ಭೂಮಿ ಭಾರತದ್ದು, ಕಟ್ಟಡ ಜಪಾನ್‌ದ್ದು, ಕಂಪನಿ ಅಮೆರಿಕದ್ದು; 1,000 ಕೋಟಿ ಬಾಡಿಗೆ, ಎಲ್ಲಿದೆ ಈ ದುಬಾರಿ ಕಚೇರಿ?

Published : Jun 26, 2025, 08:25 AM IST
IT Company

ಸಾರಾಂಶ

ರಾಜಧಾನಿಯಲ್ಲಿ ಅಮೆರಿಕ ಕಂಪನಿ 1,16,210 ಚದರ ಅಡಿ ಜಾಗವನ್ನು 10 ವರ್ಷಗಳ ಕಾಲ ಬಾಡಿಗೆಗೆ ಪಡೆದಿದ್ದು, ಒಪ್ಪಂದದ ಮೌಲ್ಯ ಸುಮಾರು 1,000 ಕೋಟಿ ರೂ. ಒಟ್ಟು 25 ವರ್ಷಗಳ ಒಪ್ಪಂದ ಮುಂದುವರಿದರೆ ಬಾಡಿಗೆ ಮೊತ್ತ 2,500 ಕೋಟಿ ರೂ. ತಲುಪಲಿದೆ.

ಮುಂಬೈ: ವಾಣಿಜ್ಯ ನಗರಿ ಎಂದೇ ಹೆಸರುವಾಸಿಯಾಗಿರುವ ಮುಂಬೈನಲ್ಲಿ ತಮ್ಮ ಪ್ರಧಾನ ಕಚೇರಿಯನ್ನು ತೆರೆಯಲು ಖಾಸಗಿ ಕಂಪನಿಗಳು ಮುಂದಾಗುತ್ತಿವೆ. ಈ ಹಿನ್ನೆಲೆ ಕಂಪನಿಗಳು ಮುಂಬೈನ ಪ್ರತಿಷ್ಠಿತ ಬಡವಾಣೆಯಲ್ಲಿರುವ ಕಟ್ಟಡಗಳನ್ನು ದೀರ್ಘಾವಧಿಗೆ ಬಾಡಿಗೆಗೆ ಪಡೆದುಕೊಳ್ಳುತ್ತಿವೆ. ಇದೀಗ ಹಣಕಾಸು ಕಂಪನಿಯಾಗಿರುವ ಅಮೆರಿಕ ಮೂಲದ ಜೆಪಿ ಮಾರ್ಗನ್ ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ (BKC) ಅತಿ ವಿಸ್ತಾರವಾದ ಜಾಗವನ್ನು ಬಾಡಿಗೆಗೆ ಪಡೆದುಕೊಂಡಿದೆ. ಜೆಪಿ ಮಾರ್ಗನ್ ಬಾಡಿಗೆಗೆ ಪಡೆದಿರುವ ಸ್ಥಳ ಜಪಾನಿನ ಕಂಪನಿ ಸುಮಿಟೋಮೊ (Sumitomo) ನಿರ್ಮಿಸುತ್ತಿರುವ ಕಚೇರಿ ಗೋಪುರದಲ್ಲಿದೆ.

ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಜೆಪಿ ಮಾರ್ಗನ್ 1,16,210 ಚದರ ಅಡಿಗಳಿಗಿಂತ ಹೆಚ್ಚು ಜಾಗವನ್ನು 10 ವರ್ಷಗಳ ಕಾಲ ಬಾಡಿಗೆಗೆ ಪಡೆದುಕೊಂಡಿದೆ ಎಂದು ವರದಿಯಾಗಿದೆ. ಈ ಸ್ಥಳವನ್ನು ಜೆಪಿ ಮಾರ್ಗನ್‌ ತನ್ನ ಕಚೇರಿಯಾಗಿ ಬದಲಿಸಿಕೊಳ್ಳಲಿದೆ. ಜಪಾನಿನ ಕಂಪನಿ ಸುಮಿಟೋಮೊಗೆ ಜೆಪಿ ಮಾರ್ಗನ್ ಬಾಡಿಗೆ ಪಾವತಿಸಲಾಗಿದೆ. ಮೊದಲ ಹಂತದಲ್ಲಿ 10 ವರ್ಷಗಳವರೆಗೆ ಈ ಬಾಡಿಗೆ ಒಪ್ಪಂದ ಇರಲಿದೆ. ಭವಿಷ್ಯದಲ್ಲಿ ಜೆಪಿ ಮಾರ್ಗನ್ ಬಯಸಿದ್ರೆ ಈ ಬಾಡಿಗೆ ಒಪ್ಪಂದವನ್ನು 5 ವರ್ಷಗಳಿಗೊಮ್ಮೆ ಅಂತ ಮೂರು ಬಾರಿ ವಿಸ್ತರಿಸಿಕೊಳ್ಳಬಹುದು. ಒಟ್ಟಾರೆಯಾಗಿ ಈ ಬಾಡಿಗೆ ಒಪ್ಪಂದ 25 ವರ್ಷಗಳವರೆಗೆ ಇರಲಿದೆ.

