕೆ.ಜಿ.ಗೆ 32.78ರೂ. ಇತ್ತು. ಕಳೆದ ಒಂದು ವರ್ಷದ ಅವಧಿಯಲ್ಲಿ ಗೋಧಿ ಹಿಟ್ಟಿನ ಬೆಲೆಯಲ್ಲಿ ಶೇ.9.15ರಷ್ಟು ಹೆಚ್ಚಳವಾಗಿದೆ ಎಂದು ವರ್ಷದಿಂದ ವರ್ಷದ ಬೆಲೆ ವಿಶ್ಲೇಷಣೆ ತಿಳಿಸಿದೆ. ಕಳೆದ ವರ್ಷ ಒಂದು ಕೆ.ಜಿ.ಗೆ ಗೋಧಿ ಹಿಟ್ಟಿನ ಬೆಲೆ ಕೆ.ಜಿ.ಗೆ  30.03 ರೂ. ಇತ್ತು. ಈ ವರ್ಷ ಕೆ.ಜಿ.ಗೆ 32.78ರೂ.ಗೆ ಏರಿಕೆಯಾಗಿದೆ. 

Russia Ukraine Crisis:ಗೋಧಿ ಬೆಲೆ ಶೇ.55 ಏರಿಕೆ; ಜಾಗತಿಕ ಆಹಾರ ಧಾನ್ಯಗಳ ಪೂರೈಕೆ ಮೇಲೆ ಯುದ್ಧದ ಪರಿಣಾಮವೇನು?

ಎಲ್ಲಿ ಗರಿಷ್ಠ ಬೆಲೆ?
ಲಭ್ಯವಿದ್ದ 156 ಕೇಂದ್ರಗಳ ಅಂಕಿಅಂಶಗಳ ಪ್ರಕಾರ ಶನಿವಾರ ಪೋರ್ಟ್ ಬ್ಲೇರ್ ನಲ್ಲಿ (Port Blair) ಗೋಧಿ ಹಿಟ್ಟಿಗೆ ಅತ್ಯಧಿಕ ದರ ಕೆ.ಜಿ.ಗೆ 59ರೂ. ದಾಖಲಾಗಿತ್ತು. ಹಾಗೆಯೇ ಪಶ್ಚಿಮ ಬಂಗಾಳದ (West Bengal) ಪುರುಲಿಯಾದಲ್ಲಿ (Purulia) ಅತೀಕಡಿಮೆ ಬೆಲೆ ಕೆ.ಜಿ.ಗೆ 22ರೂ. ಇತ್ತು. ಇನ್ನು ಮೆಟ್ರೋ ನಗರಗಳಲ್ಲಿ ಮುಂಬೈಯಲ್ಲಿ ಅತ್ಯಧಿಕ ದರ ಕೆ.ಜಿ.ಗೆ 49ರೂ. ಹಾಗೂ ಚೆನ್ನೈನಲ್ಲಿ 34ರೂ. ಇದೆ. ನವದೆಹಲಿಯಲ್ಲಿ ಅತೀಕಡಿಮೆ ಬೆಲೆ ಕೆ.ಜಿ.ಗೆ 27ರೂ. ಇದೆ.

