Srilanka Crisi: ಭೀಕರ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ಶ್ರೀಲಂಕಾ ಮುಂದಿರುವ ಮಾರ್ಗಗಳೇನು?

By Kannadaprabha NewsFirst Published Jul 19, 2022, 3:33 PM IST
Highlights

ಭಾರತೀಯ ರಾಜತಾಂತ್ರಿಕರಾಗಿರುವ ವೇಣು ರಾಜಮಣಿಯವರು ನೆರೆಯ ದೇಶ ಶ್ರೀಲಂಕಾ ಎದುರಿಸುತ್ತಿರುವ ಬಿಕ್ಕಟ್ಟಿನ ಪರಿಹಾರಕ್ಕಿರುವ ಮಾರ್ಗಗಳ ಬಗ್ಗೆ ಕನ್ನಡಪ್ರಭ ಸೋದರ ಸಂಸ್ಥೆ ಏಷ್ಯಾನೆಟ್‌ ನ್ಯೂಸ್‌ ‘ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. 

ಭಾರತೀಯ ರಾಜತಾಂತ್ರಿಕರಾಗಿರುವ ವೇಣು ರಾಜಮಣಿಯವರು ನೆರೆಯ ದೇಶ ಶ್ರೀಲಂಕಾ ಎದುರಿಸುತ್ತಿರುವ ಬಿಕ್ಕಟ್ಟಿನ ಪರಿಹಾರಕ್ಕಿರುವ ಮಾರ್ಗಗಳ ಬಗ್ಗೆ ಕನ್ನಡಪ್ರಭ ಸೋದರ ಸಂಸ್ಥೆ ಏಷ್ಯಾನೆಟ್‌ ನ್ಯೂಸ್‌ ‘ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಭಾರತದ ಪ್ರಸ್ತುತ ಆರ್ಥಿಕ ಪರಿಸ್ಥಿತಿಯ ಮೇಲೂ ಬೆಳಕು ಚೆಲ್ಲಿದ್ದಾರೆ.

ಭೀಕರ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ಶ್ರೀಲಂಕಾ ಮುಂದಿರುವ ಮಾರ್ಗಗಳೇನು?

ಶ್ರೀಲಂಕಾದಲ್ಲಿ ಪ್ರಸ್ತುತ ಅರಾಜಕತೆಯಿದೆ. ಸ್ಥಿರ ಸರ್ಕಾರ ರಚನೆ ಶ್ರೀಲಂಕಾದ ಎದುರಿಗಿರುವ ದೊಡ್ಡ ಸವಾಲಾಗಿದೆ. ಪ್ರತಿಭಟನಾಕಾರರ ಒತ್ತಡದಿಂದಾಗಿ ಅಧ್ಯಕ್ಷರು ಹಾಗೂ ಪ್ರಧಾನಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮುಂದಿನ ಕೆಲ ದಿನಗಳಲ್ಲೇ ನೂತನ ಅಧ್ಯಕ್ಷ ಹಾಗೂ ಪ್ರಧಾನಿಯ ಆಯ್ಕೆ ನಡೆಯಲಿದೆ. ಈ ಆಯ್ಕೆ ಸಂಸದರಿಂದ ನಡೆಯಲಿದೆ. ಹೀಗಾಗಿ ಆಯ್ಕೆಯಾದ ಪ್ರಧಾನಿ ದೇಶದ ಆರ್ಥಿಕ ಸ್ಥಿತಿಗತಿ ಸುಧಾರಣೆಯತ್ತ ಗಮನ ಹರಿಸಬೇಕು ಮಾತ್ರವಲ್ಲದೇ ಮುಂದಿನ 6-8 ತಿಂಗಳಲ್ಲಿ ನಡೆಯಬಹುದಾದ ಸಾರ್ವತ್ರಿಕ ಚುನಾವಣೆಗೂ ಸಿದ್ಧರಾಗಬೇಕಾಗಿದೆ.

