
ಬೆಂಗಳೂರು (ಜೂ.24): ಖ್ಯಾತ ದೂರಸಂಪರ್ಕ ಸಂಸ್ಥೆಯಾದ ಏರ್‌ಟೆಲ್ (Airtel) ಗ್ರಾಹಕರೊಬ್ಬರಿಗೆ ಹಣ ಪಡೆದೂ ಭರವಸೆ ನೀಡಿದ ಸೇವೆಯನ್ನು ಒದಗಿಸದೆ ಸತತವಾಗಿ ಸತಾಯಿಸುತ್ತಿರುವ ಘಟನೆ ಬೆಳಕಿಗೆ ಮೂಲಕ ಬೆಳಕಿಗೆ ಬಂದಿದೆ. ಎಂ.ವಿಘ್ನೇಶ್ ಎಂಬ ಗ್ರಾಹಕರೊಬ್ಬರು ತಮಗಾದ ಕಹಿ ಅನುಭವವನ್ನು ಎಕ್ಸ್ ಮೂಲಕ ಹಂಚಿಕೊಂಡಿದ್ದು, ಏರ್‌ಟೆಲ್ ತಂಡದ ಆಂತರಿಕ ಹೊಂದಾಣಿಕೆಯ ಕೊರತೆ ಮತ್ತು ಹೊಣೆಗೇಡಿತನವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಗ್ರಾಹಕ ವಿಘ್ನೇಶ್ ಅವರು ಜೂನ್ 7, 2026 ರಂದು ಏರ್‌ಟೆಲ್‌ನ ರೂ. 699 ವೈಫೈ + ಟಿವಿ (WiFi + TV) ಹೊಸ ಕನೆಕ್ಷನ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಜೂನ್ 13 ರಂದು ಕೇವಲ ಬ್ರಾಡ್‌ಬ್ಯಾಂಡ್/ವೈಫೈ ಸೇವೆಯನ್ನು ಮಾತ್ರ ಇನ್‌ಸ್ಟಾಲ್ ಮಾಡಲಾಗಿತ್ತು. ಆದರೆ, ಅದೇ ಪ್ಲಾನ್‌ನಲ್ಲಿ ಒಳಗೊಂಡಿರುವ ಐಪಿಟಿವಿ (IPTV) ಸೇವೆಯನ್ನು ಮಾತ್ರ ಇಂದಿನವರೆಗೂ ಅಳವಡಿಸಿಕೊಟ್ಟಿಲ್ಲ.
ಗ್ರಾಹಕರು ಐಪಿಟಿವಿ ಕನೆಕ್ಷನ್‌ಗಾಗಿ ಏರ್‌ಟೆಲ್ ತಂಡವನ್ನು ಸಂಪರ್ಕಿಸಿದಾಗ ಒಂದೊಂದು ವಿಭಾಗದಿಂದ ಒಂದೊಂದು ರೀತಿಯ ಗೊಂದಲದ ಉತ್ತರಗಳು ಬಂದಿವೆ. ಕಸ್ಟಮರ್ ಕೇರ್ ಪ್ರತಿನಿಧಿಗಳು ಈಗಾಗಲೇ ಐಪಿಟಿವಿ ಇನ್‌ಸ್ಟಾಲೇಶನ್ ಮುಗಿದಿದೆ ಎಂದು ಸುಳ್ಳು ವಾದ ಮಾಡಿದ್ದಾರೆ. ಆದರೆ ಮನೆಗೆ ಬಂದ ಏರ್‌ಟೆಲ್ ಟೆಕ್ನಿಷಿಯನ್, ಏರ್‌ಟೆಲ್‌ನ ಬ್ಯಾಕೆಂಡ್ ಸಿಸ್ಟಮ್‌ನಲ್ಲಿ ಐಪಿಟಿವಿ ಐಡಿಯೇ (IPTV ID) ಕಾಣಿಸುತ್ತಿಲ್ಲ ಎಂದು ಹೇಳಿ ಕೈತೊಳೆದುಕೊಂಡಿದ್ದಾರೆ. ಮತ್ತೊಂದು ಕಡೆಯಿಂದ ನಿಮ್ಮ ಐಪಿಟಿವಿ ರಿಕ್ವೆಸ್ಟ್ ಕ್ಯಾನ್ಸಲ್ ಆಗಿದೆ ಎಂದು ಉತ್ತರ ಬಂದಿದೆ.
