ಭಾರತೀಯ ರೈಲ್ವೆ ಜೊತೆ ಕೈಜೋಡಿಸಿದ ಅಮೆಜಾನ್ ; 24 ಗಂಟೆಯಲ್ಲಿ 350 ರಿಂದ 400 ಟನ್ ಸರಕು

Published : Aug 20, 2026, 11:08 AM IST
Indian Railways Amazon

ಸಾರಾಂಶ

ಮುಂಬರುವ ಹಬ್ಬಗಳ ಹಿನ್ನೆಲೆಯಲ್ಲಿ, ಅಮೆಜಾನ್ ಇಂಡಿಯಾವು ಭಾರತೀಯ ರೈಲ್ವೆಯೊಂದಿಗೆ ತನ್ನ ಪಾಲುದಾರಿಕೆಯನ್ನು ಬಲಪಡಿಸಿದೆ. ವೆಸ್ಟರ್ನ್ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ (DFC) ಬಳಸಿಕೊಂಡು, ಕಂಪನಿಯು ದೆಹಲಿ, ಮುಂಬೈ, ಮತ್ತು ಇತರ ಪ್ರಮುಖ ನಗರಗಳಿಗೆ ತ್ವರಿತ ಹಾಗೂ ಪರಿಸರಸ್ನೇಹಿ ಡೆಲಿವರಿ ಒದಗಿಸಲು ಸಜ್ಜಾಗಿದೆ.

ಬೆಂಗಳೂರು: ಮುಂಬರುವ ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಗ್ರಾಹಕರಿಗೆ ತ್ವರಿತ ಹಾಗೂ ಸುಸ್ಥಿರ ಸರಕು ಡೆಲಿವರಿ ಒದಗಿಸಲು ಇ-ಕಾಮರ್ಸ್ ದೈತ್ಯ ‘ಅಮೆಜಾನ್ ಇಂಡಿಯಾ’ ಭಾರತೀಯ ರೈಲ್ವೆಯೊಂದಿಗೆ ತನ್ನ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಿಕೊಂಡಿದೆ. ‘ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್’ (ಡಿಎಫ್‌ಸಿಸಿಐಎಲ್‌ Dedicated Freight Corridor Corporation of India Limited) ಸಹಯೋಗದೊಂದಿಗೆ ಪಶ್ಚಿಮ ಸರಕು ಸಾಗಣೆ ಕಾರಿಡಾರ್‌ನಲ್ಲಿ (ವೆಸ್ಟರ್ನ್ ಡಿಎಫ್‌ಸಿ) ತನ್ನ ವಾಣಿಜ್ಯ ಸರಕು ಕಾರ್ಯಾಚರಣೆಯನ್ನು ಬೃಹತ್ ಪ್ರಮಾಣದಲ್ಲಿ ವಿಸ್ತರಿಸುವುದಾಗಿ ಕಂಪನಿ ಅಧಿಕೃತವಾಗಿ ಘೋಷಿಸಿದೆ.

ದೇಶದ ಮೊಟ್ಟಮೊದಲ ಇ-ಕಾಮರ್ಸ್ ಸಂಸ್ಥೆ

ಭಾರತೀಯ ರೈಲ್ವೆಯ ಈ ಮಾರ್ಗದಲ್ಲಿ ನೂತನವಾಗಿ ಆರಂಭಿಸಲಾದ ‘ಜಂಟಿ ಪಾರ್ಸೆಲ್ ಪ್ರಾಡಕ್ಟ್- ರ್‍ಯಾಪಿಡ್ ಕಾರ್ಗೋ ಸರ್ವಿಸ್’ (ಜೆಪಿಆರ್- ಆರ್‌ಸಿಎಸ್) ರೈಲಿನಲ್ಲಿ ಸೇವೆ ಆರಂಭಿಸಿದ ದೇಶದ ಮೊಟ್ಟಮೊದಲ ಇ-ಕಾಮರ್ಸ್ ಸಂಸ್ಥೆ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಅಮೆಜಾನ್ ಪಾತ್ರವಾಗಿದೆ.

