ಅಯೋಧ್ಯೆಯಲ್ಲಿ ಇಂದು ರಾಮ ಮಂದಿರದ ಪ್ರಾಣಪ್ರತಿಷ್ಠಾಪನೆ ನಡೆದಿದೆ. ಈ ಸಂದರ್ಭದಲ್ಲಿ ಮುಂಬೈ ಮೂಲದ ರಿಯಲ್ ಎಸ್ಟೇಟ್ ಸಂಸ್ಥೆಯೊಂದು 250 ನಿವೇಶನಗಳನ್ನು ಮಾರಾಟಕ್ಕೆ ಬಿಡುಗಡೆಗೊಳಿಸಿದೆ.
ಅಯೋಧ್ಯೆ (ಜ.22): ಅಯೋಧ್ಯೆ ಈಗ ಭಕ್ತಿಕೇಂದ್ರ ಮಾತ್ರವಲ್ಲ, ಹೂಡಿಕೆಗೂ ಕೂಡ ನೆಚ್ಚಿನ ತಾಣವಾಗಿ ಪರಿವರ್ತಿತವಾಗುತ್ತಿದೆ. ಇತ್ತೀಚೆಗಷ್ಟೇ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅಯೋಧ್ಯೆಯಲ್ಲಿ ನಿವೇಶನ ಖರೀದಿಸುವ ಮೂಲಕ ಸುದ್ದಿಯಾಗಿದ್ದರು. ಈಗ ಅನೇಕ ರಿಯಲ್ ಎಸ್ಟೇಟ್ ಕಂಪನಿಗಳಿಗೆ ಕೂಡ ಅಯೋಧ್ಯೆ ಉದ್ಯಮ ವಿಸ್ತರಣೆಗೆ ನೆಚ್ಚಿನ ತಾಣವಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಮುಂಬೈ ಮೂಲದ ರಿಯಲ್ ಎಸ್ಟೇಟ್ ಡೆವಲಪರ್ 'ದಿ ಹೌಸ್ ಆಫ್ ಅಭಿನಂದನ್ ಲೋಧ' (ಎಚ್ ಒಎಬಿಎಲ್) ಇಂದು ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಶುಭ ಘಳಿಗೆಯಲ್ಲಿ ಅಂದಾಜು 250 ನಿವೇಶನಗಳನ್ನು ಬಿಡುಗಡೆ ಮಾಡುತ್ತಿದೆ. ಈ ಪ್ರಾಜೆಕ್ಟ್ ಗೆ ಕಂಪನಿ ಸುಮಾರು 1200 ಕೋಟಿ ರೂ. ಹೂಡಿಕೆ ಮಾಡಿದೆ. ಈ ಐಷಾರಾಮಿ ಪ್ರಾಜೆಕ್ಟ್ ಮೊದಲ ಹಂತವನ್ನು 51 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಕಂಪನಿ ಅಭಿವೃದ್ಧಿಪಡಿಸುತ್ತಿದೆ.
ಈ ಸಂಸ್ಥೆ ಅಭಿವೃದ್ಧಿಪಡಿಸಿರುವ ನಿವೇಶಗಳಿಗೆ ಈಗಾಗಲೇ ಭಾರೀ ಬೇಡಿಕೆ ವ್ಯಕ್ತವಾಗಿದೆ. ದೇಶದ ಮುಂಬೈ, ದೆಹಲಿ-ಎನ್ ಸಿಆರ್, ಲಖ್ನೋ ಹಾಗೂ ಕಾನ್ಪುರ್ ಮುಂತಾದ ದೇಶದೊಳಗಿನ ನಗರಗಳ ನಿವಾಸಿಗಳು ಮಾತ್ರವಲ್ಲದೆ, ಇಂಗ್ಲೆಂಡ್, ಅಮೆರಿಕ ಹಾಗೂ ದಕ್ಷಿಣ ಪೂರ್ವ ಏಷ್ಯಾದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಿಂದ ಕೂಡ ಬೇಡಿಕೆಗಳು ಬಂದಿವೆ ಎಂದು ಎಚ್ ಒಎಬಿಎಲ್ ಸಿಇಒ ಸಮುಜ್ಜವಾಲ್ ಘೋಷ್ ತಿಳಿಸಿದ್ದಾರೆ. ಅಯೋಧ್ಯೆ ಪ್ರಾಜೆಕ್ಟ್ ಬಗ್ಗೆ ಜನರು ಸಿಕ್ಕಾಪಟ್ಟೆ ಆಸಕ್ತಿ ವ್ಯಕ್ತಪಡಿಸುವ ವಿಚಾರವನ್ನು ಅವರು ಈ ಸಂದರ್ಭದಲ್ಲಿ ಬಹಿರಂಗಪಡಿಸಿದ್ದಾರೆ.
