ಅಡೋಬ್‌ ನೂತನ ಸಿಇಒ ಆಗಿ ಭಾರತೀಯ ಚಕ್ರವರ್ತಿ ನೇಮಕ, ಐಐಟಿ ವಾರಣಾಸಿಯಿಂದ ಸಿಲಿಕಾನ್‌ ಸಿಲಿಕಾನ್ ವ್ಯಾಲಿಯವರೆಗಿನ ಪಯಣ

Published : Sep 04, 2026, 04:51 PM IST
Anil Chakravarthy

ಸಾರಾಂಶ

ವಾರಣಾಸಿಯ ಐಐಟಿಯಲ್ಲಿ ಓದಿದ ಭಾರತೀಯ ಮೂಲದ ಅನಿಲ್ ಚಕ್ರವರ್ತಿ, ಅಡೋಬ್ ಸಂಸ್ಥೆಯ ನೂತನ ಅಧ್ಯಕ್ಷ ಮತ್ತು ಸಿಇಒ ಆಗಿ ನೇಮಕಗೊಂಡಿದ್ದಾರೆ. ಶಂತನು ನಾರಾಯಣ್ ಅವರಿಂದ ಅಧಿಕಾರ ವಹಿಸಿಕೊಳ್ಳಲಿರುವ ಅವರು, AI ಯುಗದಲ್ಲಿ ಸಂಸ್ಥೆಯನ್ನು ಮುನ್ನಡೆಸುವ ದೊಡ್ಡ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಈ ಮೂಲಕ ಅಡೋಬ್ ನೇತೃತ್ವ ವಹಿಸಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ವಾರಣಾಸಿಯ ಐಐಟಿ ಕಾಂಪೌಂಡ್‌ನಲ್ಲಿ ಕಂಪ್ಯೂಟರ್ ಸೈನ್ಸ್ ಕಲಿಯುತ್ತಿದ್ದ ಯುವಕನೊಬ್ಬ, ಇಂದು ಜಗತ್ತಿನ ಅತಿದೊಡ್ಡ ತಂತ್ರಜ್ಞಾನ ದೈತ್ಯ ಸಂಸ್ಥೆಗಳಲ್ಲಿ ಒಂದಾದ 'ಅಡೋಬ್' (Adobe) ನ ಅತ್ಯುನ್ನತ ಹುದ್ದೆಗೇರಿದ್ದಾರೆ! ಹೌದು, ಸಿಲಿಕಾನ್ ವ್ಯಾಲಿಯ ಹೆಮ್ಮೆಯ ಸಾಫ್ಟ್‌ವೇರ್ ಸಂಸ್ಥೆ ಅಡೋಬ್, ತನ್ನ ಮುಂದಿನ ಅಧ್ಯಕ್ಷ ಮತ್ತು ಸಿಇಒ (President & CEO) ಆಗಿ ಭಾರತೀಯ ಮೂಲದ ಅನಿಲ್ ಚಕ್ರವರ್ತಿ (Anil Chakravarthy) ಅವರನ್ನು ನೇಮಕ ಮಾಡಿದೆ.

ಸುದೀರ್ಘ 18 ವರ್ಷಗಳ ಕಾಲ ಅಡೋಬ್ ಅನ್ನು ಯಶಸ್ವಿಯಾಗಿ ಮುನ್ನಡೆಸಿದ ಶಂತನು ನಾರಾಯಣ್ (Shantanu Narayen) ಅವರಿಂದ ಅನಿಲ್ ಚಕ್ರವರ್ತಿ ಈ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಾರೆ. ಈ ಮೂಲಕ ಅಡೋಬ್ ಸಂಸ್ಥೆಯ ನೇತೃತ್ವ ವಹಿಸುತ್ತಿರುವ ಎರಡನೇ ಭಾರತೀಯ ನಾಯಕ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಚಕ್ರವರ್ತಿ ಪಾತ್ರರಾಗಿದ್ದಾರೆ.

ಅವರು ಡಿಸೆಂಬರ್ 1, 2026 ರಂದು ಅಧಿಕೃತವಾಗಿ ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದು, ಅಡೋಬ್‌ನ ನಿರ್ದೇಶಕರ ಮಂಡಳಿಯನ್ನೂ (Board of Directors) ಸೇರಲಿದ್ದಾರೆ. ಇಷ್ಟು ದಿನ ಸಿಇಒ ಆಗಿದ್ದ ಶಂತನು ನಾರಾಯಣ್ ಅವರು ಇನ್ಮುಂದೆ 'ಕಾರ್ಯನಿರ್ವಾಹಕ ಅಧ್ಯಕ್ಷ'ರಾಗಿ ಮಾರ್ಗದರ್ಶನ ನೀಡಲಿದ್ದಾರೆ.

