ಮುಕೇಶ್‌ ಅಂಬಾನಿ ತಮ್ಮ ಅನಿಲ್‌ ಅಂಬಾನಿಯ 2 ಐಷಾರಾಮಿ ವಿಮಾನ, ಜಮೀನು ಜಪ್ತಿ ಮಾಡಿದ ಜಾರಿ ನಿರ್ದೇಶನಾಲಯ

Published : Nov 03, 2026, 08:48 PM IST
Anil D Ambani

ಸಾರಾಂಶ

ಬ್ಯಾಂಕ್ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಗ್ರೂಪ್‌ನ ₹510.17 ಕೋಟಿ ಮೌಲ್ಯದ ಆಸ್ತಿಯನ್ನು ಇಡಿ ಜಪ್ತಿ ಮಾಡಿದೆ. ಇದರಲ್ಲಿ ಐಷಾರಾಮಿ ವಿಮಾನಗಳು ಮತ್ತು ಜಮೀನುಗಳು ಸೇರಿವೆ.

ಮುಂಬೈ (ನ.3): ರಿಲಯನ್ಸ್‌ ಇಂಡಸ್ಟ್ರೀಸ್‌ನ ಅಧ್ಯಕ್ಷ ಮುಕೇಶ್‌ ಅಂಬಾನಿ ಸಹೋದರ ಉದ್ಯಮಿ ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಅನಿಲ್ ಅಂಬಾನಿ ಗ್ರೂಪ್' (RAAG) ಸಂಸ್ಥೆಗೆ ಜಾರಿ ನಿರ್ದೇಶನಾಲಯ (Enforcement Directorate - ED) ಮಂಗಳವಾರ ಭಾರಿ ಆಘಾತ ನೀಡಿದೆ. ವಿವಿಧ ಬ್ಯಾಂಕ್ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ (Money Laundering) ಪ್ರಕರಣಗಳ ತನಿಖೆಯ ಭಾಗವಾಗಿ ಸಂಸ್ಥೆಗೆ ಸೇರಿದ 2 ಐಷಾರಾಮಿ ಖಾಸಗಿ ವಿಮಾನಗಳು, ಜಮೀನುಗಳು ಹಾಗೂ ಬ್ಯಾಂಕ್ ಡೆಪಾಸಿಟ್‌ಗಳು ಸೇರಿದಂತೆ ಬರೋಬ್ಬರಿ ₹510.17 ಕೋಟಿ ಮೌಲ್ಯದ ಆಸ್ತಿಪಾಸ್ತಿಗಳನ್ನು ಇಡಿ ಜಪ್ತಿ ಮಾಡಿದೆ.

ಅಕ್ರಮ ಹಣ ವರ್ಗಾವಣೆ ಕಾಯ್ದೆ (PMLA) ಅಡಿಯಲ್ಲಿ ಜಾರಿ ನಿರ್ದೇಶನಾಲಯವು ಈ ನಿರ್ಧಾರ ತೆಗೆದುಕೊಂಡಿದೆ. ರಿಲಯನ್ಸ್ ಅನಿಲ್ ಅಂಬಾನಿ ಗ್ರೂಪ್‌ನ ಹಣಕಾಸು ಹಾಗೂ ಸಂಪರ್ಕ ವಿಭಾಗಗಳಾದ ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ (RHFL), ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಲಿಮಿಟೆಡ್ (RCFL) ಮತ್ತು ರಿಲಯನ್ಸ್ ಕಮ್ಯುನಿಕೇಷನ್ಸ್ ಲಿಮಿಟೆಡ್ (RCOM) ಸಂಸ್ಥೆಗಳು ಎಸಗಿವೆ ಎನ್ನಲಾದ ಭಾರಿ ಬ್ಯಾಂಕ್ ವಂಚನೆ ಪ್ರಕರಣಗಳ ತನಿಖೆಯ ಭಾಗವಾಗಿ ಈ ಬೃಹತ್ ಪ್ರಕ್ರಿಯೆ ನಡೆದಿದೆ.

