ಅದಾನಿ ಗ್ರೂಪ್ ಷೇರುಗಳು ಮರಳಿ ಹಳಿಗೆ; ಶೇ.14ರಷ್ಟು ಏರಿಕೆ ಕಂಡ ಅದಾನಿ ಎಂಟರ್ ಪ್ರೈಸರ್ಸ್ ಷೇರು

By Suvarna News  |  First Published Mar 2, 2023, 6:37 PM IST

*ಕಳೆದೆರಡು ದಿನಗಳಿಂದ ಏರಿಕೆ ಕಂಡಿರುವ ಅದಾನಿ ಗ್ರೂಪ್ ಷೇರುಗಳು
*ಅದಾನಿ ಸಮೂಹದ ಮಾರುಕಟ್ಟೆ ಬಂಡವಾಳ  23,400 ಕೋಟಿ ರೂ.ಗೆ ಏರಿಕೆ
*ಅದಾನಿ ಸಮೂಹ ಸಂಸ್ಥೆಗಳ ಷೇರುಗಳಲ್ಲಿ ಶೇ.5ರಷ್ಟು ಏರಿಕೆ 
 


ಮುಂಬೈ (ಮಾ2): ಕಳೆದ ಒಂದು ತಿಂಗಳಿಂದ ಭಾರೀ ನಷ್ಟದಲ್ಲಿದ್ದ ಅದಾನಿ ಸಮೂಹ ಸಂಸ್ಥೆಗಳ ಷೇರುಗಳು ಕಳೆದೆರಡು ದಿನಗಳಿಂದ ಚೇತರಿಕೆಯ ಹಾದಿಯಲ್ಲಿವೆ. ಬುಧವಾರ ಅದಾನಿ ಷೇರುಗಳು ಮಾರುಕಟ್ಟೆಯಲ್ಲಿ ಉತ್ತಮ ಗಳಿಕೆ ದಾಖಲಿಸಿದ್ದವು. ಇಂದು ಬೆಳಗ್ಗಿನ ವ್ಯವಹಾರದಲ್ಲಿ ಕೂಡ ಉತ್ತಮ ಆರಂಭ ಮಾಡಿದ್ದವು. ಅದಾನಿ ಸಮೂಹದ ಷೇರುಗಳಲ್ಲಿ ಶೇ.5ರಷ್ಟು ಏರಿಕೆ ಕಂಡುಬಂದಿದ್ದು, ಮಾರುಕಟ್ಟೆ ಬಂಡವಾಳ  23,400 ಕೋಟಿ ರೂ.ಗೆ ಏರಿಕೆಯಾಗಿತ್ತು. ಅದಾನಿ ಸಮೂಹ ಸಂಸ್ಥೆಗಳು ಮಾರುಕಟ್ಟೆ ನಿಯಮಗಳನ್ನು ಉಲ್ಲಂಘಿಸಿವೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಲು ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಸಂಸ್ಥೆ ಸ್ವಾಗತಿಸಿದ ಬೆನ್ನಲ್ಲೇ ಈ ಬೆಳವಣಿಗೆ ಕಂಡುಬಂದಿದೆ. ಜನವರಿ 24ರಂದು ಅಮೆರಿಕದ ಹಿಂಡೆನ್ ಬರ್ಗ್ ಸಂಸ್ಥೆ ವರದಿಯಲ್ಲಿ ಗೌತಮ್ ಅದಾನಿ ನೇತೃತ್ವದ ಅದಾನಿ ಸಮೂಹ ಸಂಸ್ಥೆಗಳ ವಿರುದ್ಧ ವಂಚನೆ ಆರೋಪ ಮಾಡಲಾಗಿತ್ತು. ಈ ವರದಿ ಬಹಿರಂಗಗೊಂಡ ಬಳಿಕ ಅದಾನಿ ಸಮೂಹ ಸಂಸ್ಥೆಗಳ ಷೇರುಗಳು ಮಾರುಕಟ್ಟೆಯಲ್ಲಿ ಭಾರೀ ನಷ್ಟ ಅನುಭವಿಸಿವೆ. ವರದಿ ಬಳಿಕ ಬುಧವಾರ ಮೊದಲ ಬಾರಿಗೆ ಅದಾನಿ ಸಮೂಹ ಸಂಸ್ಥೆಗಳ ಎಲ್ಲ ಷೇರುಗಳು ಗಳಿಕೆ ದಾಖಲಿಸಿವೆ. 

