ಆಧಾರ್ ಅಪ್ಡೇಟ್ ಮಾಡಲು ದಾಖಲೆ ಹಂಚಿಕೊಳ್ಳುವಂತೆ ನಿಮ್ಗೆ ಇ-ಮೇಲ್ ಬಂದಿದೆಯಾ? ಹಾಗಿದ್ರೆ ಎಚ್ಚರ!

By Suvarna News  |  First Published Aug 22, 2023, 6:19 PM IST

ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು  ದಾಖಲೆಗಳನ್ನು ಹಂಚಿಕೊಳ್ಳುವಂತೆ ಇ-ಮೇಲ್ ಅಥವಾ ವಾಟ್ಸಾಪ್ ಸಂದೇಶಗಳು ನಿಮಗೆ ಬಂದಿದ್ದರೆ ಎಚ್ಚರ ವಹಿಸಿ.ಇದು ವಂಚಕರು ವಂಚನೆಗೆ ಬಳಸುತ್ತಿರುವ ಹೊಸ ವಿಧಾನವಾಗಿದ್ದು,ಯಾವುದೇ ಕಾರಣಕ್ಕೂ ದಾಖಲೆಗಳನ್ನು ಹಂಚಿಕೊಳ್ಳಬೇಡಿ ಎಂದು ಯುಐಡಿಎಐ ತಿಳಿಸಿದೆ. 


ನವದೆಹಲಿ (ಆ.22): ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ದಾಖಲೆಗಳನ್ನು ಹಂಚಿಕೊಳ್ಳುವಂತೆ ಇ-ಮೇಲ್ ಅಥವಾ ವಾಟ್ಸಾಪ್ ಸಂದೇಶಗಳು ನಿಮಗೆ ಬರುತ್ತಿವೆಯಾ? ಒಂದು ವೇಳೆ ಹೌದು ಎಂದಾದರೆ ಎಚ್ಚರ! ಇಂಥ ಸಂದೇಶಗಳ ಬಗ್ಗೆ ಜಾಗ್ರತೆ ವಹಿಸಿ, ಇವು ನಿಮ್ಮನ್ನು ವಂಚಿಸಲು ಬಳಸುತ್ತಿರುವ ಹೊಸ ಅಸ್ತ್ರವಾಗಿದೆ. ಇಂಥ ಸಂದೇಶಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಜನರನ್ನು ಕೋರಿದೆ. ಇ-ಮೇಲ್ ಮೂಲಕ ಗುರುತು ಅಥವಾ ವಿಳಾಸ ದೃಢೀಕರಣ ದಾಖಲೆಗಳನ್ನು ಹಂಚಿಕೊಳ್ಳುವಂತೆ  ಯುಐಡಿಎಐ ಎಂದಿಗೂ ಕೋರುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇನ್ನು ಆಧಾರ್ ಕಾರ್ಡ್ ನಲ್ಲಿ ಮಾಹಿತಿಗಳನ್ನು ಅಪ್ಡೇಟ್ ಮಾಡಬೇಕಿದ್ದರೆ ಒಂದೇ ಆನ್ ಲೈನ್ ನಲ್ಲಿ ಮಾಡಿ ಇಲ್ಲವೇ ಸಮೀಪದ ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ ಎಂಬ ಸಲಹೆಯನ್ನು ಎಕ್ಸ್ (ಟ್ವಿಟ್ಟರ್ ) ಪೋಸ್ಟ್ ಮೂಲಕ ನೀಡಿದೆ. ಆಧಾರ್ ಅತ್ಯಂತ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಬ್ಯಾಂಕ್ ಖಾತೆ ತೆರೆಯೋದ್ರಿಂದ ಹಿಡಿದು ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯುವ ತನಕ ಎಲ್ಲ ಪ್ರಮುಖ ಕೆಲಸಗಳಿಗೂ ಆಧಾರ್ ಕಾರ್ಡ್ ಅಗತ್ಯ. ಅಲ್ಲದೆ, ಆಧಾರ್ ನಲ್ಲಿ ವಿಳಾಸ, ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆ ಮಾಹಿತಿ ಜೊತೆಗೆ ಅದು ಪ್ಯಾನ್ ಕಾರ್ಡ್ ಜೊತೆಗೆ ಲಿಂಕ್ ಆಗಿರುವ ಕಾರಣ ಆಧಾರ್ ಕಾರ್ಡ್ ಬಗ್ಗೆ ಎಚ್ಚರಿಕೆ ವಹಿಸೋದು ಅಗತ್ಯ.