ಶೈಕ್ಷಣಿಕ ಪ್ರಯಾಣ: ಐಐಟಿ (BHU) ವಾರಣಾಸಿಯಿಂದ ಎಂಐಟಿವರೆಗೆ!

ಅನಿಲ್ ಚಕ್ರವರ್ತಿಯವರ ಶೈಕ್ಷಣಿಕ ಪ್ರಯಾಣ ಭಾರತದಲ್ಲೇ ಆರಂಭವಾಯಿತು. ವಾರಣಾಸಿಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ (ಪ್ರಸ್ತುತ IIT BHU ವಾರಣಾಸಿ) ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಪದವಿ ಪಡೆದರು. ಉನ್ನತ ಅಧ್ಯಯನಕ್ಕಾಗಿ ಅಮೆರಿಕಕ್ಕೆ ತೆರಳಿದ ಅವರು, ವಿಶ್ವಪ್ರಸಿದ್ಧ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ (MIT) ವಿಜ್ಞಾನದಲ್ಲಿ ಸ್ನಾತಕೋತ್ತರ (M.S.) ಮತ್ತು ಪಿಎಚ್‌ಡಿ (Ph.D.) ಪದವಿಗಳನ್ನು ಪೂರೈಸಿದರು. ಎಂಐಟಿಯಲ್ಲಿ ಪಡೆದ ಆಳವಾದ ತಾಂತ್ರಿಕ ಜ್ಞಾನ ಮತ್ತು ಸಂಶೋಧನಾ ಹಿನ್ನೆಲೆಯೇ ಮುಂದೆ ಅವರ ಸೈಬರ್ ಸೆಕ್ಯುರಿಟಿ, ಎಂಜಿನಿಯರಿಂಗ್ ಮತ್ತು ಬಿಸಿನೆಸ್ ಲೀಡರ್‌ಶಿಪ್ ವೃತ್ತಿಜೀವನಕ್ಕೆ ಗಟ್ಟಿ ಅಡಿಪಾಯವಾಯಿತು.

ಮೆಕಿನ್ಸೆಯಿಂದ ಇನ್ಫಾರ್ಮ್ಯಾಟಿಕಾ ಸಿಇಒವರೆಗೆ ಚಕ್ರವರ್ತಿ ಯಾನ

ಅನಿಲ್ ಚಕ್ರವರ್ತಿಯವರ ವೃತ್ತಿಜೀವನ ತಂತ್ರಜ್ಞಾನ ಕ್ಷೇತ್ರದ ನಾನಾ ಕ್ಷೇತ್ರಗಳಲ್ಲಿ ವ್ಯಾಪಿಸಿದೆ. ಪ್ರಸಿದ್ಧ ಸಲಹಾ ಸಂಸ್ಥೆ ಮೆಕಿನ್ಸೆಯಲ್ಲಿ (McKinsey & Company) ತಮ್ಮ ವೃತ್ತಿಜೀವನ ಆರಂಭಿಸಿದ ಅವರು, ಸಿಲಿಕಾನ್ ವ್ಯಾಲಿಯ ಇ-ಬಿಸಿನೆಸ್ ವಿಭಾಗದ ಸಹ-ನಾಯಕರಾದರು. ನಂತರ ವೆರಿಸೈನ್ (VeriSign) ಸಂಸ್ಥೆಯಲ್ಲಿ ಭದ್ರತಾ ಸೇವೆಗಳ ಉತ್ಪನ್ನ ನಿರ್ವಹಣಾ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. ಸೈಬರ್ ಭದ್ರತಾ ದೈತ್ಯ ಸಿಮ್ಯಾಂಟೆಕ್‌ನಲ್ಲಿ ಇನ್ಫರ್ಮೇಷನ್ ಸೆಕ್ಯುರಿಟಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿ ಬಡ್ತಿ ಪಡೆದರು. ಡೇಟಾ ಪ್ರೊಟೆಕ್ಷನ್, ಎನ್‌ಕ್ರಿಪ್ಶನ್, ಮೊಬೈಲ್ ಸೆಕ್ಯುರಿಟಿ ಹಾಗೂ ಭಾರತದಲ್ಲಿದ್ದ ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ಮುನ್ನಡೆಸಿದರು. 2013 ರಲ್ಲಿ ಎಂಟರ್‌ಪ್ರೈಸ್ ಕ್ಲೌಡ್ ಡೇಟಾ ಸಂಸ್ಥೆ 'ಇನ್ಫಾರ್ಮ್ಯಾಟಿಕಾ' ಸೇರಿದ ಅವರು, 2015 ರಿಂದ 2020 ರವರೆಗೆ ಸಿಇಒ ಆಗಿ ಕಾರ್ಯನಿರ್ವಹಿಸಿದರು. ಸಾಂಪ್ರದಾಯಿಕ ಸಾಫ್ಟ್‌ವೇರ್ ಮಾದರಿಯಿಂದ ಕ್ಲೌಡ್ ಹಾಗೂ ಸಬ್‌ಸ್ಕ್ರಿಪ್ಷನ್ ಆಧಾರಿತ ಸೇವೆಗಳಿಗೆ ಇನ್ಫಾರ್ಮ್ಯಾಟಿಕಾವನ್ನು ಯಶಸ್ವಿಯಾಗಿ ಪರಿವರ್ತಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ಅಡೋಬ್‌ನಲ್ಲಿ ಸಾಗಿದ ವಿಜಯಯಾತ್ರೆ

