
ಕನ್ನಡಪ್ರಭ ವಾರ್ತೆ
ಬೆಂಗಳೂರು: ಏರೋ ಇಂಡಿಯಾ 14ನೇ ಆವೃತ್ತಿ ಅಮೆರಿಕ ಹಾಗೂ ರಷ್ಯಾದ ಶಕ್ತಿ ಪ್ರದರ್ಶನದ ಅಖಾಡವಾಗಿದೆ. ಐದನೇ ತಲೆಮಾರಿನ ಟ್ಯಾಂಕರ್, ಯುದ್ಧ ವಿಮಾನ, ಶಸ್ತ್ರಾಸ್ತ್ರಗಳನ್ನು ಈ ಎರಡು ದೇಶಗಳು ಪ್ರದರ್ಶಿಸುತ್ತಿವೆ. ಏರೋ ಇಂಡಿಯಾದಲ್ಲಿ ಅಮೆರಿಕ, ರಷ್ಯಾ, ಫ್ರಾನ್ಸ್ ಸೇರಿ ಸೇರಿ 90ಕ್ಕೂ ಹೆಚ್ಚು ದೇಶಗಳ ಒಟ್ಟಾರೆ 809 ರಕ್ಷಣಾ ಕಂಪನಿಗಳು ಪಾಲ್ಗೊಂಡಿವೆ. ಆದರೆ ಅವುಗಳಲ್ಲಿ ಪ್ರಮುಖವಾಗಿ ರಷ್ಯಾದ ರೋಸೋಬೋರೊನ್ ಎಕ್ಸ್‌ಪೋರ್ಟ್ ಹಾಗೂ ಅಮೆರಿಕದ ಯುನೈಟೆಡ್ ಸ್ಟೇಟ್ಸ್ ಏರ್‌ಫೋರ್ಸ್ ಸೇರಿ ಇತರೆ ಕಂಪನಿಗಳು ಹೆಚ್ಚಿನ ಗಮನ ಸೆಳೆಯುತ್ತಿವೆ. ಆತ್ಮನಿರ್ಭರ ಭಾರತ ಘೋಷದಡಿ ಮುನ್ನುಗ್ಗುತ್ತಿರುವ ಭಾರತದ ಪಾಲುದಾರಿಕೆಗೆ ಮನವೊಲಿಸಲು ಎರಡೂ ದೇಶಗಳ ರಕ್ಷಣಾ ಕೈಗಾರಿಕಾ ನಿಯೋಗದ ಪ್ರತಿನಿಧಿಗಳು ಜಿದ್ದಿಗೆ ಬಿದ್ದಿವೆ ಎಂದು ರಕ್ಷಣಾ ಕ್ಷೇತ್ರದ ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ.
ಅಮೆರಿಕ ಶಕ್ತಿ ಪ್ರದರ್ಶನ
ಈ ಬಾರಿ ಏರೋ ಇಂಡಿಯಾದಲ್ಲಿ ಅತೀದೊಡ್ಡ ನಿಯೋಗದೊಂದಿಗೆ ಅಮೆರಿಕ ಪಾಲ್ಗೊಂಡಿದೆ. ಮೂರು ದಿನದ ಪ್ರದರ್ಶನದಲ್ಲಿ ಅಮೆರಿಕದ ಎಫ್-35 (American F-35), ಎಫ್-16 ಅಬ್ಬರಿಸಿವೆ. ಪ್ರದರ್ಶನ ಮಳಿಗೆಗಳಲ್ಲಿ ಎಫ್‌ಎ 18ಇ, ಎಫ್‌ಎ 18ಎಫ್ ಸೂಪರ್ ಹಾರ್ನೆಟ್ ಮಲ್ಟಿರೋಲ್ ಫೈಟರ್ಸ್ (FA 18F Super Hornet Multirole Fighters) ಅತ್ಯಾಧುನಿಕ ಯುದ್ಧ ವಿಮಾನಗಳ ಮಾದರಿಯನ್ನು ಪ್ರದರ್ಶಿಸಿ ಗಮನ ಸೆಳೆಯುತ್ತಿದೆ. ಜತೆಗೆ 'ಏರೋ ಮೆಟಲ್ಸ್ ಅಲಯನ್ಸ್', ’ಆಸ್ಫೋನಾಟಿಕ್ಸ್… ಕಾರ್ಪೋರೇಷನ್ ಆಫ್ ಅಮೆರಿಕ’, ಬೋಯಿಂಗ್ ಜಿಇ ಏರೋಸ್ಪೇಸ್(Boeing GE Aerospace), ಜನರಲ್ ಅಟಾಮಿಕ್ ಏರೋನಾಟಿಕಲ್ ಸಿಸ್ಟಮ್ಸ್ ಇಂಕ್ ಸೇರಿ ಹಲವು ಕಂಪನಿಗಳು ಪಾಲ್ಗೊಂಡಿವೆ.