ಕಸ್ಟಮರ್ ಕೇರ್ ಸೂಚನೆಯಂತೆ ಗ್ರಾಹಕರು ಹೊಸ ಐಪಿಟಿವಿ ರಿಕ್ವೆಸ್ಟ್ ಸಲ್ಲಿಸಲು ಹೋದರೆ, ಏರ್‌ಟೆಲ್ ಸಿಸ್ಟಮ್‌ನಲ್ಲಿ "ನೀವು ಈಗಾಗಲೇ 699 ವೈಫೈ + ಟಿವಿ ಪ್ಲಾನ್ ಪಡೆದಿದ್ದೀರಿ" ಎಂದು ತೋರಿಸಿ ಅರ್ಜಿ ತಾನಾಗಿಯೇ ರದ್ದಾಗುತ್ತಿದೆ. ಇದೀಗ ಗ್ರಾಹಕರು ಬರೋಬ್ಬರಿ 5ನೇ ಬಾರಿಗೆ ಹೊಸ ರಿಕ್ವೆಸ್ಟ್ ಸಲ್ಲಿಸುವಂತಾಗಿದೆ. "ಐಪಿಟಿವಿ ಸ್ಟಾಕ್ ಇಲ್ಲದಿದ್ದರೆ ಗ್ರಾಹಕರಿಗೆ ಈ ರೀತಿ ಸುಳ್ಳು ಹೇಳಿ ಪ್ರಾಡಕ್ಟ್ ಮಾರಾಟ ಮಾಡುವುದು ಯಾಕೆ?" ಎಂದು ಗ್ರಾಹಕರು ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಜೂನ್ 21 ರಂದು ಗ್ರಾಹಕರಿಗೆ ಏರ್‌ಟೆಲ್ ಕಡೆಯಿಂದ ಕರೆ ಬಂದಿದ್ದು, ಮುಂದಿನ 24 ಗಂಟೆಗಳಲ್ಲಿ ಐಪಿಟಿವಿ ಇನ್‌ಸ್ಟಾಲೇಶನ್ ಮಾಡಿಕೊಡಲಾಗುವುದು ಎಂದು ಭರವಸೆ ನೀಡಲಾಗಿತ್ತು. ಆದರೆ 24 ಗಂಟೆ ಕಳೆದರೂ ಯಾವುದೇ ತಾಂತ್ರಿಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿಲ್ಲ. ತಪ್ಪು ಮಾಹಿತಿ, ಅರ್ಜಿಗಳ ರದ್ದತಿ ಮತ್ತು ಸುಳ್ಳು ಭರವಸೆಗಳ ಈ ನರಕದ ಚಕ್ರದಲ್ಲಿ ತಾನು ಸಿಲುಕಿಕೊಂಡಿರುವುದಾಗಿ ಗ್ರಾಹಕರು ಅಳಲು ತೋಡಿಕೊಂಡಿದ್ದಾರೆ.
ತಮಗಾಗುತ್ತಿರುವ ಸಮಸ್ಯೆಯ ಕುರಿತು ಗ್ರಾಹಕರು ಈಗಾಗಲೇ ಏರ್‌ಟೆಲ್ ಮ್ಯಾನೇಜ್‌ಮೆಂಟ್‌ಗೆ ಹಾಗೂ 121@airtel.com ಗೆ 10ಕ್ಕೂ ಹೆಚ್ಚು ಇಮೇಲ್‌ಗಳನ್ನು ಕಳುಹಿಸಿದ್ದಾರೆ. ಕಂಪನಿಯ ಸಿಇಒ (CEO) ಮಟ್ಟದವರೆಗೂ ದೂರನ್ನು ಕೊಂಡೊಯ್ದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅಂತಿಮವಾಗಿ ಬೇಸತ್ತ ಗ್ರಾಹಕರು ಗ್ರಾಹಕರ ಕುಂದುಕೊರತೆ ನಿವಾರಣಾ ವೇದಿಕೆ (Consumer Grievance Channels) ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಏರ್‌ಟೆಲ್‌ನ ಈ ಸೇವಾ ವೈಫಲ್ಯವನ್ನು ಬಯಲಿಗೆಳೆದಿದ್ದಾರೆ.
@airtelindia @Airtel_Presence @airtelnews @bhartiairtelfdn @BangaloreMirror
Mis-selling of airtel one plan is not good. I sent too many requests for IPTV? Why it's getting keep on cancelling? I opted 699(wifi+tv). If u don't have stock in banglore then u should not promote https://t.co/qXEWDfde1J— M Vignesh (@MVignesh1696919) June 21, 2026
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.