ಜನವರಿ 2020 ರಲ್ಲಿ ಅಡೋಬ್ ಸಂಸ್ಥೆಗೆ ಡಿಜಿಟಲ್ ಎಕ್ಸ್‌ಪೀರಿಯನ್ಸ್ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿ ಅನಿಲ್ ಚಕ್ರವರ್ತಿ ಸೇರ್ಪಡೆಯಾದರು. ಅವರ ಅಸಾಧಾರಣ ಕಾರ್ಯಕ್ಷಮತೆಯನ್ನು ಗುರುತಿಸಿ ಡಿಸೆಂಬರ್ 2021 ರಲ್ಲಿ ಅವರನ್ನು ಡಿಜಿಟಲ್ ಎಕ್ಸ್‌ಪೀರಿಯನ್ಸ್ ಹಾಗೂ ವರ್ಲ್ಡ್‌ವೈಡ್ ಫೀಲ್ಡ್ ಆಪರೇಷನ್ಸ್ ಅಧ್ಯಕ್ಷರನ್ನಾಗಿ ಮಾಡಲಾಯಿತು.

ಅಡೋಬ್‌ನ ಸೃಜನಶೀಲ ಪರಿಕರಗಳ ವಿಸ್ತರಣೆಯಲ್ಲಿ ಇವರ ಪಾತ್ರ ದೊಡ್ಡದಿದೆ. ಮಾರ್ಕೆಟಿಂಗ್ ಮತ್ತು ಕ್ರಿಯೇಟಿವ್ ಕೆಲಸದ ಹರಿವನ್ನು ನಿರ್ವಹಿಸುವ ವರ್ಕ್‌ಫ್ರಂಟ್ ಸ್ವಾಧೀನ ಮತ್ತು ಸಂಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಡಿಜಿಟಲ್ ಮಾರ್ಕೆಟಿಂಗ್ ಹಾಗೂ AI-ಚಾಲಿತ ಶೋಧನಾ ಪರಿಕರಗಳನ್ನು ಒಳಗೊಂಡ ಸೆಮ್ರಶ್ ಡೀಲ್‌ನಲ್ಲೂ ಭಾಗಿಯಾಗಿದ್ದರು.

AI ಯುಗದಲ್ಲಿ ಅಡೋಬ್ ಮುನ್ನಡೆಸುವ ಸವಾಲು!

ಕೃತಕ ಬುದ್ಧಿಮತ್ತೆ (AI) ಉದ್ಯಮವನ್ನು ಕ್ರಾಂತಿಕಾರಕವಾಗಿ ಬದಲಾಯಿಸುತ್ತಿರುವ ನಿರ್ಣಾಯಕ ಘಟ್ಟದಲ್ಲಿ ಅನಿಲ್ ಚಕ್ರವರ್ತಿ ಸಿಇಒ ಹುದ್ದೆ ಅಲಂಕರಿಸುತ್ತಿದ್ದಾರೆ. ಅಡೋಬ್‌ನ ಜನಪ್ರಿಯ AI ಉತ್ಪನ್ನಗಳಾದ Adobe CX Enterprise, GenStudio, ಮತ್ತು Brand Visibility ಗಳ ಅಭಿವೃದ್ಧಿಯಲ್ಲಿ ಇವರು ಈಗಾಗಲೇ ಪ್ರಮುಖ ಪಾತ್ರ ವಹಿಸಿದ್ದಾರೆ.