ಬೆಂಗಳೂರಿನಲ್ಲಿ ನಡೀತಿರೋ ಏರೋ ಇಂಡಿಯಾದ 2ನೇ ದಿನದ ವಿಹಂಗಮ ನೋಟ ಹೀಗಿದೆ..
ರಷ್ಯಾ ಬತ್ತಳಿಕೆ ಹೇಗಿದೆ?
ರಷ್ಯಾ ಕೂಡ ತನ್ನ ರಾಷ್ಟ್ರೀಯ ಶಸ್ತ್ರಾಸ್ತ್ರ ಕಂಪನಿ ರೋಸೋಬೋರೊ ಎಕ್ಸ್‌ಪೋರ್ಟ್‌ನಿಂದ (Roseboro Export) 200ಕ್ಕೂ ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸುತ್ತಿದೆ. ಭಾರತ-ರಷ್ಯಾದ ಸಹಭಾಗಿತ್ವದ ಸುಖೋಯ್ ಎಸ್‌ಯು 30ಎಂಕೆಐ ಆಗಸದಲ್ಲಿ ಶಕ್ತಿ ಪ್ರದರ್ಶಿಸುತ್ತಿದೆ. ರಷ್ಯಾದ ಮಳಿಗೆಯಲ್ಲಿ ಚೆಕ್‌ಮೇಟ್ ಲೈಟ್‌ವೇಟ್ ಟ್ಯಾಕ್ಟಿಕಲ್ ಏರ್‌ಕ್ರಾಫ್ಟ್ ಟ್ಯಾಂಕರ್-2 78ಎಂಕೆ 90ಕೆ, ಸುಖೋಯ್ 35, ಸುಖೋಯ್ 30 ಎಸ್‌ಎಂಎ ಎಸ್-400 ಮಿಸೈಲ್, ಮಿಗ್ 35ಡಿ, ಕೆಎ 226ಟಿ ಲೈಟ್ ಮಲ್ಟಿಪರ್ಪಸ್ ಹೆಲಿಕಾಪ್ಟರ್ ಸೇರಿ ಎಸ್ 350 ಮಿಸೈಲ್, ಕಲಾಶ್ನಿಕೋವ್ ಎಕೆ-203 ಸುಧಾರಿತ ಮಾದರಿ ಪ್ರದರ್ಶಿಸುತ್ತಿದೆ.
ಉಕ್ರೇನ್ ಯುದ್ಧದಲ್ಲಿ ಬಳಸಿದ್ದ ಅತ್ಯಾಧುನಿಕ ಒರ್ಲಾನ್-30 ಮಾದರಿಯನ್ನು ಇದೇ ಮೊದಲ ಬಾರಿ ರಷ್ಯಾದ ಹೊರಗೆ ಪ್ರದರ್ಶಿಸುವ ನಿರೀಕ್ಷೆ ಇತ್ತು. ಆದರೆ, ಪ್ರದರ್ಶನ ಮಳಿಗೆಗಳಲ್ಲಿ ಅದು ಕಂಡುಬರುತ್ತಿಲ್ಲ. ಬದಲಾಗಿ ಒರ್ಲಾನ್-10 ಡ್ರೋನ್ ಇದೆ. ಇನ್ನು, ಆ್ಯಂಟಿ ಏರ್‌ಕ್ರಾಫ್ಟ್ ಮಿಸೈಲ್ ಸಿಸ್ಟಮ್, ಐಎಲ್ 78ಎಂಕೆ 90ಎ ಟ್ಯಾಂಕರ್, ಕೆಎ 226ಟಿ ಹೆಲಿಕಾಪ್ಟರ್‌ಗಳ ಮಾದರಿ ಪ್ರದರ್ಶಿಸುತ್ತಿದೆ.
ಇದರ ನಡುವೆ ಫಾನ್ಸ್‌ನಿಂದ ಪ್ರಮುಖವಾಗಿ ಮರಿಟೈಮ್ ರಫೇಲ್ ಯುದ್ಧವಿಮಾನ ಪ್ರದರ್ಶನಗೊಳ್ಳುತ್ತಿದೆ. ಸ್ವಿಡನ್ ಸ್ವಿಡಿಷ್ ಮಲ್ಟಿರೋಲ್ ಯುದ್ಧ ವಿಮಾನ ಗ್ರಿಪೆನ್- ಇ, ಸಾಬ್ ಇಂಡಿಯಾ ಟೆಕ್ನಾಲಜಿ ನಿರ್ಮಿಸಿರುವ ಯುದ್ಧೋಪಕರಣಗಳು ಗಮನ ಸೆಳೆಯುತ್ತಿವೆ.
ವಿಮಾನಯಾನದಲ್ಲಿ ಭಾರತ ಶೀಘ್ರ 3ನೇ ದೊಡ್ಡ ಮಾರುಕಟ್ಟೆ: ಮೋದಿ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.