Economic Crisi: ಶ್ರೀಲಂಖಾದ ಹಾದಿಯಲ್ಲೇ ನೇಪಾಳದ ಆರ್ಥಿಕತೆ, ಸದ್ಯ ಭಾರತದ ಮುಂದಿರೋ ಸವಾಲುಗಳೇನು?

ಹಂಗಾಮಿ ಅಧ್ಯಕ್ಷರಾಗಿರುವ ರನಿಲ್‌ ವಿಕ್ರಮಸಿಂಘೆ ಮತ್ತೆ ತಾವೇ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಸಂಸದರು ಅವರನ್ನೇ ಮತ್ತೆ ಆಯ್ಕೆ ಮಾಡಿದರೂ ಜನರು ಅದನ್ನು ವಿರೋಧಿಸಿ ಪ್ರತಿಭಟಿಸುವ ಸಾಧ್ಯತೆ ಇದೆ. ಹೀಗಾಗಿ ಜನರಿಂದಲೇ ಪ್ರಧಾನಿ, ರಾಷ್ಟ್ರಪತಿ ಆಯ್ಕೆ ನಡೆದಾಗಲೇ ಅದು ನ್ಯಾಯಸಮ್ಮತ ಎನಿಸಿಕೊಳ್ಳುತ್ತದೆ. ಒಮ್ಮೆ ರಾಜಕೀಯ ಸ್ಥಿರತೆ ಸಾಧಿಸಿದ ಬಳಿಕವೇ ಐಎಂಎಫ್‌ ಹಾಗೂ ಅಂತಾರಾಷ್ಟ್ರೀಯ ಸಮುದಾಯಗಳ ನೆರವು ಪಡೆದು ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸಬಹುದಾಗಿದೆ.

ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದ್ದೇ ನೀತಿಗಳಲ್ಲಿ ತೀವ್ರ ಬದಲಾವಣೆಯನ್ನು ನಿರೀಕ್ಷಿಸಬಹುದೇ?

ಅಂತಾರಾಷ್ಟ್ರೀಯ ಆರ್ಥಿಕ ಬಿಕ್ಕಟ್ಟು ನಿರ್ವಹಣಾ ವ್ಯವಸ್ಥಾಪಕರಂತೆ ಐಎಂಎಫ್‌ ಕಾರ್ಯ ನಿರ್ವಹಿಸುತ್ತದೆ. ವಿಶ್ವ ಬ್ಯಾಂಕು ದೇಶಗಳಿಗೆ ದೀರ್ಘಾವಧಿಯಲ್ಲಿ ಆರ್ಥಿಕ ಅಭಿವೃದ್ಧಿ ಸಾಧಿಸಲು ನೆರವಾಗುತ್ತದೆ. ಐಎಂಎಫ್‌ ಇಂತಹ ಬಿಕ್ಕಟ್ಟುಗಳನ್ನು ನಿರ್ವಹಿಸಲೆಂದೇ ಸೃಷ್ಟಿಯಾಗಿದೆ. 1965ರಿಂದಲೂ ಶ್ರೀಲಂಕಾ ಐಎಂಎಫ್‌ ನೆರವಿಗಾಗಿ 13 ಬಾರಿ ಧಾವಿಸಿದೆ. ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ದೇಶಕ್ಕೆ ಐಎಂಎಫ್‌ ನಿಗದಿತ ಧನಸಹಾಯ ಒದಗಿಸಿ, ಆರ್ಥಿಕ ಸ್ಥಿರತೆ ಸಾಧಿಸಲು ನೆರವಾಗುತ್ತದೆ.

ಇದರೊಂದಿಗೆ ಆರ್ಥಿಕತೆಯ ಚೇತರಿಕೆಗೆ ವಿಧಾನಗಳನ್ನು ಸೂಚಿಸುತ್ತದೆ. ಸಾಲ ಒದಗಿಸಿ ಆರ್ಥಿಕ ಬಿಕ್ಕಟ್ಟನ್ನು ನೀವೆ ಬಗೆಹರಿಸಿಕೊಳ್ಳಿ ಎಂದು ಸುಮ್ಮನಾಗದೇ, ತಾನು ಸೂಚಿಸಿದ ಕ್ರಮಗಳನ್ನು ದೇಶ ಪಾಲಿಸುತ್ತ ಹೋದಂತೆ ಹಂತ ಹಂತವಾಗಿ ಧನಸಹಾಯ ಬಿಡುಗಡೆ ಮಾಡುತ್ತ ಹೋಗುತ್ತದೆ. ಆದರೆ ಸರ್ಕಾರ ಈ ಸೂಚನೆಗಳನ್ನು ಅನುಷ್ಠಾನಕ್ಕೆ ತರುವುದು ಅತ್ಯಗತ್ಯ.