ಜನರೇಟಿವ್ AI ಬರುವಿಕೆಯಿಂದಾಗಿ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಹೊಸ ಸ್ಪರ್ಧಿಗಳು ಹುಟ್ಟಿಕೊಳ್ಳುತ್ತಿದ್ದಾರೆ. ಈ ಸವಾಲನ್ನು ಎದುರಿಸಿ, ಅಡೋಬ್‌ನ ಸೃಜನಶೀಲ ಸಾಫ್ಟ್‌ವೇರ್‌ಗಳಿಗೆ AI ತಂತ್ರಜ್ಞಾನದ ಬಲ ತುಂಬಿ ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಬೃಹತ್ ಜವಾಬ್ದಾರಿ ಈಗ ಚಕ್ರವರ್ತಿ ಅವರ ಮೇಲಿದೆ.

ಸಿಇಒ ಹಿನ್ನೆಲೆ ಮತ್ತು ಖಾಸಗಿ ಜೀವನ

ಅಡೋಬ್ ಸಿಇಒ ಆಗುವುದರ ಜೊತೆಗೆ, ಅವರು FIS, Ansys ಮತ್ತು USAA ಬ್ಯಾಂಕ್‌ನಂತಹ ಪ್ರಮುಖ ಹಣಕಾಸು ಮತ್ತು ತಂತ್ರಜ್ಞಾನ ಸಂಸ್ಥೆಗಳ ನಿರ್ದೇಶಕರ ಮಂಡಳಿಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಜಾಗತಿಕ ಮಟ್ಟದಲ್ಲಿ ದೊಡ್ಡ ಹೆಸರಾಗಿದ್ದರೂ, ಅನಿಲ್ ಚಕ್ರವರ್ತಿ ತಮ್ಮ ವೈಯಕ್ತಿಕ/ಕೌಟುಂಬಿಕ ಜೀವನವನ್ನು ಮಾಧ್ಯಮಗಳ ಬೆಳಕಿನಿಂದ ದೂರವಿಟ್ಟಿದ್ದಾರೆ.

ನಾಯಕನಿಗೆ ಹಿರಿಯ ನಾಯಕನ ಮೆಚ್ಚುಗೆ!

ಅಡೋಬ್‌ನ ನಿರ್ಗಮಿತ ಸಿಇಒ ಶಂತನು ನಾರಾಯಣ್ ಮಾತನಾಡಿ, ಅನಿಲ್ ಚಕ್ರವರ್ತಿ ಸಂಸ್ಥೆಯ ಮೌಲ್ಯಗಳು, ವ್ಯವಹಾರ ಮತ್ತು ತಂತ್ರಜ್ಞಾನದ ಬಗ್ಗೆ ಆಳವಾದ ಜ್ಞಾನ ಹೊಂದಿರುವ ಅನುಭವಿ ನಾಯಕ. AI ಯುಗದಲ್ಲಿ ಅಡೋಬ್ ಅನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಅವರು ಸೂಕ್ತ ವ್ಯಕ್ತಿ ಎಂದು ಶ್ಲಾಘಿಸಿದ್ದಾರೆ. ಐಐಟಿ ವಾರಣಾಸಿಯಿಂದ ಶುರುವಾದ ಒಬ್ಬ ಭಾರತೀಯ ಎಂಜಿನಿಯರ್‌ನ ಪ್ರಯಾಣ, ಇಂದು ಸಿಲಿಕಾನ್ ವ್ಯಾಲಿಯ ಅಗ್ರಮಾನ್ಯ ಸಿಇಒ ಹುದ್ದೆವರೆಗೆ ತಲುಪಿರುವುದು ಜಾಗತಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಕೀರ್ತಿಪತಾಕೆಯನ್ನು ಮತ್ತೊಮ್ಮೆ ಎತ್ತಿಹಿಡಿದಿದೆ!

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಸಂಸಾರ, ಉದ್ಯೋಗ ಸಾಕೆನಿಸಿತೇ? 47 ಕೋಟಿಯ ಐಸ್‌ಕ್ರೀಮ್ ಕಂಪನಿ ಮಾರಿ ಸನ್ಯಾಸತ್ವದ ಹಾದಿ ಹಿಡಿದ ಉದ್ಯಮಿ!
ರಾಜಕೀಯ ಗಡಿ ದಾಟಿ ಅದಾನಿ ಗ್ರೂಪ್ ವಿಸ್ತರಣೆ: ಬಿಜೆಪಿಯೇತರ ರಾಜ್ಯಗಳಲ್ಲೂ ₹5 ಲಕ್ಷ ಕೋಟಿಗೂ ಅಧಿಕ ಹೂಡಿಕೆ!