
ನವದೆಹಲಿ (ನ.21): ಏರ್ ಇಂಡಿಯಾ ತನ್ನ ಬಳಿ ಇದ್ದ ಬೋಯಿಂಗ್ 737 ವಿಮಾನವನ್ನು 13 ವರ್ಷಗಳ ಬಳಿಕ ಮಾರಾಟ ಮಾಡಿದೆ. ಇನ್ನೂ ಅಚ್ಚರಿಯ ವಿಚಾರ ಏನೆಂದರೆ, ಈ ಜೆಟ್ ತನ್ನ ಮಾಲೀಕತ್ವದಲ್ಲಿ ಇದೆ ಅನ್ನೋ ವಿಚಾರ ಕೂಡ ಇಲ್ಲಿಯವರೆಗೂ ಏರ್‌ಇಂಡಿಯಾಗೆ ಗೊತ್ತಿರಲಿಲ್ಲವಂತೆ. ಏರ್ ಇಂಡಿಯಾ ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್ ಅವರ ಇಂಟರ್ನಲ್ ಪೋಸ್ಟ್‌ನಲ್ಲಿ ಇದು ಬಹಿರಂಗವಾಗಿದೆ. ಹೀಗಾಗಲು ಸಾಧ್ಯವೇ ಇಲ್ಲ ಎಂದು ವಾದಗಳ ನಡುವೆ ಏರ್ ಇಂಡಿಯಾದಲ್ಲಿ ನಿಜವಾಗಿಯೂ ಇಂಥ ಪ್ರಕರಣ ನಡೆದಿದೆ.
ಕಳೆದ ವಾರ ಏರ್ ಇಂಡಿಯಾ 2012ರಿಂದ ಸ್ಥಗಿತಗೊಂಡಿದ್ದ, ಗ್ರೌಂಡ್‌ನಲ್ಲಿಯೇ ನಿಂತಿದ್ದ ಹಾಗೂ ಹೆಚ್ಚಾಗಿ ಎಲ್ಲರಿಂದಲೂ ಮರೆತುಹೋಗಿದ್ದ B737-200 (ನೋಂದಣಿ VT-EHH) ವಿಮಾನದ ಮಾರಾಟ ಹಾಗೂ ವರ್ಗಾವಣೆಯನ್ನು ಪೂರ್ಣ ಮಾಡಿದೆ. ಇದರಲ್ಲಿ ಟ್ವಿಸ್ಟ್ ಏನೆಂದರೆ, ಕೋಲ್ಕತ್ತಾದ ವಿಮಾನ ನಿಲ್ದಾಣದ ಸಿಬ್ಬಂದಿ ವಿಮಾನವನ್ನು ಸ್ಥಳದಿಂದ ತೆಗೆದುಹಾಕುವಂತೆ ಏರ್ ಇಂಡಿಯಾಗೆ ಸೂಚನೆ ನೀಡುವವರೆಗೂ, ಇದು ತಮ್ಮ ಕಂಪನಿಯ ವಿಮಾನ ಅನ್ನೋದೇ ಗೊತ್ತಿರಲಿಲ್ಲ ಎಂದು ಏರ್ ಇಂಡಿಯಾ ತಿಳಿಸಿದೆ.