ರಾಮ ಮಂದಿರದಿಂದ ತುಂಬಲಿದೆ ಉತ್ತರ ಪ್ರದೇಶ ಸರ್ಕಾರದ ಬೊಕ್ಕಸ; 25 ಸಾವಿರ ಕೋಟಿ ಹೆಚ್ಚುವರಿ ತೆರಿಗೆ ಆದಾಯದ ನಿರೀಕ್ಷೆ
ರಾಮ ಮಂದಿರದಿಂದ 12ರಿಂದ 15 ನಿಮಿಷಗಳಷ್ಟು ದೂರದಲ್ಲಿರುವ ನಿವೇಶನ ಅಭಿವೃದ್ಧಿ ಪ್ರಾಜೆಕ್ಟ್ ದೊಡ್ಡ ಮಟ್ಟದಲ್ಲಿ ಜನರ ಆಸಕ್ತಿ ಸೆಳೆದಿದೆ. ಬಾಲಿವುಡ್ ಸ್ಟಾರ್ ಅಮಿತಾಭ್ ಬಚ್ಚನ್ ಈ ಹಿಂದೆ 7 ಸ್ಟಾರ್ ಮಿಕ್ಸಡ್ ಯೂಸ್ ಎನ್ ಕ್ಲೇವ್ 'ದಿ ಸರಯೂ'ನಲ್ಲಿ 14.5 ಕೋಟಿ ರೂ. ಮೌಲ್ಯದ 10,000 ಚದರ ಅಡಿ ವಿಸ್ತೀರ್ಣದ ನಿವೇಶನ ಖರೀದಿಸಿದ್ದರು.
ಅಯೋಧ್ಯೆ ಜಾಗತಿಕ ಮನ್ನಣೆ ಗಳಿಸುವ ಸ್ಮಾರ್ಟ್ ಸಿಟಿಯಾಗಿ ಬೆಳೆಯಲಿದೆ. ಹಾಗೆಯೇ ಧಾರ್ಮಿಕ ರಾಜಧಾನಿಯಾಗಿ ಕೂಡ ಅಭಿವೃದ್ಧಿ ಹೊಂದಲಿದೆ ಎಂದು ಘೋಷ್ ತಿಳಿಸಿದ್ದಾರೆ. ಉತ್ತರ ಪ್ರದೇಶ ಸರ್ಕಾರದೊಂದಿಗೆ ಸುದೀರ್ಘ ಕಾಲದ ಸಂಬಂಧವನ್ನು ನಿರ್ಮಿಸಲು ಕಂಪನಿ ಬದ್ಧತೆ ಹೊಂದಿದೆ ಎಂದು ಈ ಸಂದರ್ಭದಲ್ಲಿ ಅವರು ಭರವಸೆ ನೀಡಿದ್ದಾರೆ. ಕಂಪನಿಯ 1200 ಕೋಟಿ ರೂ. ಹೂಡಿಕೆ ವಾಸ್ತವ್ಯದ ಉದ್ದೇಶಕ್ಕಾಗಿ ನಿವೇಶನಗಳನ್ನು ರೂಪಿಸುವ ಗುರಿ ಹೊಂದಿದೆ. ಈ ಐಷಾರಾಮಿ ಪ್ರಾಜೆಕ್ಟ್ ಮೊದಲ ಹಂತ ಈಗಾಗಲೇ ಪ್ರಗತಿಯಲ್ಲಿದೆ.