ಇದರಿಂದ ದೆಹಲಿ, ಅಹಮದಾಬಾದ್ ಮತ್ತು ಸೂರತ್ ಮಾರ್ಗಗಳ ಮೂಲಕ ಮುಂಬೈ, ಪುಣೆ ಹಾಗೂ ಗೋವಾಗೆ ಉತ್ತಮ ಸಂಪರ್ಕ ಲಭ್ಯವಾಗಲಿದೆ. ರಸ್ತೆ ಸಾರಿಗೆಯ ಮೇಲಿನ ಅವಲಂಬನೆ ತಗ್ಗಿಸಿ, ಪರಿಸರಸ್ನೇಹಿ ರೈಲು ಜಾಲದಲ್ಲಿ ನಿತ್ಯ 10ಕ್ಕೂ ಹೆಚ್ಚು ಪಾರ್ಸೆಲ್ ವ್ಯಾನ್‌ಗಳ ಬಳಕೆಯಾಗಲಿದೆ.

100ಕ್ಕೂ ಹೆಚ್ಚು ನಗರಗಳಿಗೆ ಸರಕು ಪೂರೈಕೆ

2019 ರಲ್ಲಿ ಕೇವಲ ಒಂದೇ ಒಂದು ರೈಲಿನಿಂದ ಆರಂಭವಾಗಿ, ಪ್ರಸ್ತುತ 130 ಮಾರ್ಗಗಳಲ್ಲಿ 140ಕ್ಕೂ ಅಧಿಕ ರೈಲುಗಳ ಮೂಲಕ 100ಕ್ಕೂ ಹೆಚ್ಚು ನಗರಗಳಿಗೆ ಸರಕು ಪೂರೈಕೆ ಆಗಲಿದೆ.

ಈ ವಿಶೇಷ ಸರಕು ರೈಲಿಗೆ ನ್ಯೂ ದಾದ್ರಿ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಮಂಡಳಿಯ ಸದಸ್ಯರಾದ (ಕಾರ್ಯಾಚರಣೆ ಮತ್ತು ವ್ಯವಹಾರ ಅಭಿವೃದ್ಧಿ) ಡಾ. ಮನೋಜ್ ಸಿಂಗ್ ಹಾಗೂ ಅಮೆಜಾನ್ ಇಂಡಿಯಾದ ಕಾರ್ಯಾಚರಣೆಗಳ ನಿರ್ದೇಶಕ ಕಿಶೋರ್ ಲಂಕಾ ಜಂಟಿಯಾಗಿ ಹಸಿರು ನಿಶಾನೆ ತೋರಿದರು. ಈ ದೈನಂದಿನ ರೈಲು ಸಂಚಾರವು ಉತ್ತರ ಮತ್ತು ಪಶ್ಚಿಮ ಭಾರತದಾದ್ಯಂತ ಸರಕು ಸಾಗಣೆಗೆ ಹೊಸ ವೇಗ ನೀಡಲಿದ್ದು, ಮುಂಬರುವ ದೀಪಾವಳಿ ಸೇರಿದಂತೆ ಪ್ರಮುಖ ಹಬ್ಬಗಳಲ್ಲಿ ಗ್ರಾಹಕರ ಆರ್ಡರ್‌ಗಳನ್ನು ತ್ವರಿತವಾಗಿ ತಲುಪಿಸಲು ನೆರವಾಗಲಿದೆ.