ಎರಡು ಪ್ರತ್ಯೇಕ ವಂಚನೆ ಪ್ರಕರಣಗಳು ಹಾಗೂ ಜಪ್ತಿಯಾದ ಆಸ್ತಿಗಳ ವಿವರ

ಇಡಿ ನೀಡಿರುವ ಅಧಿಕೃತ ಹೇಳಿಕೆಯ ಪ್ರಕಾರ, ಈ ಆಸ್ತಿ ಜಪ್ತಿಯು ಎರಡು ಪ್ರಮುಖ ಪ್ರಕರಣಗಳಿಗೆ ಸಂಬಂಧಿಸಿದೆ: ರಿಲಯನ್ಸ್ ಕಮ್ಯುನಿಕೇಷನ್ಸ್ (RCOM) ಬ್ಯಾಂಕ್ ವಂಚನೆ ಪ್ರಕರಣದಲ್ಲಿ ₹247.12 ಕೋಟಿ ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ. ಜಪ್ತಿಯಾದ ಆಸ್ತಿಗಳಲ್ಲಿ ಎರಡು ಚಾರ್ಟರ್ಡ್ ವಿಮಾನಗಳು (ಡಸಾಲ್ಟ್ ಫಾಲ್ಕನ್ 2000 - Dassault Falcon 2000 ಹಾಗೂ ಎಂಬ್ರೇಯರ್ - Embraer), ಮಹಾರಾಷ್ಟ್ರದಲ್ಲಿರುವ 6 ಜಮೀನುಗಳು (Land parcels) ಮತ್ತು ಒಂದು ಬೃಹತ್ ಆಫೀಸ್ ಆಸ್ತಿಯು ಸೇರಿದೆ.

ಆರ್‌ಎಚ್‌ಎಫ್‌ಎಲ್ / ಆರ್‌ಸಿಎಫ್‌ಎಲ್ (RHFL/RCFL) ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ₹263.05 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇದರಲ್ಲಿ ತಮಿಳುನಾಡಿನಲ್ಲಿರುವ ಎರಡು ವಿಂಡ್‌ಮಿಲ್‌, ವಿವಿಧ ಬ್ಯಾಂಕ್ ಬ್ಯಾಲೆನ್ಸ್‌ಗಳು, ಫಿಕ್ಸ್ಡ್ ಡೆಪಾಸಿಟ್‌ಗಳು, ಹೂಡಿಕೆಗಳು ಹಾಗೂ ಬರಬೇಕಾದ ಹಣ (Receivables) ಸೇರಿವೆ.

ಶೇ. 100 ರಷ್ಟು ಸಾರ್ವಜನಿಕ ಹಣ ದುರ್ಬಳಕೆ – ಇಡಿ ಗಂಭೀರ ಆರೋಪ

ತನಿಖಾ ಸಂಸ್ಥೆಯು ಅನಿಲ್ ಅಂಬಾನಿ ಸಮೂಹ ಸಂಸ್ಥೆಗಳ ವಿರುದ್ಧ ಗಂಭೀರ ಸ್ವರೂಪದ ಆರೋಪಗಳನ್ನು ಹೊರಿಸಿದೆ. ಬ್ಯಾಂಕುಗಳು ಹಾಗೂ ಪ್ರಮುಖ ಹಣಕಾಸು ಸಂಸ್ಥೆಗಳಿಂದ ಪಡೆದ ಸಾರ್ವಜನಿಕರ ಭಾರಿ ಮೊತ್ತದ ಹಣವನ್ನು ಗ್ರೂಪ್ ಅಕ್ರಮವಾಗಿ ದುರ್ಬಳಕೆ ಮಾಡಿಕೊಂಡಿದೆ. ಕಾರ್ಪೊರೇಟ್ ಸಂಸ್ಥೆಯ ಆಸ್ತಿಗಳನ್ನು ಪ್ರವರ್ತಕರ (Promoters) ಮತ್ತು ಅವರ ಕುಟುಂಬದ ವೈಯಕ್ತಿಕ ಬಳಕೆಗೆ ಅಕ್ರಮವಾಗಿ ಕಾಯ್ದಿರಿಸಲು ದಿವಾಳಿತನ ಮತ್ತು ಪುನಶ್ಚೇತನ ಕಾಯ್ದೆಯನ್ನು (IBC) ದುರುಪಯೋಗಪಡಿಸಿಕೊಳ್ಳಲಾಗಿದೆ.

