
Business Desk:ನಿಗದಿತ ಮಿತಿಗಿಂತ ಹೆಚ್ಚಿನ ಆದಾಯ ಹೊಂದಿರುವ ಪ್ರತಿಯೊಬ್ಬರೂ ಆದಾಯ ತೆರಿಗೆ ಪಾವತಿಸೋದು ಕಡ್ಡಾಯ. ಆದಾಯಕ್ಕೆ ಅನುಗುಣವಾಗಿ ತೆರಿಗೆ ದರ ಕೂಡ ಬದಲಾಗುತ್ತದೆ. ಕೆಲವು ತೆರಿಗೆ ವಿನಾಯಿತಿ ಹಾಗೂ ಕಡಿತಗಳನ್ನು ಪಡೆಯಲು ಕೂಡ ಅವಕಾಶವಿದೆ. ಇನ್ನು ಹಿರಿಯ ನಾಗರಿಕರು ಕೂಡ ನಿಗದಿತ ಮಿತಿಗಿಂತ ಹೆಚ್ಚಿನ ಆದಾಯ ಹೊಂದಿದ್ದರೆ ತೆರಿಗೆ ಪಾವತಿಸಬೇಕಾಗುತ್ತದೆ. ರಿಯ ನಾಗರಿಕರು ವೃತ್ತಿಯಿಂದ ನಿವೃತ್ತರಾಗಿದ್ದರೂ ಕೂಡ ಪಿಂಚಣಿ ಪಡೆಯುತ್ತಿದ್ದರೆ ಐಟಿಆರ್ ಸಲ್ಲಿಕೆ ಮಾಡೋದು ಅಗತ್ಯ. ಆದಾಯ ತೆರಿಗೆ ಇಲಾಖೆ ಪಿಂಚಣಿಯನ್ನು ವೇತನದಿಂದ ಬಂದ ಆದಾಯ ಎಂದು ಪರಿಗಣಿಸಿ ತೆರಿಗೆ ವಿಧಿಸುತ್ತದೆ. ತೆರಿಗೆ ವಿಧಿಸುವ ಉದ್ದೇಶದಿಂದ 60 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ಹಾಗೂ 80 ವರ್ಷದೊಳಗಿನ ವ್ಯಕ್ತಿಯನ್ನು ಹಿರಿಯ ನಾಗರಿಕ ಎಂದು ಪರಿಗಣಿಸಲಾಗುತ್ತದೆ. ಇನ್ನು 80 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ವ್ಯಕ್ತಿಯನ್ನು ಸೂಪರ್ ಹಿರಿಯ ನಾಗರಿಕ ಎಂದು ಪರಿಗಣಿಸಲಾಗುತ್ತದೆ. ಇತರ ತೆರಿಗೆದಾರರಂತೆ ಹಿರಿಯ ನಾಗರಿಕರು ಕೂಡ ಹಳೆಯ ಆದಾಯ ತೆರಿಗೆ ವ್ಯವಸ್ಥೆಯಲ್ಲಿ ತೆರಿಗೆ ವಿನಾಯ್ತಿ ಪ್ರಯೋಜನಗಳನ್ನು ಪಡೆಯಬಹುದು. ಹಾಗಾದ್ರೆ ಹಿರಿಯ ನಾಗರಿಕರು ಹೇಗೆ ತೆರಿಗೆ ಉಳಿತಾಯ ಮಾಡ್ಬಹುದು? ಇಲ್ಲಿದೆ ಮಾಹಿತಿ.
ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80D ಅಡಿಯಲ್ಲಿ
ಆರೋಗ್ಯ ವಿಮೆ ಖರೀದಿಸಲು ತಗಲಿದೆ ವೆಚ್ಚದ ಮೇಲೆ ತೆರಿಗೆ ಪ್ರಯೋಜನ ಪಡೆಯಲು ಅವಕಾಶವಿದೆ. ಆರೋಗ್ಯ ವಿಮೆ ಮೇಲೆ 25,000ರೂ. ತನಕ ತೆರಿಗೆ ಪ್ರಯೋಜನ ಪಡೆಯಲು ಅವಕಾಶವಿದೆ. ಇದು ಹಿರಿಯ ನಾಗರಿಕರು ತಮ್ಮ ಹೆಸರಿನಲ್ಲಿ ಆರೋಗ್ಯ ವಿಮೆ ಖರೀದಿಸಿದರೆ ಮಾತ್ರವಲ್ಲ, ಬದಲಿಗೆ ಸಂಗಾತಿ, ಮಕ್ಕಳು ಅಥವಾ ಅವರನ್ನೇ ಅವಲಂಬಿಸಿರುವ ಪೋಷಕರ ಆರೋಗ್ಯ ವಿಮೆ ಪ್ರೀಮಿಯಂಗಳ ಪಾವತಿಗೂ ಅನ್ವಯಿಸುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80 ಡಿ ಅಡಿಯಲ್ಲಿ ತಮ್ಮ ಒಟ್ಟು ಆದಾಯದಿಂದ ವೈದ್ಯಕೀಯ ವಿಮಾ ಪ್ರೀಮಿಯಂಗಳ ಪಾವತಿಗೆ ತೆರಿಗೆ ಕಡಿತ ಕ್ಲೇಮ್ ಮಾಡಬಹುದು. ಈ ಕಡಿತ ಟಾಪ್ -ಅಪ್ ಆರೋಗ್ಯ ಪ್ಲ್ಯಾನ್ ಗಳು ಹಾಗೂ ಗಂಭೀರ ಕಾಯಿಲೆಗಳ ಪ್ಲ್ಯಾನ್ ಗಳಿಗೂ ಅನ್ವಯಿಸುತ್ತದೆ. ಒಂದು ವೇಳೆ ಹಿರಿಯ ನಾಗರಿಕರು ತಮ್ಮ ಹಾಗೂ ಕುಟುಂಬ ಸದಸ್ಯರ ಅದರಲ್ಲೂ 60 ವರ್ಷ ಮೇಲ್ಪಟ್ಟ ಪಾಲಕರ ಪ್ರೀಮಿಯಂ ಕೂಡ ಪಾವತಿಸುತ್ತಿದ್ದರೆ ಆಗ ಒಂದು ಲಕ್ಷ ರೂ. ತನಕ ಕ್ಲೇಮ್ ಮಾಡಿಕೊಳ್ಳಲು ಅವಕಾಶವಿದೆ.