ಅಮೆಜಾನ್ ಇಂಡಿಯಾದ ನಿರ್ದೇಶಕ ಕಿಶೋರ್ ಲಂಕಾ ಮಾತನಾಡಿ, ‘ಕೇಂದ್ರ ಸರ್ಕಾರದ 'ವಿಕಸಿತ ಭಾರತ, ವಿಕಸಿತ ರೈಲು' ದೂರದೃಷ್ಟಿಯ ಚಿಂತನೆಗೆ ಅನುಗುಣವಾಗಿ ಭಾರತೀಯ ರೈಲ್ವೆ ಜೊತೆ ಕೈಜೋಡಿಸಿರುವುದು ಸಂತಸ ತಂದಿದೆ. ಮೀಸಲಾದ ಸರಕು ಸಾರಿಗೆ ಮೂಲಸೌಕರ್ಯದ ಬಳಕೆಯಿಂದ ಸಾಗಣೆ ವೆಚ್ಚ ತಗ್ಗುವುದರ ಜೊತೆಗೆ, ಪರಿಸರಸ್ನೇಹಿ ಹಾಗೂ ವಿಶ್ವಾಸಾರ್ಹ ರೀತಿಯಲ್ಲಿ ಗ್ರಾಹಕರಿಗೆ ವೇಗದ ಸೇವೆ ನೀಡಲು ಸಾಧ್ಯವಾಗಲಿದೆ’ ಎಂದರು.

24 ಗಂಟೆಗಳಲ್ಲಿ 350 ರಿಂದ 400 ಟನ್ ಸರಕು ಹೊತ್ತೊಯ್ಯುವ ವ್ಯವಸ್ಥೆ

ರೈಲ್ವೆ ಮಂಡಳಿಯ ಸದಸ್ಯ ಡಾ. ಮನೋಜ್ ಸಿಂಗ್ ಮಾತನಾಡಿ, ‘ಡಿಎಫ್‌ಸಿ ಜಾಲವು ರಾತ್ರೋರಾತ್ರಿ ಸರಕುಗಳನ್ನು ಸಾಗಿಸಿ ಮರುದಿನವೇ ಗಮ್ಯಸ್ಥಾನಕ್ಕೆ ತಲುಪಿಸುವ ಸಾಮರ್ಥ್ಯ ಹೊಂದಿದೆ. 24 ಗಂಟೆಗಳಲ್ಲಿ 350 ರಿಂದ 400 ಟನ್ ಸರಕು ಹೊತ್ತೊಯ್ಯುವ ಈ ವ್ಯವಸ್ಥೆಯು ಬೃಹತ್ ಸಂಸ್ಥೆಗಳು ಮಾತ್ರವಲ್ಲದೆ ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೂ ವರದಾನವಾಗಲಿದೆ’ ಎಂದು ತಿಳಿಸಿದರು.

ಉತ್ತರ ಪ್ರದೇಶದ ನ್ಯೂ ದಾದ್ರಿಯಿಂದ ಮುಂಬೈ ಸಮೀಪದ ಜೆಎನ್‌ಪಿಟಿ ವರೆಗೆ ಸುಮಾರು 1,504 ಕಿ.ಮೀ ವ್ಯಾಪಿಸಿರುವ ವೆಸ್ಟರ್ನ್ ಡಿಎಫ್‌ಸಿ ಕಾರಿಡಾರ್, ದೇಶದ ಬಂದರುಗಳು ಮತ್ತು ಕೈಗಾರಿಕಾ ಪ್ರದೇಶಗಳನ್ನು ಬೆಸೆಯುವ ಮೂಲಕ ಲಾಜಿಸ್ಟಿಕ್ಸ್ ವೆಚ್ಚವನ್ನು ಗಣನೀಯವಾಗಿ ಕಡಿತಗೊಳಿಸಲು ಸಹಕಾರಿಯಾಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

SBI ಗ್ರಾಹಕರ ಗಮನಕ್ಕೆ: ಇನ್ಮುಂದೆ ಎಟಿಎಂನಿಂದ ಲಿಮಿಟ್‌ಗಿಂತ ಹೆಚ್ಚು ಹಣ ತೆಗೆದರೆ ಭಾರಿ ಚಾರ್ಜ್‌; ಹೊಸ ನಿಯಮ ಜಾರಿ!
PM CARES ಅಡಿಟ್‌ ವರದಿ ರಿಲೀಸ್‌: ಅಕೌಂಟ್‌ನಲ್ಲಿ 8452 ಕೋಟಿ ರೂಪಾಯಿ ಹಣ!