ದೇಶದ ದುಬಾರಿ ಆಸ್ತಿ ಒಪ್ಪಂದ

ಮೊದಲ 10 ವರ್ಷಗಳಿಗೆ ಜೆಪಿ ಮಾರ್ಗನ್ 1,000 ಕೋಟಿ ರೂಪಾಯಿ ಬಾಡಿಗೆಯನ್ನು ಪಾವತಿಸಲಿದೆ ಎಂದು ಅಂದಾಜಿಸಲಾಗುತ್ತಿದೆ. ಒಟ್ಟು 25 ವರ್ಷಗಳ ಒಪ್ಪಂದ ಮುಂದುವರಿದ್ರೆ ಬಾಡಿಗೆ ಮೊತ್ತ 2,500 ಕೋಟಿ ರೂಪಾಯಿಗಳಾಗಲಿದೆ. ಇದು ದೇಶದ ಅತ್ಯಂತ ದುಬಾರಿ ಆಸ್ತಿ ಒಪ್ಪಂದ ಎಂದು ಪರಿಗಣಿಸಲಾಗುತ್ತಿದೆ.

ಜೆಪಿ ಮಾರ್ಗನ್ ಬಾಡಿಗೆಗೆ ಪಡೆದುಕೊಂಡಿರುವ ಸ್ಥಳ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನ ಬಿ ಬ್ಲಾಕ್‌ನ 11 ಮತ್ತು 12 ನೇ ಮಹಡಿಯಲ್ಲಿದೆ. ಪ್ರಾಪ್‌ಸ್ಟ್ಯಾಕ್ ಕಂಪನಿಯ ದಾಖಲೆಗಳ ಪ್ರಕಾರ, ಈ ಭೂಮಿಯನ್ನು ಸುಮಿಟೊಮೊ ರಿಯಾಲಿಟಿ ಮತ್ತು ಡೆವಲಪ್‌ಮೆಂಟ್ ಕಂಪನಿಯ ಭಾರತೀಯ ಶಾಖೆಯಾದ ಗೋಯಿಸು ರಿಯಾಲಿಟಿಯಿಂದ ಪಡೆಯಲಾಗಿದೆ. ಜೆಪಿ ಮಾರ್ಗನ್ ಈ ಸ್ಥಳವನ್ನು ತನ್ನ ಪ್ರಧಾನ ಕಚೇರಿಯನ್ನಾಗಿ ಮಾಡಿಕೊಳ್ಳಲಿದೆ ಎಂದು ಹೇಳಲಾಗುತ್ತಿದ್ದು, ಭಾರತದಲ್ಲಿನ ತನ್ನ ಎಲ್ಲಾ ಪ್ರಮುಖ ಕಾರ್ಯಾಚರಣೆಯನ್ನು ಇಲ್ಲಿಂದಲೇ ಆರಂಭಿಸುವ ಸಾಧ್ಯತೆಗಳಿವೆ.

3 ವರ್ಷಗಳಿಗೊಮ್ಮೆ ಶೇ.15ರಷ್ಟು ಬಾಡಿಗೆ ಹೆಚ್ಚಳ

ಈ ಒಪ್ಪಂದದ ಪ್ರಕಾರ, ಜೆಪಿ ಮಾರ್ಗನ್ ಪ್ರತಿ ತಿಂಗಳು 6.91 ಕೋಟಿ ರೂ. ಬಾಡಿಗೆಯನ್ನು ಪಾವತಿಸಲಿದೆ. ಈ ಬಾಡಿಗೆ ಪ್ರತಿ ಚದರ ಅಡಿಗೆ 595 ರೂ. ದರದಲ್ಲಿದೆ. ಬಾಡಿಗೆ ಪ್ರತಿ ಮೂರು ವರ್ಷಗಳಿಗೊಮ್ಮೆ 15% ರಷ್ಟು ಹೆಚ್ಚಾಗುತ್ತದೆ. ಜೆಪಿ ಮಾರ್ಗನ್ ಭದ್ರತಾ ಠೇವಣಿಯಾಗಿ 62.23 ಕೋಟಿ ರೂ.ಗಳನ್ನು ಜಮೆ ಮಾಡಿದೆ. ಭವಿಷ್ಯದಲ್ಲಿ ಕಂಪನಿ ಯಾವುದೇ ನಷ್ಟ ಅನುಭವಿಸಿದ್ರೆ ಈ ಹಣವನ್ನು ಬಳಕೆ ಮಾಡಲಾಗುತ್ತದೆ. ಜೆಪಿ ಮಾರ್ಗನ್ ಮತ್ತು ಸುಮಿಟೊಮೊ ನಡುವಿನ ಈ ಒಪ್ಪಂದ ಜೂನ್ 12ರಂದು ನಡೆದಿದೆ.