ಆಧಾರ್ ಕಾರ್ಡ್ ನಲ್ಲಿರುವ ಪ್ರಮುಖ ಮಾಹಿತಿಗಳನ್ನು ಪಡೆಯುವ ಮೂಲಕ ಜನರನ್ನು ವಂಚಿಸುತ್ತಿರುವ ಹೊಸ ಪ್ರಕರಣಗಳು ಇತ್ತೀಚಿಗೆ ವರದಿಯಾಗಿವೆ. ಹೀಗಾಗಿ ನಿಮ್ಮ ಆಧಾರ್ ಕಾರ್ಡ್ ಮಾಹಿತಿಗಳ ನಿಖರತೆ ಹಾಗೂ ಸುರಕ್ಷತೆಗೆ ಅಧಿಕೃತ ಮಾಧ್ಯಮಗಳ ಮೂಲಕ ಮಾಹಿತಿಗಳನ್ನು ಅಪ್ಡೇಟ್ ಮಾಡುವಂತೆ ಯುಐಡಿಎಐ ಸಲಹೆ ನೀಡಿದೆ. ಯುಐಡಿಎಐ ಅಧಿಕೃತ ವೆಬ್ ಸೈಟ್ (http://uidai.gov.in) ಭೇಟಿ ನೀಡುವ ಮೂಲಕ ಅಥವಾ ಆಧಾರ್ ಅಪ್ಲಿಕೇಷನ್ ಡೌನ್ ಲೋಡ್ ಮಾಡುವ ಮೂಲಕ ಅಗತ್ಯ ಮಾಹಿತಿಗಳನ್ನು ತಿದ್ದುಪಡಿ ಮಾಡಬಹುದು. ಸಮೀಪದ ಆಧಾರ್ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಕೂಡ ಆಧಾರ್ ಕಾರ್ಡ್ ಅಪ್ಡೇಟ್ ಮಾಡಬಹುದು.



UIDAI never asks you to share your POI/ POA documents to update your over Email or Whatsapp.

Update your Aadhaar either online through or visit Aadhaar centers near you. pic.twitter.com/QZlfOnBp54

— Aadhaar (@UIDAI)

Tap to resize

Latest Videos

10 ವರ್ಷಗಳಿಗಿಂತ ಹಳೆಯದಾದ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಪ್ರೋತ್ಸಾಹ ನೀಡುತ್ತಿದೆ. ಅಲ್ಲದೆ, ಯಾವುದೇ ಶುಲ್ಕವಿಲ್ಲದೆ ಆನ್ ಲೈನ್ ಮೂಲಕ ಆಧಾರ್ ಕಾರ್ಡ್ ನಲ್ಲಿ ಮಾಹಿತಿಗಳನ್ನು ಅಪ್ಡೇಟ್ ಮಾಡಲು ಯುಐಡಿಎಐ ಅವಕಾಶ ಕಲ್ಪಿಸಿದೆ. ಮೈ ಆಧಾರ್ ಪೋರ್ಟಲ್ ನಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಬಹುದು. ಈ ಹಿಂದೆ ಈ ಅವಕಾಶ 2023ರ ಮಾರ್ಚ್ 15ರಿಂದ 2023 ಜೂನ್ 14ರ ತನಕ ಮಾತ್ರ ಲಭ್ಯವಿತ್ತು. ಈಗ ಇದನ್ನು  2023ರ ಸೆಪ್ಟೆಂಬರ್ 14ರ ತನಕ ಮುಂದುವರಿಸಲಾಗಿದೆ. 