ಭಾರತದಿಂದ ಸಾರ್ವಜನಿಕರ ಹಣವನ್ನು ಅಕ್ರಮವಾಗಿ ಹೊರದೇಶಗಳ ತೆರಿಗೆ ರಹಿತ (Offshore Tax Havens) ದೇಶಗಳಿಗೆ ವರ್ಗಾಯಿಸಲಾಗಿದೆ. ಈ ಹಣದ ಸಿಂಹಪಾಲು ಮೊತ್ತವನ್ನು ಪ್ರವರ್ತಕರು ಹಾಗೂ ಅವರ ಕುಟುಂಬಸ್ಥರ ವೈಯಕ್ತಿಕ ಅನುಕೂಲಕ್ಕಾಗಿ ಬಳಸಿಕೊಳ್ಳಲಾಗಿದೆ ಎಂದು ಇಡಿ ಆರೋಪಿಸಿದೆ.

ಜಪ್ತಿಯಾದ ಒಟ್ಟು ಆಸ್ತಿ ₹23,100 ಕೋಟಿಗೆ ಏರಿಕೆ

ಪ್ರಸ್ತುತ ಈ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಈಗಾಗಲೇ 10 ಮಂದಿ ಆರೋಪಿಗಳನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ 6 ಪ್ರತ್ಯೇಕ ಚಾರ್ಜ್‌ಶೀಟ್‌ಗಳನ್ನು (Chargesheets) ಸಲ್ಲಿಕೆ ಮಾಡಿದೆ. ಇದಲ್ಲದೆ, ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ (FEMA) ಅಡಿಯಲ್ಲೂ ಪ್ರತ್ಯೇಕ ತನಿಖೆ ಕಾಯ್ದಿರಿಸಲಾಗಿದೆ. ಮಂಗಳವಾರ ಹೊರಡಿಸಲಾದ ಈ ₹510.17 ಕೋಟಿ ಮೊತ್ತದ ನೂತನ ಜಪ್ತಿ ಆದೇಶದೊಂದಿಗೆ, ರಿಲಯನ್ಸ್ ಅನಿಲ್ ಅಂಬಾನಿ ಗ್ರೂಪ್ ವಿರುದ್ಧದ ವಿವಿಧ ಪ್ರಕರಣಗಳಲ್ಲಿ ಇದುವರೆಗೆ ಜಾರಿ ನಿರ್ದೇಶನಾಲಯವು ಜಪ್ತಿ ಮತ್ತು ವಶಪಡಿಸಿಕೊಂಡಿರುವ ಒಟ್ಟು ಆಸ್ತಿಯ ಮೌಲ್ಯವು ಬರೋಬ್ಬರಿ ₹23,100 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಡೇಟಾ ಸೆಂಟರ್‌ ಸ್ಟಾರ್ಟ್‌ ಮಾಡ್ಬೇಕು ಅಂತಿದೀನಿ, 12,500 ಕೋಟಿ ಸಾಲ ಕೊಡಿ ಎಂದು ಬ್ಯಾಂಕ್‌ ಮುಂದೆ ನಿಂತ ಗೌತಮ್‌ ಅದಾನಿ!
ದೊಡ್ಡಬಳ್ಳಾಪುರದಲ್ಲಿ ಆಸ್ಟ್ರೋಬೇಸ್‌ನಿಂದ 500 ಕೋಟಿ, ಬಾಯರ್‌ ಕಂಪನಿಯಿಂದ ಬೆಂಗಳೂರಲ್ಲಿ 200 ಕೋಟಿ ಹೂಡಿಕೆ!