
ಅಮೆರಿಕ ಮೂಲದ ಸಣ್ಣ ಮಾರಾಟಗಾರ (short-seller) ಹಿಂಡೆನ್‌ಬರ್ಗ್ ರಿಸರ್ಚ್ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುತ್ತಿದೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಅದಾನಿ ಗ್ರೂಪ್‌ನ ಸಿಎಫ್‌ಒ ಜುಗೇಶಿಂದರ್ ಸಿಂಗ್ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಗೂಡಾರ್ಥವಿರುವ (cryptic) ಪೋಸ್ಟ್ ಮಾಡಿದ್ದು, ಅವರು ಮಾಡಿದ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ತನ್ನ ಹಲವು ವಿವಾದಾತ್ಮಕ ವರದಿಗಳ ಮೂಲಕ ಅದಾನಿ ಗ್ರೂಪ್‌ಗೆ ಸಾಕಷ್ಟು ನಷ್ಟ ಉಂಟು ಮಾಡಿದ್ದ ಹಿಂಡೆನ್‌ಬರ್ಗ್ ಬಾಗಿಲು ಹಾಕುತ್ತೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಅದಾನಿ ಗ್ರೂಪ್‌ನ ಸಿಎಫ್‌ಒ ಜುಗೇಶಿಂದರ್ ಸಿಂಗ್ ಟ್ವಿಟ್ಟರ್‌ನಲ್ಲಿ 'ಕಿತ್ನೆ ಘಾಜಿ ಆಯೆ, ಕಿತ್ನೆ ಘಾಜಿ ಗಯೇ ಎಂದು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದರು. ಇದರರ್ಥ 'ಎಷ್ಟು ಘಾಜಿಗಳು ಬಂದರು ಮತ್ತು ಎಷ್ಟು ಘಾಜಿಗಳು ಹೋದರು'ಎಂಬುದಾಗಿದೆ. ಹಿಂಡೆನ್‌ಬರ್ಗ್ ಮುಚ್ಚುತ್ತಿದೆ ಎಂಬ ವಿಚಾರದ ಜೊತೆ ಅದಾನಿ ಗ್ರೂಪ್‌ನ ಷೇರು ಬೆಲೆಗಳು 9% ರಷ್ಟು ಏರಿಕೆಯಾದ ಸಂದರ್ಭದಲ್ಲಿ ಈ ಪೋಸ್ಟ್ ಮಾಡಲಾಗಿದ್ದು, ಸಖತ್ ವೈರಲ್ ಆಗಿದೆ.
ಅದಾನಿ ಗ್ರೂಪ್ ಸೇರಿದಂತೆ ಹಲವು ಪ್ರಮುಖ ಉದ್ಯಮ ಕಂಪನಿಗಳನ್ನು ಗುರಿಯಾಗಿಸಿಕೊಂಡು ಸುದ್ದಿಯಲ್ಲಿದ್ದ ಹಿಂಡೆನ್‌ಬರ್ಗ್ ರಿಸರ್ಚ್ ಗುರುವಾರ ತನ್ನ ಅಂಗಡಿಯನ್ನು ಬಂದ್ ಮಾಡುವುದಾಗಿ ಘೋಷಣೆ ಮಾಡಿತ್ತು. ಹಿಂಡೆನ್‌ಬರ್ಗ್‌ನ ಸಂಸ್ಥಾಪಕ ನೇಟ್ ಆಂಡರ್ಸನ್ ಅವರು ತಮ್ಮ ಈ ಸಂಸ್ಥೆಯನ್ನು ಮುಚ್ಚುವ ನಿರ್ಧಾರವು ತಮ್ಮ ನಡೆಯುತ್ತಿರುವ ಯೋಜನೆಗಳನ್ನು ಪೂರ್ಣಗೊಳಿಸಿದ ನಂತರ ಕಾರ್ಯಾಚರಣೆಯನ್ನು ಮುಕ್ತಾಯಗೊಳಿಸುವ ದೀರ್ಘಾವಧಿಯ ಯೋಜನೆಯ ಭಾಗವಾಗಿದೆ ಎಂದು ವಿವರಿಸಿದ್ದಾರೆ. ಹಾಗೆಯೇ ಇದರ ಹಿಂದೆ ಯಾವುದೇ ಬೆದರಿಕೆಗಳು ಅಥವಾ ವೈಯಕ್ತಿಕ ಕಾರಣಗಳಿಲ್ಲ ಎಂದು ನೇಟ್ ಆಂಡರ್ಸನ್ ಹೇಳಿದ್ದಾರೆ.
