
ನವದೆಹಲಿ: ಭಾರತದ ಪ್ರಮುಖ ಎರಡು ಖಾಸಗಿ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್ ಮುಂದೆ ಸರ್ಕಾರಿ ಸ್ವಾ,ಮ್ಯದ ಬಿಎಸ್‌ಎನ್‌ಎಲ್ ಹಿಂದೆ ಉಳಿಯುತ್ತಿದೆ. ಬಿಎಸ್‌ಎನ್ಎಲ್ 4G ನೆಟ್‌ವರ್ಕ್ ಅಳವಡಿಕೆ ಕಾರ್ಯ ವೇಗದಿಂದ ನಡೆಯುತ್ತಿದೆ. ಇದೀಗ ಈ ವೇಗಕ್ಕೆ ಕೇಂದ್ರ ಸರ್ಕಾರ ಬೂಸ್ಟ್ ತುಂಬಲು ಮುಂದಾಗಿದ್ದು, ಇದಕ್ಕಾಗಿ ದೊಡ್ಡಮಟ್ಟದಲ್ಲಿ ಆರ್ಥಿಕ ನೆರವು ನೀಡುತ್ತಿದೆ. ಬಿಎಸ್‌ಎನ್‌ಎಲ್‌ಗೆ ಅನುದಾನ ನೀಡಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ. ಸಾರ್ವಜನಿಕ ವಲಯದ ಟೆಲಿಕಾಂ ಕಂಪನಿಗಳು -ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಮತ್ತು ಮಹಾನಗರ ಟೆಲಿಫೋನ್ ನಿಗಮ್ ಲಿಮಿಟೆಡ್ (MTNL)-ತಮ್ಮ 4G ರೋಲ್ಔಟ್ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಅನುದಾನ ನೀಡುತ್ತಿದೆ.
ವರದಿಗಳ ಪ್ರಕಾರ, BSNL 4G ವಿಸ್ತರಣೆಗೆ ಹೆಚ್ಚುವರಿ 6,000 ಕೋಟಿ ರೂ.ಗಳನ್ನು ವಿನಿಯೋಗಿಸಲು ಸರ್ಕಾರ ನಿರ್ಧರಿಸಿದೆ. ದೆಹಲಿ ಮತ್ತು ಮುಂಬೈ ಮಹಾನಗರಗಳಲ್ಲಿ ಟೆಲಿಕಾಂ ಸೇವೆ ನೀಡುತ್ತಿರುವ MTNL ಕೆಲ ತಿಂಗಳ ಹಿಂದೆ BSNL ಜೊತೆ ಒಪ್ಪಂದ ಮಾಡಿಕೊಂಡಿತ್ತು. ತನ್ನ ಸೇವೆಗಳನ್ನು 4G ನೆಟ್‌ವರ್ಕ್‌ಗೆ ಬದಲಾವಣೆ ಮಾಡಲು 10 ವರ್ಷಕ್ಕೆ ಬಿಎಸ್‌ಎನ್‌ಎಲ್ ಜೊತೆ ಒಪ್ಪಂದ ಮಾಡಿಕೊಂಡಿದೆ. MTNL ತನ್ನ ಬಳಕೆದಾರರಿಗೆ 4G ನೆಟ್‌ವರ್ಕ್ ಸೇವೆ ನೀಡಲು ಮುಂದಾಗಿದೆ. 4G ಸೇವೆ ಒದಗಿಸುವ ಮೂಲಕ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಗುರಿಯನ್ನು MTNL ಹೊಂದಿದೆ.