ಐಎಂಎಫ್‌ ಹೊರತುಪಡಿಸಿ ಶ್ರೀಲಂಕಾ ಬಿಕ್ಕಟ್ಟು ಪರಿಹಾರಕ್ಕೆ ಬೇರೆ ಪರ್ಯಾಯ ಹಾದಿಗಳಿವೆಯೇ?

ನನ್ನ ಪ್ರಕಾರ ಐಎಂಎಫ್‌ ಬಿಟ್ಟು ಈ ಬಿಕ್ಕಟ್ಟು ನಿರ್ವಹಣೆಗೆ ಪರ್ಯಾಯ ಮಾರ್ಗಗಳೇನೂ ಇಲ್ಲ. ಚೀನಾ ನೆರವಾಗಬಹುದು ಎಂದು ಕೆಲವರು ಊಹಿಸಿದ್ದರು. ರಾಜಪಕ್ಸೆಗಳೊಂದಿಗೆ ಚೀನಾ ಉತ್ತಮ ಸಂಬಂಧ ಕಾಯ್ದುಕೊಂಡಿದ್ದರೂ, ಅವರು ಈಗಾಗಲೇ ಪರಾರಿಯಾಗಿದ್ದಾರೆ. ಹೊಸ ನಾಯಕರಾಗಿ ಯಾರು ಆಯ್ಕೆಯಾಗಬಹುದು ಎಂಬುದು ಸ್ಪಷ್ಟವಾಗಿಲ್ಲ. ಚೀನಾ ಸಾಲದ ರೂಪದಲ್ಲಿ ಆರ್ಥಿಕ ನೆರವು ಒದಗಿಸಿದರೂ, ಆ ಮೊತ್ತ ಹಿಂತಿರುಗಿಸುವ ಸಾಮರ್ಥ್ಯ ಶ್ರೀಲಂಕಾಕ್ಕೆ ಇಲ್ಲ. ಹೀಗಾಗಿ ಚೀನಾ ನೆರವಿಗೆ ಮುಂದೆ ಬರುತ್ತಿಲ್ಲ.

ಆದರೆ ಕಳೆದ ವರ್ಷದಿಂದ ಭಾರತ ಶ್ರೀಲಂಕಾಗೆ ನೆರವು ನೀಡುತ್ತಲೇ ಬಂದಿದೆ. 3.8 ಬಿಲಿಯನ್‌ ಡಾಲರ್‌ ಧನಸಹಾಯವನ್ನು ಈವರೆಗೆ ಒದಗಿಸಿದೆ. ಭಾರತಕ್ಕೆ ಶ್ರೀಲಂಕಾ ಅತಿ ಸಮೀಪದಲ್ಲಿರುವುದರಿಂದ ಅಲ್ಲಿನ ಬದಲಾವಣೆಗಳು ಭಾರತದ ಮೇಲೂ ಪರಿಣಾಮ ಬೀರುತ್ತವೆ. ಹೀಗಾಗಿ ಶ್ರೀಲಂಕಾದ ಸ್ಥಿರತೆ ಭಾರತಕ್ಕೂ ಬೇಕಾಗಿದೆ. ತನ್ನಿಂದ ಸಾಧ್ಯವಾದಷ್ಟುನೆರವು ಭಾರತ ಒದಗಿಸಿದರೂ, ಇಡೀ ಬಿಕ್ಕಟ್ಟನ್ನು ಪರಿಹರಿಸಲು ಸಾಧ್ಯವಿಲ್ಲ. ಐಎಂಎಫ್‌ ಆರ್ಥಿಕ ನೆರವಿನ ಪ್ಯಾಕೇಜ್‌ನೊಂದಿಗೆ ಬರುವುದರಿಂದ ಬಿಕ್ಕಟ್ಟು ನಿರ್ವಹಣೆಗಾಗಿ ಏಕೈಕ ಮಾರ್ಗವಾಗಿದೆ.