ಹೇಗಿದೆ ಈ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ ಕಟ್ಟಡ!

ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ ನಲ್ಲಿ ಸುಮಿಟೋಮೋ ಕಂಪನಿ ಒಟ್ಟು 3 ಎಕರೆ ಜಮೀನಿನಲ್ಲಿ ಕಟ್ಟಡಗಳನ್ನು ನಿರ್ಮಿಸುತ್ತಿದೆ. ಈ ಕಟ್ಟಡ ಒಟ್ಟು 6 ನೆಲಮಾಳಿಗೆ, ಗ್ರೌಂಡ್ ಫ್ಲೋರ್, 12 ಮಹಡಿಗಳನ್ನು ಹೊಂದಿರುತ್ತದೆ. ಮುಂಬೈ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (MMRDA) ಈ ಭೂಮಿಯನ್ನು ಜಪಾನಿನ ಸುಮಿಟೋಮೊಗೆ 80 ವರ್ಷಕ್ಕೆ 2,067 ಕೋಟಿ ರೂ.ಗಳಿಗೆ ಗುತ್ತಿಗೆ ನೀಡಿದೆ. 2019ರಲ್ಲಿ ಈ ಬಿಡ್ ನಡೆದಿದ್ದು, ಒಪ್ಪಂದದ ಪ್ರಕ್ರಿಯೆ ಪೂರ್ಣಗೊಳ್ಳಲು ನಾಲ್ಕು ವರ್ಷ ಸಮಯ ತೆಗೆದುಕೊಂಡಿದೆ.

ಭಾರತದತ್ತ ಅಮೆರಿಕ ಕಂಪನಿಗಳು

ವಿಶೇಷವಾಗಿ ಅಮೆರಿಕನ್ ಕಂಪನಿಗಳು ಭಾರತದತ್ತ ಮುಖ ಮಾಡುತ್ತಿದ್ದು, ತಮ್ಮ ವ್ಯಾಪಾರವನ್ನು ವಿಸ್ತರಣೆ ಮಾಡಿಕೊಳ್ಳುತ್ತಿವೆ. ಭಾರತದಲ್ಲಿ ವ್ಯಾಪಾರ ಆರಂಭಿಸಿ ತಮ್ಮ ಕಚೇರಿಗಳನ್ನು ತೆರೆಯಲು ಮುಂದಾಗುತ್ತಿವೆ. ವಿದೇಶಿ ಕಂಪನಿಗಳ ಆಗಮನದಿಂದ ಭಾರತದ ರಿಯಲ್ ಎಸ್ಟೇಟ್ ಉದ್ಯಮ ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಕಾಣುತ್ತಿದೆ. ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್ ಅವರ ಕಂಪನಿಯಾದ ಟೆಸ್ಲಾ ಕೂಡ ಮುಂಬೈನಲ್ಲಿ ತನ್ನ ಕಚೇರಿಯನ್ನು ಪ್ರಾರಂಭಿಸಲಿದೆ. ಟೆಸ್ಲಾ ಕಚೇರಿಯನ್ನು ನಿರ್ಮಿಸುವ ಕೆಲಸವನ್ನು ಸಹ ಪ್ರಾರಂಭಿಸಿದೆ. ದೆಹಲಿ, ಗುರುಗ್ರಾಮ, ನೋಯ್ಡಾ, ಮುಂಬೈ, ಬೆಂಗಳೂರು, ಚೆನ್ನೈ ಅಂತಹ ಮಹಾನಗರಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮ ವೇಗವಾಗಿ ಬೆಳವಣಿಗೆಯಾಗುತ್ತಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಬೆಳ್ಳಿ ಒಂದೇ ದಿನ ₹14700 ಏರಿಕೆ : ಕೇಜಿಗೆ ₹2.57 ಲಕ್ಷ
ಕಂಪನಿ ಮಾರಾಟವಾದರೆ ನಿಯತ್ತಾಗಿ ದುಡಿದ ಉದ್ಯೋಗಿಗಳ ಪಾಡೇನು? ಮಾದರಿಯಾದ ಬಿಗ್ ಬಾಸ್