
ಮುಂಬೈ(ಅ.17): ಇದೇ ನವೆಂಬರ್ 4ರಂದು ಇರಾನ್ ಮೇಲಿನ ಅಮೆರಿಕದ ನಿರ್ಬಂಧ ಸಂಪೂರ್ಣವಾಗಿ ಜಾರಿಗೆ ಬರಲಿದೆ. ಅದರಂತೆ ವಿಶ್ವದ ಒಂದೊಂದೇ ರಾಷ್ಟ್ರಗಳು ಇರಾನ್ ಜೊತೆಗಿನ ತನ್ನ ವಾಣಿಜ್ಯ ಒಪ್ಪಂದವನ್ನು ಕಡಿದುಕೊಳ್ಳುತ್ತಿವೆ.
ಆದರೆ ಇರಾನ್ ಜೊತೆಗಿನ ತನ್ನ ತೈಲ ಒಪ್ಪಂದವನ್ನು ಸಂಪೂರ್ಣವಾಗಿ ಕಡಿತಗೊಳಿಸಲು ಭಾರತ ನಿರಾಕರಿಸುತ್ತಿದೆ. ಇರಾನ್ ಜೊತೆಗೆ ವಾಣಿಜ್ಯ ಒಪ್ಪಂದ ಮುಂದುವರೆಸುವುದು ತನ್ನ ಹಕ್ಕು ಎಂಬುದು ಭಾರತದ ಪ್ರತಿಪಾದನೆ.
ಇದೇ ಕಾರಣಕ್ಕೆ ಭಾರತವನ್ನು ತನ್ನ ಶತ್ರು ರಾಷ್ಟ್ರ ಇರಾನ್‌ನಿಂದ ದೂರ ಮಾಡಲು ಅಮೆರಿಕ ಇನ್ನಿಲ್ಲದ ಕಸರತ್ತು ನಡೆಸಿದೆ. ಈ ಕುರಿತು ಈಗಾಗಲೇ ಹಲವು ಬಾರಿ ಮನವಿ ಮಾಡಿರುವ ಅಮೆರಿಕ, ಕೆಲವು ಬೆದರಿಕೆಗಳನ್ನೂ ಹಾಕುತ್ತಿದೆ.
ಈ ಮಧ್ಯೆ ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ಇರಾನ್‌ನಿಂದ ತೈಲ ಆಮದನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ. ಅಮೆರಿಕದ ನಿರ್ಬಂಧ ಜಾರಿಯಾದ ಬಳಿಕ ಇರಾನ್‌ನಿಂದ ತೈಲ ಆಮದನ್ನು ಸಂಪೂರ್ಣವಾಗಿ ಕಡಿತಗೊಳಿಸುವ ಸೂಚನೆಯನ್ನೂ ಸಂಸ್ಥೆ ನೀಡಿದೆ.
ಈ ಕುರಿತು ಮಾಹಿತಿ ನೀಡಿರುವ ರಿಲಯನ್ಸ್ ಸಂಸ್ಥೆಯ ಹಿರಿಯ ಅಧಿಕಾರಿ ವಿ. ಶ್ರೀಕಾಂತ್, ಇರಾನ್‌ನಿಂದ ತೈಲ ಆಮದನ್ನು ಹಂತ ಹಂತವಾಗಿ ನಿಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ಅಲ್ಲದೇ ಮಧ್ಯಪ್ರಾಚ್ಯದ ಇತರ ರಾಷ್ಟ್ರಗಳಿಂದ, ಅದರಲ್ಲೂ ಪ್ರಮುಖವಾಗಿ ಸೌದಿ ಅರೇಬಿಯಾದಿಂದ ಹೆಚ್ಚಿನ ತೈಲ ಆಮದು ಮಾಡಿಕೊಳ್ಳಲು ಸಂಸ್ಥೆ ನಿರ್ಧರಿಸಿದೆ ಎಂದು ಶ್ರೀಕಾಂತ್ ಹೇಳಿದ್ದಾರೆ. ಅಲ್ಲದೇ ವೆನಿಜುವೆಲಾದಿಂದಲೂ ತೈಲ ಆಮದು ಮುಂದುವರೆಯಲಿದೆ ಎನ್ನಲಾಗಿದೆ.
ರಿಲಯನ್ಸ್ ಸಂಸ್ಥೆ ಇರಾನ್ ನಿಂದ ಸೆಪ್ಟೆಂಬರ್ ಅಂತ್ಯದೊಳಗೆ 2 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿದೆ ಎಂಬುದು ದಾಖಲೆಗಳಿಂದ ತಿಳಿದು ಬರುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.