
ನವದೆಹಲಿ (ಫೆ.10): ಆರು ಅಂಗಸಂಸ್ಥೆಗಳ ವಿಲೀನಕ್ಕೆ ಅದಾನಿ ಪವರ್ ಗೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧಿಕರಣ (ಎನ್ ಸಿಎಲ್ ಟಿ) ಗುರುವಾರ ಅನುಮೋದನೆ ನೀಡಿದೆ. ಅದಾನಿ ಪವರ್ ಮಹಾರಾಷ್ಟ್ರ, ಅದಾನಿ ಪವರ್ ರಾಜಸ್ಥಾನ, ಉಡುಪಿ ಪವರ್ ಕಾರ್ಪೋರೇಷನ್ , ರಾಯ್ಪುರ್ ಎನರ್ಜೆನ್, ರಾಯ್ಘರ್ ಎನರ್ಜಿ ಜನರೇಷನ್ ಹಾಗೂ ಅದಾನಿ ಪವರ್ (ಮುಂದ್ರ) ಸಂಸ್ಥೆಗಳನ್ನು ಅದಾನಿ ಪವರ್ ಜೊತೆಗೆ ವಿಲೀನಗೊಳಿಸಲು ಅನುಮತಿ ಸಿಕ್ಕಿದೆ. ಗುರುವಾರ ಷೇರು ಮಾರುಕಟ್ಟೆ ನಿಯಂತ್ರಕರಿಗೆ ಅದಾನಿ ಪವರ್ ಈ ಮಾಹಿತಿ ನೀಡಿದೆ. ಅದಾನಿ ಪವರ್ ಅದಾನಿ ಗ್ರೂಪ್ ನ ಅಂಗಸಂಸ್ಥೆಯಾಗಿದೆ. ಕಳೆದ ವರ್ಷ ಡಿಸೆಂಬರ್ ನಲ್ಲಿ ಅದಾನಿ ಕಂಪನಿಯ ಸುರಕ್ಷಿತ ಕ್ರೆಡಿಟರ್ಸ್ ವಿಲೀನಕ್ಕೆ ಅನುಮೋದನೆ ನೀಡಿದ್ದರು. ಇದರಿಂದ ಬಿಎಸ್ ಇಯಲ್ಲಿ ಅದಾನಿ ಗ್ರೂಪ್ ಷೇರಿನ ಬೆಲೆ 338ರೂ.ಗೆ ಏರಿಕೆ ಕಂಡಿತ್ತು. ಹಿಂಡನ್ ಬರ್ಗ್ ರಿಸರ್ಚ್ ವರದಿ ಬೆನ್ನಲ್ಲೇ ಅದಾನಿ ಸಮೂಹದ ಷೇರುಗಳ ಮೌಲ್ಯದಲ್ಲಿ ಭಾರೀ ಇಳಿಕೆಯಾಗಿದೆ. ಅದಾನಿ ಸಂಪತ್ತಿನ ಮೇಲೂ ಇದು ದೊಡ್ಡ ಪರಿಣಾಮ ಬೀರಿತ್ತು. ಬ್ಲೂಮ್‌ಬರ್ಗ್ ಬಿಲಿಯನೇರ್ ಇಂಡೆಕ್ಸ್‌ನ ಅಗ್ರ 20 ಶ್ರೀಮಂತರ ಪಟ್ಟಿಯಿಂದ ಹೊರಬಿದ್ದಿದ್ದರು ಕೂಡ. ಒಟ್ಟು 100 ಬಿಲಿಯನ್ ಅಮೆರಿಕನ್ ಡಾಲರ್‌ಗೂ ಹೆಚ್ಚಿನ ಮೊತ್ತದ ನಷ್ಟವನ್ನು ಅದಾನಿ ಗ್ರೂಪ್ ಅನುಭವಿಸಿತ್ತು.
ಅದಾನಿ ಗ್ರೂಪ್ ಷೇರುಗಳು ನಿಧಾನಕ್ಕೆ ಚೇತರಿಕೆ ಕಾಣುತ್ತಿವೆ. ಶತಕೋಟ್ಯಧಿಪತಿಗಳ ಪಟ್ಟಿಯಲ್ಲಿಅದಾನಿ ಮತ್ತೆ ಪ್ರಗತಿ ಕಾಣಲು ಆರಂಭಿಸಿದ್ದಾರೆ. ಬುಧವಾರ ಅವರು ಫೋರ್ಬ್ಸ್ ಬಿಲಿಯನೇರ್ ಪಟ್ಟಿಯಲ್ಲಿ ಗರಿಷ್ಠ ಆದಾಯ ಸಂಪಾದನೆ ಮಾಡಿದ ವ್ಯಕ್ತಿಯಾಗಿದ್ದಾರೆ. ಅದಲ್ಲದೆ, ಫೋರ್ಬ್ಸ್ ಬಿಲಿಯನೇರ್ ಪಟ್ಟಿಯಲ್ಲಿ ಒಂದೇ ದಿನ ಇಷ್ಟು ಪ್ರಮಾಣದ ಸಂಪತ್ತು ಗಳಿಕೆ ಮಾಡಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಯೂ ಗಳಿಸಿದ್ದಾರೆ.