ಶುಕ್ರವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯ ಕಾರ್ಯಸೂಚಿಯಲ್ಲಿ ಬಿಎಸ್‌ಎನ್‌ಎಲ್‌ಗೆ ಸುಮಾರು 6 ಸಾವಿರ ಕೋಟಿ ರೂ. ಅನುದಾನಕ್ಕೆ ಅನುಮೋದನೆ ದೊರೆತಿದೆ ಎಂದು ವರದಿಯಾಗಿದೆ. ಆದ್ರೆ ಈ ಬಗ್ಗೆ ಕೇಂದ್ರ ಸರ್ಕಾರದಿಂದ ಯಾವುದೇ ಅಧಿಕೃತ ಹೇಳಿಕೆ ಪ್ರಕಟವಾಗಿಲ್ಲ. ಕೇಂದ್ರದಿಂದ ಬಿಡುಗಡೆಯಾಗುವ ಹೆಚ್ಚುವರಿ ಹಣವನ್ನು ಸುಮಾರು 1 ಲಕ್ಷ 4G ಸೈಟ್‌ಗಳ ನಿಯೋಜನೆಗೆ ಬಳಸಿಕೊಳ್ಳಲಾಗುತ್ತದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಜಿಯೋ, ಏರ್‌ಟೆಲ್‌ಗೆ ಮತ್ತೆ ಸವಾಲೆಸೆದ ಬಿಎಸ್ಎನ್‌ಎಲ್; 400 ರೂಪಾಯಿಗೂ ಕಡಿಮೆ ಬೆಲೆಯಲ್ಲಿ 150 ದಿನದ ಪ್ಲಾನ್
ಈ ಮೊದಲು 4G ರೋಲ್ಔಟ್ ಯೋಜನೆಗಳಿಗಾಗಿ ಸುಮಾರು 19,000 ಕೋಟಿ ರೂಪಾಯಿಗಳ ಒಟ್ಟು ಯೋಜನಾ ವೆಚ್ಚ ನಿಗಧಿಪಡಿಸಲಾಗಿತ್ತು. ಬಿಎಸ್‌ಎನ್ಎಲ್ 19 ಸಾವಿರ ಕೋಟಿಯಲ್ಲಿ 13,000 ಕೋಟಿ ರೂ. ಅನುದಾನವನ್ನು ಬಳಕೆ ಮಾಡಿದೆ. ಇನ್ನುಳಿಳಿದ ರೂ 6,000 ಕೋಟಿಗಾಗಿ, BSNL ದೂರಸಂಪರ್ಕ ಇಲಾಖೆಯನ್ನು (DoT) ಸಂಪರ್ಕಿಸಿತು. ಬಿಎಸ್‌ಎನ್‌ಎಲ್ ಮನವಿಯನ್ನು ಪರಿಗಣಿಸಿದ್ದ ದೂರಸಂಪರ್ಕ ಇಲಾಖೆ, ಕೇಂದ್ರ ಸರ್ಕಾರಕ್ಕೆ 6000 ಕೋಟಿ ರೂ. ಪ್ರಸ್ತಾವನೆಯನ್ನು ಸಲ್ಲಿಕೆ ಮಾಡಿತ್ತು. ಇದೀಗ ಈ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ವರದಿಯಾಗಿದೆ. ಕೇಂದ್ರ ಸರ್ಕಾರ 2019ರಿಂದಲೂ ಬಿಎಸ್‌ಎನ್‌ಎಲ್ ಪುನರುಜ್ಜೀವನಕ್ಕೆ ಮೂರು ಪ್ಯಾಕೇಜ್‌ಗಳನ್ನು (three revival packages) ನೀಡುತ್ತಿದೆ. BSNL ಮತ್ತು MTNLನಲ್ಲಿ 3.22 ಲಕ್ಷ ಕೋಟಿ ಹೂಡಿಕೆ ಮಾಡಲಾಗಿದೆ.
ಇದನ್ನೂ ಓದಿ: ಬಿಎಸ್ಎನ್‌ಎಲ್‌ನಿಂದ ಜಿಯೋ , ಏರ್‌ಟೆಲ್‌ಗೆ ವಲಸೆ ಹೊರಟ ಗ್ರಾಹಕರು; ಕಾರಣ ಏನು? BSNL ಎಡವಿದ್ದೆಲ್ಲಿ?
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.