ಬೆಂಗಳೂರು ಇಲ್ಲದಿದ್ರೆ ಏನಂತೆ, 8 ಸಾವಿರ ಎಕರೆ ಜಾಗ ಕೊಡ್ತೇವೆ ನಮ್ಮಲ್ಲೇ ಏರೋಸ್ಪೇಸ್‌ ಪಾರ್ಕ್‌ ಮಾಡಿ ಎಂದ ಆಂಧ್ರ!

Published : Jul 15, 2025, 09:51 PM IST
Aerospace Park

ಸಾರಾಂಶ

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಪ್ರಸ್ತಾವಿತ ಏರೋಸ್ಪೇಸ್ ಪಾರ್ಕ್‌ಗಾಗಿ ಭೂಸ್ವಾಧೀನ ಪ್ರಕ್ರಿಯೆ ರದ್ದುಗೊಳಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಬೆಂಗಳೂರು (ಜು.15): ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಪ್ರಸ್ತಾವಿತ ಏರೋಸ್ಪೇಸ್ ಪಾರ್ಕ್‌ಗಾಗಿ ದೇವನಹಳ್ಳಿ ತಾಲ್ಲೂಕಿನಲ್ಲಿ 1,777 ಎಕರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಸ್ತಾವನೆಯನ್ನು ಕರ್ನಾಟಕ ಸರ್ಕಾರ ಕೈಬಿಟ್ಟಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.ಇದರ ಬೆನ್ನಲ್ಲಿಯೇ ಪ್ರತಿಭಟನಾ ನಿರತ ರೈತರಿಗೆ ಸಿಕ್ಕ ದೊಡ್ಡ ಜಯ ಇದು ಎಂದು ಬಿಂಬಿಸಲಾಗಿದ್ದರೆ, ಏರೋಸ್ಪೇಸ್‌ ಪಾರ್ಕ್‌ಗೆ ದೊಡ್ಡ ಹಿನ್ನಡೆಯಂತೆ ನೋಡಲಾಗುತ್ತಿದೆ.

ಏರೋಸ್ಪೇಸ್‌ ಪಾರ್ಕ್‌ಗೆ ರಾಜ್ಯ ಸರ್ಕಾರ ಸೂಕ್ತ ಜಾಗ ನೀಡಲು ಒದ್ದಾಡುತ್ತಿರುವ ಹಂತದಲ್ಲಿ ಆಂಧ್ರಪ್ರದೇಶ, ಕರ್ನಾಟಕದ ಕಣ್ಣು ಕೆಂಪಗೆ ಮಾಡುವ ನಿರ್ಧಾರ ಘೋಷಿಸಿದೆ. ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಪುತ್ರ ಹಾಗೂ ಸಚಿವ ನಾರಾ ಲೋಕೇಶ್‌ ಈ ಬಗ್ಗೆ ಟ್ವೀಟ್‌ ಮಾಡಿದ್ದು, ಏರೋಸ್ಪೇಸ್‌ ಇಂಡಸ್ಟ್ರಿಗೆ ಜಾಗ ನೀಡಲು ನಾವು ಸಿದ್ಧ ಎಂದು ಹೇಳಿದ್ದಾರೆ.

'ಆತ್ಮೀಯ ಏರೋಸ್ಪೇಸ್ ಉದ್ಯಮದವರೆ, ಇದರ ಬಗ್ಗೆ ಕೇಳಿ ಬೇಸರವಾಯಿತು. ನಿಮಗಾಗಿ ನನ್ನ ಬಳಿ ಇದಕ್ಕಿಂತ ಉತ್ತಮವಾದ ಐಡಿಯಾ ಇದೆ. ನೀವು ಆಂಧ್ರಪ್ರದೇಶವನ್ನು ಏಕೆ ಆಯ್ಕೆ ಮಾಡಿಕೊಳ್ಳಬಾರದು? ಅತ್ಯುತ್ತಮ ಪ್ರೋತ್ಸಾಹ ಧನ ಮತ್ತು 8000 ಎಕರೆಗಳಿಗೂ ಹೆಚ್ಚು ಬಳಸಲು ಸಿದ್ಧವಾದ ಭೂಮಿ (ಜಸ್ಟ್‌ ಬೆಂಗಳೂರಿನ ಹೊರಗೆ) ಹೊಂದಿರುವ ಆಕರ್ಷಕ ಏರೋಸ್ಪೇಸ್ ನೀತಿಯನ್ನು ನಾವು ನಿಮಗಾಗಿ ಹೊಂದಿದ್ದೇವೆ! ಶೀಘ್ರದಲ್ಲೇ ನಿಮ್ಮನ್ನು ಭೇಟಿಯಾಗಲು ಆಶಿಸುತ್ತೇವೆ' ಎಂದು ಟ್ವೀಟ್‌ ಮಾಡಿದ್ದಾರೆ.

