ನವದೆಹಲಿ (ಅ.01): ಕೊರೋನಾ (covid) ಬಿಕ್ಕಟ್ಟನಿಂದಾಗಿ ದೇಶದ ಅರ್ಥವ್ಯವಸ್ಥೆ ಕುಸಿದು ಬಿದ್ದು, ಜನರು ಪಡಬಾರದ ಕಷ್ಟಪಡುತ್ತಿರುವಾಗ, ಅತ್ತ ಭಾರತದಲ್ಲಿ ಶ್ರೀಮಂತರ ಸಂಖ್ಯೆಯಲ್ಲೂ ಭಾರಿ ಏರಿಕೆ ದಾಖಲಾಗಿದೆ. ಅದಾನಿ ಸಮೂಹದ ಮುಖ್ಯಸ್ಥರಾದ ಗೌತಮ್ ಅದಾನಿ (Goutham Adani) ಅವರ ಕುಟುಂಬದ ಸಂಪತ್ತು ಕಳೆದ ಒಂದೇ ವರ್ಷದಲ್ಲಿ 3.65 ಲಕ್ಷ ಕೋಟಿ ರು.ನಷ್ಟುಹೆಚ್ಚಾಗಿದೆ. ಅಂದರೆ ಕುಟುಂಬದ ನಿತ್ಯದ ಆದಾಯ 1000 ಕೋಟಿ ರು.ಗಿಂತಲೂ ಹೆಚ್ಚು ಎಂದು ಹುರೂನ್ ಇಂಡಿಯಾ ಸಂಸ್ಥೆ ಬಿಡುಗಡೆ ಮಾಡಿರುವ ಭಾರತದ ಆಗರ್ಭ ಶ್ರೀಮಂತರ ವರದಿ ಹೇಳಿದೆ.
ಸಂಸ್ಥೆಯ ವರದಿ ಅನ್ವಯ 7.18 ಲಕ್ಷ ಕೋಟಿ ರು. ಆಸ್ತಿಯೊಂದಿಗೆ ಮುಕೇಶ್ ಅಂಬಾನಿ (Mukesh Ambani) ಕುಟುಂಬ ದೇಶದ ನಂ.1 ಶ್ರೀಮಂತ ಎಂಬ ಹಿರಿಮೆ ಉಳಿಸಿಕೊಂಡಿದೆ. ಕಳೆದ ವರ್ಷಕ್ಕಿಂತ ಕುಟುಂಬದ ಆಸ್ತಿ ಶೇ.9ರಷ್ಟುಮಾತ್ರ ಹೆಚ್ಚಾಗಿದೆ. ಆದರೆ 2ನೇ ಸ್ಥಾನಕ್ಕೆ ಏರಿರುವ ಗೌತಮ್ ಅದಾನಿ ಕುಟುಂಬದ ಆಸ್ತಿ ಕಳೆದೊಂದು ವರ್ಷದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಹಿಂದಿನ ವರ್ಷ 1.40 ಲಕ್ಷ ಕೋಟಿ ರು.ನಷ್ಟಿದ್ದ ಅದಾನಿ ಕುಟುಂಬದ ಆಸ್ತಿ ಈ ವರ್ಷ 5.09 ಲಕ್ಷ ಕೋಟಿ ರು.ಗೆ ಏರಿದೆ. ಅಂದರೆ ಕುಟುಂಬದ ನಿತ್ಯದ ಆದಾಯ 1000 ಕೋಟಿ ರು. ಮೀರಿದೆ. ಜೊತೆಗೆ 1 ಲಕ್ಷ ಕೋಟಿ ರು.ಗಿಂತ ಹೆಚ್ಚಿನ ಮಾರುಕಟ್ಟೆಮೌಲ್ಯ ಹೊಂದಿರುವ 5 ಕಂಪನಿಗಳನ್ನು ಹೊಂದಿರುವ ಏಕೈಕ ಭಾರತೀಯ ಎಂಬ ಹಿರಿಮೆಗೂ ಗೌತಮ್ ಅದಾನಿ ಪಾತ್ರರಾಗಿದ್ದಾರೆ. ಇನ್ನು 2.36 ಲಕ್ಷ ಕೋಟಿ ರು. ಆಸ್ತಿಯೊಂದಿಗೆ ಎಚ್‌ಸಿಎಲ್ ಸಂಸ್ಥಾಪಕ ಶಿವ ನಾಡಾರ್ ಕುಟುಂಬ 3ನೇ ಸ್ಥಾನದಲ್ಲಿದೆ.