ಹಿಂಡೆನ್ ಬರ್ಗ್ ವರದಿ ಬಹಿರಂಗಗೊಂಡ ಬಳಿಕ ಅಂದರೆ ಕಳೆದ ಒಂದು ತಿಂಗಳಲ್ಲಿ ಅದಾನಿ ಸಮೂಹ ಸಂಸ್ಥೆ 12 ಲಕ್ಷ ಕೋಟಿ ರೂ.ಗಿಂತಲೂ ಅಧಿಕ ನಷ್ಟ ಅನುಭವಿಸಿದೆ. ಅದಾನಿ ಎಂಟರ್ ಪ್ರೈಸಸ್ ಲಿ. ಷೇರುಗಳು ಬೆಳಗ್ಗಿನ ವಹಿವಾಟಿನಲ್ಲಿ ಶೇ.10ರಷ್ಟು ಇಳಿಕೆ ಕಂಡು 1,408ರೂ.ಗೆ ಕುಸಿತ ಕಂಡಿದ್ದವು. ಆದರೆ, ಆ ಬಳಿಕ ಮರಳಿ ಶೇ.14.45 ಏರಿಕೆ ದಾಖಲಿಸಿ 1,646ರೂ. ತಲುಪಿವೆ. ಇನ್ನು ಅದಾನಿ ಪೋರ್ಟ್ಸ್ ಲಿ. ಷೇರುಗಳು ಶೇ.1.14ರಷ್ಟು ಏರಿಕೆ ಕಂಡು 609ರೂ.ನಲ್ಲಿ ವಹಿವಾಟು ನಡೆಸುತ್ತಿವೆ. ಇನ್ನು ಅದಾನಿ ಟ್ರಾನ್ಸ್ ಮಿಷನ್ ಲಿ. ಷೇರುಗಳು ಶೇ.5ರಷ್ಟು ಉನ್ನತ ಸರ್ಕ್ಯೂಟ್ ಮಿತಿಯಲ್ಲಿ ಲಾಕ್ ಆಗಿವೆ. ಅದಾನಿ ಪರ್ ಲಿ. ಷೇರುಗಳು ಶೇ.4.98ರಷ್ಟು ಏರಿಕೆ ಕಂಡು 161.40 ರೂ. ತಲುಪಿವೆ. ಇನ್ನು ಅದಾನಿ ಗ್ರೀನ್ ಎನರ್ಜಿ ಲಿ. ಷೇರುಗಳು ಶೇ.5ರಷ್ಟು ಏರಿಕೆ ಕಂಡು 535.2ರೂ. ಗೆ ಹೆಚ್ಚಳವಾಗಿವೆ. ಅದಾನಿ ವಿಲ್ಮರ್ ಶೇ.5ರಷ್ಟು ಏರಿಕೆ ಕಂಡು 398.40ರೂ. ನಲ್ಲಿ ವಹಿವಾಟು ನಡೆಸಿದೆ. ಅದಾನಿ ಟೋಟಲ್ ಗ್ಯಾಸ್ ಶೇ.2.66ರಷ್ಟು ಏರಿಕೆ ಕಂಡು 732.15ರೂ. ತಲುಪಿದೆ.

Tap to resize

Latest Videos

ವಿಶ್ವದ ನಂ.1 ಶ್ರೀಮಂತ ಪಟ್ಟ ಮರಳಿ ಪಡೆದ ಎಲಾನ್ ಮಸ್ಕ್; ಮತ್ತೆ ಕುಸಿದ ಅದಾನಿ ಸ್ಥಾನ

ಹಿಂಡೆನ್ ಬರ್ಗ್ ವರದಿ ಅದಾನಿ ಸಾಮ್ರಾಜ್ಯವನ್ನು ಅಲುಗಾಡಿಸಿ ಬಿಟ್ಟಿತ್ತು. ಈ ವರದಿ ಬಳಿಕ ಗೌತಮ್ ಅದಾನಿ ನಿವ್ವಳ ಸಂಪತ್ತು ಕೂಡ ಕುಸಿಯುತ್ತ ಸಾಗಿತ್ತು. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಕೆಲವೇ ತಿಂಗಳ ಹಿಂದೆ ಎರಡನೇ ಸ್ಥಾನದಲ್ಲಿದ್ದ ಗೌತಮ್ ಅದಾನಿ ಹಿಂಡೆನ್ ಬರ್ಗ್ ವರದಿ ಬಳಿಕ 36ನೇ ಸ್ಥಾನದ ತನಕ ತಳ್ಳಲ್ಪಟ್ಟಿದ್ದಾರೆ. ಸದ್ಯ 28 ಸ್ಥಾನದಲ್ಲಿದ್ದಾರೆ. ಅದಾನಿ ಸಮೂಹ ಸಂಸ್ಥೆಗಳಲ್ಲಿ ಅದಾನಿ ಟೋಟಲ್ ಗ್ಯಾಸ್ ಅತ್ಯಧಿಕ ನಷ್ಟ ಅನುಭವಿಸಿತ್ತು. ಈ ಸಂಸ್ಥೆಷೇರುಗಳು ಶೇ.82ರಷ್ಟು ನಷ್ಟ ಅನುಭವಿಸಿವೆ. ಉಳಿದಂತೆ ಅದಾನಿ ಟ್ರಾನ್ಸ್ ಮಿಷನ್ -76%, ಅದಾನಿ ಗ್ರೀನ್ ಎನರ್ಜಿ -76%, ಅದಾನಿ ಪೋರ್ಟ್ಸ್ -21%, ಎಸಿಸಿ -24% ಹಾಗೂ ಅಂಬುಜಾ ಸಿಮೆಂಟ್ಸ್ -29% ನಷ್ಟ ಕಂಡಿದ್ದವು. 

ಮುಕೇಶ್ ಅಂಬಾನಿ ಹಾಗೂ ಕುಟುಂಬಕ್ಕೆ ಗರಿಷ್ಠ Z+ ಭದ್ರತೆ;ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ!

ತನಿಖೆಗೆ ಆದೇಶಿಸಿದ ಸುಪ್ರೀಂ ಕೋರ್ಟ್‌
ಹಿಂಡೆನ್‌ಬರ್ಗ್‌ನ ವರದಿಯ ನಂತರ, ಈ ವಿಷಯದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಹಲವಾರು ಅರ್ಜಿಗಳನ್ನು ಸಲ್ಲಿಕೆ ಮಾಡಲಾಗಿತ್ತು. ಹಿಂಡೆನ್‌ಬರ್ಗ್ ವರದಿಯಲ್ಲಿ ಅದಾನಿ ಗ್ರೂಪ್ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ತನಿಖೆ ನಡೆಸಬೇಕೆಂದು ಅರ್ಜಿದಾರರು ಒತ್ತಾಯಿಸಿದ್ದಾರೆ. ಈ ಕುರಿತು ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಈಗ 6 ಸದಸ್ಯರ ಸಮಿತಿಯನ್ನು ರಚಿಸಿದೆ.
 

click me!