ಆರ್ಥಿಕ ಬಿಕ್ಕಟ್ಟಿನ ಕೆಲ ಲಕ್ಷಣಗಳು ಇನ್ನಿತರ ದೇಶಗಳಲ್ಲೂ ಕಂಡುಬರುತ್ತಿವೆ. ಇನ್ನೂ ಯಾವ್ಯಾವ ರಾಷ್ಟ್ರಗಳು ಶ್ರೀಲಂಕಾದ ಹಾದಿ ಹಿಡಿಯುವ ಸಾಧ್ಯತೆಗಳಿವೆ?

ಕೋವಿಡ್‌ ಹಾಗೂ ಉಕ್ರೇನ್‌ ಯುದ್ಧ ಜಾಗತಿಕ ಆರ್ಥಿಕತೆಯಲ್ಲಿ ಕೋಲಾಹಲ ಸೃಷ್ಟಿಸಿದೆ. ನಮ್ಮ ನೆರೆಯ ರಾಷ್ಟ್ರಗಳಲ್ಲಿ ಪಾಕಿಸ್ತಾನ ಬಿಕ್ಕಟ್ಟನ್ನು ಎದುರಿಸುತ್ತಿದೆ. ಅಪ್ಘಾನಿಸ್ತಾನವನ್ನು ತಾಲಿಬಾನ್‌ ವಶಪಡಿಸಿಕೊಂಡ ಬಳಿಕ ಅಲ್ಲಿ ಹಲವಾರು ನಿರ್ಬಂಧಗಳನ್ನು ಹೇರಿಲಾಗಿದ್ದು, ಆರ್ಥಿಕ ಪರಿಸ್ಥಿತಿ ಅಲ್ಲಿಯೂ ಸಾಕಷ್ಟುಹದಗೆಟ್ಟಿದೆ. ಮ್ಯಾನ್ಮಾರ್‌ ಆರ್ಥಿಕ ಸ್ವಾವಲಂಬನೆಗಾಗಿ ಹೆಣಗಾಡುತ್ತಿದೆ. ನೇಪಾಳದಲ್ಲೂ ರಾಜಕೀಯ ಅಸ್ಥಿರತೆಯಿದೆ. ಬಾಂಗ್ಲಾದೇಶದಲ್ಲೂ ಶೀಘ್ರ ಚುನಾವಣೆ ನಡೆಯಲಿದ್ದು, ಹೊಸ ಸರ್ಕಾರ ರಚನೆಯಾಗಲಿದೆ.

ತುರ್ತು ಪರಿಸ್ಥಿತಿ ಘೋಷಿಸಿದ ಶ್ರೀಲಂಕಾ ಹಂಗಾಮಿ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ

ಒಟ್ಟಾರೆಯಾಗಿ ದಕ್ಷಿಣ ಏಷ್ಯಾದ ದೇಶಗಳು ತೈಲವನ್ನು ಆಮದು ಮಾಡಿಕೊಳ್ಳುವ ರಾಷ್ಟ್ರಗಳಾಗಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯೇರಿಕೆಯಿಂದಾಗಿ ಎಲ್ಲ ರಾಷ್ಟ್ರಗಳಿಗೂ ಭಾರೀ ಪೆಟ್ಟು ಬಿದ್ದಿದೆ. ಭಾರತವು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿದೆ, ಅಲ್ಲದೇ ವಿದೇಶಗಳಿಗೂ ರಫ್ತು ಮಾಡುತ್ತಿದೆ. ಆದರೆ ನಮ್ಮ ನೆರೆಯ ಹಲವಾರು ರಾಷ್ಟ್ರಗಳು ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳುತ್ತವೆ. ಆಹಾರ ಧಾನ್ಯಗಳು ಸೇರಿ ಎಲ್ಲ ಸರಕುಗಳ ಬೆಲೆಯೇರಿಕೆಯಾಗಿದ್ದು, ಎಲ್ಲ ದೇಶದ ಜನಸಾಮಾನ್ಯರನ್ನು ಸಂಕಷ್ಟಕ್ಕೆ ತಳ್ಳಿದೆ.