ಅಮೆರಿಕವು ತೀವ್ರ ರಾಜಕೀಯ ಸಂಚಲನವನ್ನು ಎದುರಿಸುತ್ತಿರುವ ಸಮಯದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಚುನಾಯಿತ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಧಿಕಾರ ಸ್ವೀಕಾರ ಸಮಾರಂಭ ಮುಂದಿನ ದಿನಗಳಲ್ಲಿ ಇದ್ದು, ಮತ್ತು ಇತ್ತೀಚೆಗೆ ಅದಾನಿ ಗ್ರೂಪ್ ವಿರುದ್ಧದ ಅಮೆರಿಕದ ಅಧಿಕಾರಿಗಳ ತನಿಖೆಯನ್ನು ಅಮೆರಿಕಾ ಸಂಸತ್(ಕಾಂಗ್ರೆಸ್) ಸದಸ್ಯ ಲ್ಯಾನ್ಸ್ ಗುಡೆನ್ ಟೀಕಿಸಿದ್ದರು. ಇಂತಹ ತನಿಖೆಯು ಜಾಗತಿಕವಾಗಿ ಅಮೆರಿಕದ ರಾಜತಾಂತ್ರಿಕ ಸಂಬಂಧಗಳನ್ನು ಹಾನಿಗೊಳಿಸಬಹುದು ಎಂದು ಗುಡೆನ್ ಕಳವಳ ವ್ಯಕ್ತಪಡಿಸಿದ್ದರು. ಇದೆಲ್ಲದರ ನಡುವೆ ಈಗ ಹಿಂಡೆನ್‌ಬರ್ಗ್ ಸಂಸ್ಥಾಪಕ ತಮ್ಮ ಸಂಸ್ಥೆಯನ್ನು ಮುಚ್ಚುವುದಾಗಿ ಹೇಳಿಕೆ ನೀಡಿದ್ದಾರೆ.
ಹಿಂಡೆನ್‌ಬರ್ಗ್ ಮುಚ್ಚುತ್ತೆ ಎಂಬ ಸುದ್ದಿಗೆ ಪ್ರತಿಯಾಗಿ, ಜನವರಿ 16 ರಂದು ಅದಾನಿ ಗ್ರೂಪ್ ಷೇರುಗಳು ಗಗನಕ್ಕೇರಿದವು. ಅದಾನಿ ಪವರ್ ಶೇ. 9% ರಷ್ಟು ಏರಿಕೆಯಾಗಿ ₹599.90 ತಲುಪಿತು, ಆದರೆ ಅದಾನಿ ಗ್ರೀನ್ ಎನರ್ಜಿ, ಅದಾನಿ ಎಂಟರ್‌ಪ್ರೈಸಸ್ ಮತ್ತು ಅದಾನಿ ಟೋಟಲ್ ಗ್ಯಾಸ್‌ನಂತಹ ಇತರ ಗುಂಪಿನ ಕಂಪನಿಗಳು ಕ್ರಮವಾಗಿ ಶೇ. 8.8, ಶೇ.7.7 ಮತ್ತು ಶೇ. 7 ರಷ್ಟು ಏರಿದವು. ಅದಾನಿ ಎನರ್ಜಿ ಸೊಲ್ಯೂಷನ್ಸ್, ಅದಾನಿ ಪೋರ್ಟ್ಸ್ ಮತ್ತು ಅಂಬುಜಾ ಸಿಮೆಂಟ್‌ನಂತಹ ಗುಂಪಿನ ಇತರ ಕಂಪನಿಗಳು ಸಹ ಗಮನಾರ್ಹ ಲಾಭಗಳನ್ನು ಕಂಡವು, ಇದು ತಿಂಗಳುಗಳ ಚಂಚಲತೆಯ ನಂತರ ಹೂಡಿಕೆದಾರರ ವಿಶ್ವಾಸವನ್ನು ಮತ್ತೆ ಗಳಿಸುವಲ್ಲಿ ಯಶಸ್ವಿಯಾಗಿದೆ.