ಬ್ರೆಡ್ ಸೇರಿದಂತೆ ಬೇಕರಿ ಉತ್ಪನ್ನಗಳು ದುಬಾರಿ
ಗೋಧಿ ಹಿಟ್ಟಿನ ಜೊತೆಗೆ ಬೇಕರಿ ಉತ್ಪನ್ನಗಳಾದ  ಬಿಸ್ಕೆಟ್ಸ್ ಹಾಗೂ ಬ್ರೆಡ್ ಬೆಲೆಗಳಲ್ಲಿ ಕೂಡ ಇತ್ತೀಚೆಗೆ ಗಣನೀಯ ಏರಿಕೆ ಕಂಡುಬಂದಿದೆ. ಈ ವರ್ಷದ ಮಾರ್ಚ್ ನಲ್ಲಿ ಬ್ರೆಡ್ ರಿಟೇಲ್ ಹಣದುಬ್ಬರ ಶೇ.8.39ರಷ್ಟಿದ್ದು, ಇದು ಕಳೆದ 7 ವರ್ಷಗಳಲ್ಲೇ ಅತ್ಯಧಿಕವಾಗಿದೆ. ಬ್ರಿಟಾನಿಯನದ (Britannia) ಜಾಮ್ ಜಾಮ್ ಬಿಸ್ಕೆಟ್ಸ್, ಮಾರಿ ಗೋಲ್ಡ್, ನ್ಯೂಟ್ರಿ ಚಾಯ್ಸ್, ಫ್ರೂಟಿ ಕೇಕ್ಸ್ ಇತ್ಯಾದಿ ಉತ್ಪನ್ನಗಳ ಬೆಲೆಯಲ್ಲಿ ಮುಂದಿನ ದಿನಗಳಲ್ಲಿ ಶೇ.10ರಷ್ಟು ಹೆಚ್ಚಳವಾಗಲಿದೆ. ಕಂಪನಿ ಈಗಾಗಲೇ ಶೇ.10ರಷ್ಟು ಬೆಲೆಯೇರಿಕೆಯ ಘೋಷಣೆ ಮಾಡಿದೆ.

LPG Price Hike: ಗ್ಯಾಸ್‌ ಸಿಲಿಂಡರ್ ದರ ಮತ್ತೆ 50 ರೂ ಏರಿಕೆ, ಜನಸಾಮಾನ್ಯರಿಗೆ ಮತ್ತಷ್ಟು ಹೊರೆ!

ಬೆಲೆಯೇರಿಕೆಗೆ ಕಾರಣಗಳೇನು?
*ಉತ್ಪಾದನೆ ಇಳಿಕೆ: ದೇಶದಲ್ಲಿ ಗೋಧಿ ಉತ್ಪಾದನೆ ಹಾಗೂ ದಾಸ್ತಾನಿನಲ್ಲಿ ಇಳಿಕೆಯಾಗಿರುವುದೇ ಬೆಲೆಯೇರಿಕೆಗೆ ಕಾರಣ ಎಂಬ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಗೋಧಿ ಉತ್ಪಾದನೆ ಕಡಿಮೆಯಾಗಿದ್ದರೂ ವಿದೇಶಗಳಿಂದ ಬೇಡಿಕೆ ಹೆಚ್ಚಿದೆ. ಇನ್ನು ಡೀಸೆಲ್ ಬೆಲೆಯೇರಿಕೆ ಕೂಡ ಸಾಗಣೆ ವೆಚ್ಚವನ್ನು ಹೆಚ್ಚಿಸಿದೆ. ಈ ವರ್ಷ ಜನವರಿ 1ರಿಂದಲೇ ಗೋಧಿ ಹಿಟ್ಟಿನ ಬೆಲೆಯಲ್ಲಿ ಏರಿಕೆ ಕಂಡುಬರುತ್ತಿದ್ದು, ಈ ತನಕ ಶೇ.5.81ರಷ್ಟು ಹೆಚ್ಚಳ ಕಂಡುಬಂದಿದೆ.

*ರಷ್ಯಾ-ಉಕ್ರೇನ್ ಯುದ್ಧ: ರಷ್ಯಾ (Russia) -ಉಕ್ರೇನ್ (Ukraine)ಯುದ್ಧ ಜಾಗತಿಕ ಮಟ್ಟದಲ್ಲಿ ಗೋಧಿ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.  ರಷ್ಯಾ ಹಾಗೂ ಉಕ್ರೇನ್  ಎರಡೂ ಸೇರಿ ಶೇ.30ರಷ್ಟು ಗೋಧಿ ರಫ್ತು ಮಾಡುತ್ತವೆ. ರಷ್ಯಾ ಜಗತ್ತಿನ ಅತೀದೊಡ್ಡ ಗೋಧಿ ರಫ್ತು ಮಾಡೋ ರಾಷ್ಟ್ರವಾಗಿದೆ.ಯುದ್ಧದ ಕಾರಣಕ್ಕೆ ಗೋಧಿ ಪೂರೈಕೆ ನಿಂತಿದೆ. 


 

click me!