ಐಟಿಆರ್ ಸಲ್ಲಿಕೆ ಮಾಡುತ್ತಿದ್ದೀರಾ? ಯಾವ ತೆರಿಗೆ ವ್ಯವಸ್ಥೆ ಆಯ್ಕೆ ಮಾಡೋದು ಉತ್ತಮ? ಇಲ್ಲಿದೆ ಮಾಹಿತಿ
ಹೂಡಿಕೆಗಳ ಮೇಲೆ ಕಡಿತ
ಪಿಂಚಣಿದಾರರು ಸೆಕ್ಷನ್ 80C,80CCC,80CCD ಅಡಿಯಲ್ಲಿ ಪ್ರಾವಿಡೆಂಟ್ ಫಂಡ್, ಲೈಫ್ ಇನ್ಯುರೆನ್ಸ್ ಪ್ರೀಮಿಯಂ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ, ಕೇಂದ್ರ ಸರ್ಕಾರದ ಪಿಂಚಣಿ ಯೋಜನೆ ಹಾಗೂ ಎಲ್ಐಸಿಯ ವರ್ಷಾಶನ ಯೋಜನೆಯಲ್ಲಿ ಮಾಡಿದ ಹೂಡಿಕೆಗೆ ಹಳೆಯ ತೆರಿಗೆ ವ್ಯವಸ್ಥೆ ಅಡಿಯಲ್ಲಿ ತೆರಿಗೆ ವಿನಾಯ್ತಿ ಪಡೆಯಬಹುದು. ಈ ಸೆಕ್ಷನ್ ಗಳ ಅಡಿಯಲ್ಲಿ ಒಟ್ಟು ಕಡಿತದ ಮಿತಿ 1,50,000ರೂ. ಆದರೆ, ಪಿಂಚಣಿದಾರ ಹೊಸ ತೆರಿಗೆ ವ್ಯವಸ್ಥೆಯಡಿಯಲ್ಲಿ ಬಂದರೆ ಆಗ ಈ ವಿನಾಯ್ತಿಗಳು ಸಿಗೋದಿಲ್ಲ.
ITR ಫೈಲ್ ಮಾಡಿದ ಬಳಿಕ ತೆರಿಗೆ ರೀಫಂಡ್ ಪಡೆಯಲು ಎಷ್ಟು ಸಮಯ ಬೇಕು? ಇಲ್ಲಿದೆ ಮಾಹಿತಿ
ಮೂಲ ತೆರಿಗೆ ವಿನಾಯ್ತಿ
ಹಿರಿಯ ನಾಗರಿಕರು ಇತರ ಸಾಮಾನ್ಯ ನಾಗರಿಕರಿಗೆ ಸಿಗುವ ಎಲ್ಲ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು. ಇದರ ಜೊತೆಗೆ ಹಳೆಯ ತೆರಿಗೆ ವ್ಯವಸ್ಥೆಯಲ್ಲಿ ಅವರಿಗೆ ಇತರರಿಗಿಂತ ಅಧಿಕ ಮೂಲ ತೆರಿಗೆ ವಿನಾಯಿತಿ ಕೂಡ ನೀಡಲಾಗಿದೆ. 60-80ವರ್ಷ ವಯಸ್ಸಿನ ಹಿರಿಯ ನಾಗರಿಕರಿಗೆ 3ಲಕ್ಷ ರೂ. ತನಕ ಹಾಗೂ 80 ವರ್ಷ ಮೇಲ್ಪಟ್ಟವರಿಗೆ 5ಲಕ್ಷ ರೂ. ತನಕ ತೆರಿಗೆ ವಿನಾಯ್ತಿ ನೀಡಲಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.