ಹಿಂಡೆನ್‌ಬರ್ಗ್ ರಿಸರ್ಚ್ ಮೊದಲು 2022 ರಲ್ಲಿ ಅದಾನಿ ಗ್ರೂಪ್ ವಿರುದ್ಧ ಆರ್ಥಿಕ ದುರುಪಯೋಗದ ಆರೋಪ ಮಾಡಿತು, ಇದರಿಂದ ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್‌ಗೆ ಗಮನಾರ್ಹ ನಷ್ಟಕ್ಕೆ ಕಾರಣವಾಯಿತು. ಆದರೂ, ಅದಾನಿ ಗ್ರೂಪ್ ಈ ಆರೋಪಗಳನ್ನು ನಿರಂತರವಾಗಿ ನಿರಾಕರಿಸುತ್ತಾ ಬಂದಿದೆ, ಇವುಗಳನ್ನು 'ಭಾರತದ ಮೇಲಿನ ಲೆಕ್ಕಾಚಾರದ ದಾಳಿಗಳು' ಎಂದು ಕರೆದಿದೆ. ನಂತರ ಭಾರತದ ಸುಪ್ರೀಂಕೋರ್ಟ್ ಅದಾನಿ ಗ್ರೂಪನ್ನು ಆರೋಪದಿಂದ ಮುಕ್ತಗೊಳಿಸಿತು ಜೊತೆಗೆ ಅನೇಕ ಆರ್ಥಿಕ ತಜ್ಞರು ಈ ಆರೋಪಗಳನ್ನು ಆಧಾರರಹಿತ ಎಂದು ಕರೆದರು.
ಆಗಸ್ಟ್ 2024 ರಲ್ಲಿ, ಹಿಂಡೆನ್‌ಬರ್ಗ್ ಮತ್ತೆ ಇದೇ ರೀತಿಯ ಆರೋಪಗಳನ್ನು ಮಾಡಿತ್ತು, ಆದರೆ ಅದಾನಿ ಗ್ರೂಪ್ ಅವುಗಳನ್ನ ತಕ್ಷಣವೇ ನಿರಾಕಿರಿಸತ್ತು. ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ, ಈ ದಾಳಿಗಳನ್ನು ಕಂಪನಿಯ ಆರ್ಥಿಕ ಸ್ಥಿತಿಯನ್ನು ಅಸ್ಥಿರಗೊಳಿಸುವ ಮತ್ತು ಅದನ್ನು ರಾಜಕೀಯ ವಿವಾದಗಳಿಗೆ ಎಳೆಯುವ ಗುರಿಯನ್ನು ಹೊಂದಿರುವ ಹಲ್ಲೆಯ ಭಾಗವೆಂದು ಉಲ್ಲೇಖಿಸಿದರು. ಇದರ ಜೊತೆಗೆ ಹಿಂಡೆನ್‌ಬರ್ಗ್ ಭಾರತೀಯ ಮಾರುಕಟ್ಟೆ ನಿಯಂತ್ರಕದ ಮುಖ್ಯಸ್ಥೆ ಮಾಧವಿ ಪುರಿ ಬುಚ್ ಮತ್ತು ಅವರ ಕುಟುಂಬವನ್ನು ಗುರಿಯಾಗಿಸಿಕೊಂಡು, ಅವರು ಈ ವಿವಾದದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು, ಆದರೆ ಬುಚ್ ಇದನ್ನು ವ್ಯಕ್ತಿತ್ವದ ಹತ್ಯೆಯ ಪ್ರಯತ್ನ ಎಂದು ಕರೆದರು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.