ಭಾರತಕ್ಕೆ ಶ್ರೀಲಂಕಾದ ರೀತಿ ಆರ್ಥಿಕ ಬಿಕ್ಕಟ್ಟು ಎದುರಾಗುವ ಭೀತಿಯಿದೆಯೇ?

ಹಲವು ಆರ್ಥಿಕ ತಜ್ಞರು ಭಾರತದಲ್ಲೂ ಸದ್ದಿಲ್ಲದೇ ಹಣಕಾಸಿನ ಬಿಕ್ಕಟ್ಟು ತಲೆದೋರುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಕೋವಿಡ್‌ ಹಾಗೂ ಉಕ್ರೇನ್‌ ಯುದ್ಧದಿಂದಾಗಿ ಜಾಗತಿಕ ಹಿಂಜರಿತ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಬಡ್ಡಿದರವನ್ನು ಏರಿಕೆ ಮಾಡಿದೆ. ಇದರಿಂದ ವಿವಿಧ ದೇಶಗಳಲ್ಲಿ ಹೂಡಿಕೆಯಾದ ಮೊತ್ತದ ಹಣವು ಮತ್ತೆ ಅಮೆರಿಕದ ಮಾರುಕಟ್ಟೆಯತ್ತ ಮುಖ ಮಾಡುತ್ತಿದೆ. ಇದರಿಂದ ಡಾಲರ್‌ ಮೌಲ್ಯ ಏರಿಕೆಯಾಗುತ್ತಿದ್ದು, ರುಪಾಯಿ ಮೌಲ್ಯ ಕುಸಿತ ಕಾಣುತ್ತಿದೆ. ಭಾರತ ಸರ್ಕಾರಕ್ಕೆ ಜಿಎಸ್‌ಟಿ ಆದಾಯ ಹೆಚ್ಚುತ್ತಿದ್ದಂತೆ ಜನ ಸಾಮಾನ್ಯರ ವೆಚ್ಚದ ಪ್ರಮಾಣದಲ್ಲೂ ಏರಿಕೆಯಾಗುತ್ತಿದೆ. ವೆಚ್ಚ ಹಾಗೂ ಆದಾಯದ ಸಮತೋಲನ ಸಾಧಿಸುವುದು ಸರ್ಕಾರಕ್ಕೆ ಅಥವಾ ಯಾವುದೇ ಹಣಕಾಸು ಸಚಿವರಿಗೂ ಅತಿ ದೊಡ್ಡ ಸವಾಲಾಗಿದೆ. ಆದರೆ ಭಾರತ ಇತರೆ ದೇಶಗಳಿಗಿಂತ ಉತ್ತಮವಾಗಿ ಈ ಪರಿಸ್ಥಿತಿಯನ್ನು ನಿಭಾಯಿಸುತ್ತಿದೆ.