ಅಂಬಾನಿ ಆಸ್ತಿ, ಒಂದೇ ದಿನದಲ್ಲಿ 16,765 ಕೋಟಿ ಏರಿಕೆ: ವಾರೆನ್ ಬಫೆಟ್ ಹಿಂದಿಕ್ಕಲು ಸಜ್ಜು!
ಶ್ರೀಮಂತರ ಸಂಖ್ಯೆ ಏರಿಕೆ: ಕಳೆದ ಒಂದು ವರ್ಷದಲ್ಲಿ 179 ಭಾರತೀಯರು ಆಗರ್ಭ ಶ್ರೀಮಂತರಾಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ 1000 ಕೋಟಿ ರು.ಗಿಂತ ಹೆಚ್ಚಿನ ಸಂಪತ್ತು ಹೊಂದಿರುವ ಭಾರತೀಯರ ಸಂಖ್ಯೆ 1000ದ ಗಡಿದಾಟಿದೆ. ಈ ಪೈಕಿ 13 ಜನರ ಆಸ್ತಿ 1 ಲಕ್ಷ ಕೋಟಿ ರು.ಗಿಂತ ಹೆಚ್ಚಿದೆ. ದೇಶದ 1007 ಆಗರ್ಭ ಶ್ರೀಮಂತರು 119 ನಗರಗಳಲ್ಲಿ ವಾಸ ಮಾಡುತ್ತಿದ್ದಾರೆ. ಈ ಪೈಕಿ ಮುಂಬೈನಲ್ಲಿ 255, ದೆಹಲಿಯಲ್ಲಿ 167 ಮತ್ತು ಬೆಂಗಳೂರಿನಲ್ಲಿ 85 ಜನರು ವಾಸ ಮಾಡುತ್ತಿದ್ದಾರೆ. 2011ರಲ್ಲಿ ಇಂಥ ಶ್ರೀಮಂತ ಭಾರತೀಯರ ಸಂಖ್ಯೆ ಕೇವಲ 100 ಇತ್ತು. ಇದೀಗ ಅದು 1007ಕ್ಕೆ ತಲುಪಿದೆ. ಮುಂದಿನ 5 ವರ್ಷಗಳಲ್ಲಿ ಈ ಸಂಖ್ಯೆ 3000 ದಾಟಲಿದೆ ಎಂದು ವರದಿ ಹೇಳಿದೆ. ಭಾರೀ ಶ್ರೀಮಂತರಲ್ಲಿ ಔಷಧ ವಲಯಕ್ಕೆ ಸೇರಿದ 40, ಪೆಟ್ರೋಕೆಮಿಕಲ್ಸ್ ವಲಯದ 27, ಸಾಫ್ಟ್‌ವೇರ್ ಕ್ಷೇತ್ರದ 22 ಜನರು ಇದ್ದಾರೆ.
ಶ್ರೀಮಂತ ಮಹಿಳೆ:
ಮಹಿಳೆಯರ ಪೈಕಿ 31300 ಕೋಟಿ ರು. ಆಸ್ತಿಯೊಂದಿಗೆ ಗೋದ್ರೇಜ್ ಸಮೂಹದ ಸ್ಮಿತಾ ವಿ.ಕೃಷ್ಣ ಮೊದಲ ಸ್ಥಾನದಲ್ಲಿ, 28200 ಕೋಟಿ ರು. ಆಸ್ತಿಯೊಂದಿಗೆ ಬಯೋಕಾನ್‌ನ ಕಿರಣ್ ಮಜುಂದಾರ್ ಶಾ 2ನೇ ಸ್ಥಾನ ಪೆದುಕೊಂಡಿದ್ದಾರೆ.
ಟಾಪ್ 5 ಶ್ರೀಮಂತರು
ಹೆಸರು ಒಟ್ಟು ಆಸ್ತಿ ಏರಿಕೆ ನಿತ್ಯದ ಆದಾಯ
ಮುಕೇಶ್ ಅಂಬಾನಿ 7.18 ಲಕ್ಷ ಕೋಟಿ ಶೇ.9 163 ಕೋಟಿ ರು
ಗೌತಮ್ ಅದಾನಿ 5.09 ಲಕ್ಷ ಕೋಟಿ ಶೇ.261 1000 ಕೋಟಿ ರು.
ಶಿವ ನಾಡಾರ್ 2.36 ಲಕ್ಷ ಕೋಟಿ ಶೇ.67 260 ಕೋಟಿ ರು.
ಹಿಂದೂಜಾ 2.20 ಲಕ್ಷ ಕೋಟಿ ಶೇ.53 209 ಕೋಟಿ ರು.
ಲಕ್ಷ್ಮೇ ಮಿತ್ತಲ್ 1.74 ಲಕ್ಷ ಕೋಟಿ ಶೇ.187 312 ಕೋಟಿ ರು.