ಗಗನಕ್ಕೇರಿದ ಈರುಳ್ಳಿ ದರ: ದೆಹಲಿಯಲ್ಲಿ ಕೆಜಿಗೆ 80 ರು!

Published : Sep 23, 2019, 10:57 AM IST
ಗಗನಕ್ಕೇರಿದ ಈರುಳ್ಳಿ ದರ: ದೆಹಲಿಯಲ್ಲಿ ಕೆಜಿಗೆ 80 ರು!

ಸಾರಾಂಶ

ಗಗನಕ್ಕೇರಿದ ಈರುಳ್ಳಿ ದರ: ದೆಹಲಿಯಲ್ಲಿ ಕೆಜಿಗೆ 80 ರು| ಮಳೆಯಿಂದಾಗಿ ಈರುಳ್ಳಿ ಪೂರೈಕೆ ಕುಸಿತ| ವಾರದಲ್ಲಿ 40-50 ರು. ಹೆಚ್ಚಳ| ದರ ನಿಯಂತ್ರಣಕ್ಕೆ ಕೇಂದ್ರ ಹೊಸ ಸೂಚಿ

ನವದೆಹಲಿ[ಸೆ.23]: ದೇಶಾದ್ಯಂತ ಮುಂಗಾರು ಮಳೆ ಆರ್ಭಟದಿಂದಾಗಿ ಪೂರೈಕೆ ಕುಸಿತವಾದ ಬೆನ್ನಲ್ಲೇ, ಈರುಳ್ಳಿ ದರದಲ್ಲಿ ಭಾರೀ ಹೆಚ್ಚಳವಾಗಿದ್ದು, 20-30 ರು.ಗೆ ಬಿಕರಿಯಾಗುತ್ತಿದ್ದ ಈರುಳ್ಳಿ ದರ ಒಂದೇ ವಾರದಲ್ಲಿ 70-80ರು.ಗೆ ಏರಿಕೆಯಾಗಿದೆ. ಈರುಳ್ಳಿ ಬೆಳೆಯವ ರಾಜ್ಯಗಳಲ್ಲಿ ವಿಪರೀತ ಮಳೆ ಹಾಗೂ ಪೂರೈಕೆ ಕೊರತೆಯಿಂದಾಗಿ ಬೆಲೆ ಹೆಚ್ಚಾಗಿದೆ.

ಅತೀ ಹೆಚ್ಚು ಈರುಳ್ಳಿ ಬೆಳೆಯುವ ಮಹಾರಾಷ್ಟ್ರ, ಕರ್ನಾಟಕ, ಆಂಧ್ರ ಪ್ರದೇಶ, ಗುಜರಾತ್‌, ಪೂರ್ವ ರಾಜಸ್ತಾನ ಹಾಗೂ ಪಶ್ಚಿಮ ಮಧ್ಯಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಬೆಳೆ ನಾಶ ಹಾಗೂ ಸಾಗಣೆ ಸ್ಥಗಿತದಿಂದಾಗಿ ಈರುಳ್ಳಿ ಕಣ್ಣೀರು ತರಿಸಿದೆ.

ಸದ್ಯ ದೇಶದಾದ್ಯಂತ ದಾಸ್ತಾನು ಇರುವ ಈರುಳ್ಳಿಗಳನ್ನು ಮಾರಾಟ ಮಾಡಲಾಗುತ್ತಿದ್ದು, ಹೊಸ ಬೆಳೆ ನವೆಂಬರ್‌ ಬಳಿಕ ಮಾರುಕಟ್ಟೆಗೆ ಪ್ರವೇಶ ಮಾಡಲಿದೆ. ದಾಸ್ತಾನು ಇರುವ ಕಳೆದ ವರ್ಷದ ಬೆಳೆ ಬೇಡಿಕೆಗೆ ತಕ್ಕಷ್ಟಿದೆ. ಆದರೆ ದೇಶದ ವಿವಿದೆಡೆ ಮಳೆಯಿಂದಾಗಿ ಸಾಗಣೆಗೆ ಅಡಚಣೆ ಉಂಟಾಗಿದೆ. ಅಲ್ಲದೇ ವ್ಯಾಪರಿಗಳು ಹೆಚ್ಚು ದಾಸ್ತಾನು ಮಾಡಿಕೊಂಡಿದ್ದರಿಂದ ಕೃತಕ ಅಭಾವ ಸೃಷ್ಟಿಯಾಗಿ ಬೆಲೆ ಏರಿಕೆಗೆ ಕಾರಣವಾಗಿದೆ. ಕಳೆದ ವರ್ಷ ಇದೇ ವೇಳೆ ಕೆ.ಜಿ ಈರುಳ್ಳಿಗೆ 10 ರು. ಇತ್ತು.

ಇದೇ ವೇಳೆ ಈರುಳ್ಳಿ ದರ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದ್ದು, 2-3 ದಿನಗಳಲ್ಲಿ ಬೆಲೆ ನಿಯಂತ್ರಣಕ್ಕೆ ಬಾರದಿದ್ದರೆ ವ್ಯಾಪಾರಿಗಳಿಗೆ ದಾಸ್ತಾನು ಮಿತಿ ಹೇರಲು ಚಿಂತನೆ ನಡೆಸಿದೆ. ಅಲ್ಲದೇ ತುರ್ತು ದಾಸ್ತಾನಿನಿಂದ 16000 ಟನ್‌ಗಳಷ್ಟುಈರುಳ್ಳಿ ಬಿಡುಗಡೆ ಮಾಡಲಾಗಿದ್ದು. ರಾಷ್ಟ್ರೀಯ ಗ್ರಾಹಕ ಒಕ್ಕೂಟ ಹಾಗೂ ನಾಫೆಡ್‌ ಮೂಲಕ ಕೆ.ಜಿಗೆ 22ರು. ನಂತೆ ದೆಹಲಿಯಲ್ಲಿ ಮಾರಾಟ ಮಾಡಲಾಗುತ್ತಿದೆ.

ಅಲ್ಲದೇ ಕೆಲ ರಾಜ್ಯಸರ್ಕಾರಗಳಿಗೂ ತುರ್ತು ದಾಸ್ತಾನಿಂದ ಈರುಳ್ಳಿ ಬಿಡುಗಡೆಗೆ ಸೂಚನೆ ನೀಡಲಾಗಿದ್ದು, ರಾಜ್ಯಗಳು ಸಕಾರಾತ್ಮಕವಾಗಿ ಸ್ಪಂದಿಸಿವೆ. ಇದೇ ವೇಳೆ ರಫ್ತು ಕಡಿವಾಣಕ್ಕೆ ಕೇಂದ್ರ ಮುಂದಾಗಿದ್ದು, ಕನಿಷ್ಠ ರಫ್ತು ದರ ನಿಗದಿ ಪಡಿಸಿ ರಿಯಾಯಿತಿಯನ್ನು ರದ್ದು ಮಾಡಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!