ಸಾಲ ಮುಂಗಡ ಪಾವತಿ ಘೋಷಣೆ: ಶೇ. 25 ರವರೆಗೆ ಜಿಗಿದ ಅದಾನಿ ಎಂಟರ್‌ಪ್ರೈಸಸ್ ಷೇರು
ಬುಧವಾರದ ಫೋರ್ಬ್ಸ್ ವಿನ್ನರ್ ಲಿಸ್ಟ್‌ನಲ್ಲಿ ಗೌತಮ್ ಅದಾನಿ ಅಗ್ರಸ್ಥಾನ ಸಂಪಾದಿಸಿದ್ದಾರೆ. ಫೋರ್ಬ್ಸ್ ರಿಯಲ್ ಟೈಮ್ ಬಿಲಿಯನೇರ್ (Forbes Real time billionaires Index) ಇಂಡೆಕ್ಸ್, ಪ್ರತಿ ದಿನ ವಿಶ್ವದ ಶ್ರೀಮಂತರು ಎಷ್ಟು ಸಂಪತ್ತು ಗಳಿಸಿದ್ದಾರೆ ಎನ್ನುವ ಆಧಾರದಲ್ಲಿ ಪಟ್ಟಿಯನ್ನು ಅಪ್‌ಡೇಟ್ ಮಾಡುತ್ತದೆ. ಫೆ.8ರಂದು ಗೌತಮ್ ಅದಾನಿ ವಿಶ್ವದಲ್ಲಿಯೇ ಗರಿಷ್ಠ ಆದಾಯ ಸಂಪಾದನೆ ಮಾಡಿದ ವ್ಯಕ್ತಿ ಎನಿಸಿದ್ದಾರೆ.
ಒಂದೇ ವಾರದಲ್ಲಿ ಅದಾನಿ ಆಸ್ತಿ 10 ಲಕ್ಷ ಕೋಟಿ ಕುಸಿತ!
ಕಾನೂನು ಹೋರಾಟಕ್ಕೆ ಸಿದ್ಧತೆ
ಹಿಂಡನ್ ಬರ್ಗ್ ರಿಸರ್ಚ್ ವಿರುದ್ಧ ಕಾನೂನು ಹೋರಾಟಕ್ಕೆ ಗೌತಮ್ ಅದಾನಿ ಮುಂದಾಗಿದ್ದಾರೆ.ಈ ಕಾರ್ಯಕ್ಕೆ ಅಮೆರಿಕದ ಜನಪ್ರಿಯ ಹಾಗೂ ದುಬಾರಿ ಕಾನೂನು ಸಲಹಾ ಸಂಸ್ಥೆ ವಾಚೆಲ್ ಸಂಪರ್ಕಿಸಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ, ವಾಚೆಲ್ ನ್ಯೂಯಾರ್ಕ್ ಘಟಕದ ಹಿರಿಯ ನ್ಯಾಯವಾದಿಯನ್ನು ಅದಾನಿ ಸಮೂಹಕ್ಕೆ ಕಾನೂನು ಸಲಹೆಗಳನ್ನು ನೀಡಲು ನೇಮಕ ಮಾಡಲಾಗಿದೆ ಎಂದು ಹೇಳಲಾಗಿದೆ. ಅದಾನಿ ಸಮೂಹ ಷೇರು ಮೌಲ್ಯವನ್ನು ತಿರುಚಿ ಅಕ್ರಮ ವ್ಯವಹಾರ ನಡೆಸಿದೆ ಎಂದು ಹಿಂಡನ್ ಬರ್ಗ್ ರಿಸರ್ಚ್ ಆರೋಪಿಸಿತ್ತು. ಈ ಆರೋಪದ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿರುವ ಅದಾನಿ ಸಮೂಹದ ಪರ ಮಾಚೆಲ್ ವಕೀಲರು ಕಾನೂನು ಹೋರಾಟ ನಡೆಸಲಿದ್ದಾರೆ ಎಂದು ಹೇಳಲಾಗಿದೆ. ವಾಚೆಲ್ ಅಮೆರಿಕದ ಪ್ರತಿಷ್ಠಿತ ಕಾನೂನು ಸಲಹ ಸಂಸ್ಥೆಗಳಲ್ಲಿ ಒಂದಾಗಿದೆ. ಉದ್ಯಮಿಗಳ ವಿರುದ್ಧದ ಆರೋಪಗಳ ವಿರುದ್ಧ ಕಾನೂನು ಹೋರಾಟ ನಡೆಸಿದ ಹಿನ್ನೆಲೆ ಈ ಸಂಸ್ಥೆಗಿದೆ. 2023ರ ಆರಂಭದ ಕೆಲವು ವಾರಗಳಲ್ಲಿ ಅದಾನಿ ಸಂಪತ್ತು 130 ಬಿಲಿಯನ್ ಅಮೆರಿಕನ್ ಡಾಲರ್ ಆಗಿದ್ದರೆ, ಹಿಂಡೆನ್‌ಬರ್ಗ್ ವರದಿ ಬಳಿಕ 10 ದಿನಗಳಲ್ಲಿಯೇ ಅವರ ಸಂಪತ್ತು 58 ಬಿಲಿಯನ್ ಡಾಲರ್‌ಗೆ ಕುಸಿದಿತ್ತು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.