ಏಕೆಂದರೆ ನಾವು ತುರ್ತು ಪರಿಸ್ಥಿತಿಗಾಗಿಯೇ ಭಾರೀ ಪ್ರಮಾಣದಲ್ಲಿ ವಿದೇಶಿ ಕರೆನ್ಸಿಗಳನ್ನು ಸಂಗ್ರಹಿಸಿಟ್ಟಿದ್ದೇವೆ. ಸಾಲ ತೆಗೆದುಕೊಂಡು ಆರ್ಥಿಕ ಪ್ರಗತಿ ಸಾಧಿಸುವುದಕ್ಕಿಂತ ವೆಚ್ಚವನ್ನು ಕಡಿತಗೊಳಿಸುವುದು ಉತ್ತಮ. ಯಾವುದೇ ಕಾರಣದಿಂದಾಗಿ ನಿರೀಕ್ಷಿತ ಆರ್ಥಿಕ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗದಿದ್ದಲ್ಲಿ ಕನಿಷ್ಠ ಪಕ್ಷ ನಮ್ಮ ಮೇಲೆ ಸಾಲದ ಭಾರೀ ಹೊರೆಯಾದರೂ ಇರುವುದಿಲ್ಲ. ಹೀಗಾಗಿ ನಾವು ಹೆಚ್ಚುವರಿ ವೆಚ್ಚವನ್ನು ಕಡಿತಗೊಳಿಸಬೇಕು ಹಾಗೂ ಸಾಕಷ್ಟುಸಮಾಲೋಚನೆ ಬಳಿಕವೇ ತೆರಿಗೆ ಪ್ರೋತ್ಸಾಹಕಗಳನ್ನು ಘೋಷಿಸಬೇಕು. ಭಾರತಕ್ಕೆ ಸದ್ಯಕ್ಕೆ ಶ್ರೀಲಂಕಾದಂತಹ ಆರ್ಥಿಕ ಬಿಕ್ಕಟ್ಟಿನ ಭೀತಿಯೇನಿಲ್ಲ. ಆದರೂ ಬಹಳ ಎಚ್ಚರಿಕೆಯಿಂದ ಆರ್ಥಿಕತೆಯ ನಿರ್ವಹಣೆ ಮಾಡುವ ಅಗತ್ಯ ಇದೆ.

ಬಿಕ್ಕಟ್ಟು ಮತ್ತೆ ಶ್ರೀಲಂಕಾದಲ್ಲಿ ಜನಾಂಗೀಯ ಘರ್ಷಣೆಗಳಿಗೆ ಎಡೆಮಾಡಿಕೊಡಬಹುದೇ?

ದೇಶದಲ್ಲಿ ಪ್ರತಿಭಟನಾಕಾರರು ಅಧ್ಯಕ್ಷ, ಪ್ರಧಾನಿ ನಿವಾಸಕ್ಕೆ ನುಗ್ಗುವುದು, ಪೊಲೀಸರು, ಯೋಧರು ಅದನ್ನು ನೋಡುತ್ತ ಸುಮ್ಮನೇ ನಿಲ್ಲುವುದು ರಾಜಕೀಯ ನಾಯಕತ್ವದ ಪತನವನ್ನು ಸೂಚಿಸುತ್ತದೆ. ಆದರೆ ಶ್ರೀಲಂಕಾದ ಸುದೀರ್ಘ ಇತಿಹಾಸದಲ್ಲಿ ಸ್ವಾತಂತ್ರ್ಯಕ್ಕಾಗಿ ತಮಿಳು ಟೈಗ​ರ್‍ಸ್ ಹಾಗೂ ತೀವ್ರಗಾಮಿಗಳ ಹೋರಾಟ, ಮಾರ್ಕ್ಸ್ವಾದಿ ಸಿಂಹಳ ಗುಂಪುಗಳ ಹೋರಾಟ, ಸಿಂಹಳೀಯರು ಹಾಗೂ ತಮಿಳಿಗರ ನಡುವಿನ ಗುಂಪು ಸಂಘರ್ಷ, ಭಯೋತ್ಪಾದನೆ ಮೊದಲಾದ ಅಂಶಗಳು ಇವೆ. ನಮ್ಮ ಮಾಜಿ ಪ್ರಧಾನಿ ರಾಜೀವ್‌ ಗಾಂಧಿಯವರು ಹತ್ಯೆಗೀಡಾಗಿದ್ದುದು ಒಬ್ಬ ತಮಿಳು ಉಗ್ರವಾದಿಯಿಂದಲೇ ಎಂಬುದು ಗಮನಾರ್ಹ.

ಶ್ರೀಲಂಕಾ ಪರಿಸ್ಥಿತಿ ಎದುರಿಸುವಾಗ ಜಾಗರೂಕತೆ ಅಗತ್ಯ, ಚೀನಾ ಕುತಂತ್ರ ಸೂಚನೆ ನೀಡಿದ ಮಾಜಿ ಭಾರತದ ರಾಯಭಾರಿ!