ನಾಳೆಯಿಂದ ಅಯೋಧ್ಯೆ ಸಾರ್ವಜನಿಕ ಮುಕ್ತ: ವರ್ಷಕ್ಕೆ 5 ಕೋಟಿ ಭಕ್ತರ ನಿರೀಕ್ಷೆ; ಪ್ರವಾಸೋದ್ಯಮಕ್ಕೆ ಸುವರ್ಣ ಯುಗ!
ಎಚ್ ಒಎಬಿಎಲ್ ಅಪ್ಲಿಕೇಷನ್ ಮೂಲಕ ಗ್ರಾಹಕರು ನೇರವಾಗಿ ನಿವೇಶನಗಳನ್ನು ಬುಕ್ ಮಾಡಲು ಅವಕಾಶವಿದೆ. ಇನ್ನು ವರದಿಗಳ ಪ್ರಕಾರ ಅಯೋಧ್ಯೆ ಪ್ರಾಜೆಕ್ಟ್ ನಲ್ಲಿ ಅಂದಾಜು ಶೇ.24ರಷ್ಟು ಆಸಕ್ತಿಯನ್ನು ಮಧ್ಯ ಪ್ರಾಚ್ಯ ಹಾಗೂ ಅಮೆರಿಕದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ತೋರುತ್ತಿದ್ದಾರೆ. ಈ ಪ್ರಾಜೆಕ್ಟ್ ನಲ್ಲಿ ನಿವೇಶನಗಳ ಅಭಿವೃದ್ಧಿ, ಸೂಪರ್ ಲಕ್ಸುರಿ ವಿಲ್ಲಾಗಳು, ವಾಸ್ತವ್ಯದ ಟವರ್ ಗಳು ಹಾಗೂ ಸರ್ವೀಸ್ ಅಪಾರ್ಟ್ಮೆಂಟ್ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಈ ಪ್ರಾಜೆಕ್ಸ್ ಭಾರತದ ಜನಪ್ರಿಯ ಶುದ್ಧ ಸಸ್ಯಹಾರಿ 5 ಸ್ಟಾರ್ ಹೋಟೆಲ್ ಲೀಲಾ ಪ್ಯಾಲೇಸ್ ಜೊತೆಗೆ ಸಹಯೋಗ ಹೊಂದಿದ್ದು, ಆ ಮೂಲಕ ಅಲ್ಲಿನ ನಿವಾಸಿಗಳಿಗೆ ಐಷಾರಾಮಿ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಲಿದೆ.
ರಿಷಿಕೇಶ್, ಅಮೃತ್ ಸರ್, ಶ್ರೀನಾಥಜೀ, ವಾರಾಣಾಸಿ, ಮಥುರ ಹಾಗೂ ವೃಂದಾವನಗಳಲ್ಲಿ ಕೂಡ ಎಚ್ ಒಎಬಿಎಲ್ ವಿಸ್ತರಣೆ ಯೋಜನೆಯನ್ನು ಹೊಂದಿದೆ. ಧಾರ್ಮಿಕ ಕೇಂದ್ರಗಳಲ್ಲಿ ವಾಸ್ತವ್ಯ ಮಾಡಲು ಬಯಸುವ ಜನರಿಗೆ ಸೂಕ್ತ ನಿವೇಶನಗಳನ್ನು ಕಲ್ಪಿಸುವ ಗುರಿಯನ್ನು ಈ ಕಂಪನಿ ಹೊಂದಿದೆ.