ಈಗಾಗಲೇ ಬೆಂಗಳೂರಿನ ಹಲವು ಸಮಸ್ಯೆಗಳು ಆಂಧ್ರ ಪ್ರದೇಶದ ಸರಳ ಕೈಗಾರಿಕಾ ನೀತಿಯಿಂದಾಗಿ ರಾಜ್ಯಕ್ಕೆ ಬರಬೇಕಿದ್ದ ಹಲವು ಕೈಗಾರಿಕೆ ಹಾಗೂ ಉದ್ಯಮಗಳು ಪಕ್ಕದ ಆಂಧ್ರಪ್ರದೇಶದ ಪಾಲಾಗಿದೆ. ಈಗ ಏರೋಸ್ಪೇಸ್‌ ಉದ್ಯಮ ಕೂಡ ಆಂಧ್ರದ ಪಾಲಾಗುವ ಲಕ್ಷಣ ಕಾಣುತ್ತಿದೆ. ಇದಕ್ಕೂ ಮುನ್ನ ಬೆಂಗಳೂರಿನಲ್ಲಿರುವ ಎಚ್‌ಎಎಲ್‌ನ ಪ್ರಮುಖ ಘಟಕವನ್ನು ಆಂಧ್ರಪ್ರದೇಶಕ್ಕೆ ಶಿಫ್ಟ್‌ ಮಾಡುವಂತೆ ಸ್ವತಃ ಚಂದ್ರಬಾಬು ನಾಯ್ಡು, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ಗೆ ಭೇಟಿ ಮಾಡಿ ಮನವಿ ಮಾಡಿದ್ದರು.

ನಾರಾ ಲೋಕೇಶ್‌ ಅವರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ವ್ಯವಹಾರವನ್ನು ಆಕರ್ಷಿಸುವುದು, ಉದ್ಯಮವನ್ನು ಸ್ವಾಗತಿಸುವುದು ಮತ್ತು ಉದ್ಯೋಗಗಳನ್ನು ಸೃಷ್ಟಿಸುವ ರೀತಿ ಹೀಗೆ. ಕರ್ನಾಟಕ ಸರ್ಕಾರ ನಾರಾ ಲೋಕೇಶ್‌ ಅವರಿಂದ ಕಲಿತು ತನ್ನ ಹಾದಿಯನ್ನು ಸರಿಪಡಿಸಿಕೊಳ್ಳಲಿ ಎಂದು ಆಶಿಸುತ್ತೇನೆ. ಬೆಂಗಳೂರಿನಲ್ಲಿ ಈ ಏರೋಸ್ಪೇಸ್ ಪಾರ್ಕ್ ಅನ್ನು ಸ್ಥಾಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯ ಇಚ್ಛಾಶಕ್ತಿಯನ್ನು ತೋರಿಸಬೇಕು. ಬೆಂಗಳೂರು ಭಾರತದ ಏರೋಸ್ಪೇಸ್ ರಾಜಧಾನಿ. ನಾವು HAL, NAL, DRDO, ISRO, ಮತ್ತು ಏರ್‌ಬಸ್, ಬೋಯಿಂಗ್ ಮತ್ತು ಇತರ ಸ್ಟಾರ್ಟ್‌ಅಪ್‌ಗಳು ಸೇರಿದಂತೆ ಅನೇಕ ಖಾಸಗಿ ಕಂಪನಿಗಳ ನಗರ. ನಮ್ಮ ಪರಂಪರೆಯನ್ನು ದ್ವಿಗುಣಗೊಳಿಸೋಣ' ಎಂದು ಬರೆದುಕೊಂಡಿದ್ದಾರೆ.

ರಾಜ್ಯದಲ್ಲಿ ರೈತರ 1,198ನೇ ದಿನದ ಪ್ರತಿಭಟನೆಯ ಬಳಿಕ ಏರೋಸ್ಪೇಸ್‌ ಜಾಗಕ್ಕೆ ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವ ನಿರ್ಧಾರವನ್ನು ಸಿಎಂ ಸಿದ್ಧರಾಮಯ್ಯ ಮಾಡಿದ್ದಾರೆ. ವಿಧಾನಸೌಧದಲ್ಲಿ ಅಧಿಕಾರಿಗಳು ಮತ್ತು ರೈತ ಮುಖಂಡರೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಭೂಸ್ವಾಧೀನದಿಂದ ಸರ್ಕಾರ ಸಂಪೂರ್ಣವಾಗಿ ಹಿಂದೆ ಸರಿಯಲು ನಿರ್ಧರಿಸಿದೆ ಎಂದು ಹೇಳಿದರು.

ಇತ್ತೀಚಿನ ತಿಂಗಳುಗಳಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನಟ ಮತ್ತು ಕಾರ್ಯಕರ್ತ ಪ್ರಕಾಶ್ ರಾಜ್ ಈ ನಿರ್ಧಾರವನ್ನು ಸ್ವಾಗತಿಸಿದರು. "ಸಿದ್ದರಾಮಯ್ಯ ಅವರು ಹೇಳಿದಂತೆ ನಡೆದುಕೊಂಡಿದ್ದಾರೆ. ಅವರು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡಿದ್ದಲ್ಲದೆ, ಅದರಂತೆ ಕಾರ್ಯನಿರ್ವಹಿಸಿದ್ದಾರೆ" ಎಂದು ಅವರು ಹೇಳಿದರು.

ವಿರೋಧ ಪಕ್ಷದಲ್ಲಿದ್ದಾಗ ಸಿದ್ದರಾಮಯ್ಯ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದರು ಮತ್ತು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭೂಮಿಯನ್ನು ಹಿಂದಿರುಗಿಸುವುದಾಗಿ ಪ್ರತಿಜ್ಞೆ ಮಾಡಿದ್ದರು. ರೈತರ ಬೇಡಿಕೆಗಳನ್ನು ನಿರ್ಲಕ್ಷಿಸಿದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಪ್ರಗತಿಪರ ಗುಂಪುಗಳು ಈ ಆಂದೋಲನಕ್ಕೆ ವ್ಯಾಪಕ ಬೆಂಬಲ ನೀಡಿದ್ದವು.

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!