'ಹಳೆಯ ವಿಮಾನವನ್ನು ವಿಲೇವಾರಿ ಮಾಡುವುದು ವಾಯುಯಾನ ಕ್ಷೇತ್ರದಲ್ಲಿ ಹೊಸ ವಿಚಾರ ಏನಲ್ಲ. ಆದರೆ, ಇದರ ವಿಶೇಷತೆ ಏನೆಂದರೆ, ತೀರಾ ಇತ್ತೀಚಿನವರೆಗೂ ಇದು ನಾವು ಮಾಲೀಕರಾಗಿರುವ ವಿಮಾನ ಅನ್ನೋದೇ ನಮಗೆ ತಿಳಿದಿರಲಿಲ್ಲ' ಎಂದು ವಿಲ್ಸನ್ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಕ್ಯಾಂಪ್‌ಬೆಲ್ ವಿಲ್ಸನ್ ಅವರ ಪೋಸ್ಟ್ ಪ್ರಕಾರ, VT-EHH ಅನ್ನು ಇಂಡಿಯಾ ಪೋಸ್ಟ್‌ಗಾಗಿ ಕಾರ್ಯನಿರ್ವಹಿಸಲು ನೀಡಲಾಗಿತ್ತು. ಆದರೆ, ಅದನ್ನು ಹಲವು ವರ್ಷಗಳ ಹಿಂದೆಯೇ ಸೇವೆಯಿಂದ ನಿವೃತ್ತಿ ಮಾಡಲಾಗಿತ್ತು. ಆದರೆ, ಕೇಂದ್ರ ಸರ್ಕಾರದಿಂದ ಏರ್ ಇಂಡಿಯಾವನ್ನು ಖರೀದಿಸುವ ಸಮದಲ್ಲಿ ಸಾಕಷ್ಟು ದಾಖಲೆಗಳ ಸರಪಳಿ ನಮ್ಮ ಜೊತೆ ಇತ್ತು. ಈ ವೇಳೆ ಅಧಿಕೃತ ದಾಖಲೆಗಳಿಂದ ಈ ವಿಮಾನ ಮಿಸ್ ಆಗಿತ್ತು. ದಿನಗಳು ಕಳೆದ ಹಾಗೆ ಏರ್ ಇಂಡಿಯಾ ಕಂಪನಿಯ ನೆನಪಿನಿಂದಲೂ ವಿಮಾನ ಮರೆತು ಹೋಗಿತ್ತು. ಅದಲ್ಲದೆ, ಕೋಲ್ಕತ್ತಾ ವಿಮಾನ ನಿಲ್ದಾಣದ ಅತ್ಯಂದ ದೂರದಲ್ಲಿ ಯಾರಿಗೂ ಹೆಚ್ಚಾಗಿ ಕಾಣಿಸಿದ ಪ್ರದೇಶದಲ್ಲಿ ಈ ವಿಮಾನ ನಿಂತಿತ್ತು ಎನ್ನಲಾಗಿದೆ.
ಆದರೆ, ಕೋಲ್ಕತ್ತಾ ಏರ್‌ಪೋರ್ಟ್ ಸಿಬ್ಬಂದಿಗಳು ಇದನ್ನು ಪ್ರತಿದಿನ ಗಮನಿಸಿದ್ದರು. ಇತ್ತೀಚೆಗೆ ಏರ್‌ಲೈನ್‌ಗೆ ಮನವಿ ಮಾಡಿ ಇದನ್ನು ತೆಗೆದುಹಾಕುವಂತೆ ಹೇಳಿದ್ದರು. ಆಗ ದಾಖಲೆಗಳ ಹುಡುಕಾಟಕ್ಕೆ ಇಳಿದ ಏರ್ ಇಂಡಿಯಾಗೆ ಇದು ತಮ್ಮದೇ ಕಂಪನಿಯ ವಿಮಾನ ಅನ್ನೋದು ಗೊತ್ತಾಗಿದೆ. ಬಳಿಕ ಮಾರಾಟ ಹಾಗೂ ವರ್ಗಾವಣೆ ಪ್ರಕ್ರಿಯೆ ಆರಂಭಿಸಿ ಕಳೆದ ವಾರ ಅಧಿಕೃತವಾಗಿ ಕಂಪನಿಯಿಂದ ಹೊರಹಾಕಿದೆ. ಮತ್ತೊಂದು ಹಳೆಯ ಜೇಡರ ಬಲೆಯನ್ನು ನಮ್ಮ ಮನೆಯಿಂದ ತೆಗೆದು ಹಾಕಿದ್ದೇವೆ ಎಂದು ವಿಲ್ಸನ್ ತಮಾಷೆಯಾಗಿ ಹೇಳಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.