ಹೀಗಾಗಿ ನೆರೆಯ ದೇಶದ ಅರಾಜಕತೆ ಭಾರತದ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ನಾವು ಶ್ರೀಲಂಕಾಕ್ಕೆ ರಾಜಕೀಯ ಸ್ಥಿರತೆ ಸಾಧಿಸಲು ನೆರವಾಗಬೇಕು. ಈ ಹಿನ್ನೆಲೆಯಲ್ಲಿ ಭಾರತವು ಈಗಾಗಲೇ ಶ್ರೀಲಂಕಾದ ಜನತೆಯೊಂದಿಗಿದ್ದೇವೆ ಎಂದು ಹೇಳಿಕೆ ನೀಡಿದೆ. ಆದರೆ ಯಾವುದೇ ರಾಜಕೀಯ ಪಕ್ಷ ಅಥವಾ ನಾಯಕನಿಗೆ ಬೆಂಬಲ ಸೂಚಿಸಿಲ್ಲ ಎಂಬುದು ಇಲ್ಲಿ ಗಮನಾರ್ಹ. ಏಕೆಂದರೆ ಭಾರತ ಯಾವುದೇ ಒಬ್ಬ ನಾಯಕನಿಗೆ ಬೆಂಬಲ ಸೂಚಿಸಿ ಆತ ಆಯ್ಕೆಯಾದರೆ, ಆತನನ್ನು ಭಾರತದ ಕೈಗೊಂಬೆ ಎಂಬಂತೆ ಪರಿಗಣಿಸಿ ಜನರು ಟೀಕಿಸಬಹುದು. ಆತನ ಬದಲು ಬೇರೆ ಯಾರೋ ಆಯ್ಕೆಯಾದರೆ ಲಂಕಾದೊಂದಿಗಿನ ಭಾರತದ ಸಂಬಂಧ ಹಳಸಬಹುದು.

ಮುಂದಿನ ದಿನಗಳಲ್ಲಿ ಶ್ರೀಲಂಕಾಕ್ಕೆ ಎಂತಹ ನಾಯಕನ ಅಗತ್ಯವಿದೆ?

ದೇಶದಲ್ಲಿ ಆರ್ಥಿಕ ರಾಜಕೀಯ ಸ್ಥಿರತೆಯನ್ನು ತರುವ ನಾಯಕನ ಅಗತ್ಯ ಶ್ರೀಲಂಕಾಗಿದೆ. ಐಎಂಎಫ್‌ ಜತೆಗೆ ಮಾತುಕತೆ ನಡೆಸಿ, ಅವರು ಸೂಚಿಸಿದ ಸುಧಾರಣಾ ಕ್ರಮಗಳನ್ನು ಅನುಷ್ಠಾನಕ್ಕೆ ತರುವ ನಾಯಕನ ಅವಶ್ಯಕತೆಯಿದೆ. ಭಾರತದಲ್ಲಿ ಪಿ.ವಿ.ನರಸಿಂಹರಾವ್‌ ಅವರು ದೇಶದ ಆರ್ಥಿಕತೆಯಲ್ಲಿ ಮಹತ್ವದ ಸುಧಾರಣೆಗಳನ್ನು ಮಾಡಿದ್ದರು. ಈ ರೀತಿಯ ಬಿಕ್ಕಟ್ಟಿನ್ನು ಸಮರ್ಪಕವಾಗಿ ಹೇಗೆ ನಿರ್ವಹಿಸಬಹುದು ಎಂಬುದರ ಬಗ್ಗೆ ಸ್ಪಷ್ಟತೆಯುಳ್ಳ ನಾಯಕನ ಅವಶ್ಯಕತೆಯಿದೆ.

- ವೇಣು ರಾಜಮಣಿ, ವಿದೇಶಾಂಗ ವ್ಯವಹಾರಗಳ ತಜ್ಞ

click me!