ಯಾರು ಅಪ್ಡೇಟ್ ಮಾಡಬೇಕು?
ಆಧಾರ್ ಕಾರ್ಡ್ ನಲ್ಲಿ ವ್ಯಕ್ತಿಯ ಬಯೋಮೆಟ್ರಿಕ್ ಡೇಟಾ, ವಿಳಾಸ, ಇಮೇಲ್, ಫೋನ್ ನಂಬರ್ ಹಾಗೂ ಇತರ ಮಾಹಿತಿಗಳಲ್ಲಿ ಯಾವುದೇ ಬದಲಾವಣೆ ಆಗಿದ್ದರೆ ಅವುಗಳನ್ನು ಆಧಾರ್ ನಲ್ಲಿ ಅಪ್ಡೇಟ್ ಮಾಡುವುದು ಅಗತ್ಯ. ಇನ್ನು ಮಗುವಿಗೆ ಆಧಾರ್ ಕಾರ್ಡ್ ಮಾಡಿಸಿದ್ದರೆ ಐದು ವರ್ಷವಾದಾಗ ಹಾಗೂ 15 ವರ್ಷವಾದಾಗ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವುದು ಅಗತ್ಯ. ಇನ್ನು ಈ ಸನ್ನಿವೇಶಗಳನ್ನು ಹೊರತುಪಡಿಸಿದರೆ ಸದ್ಯ ಯುಐಡಿಎಐ ಸೂಚನೆಯಂತೆ ಆಧಾರ್ ಕಾರ್ಡ್ ಪಡೆದು 10 ವರ್ಷಗಳಾಗಿದ್ದರೆ ಅದನ್ನು ಅಪ್ಡೇಟ್ ಮಾಡುವುದು ಅಗತ್ಯ. 

*ಯುಐಡಿಎಐ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.
*myaadhaar ಮೇಲೆ ಕ್ಲಿಕ್ ಮಾಡಿ.
*ಆ ಬಳಿಕ 'Update Aadhaar'ಆಯ್ಕೆ ಮಾಡಿ.
*ನಿಮ್ಮ ಆಧಾರ್ ಸಂಖ್ಯೆ ಹಾಗೂ ನೋಂದಾಯಿತ ಮೊಬೈಲ್ ಸಂಖ್ಯೆ ನಮೂದಿಸಿ.
*ಆ ಬಳಿಕ 'Send OTP'ಬಟನ್ ಮೇಲೆ ಕ್ಲಿಕ್ ಮಾಡಿ.
*ಈಗ ನಿಮ್ಮ ಮೊಬೈಲ್ ಸಂಖ್ಯೆಗೆ ಬಂದಿರುವ ಒಟಿಪಿ ನಮೂದಿಸಿ.
*Login ಬಟನ್ ಮೇಲೆ ಕ್ಲಿಕ್ ಮಾಡಿ.
*ನಿಮಗೆ ಯಾವ ಮಾಹಿತಿಯನ್ನು ನವೀಕರಿಸಬೇಕು ಅದನ್ನು ಆಯ್ಕೆ ಮಾಡಿ. ಉದಾಹರಣೆಗೆ ವಿಳಾಸ ಬದಲಾಯಿಸಬೇಕಿದ್ದರೆ 'Address Update' ಆಯ್ಕೆ ಮಾಡಿ.
*ಈಗ ನಿಮ್ಮ ವಿಳಾಸ ದೃಢೀಕರಣ ದಾಖಲೆಯ ಸ್ಕ್ಯಾನ್ ಪ್ರತಿ ಅಪ್ಲೋಡ್ ಮಾಡಿ.
*ಆ ಬಳಿಕ 'Submit'ಬಟನ್ ಮೇಲೆ ಕ್ಲಿಕ್ ಮಾಡಿ.
*ಈಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಅಪ್ಡೇಟ್ ರಿಕ್ವೆಸ್ಟ್ ಸಂಖ್ಯೆ (URN) ಬರುತ್ತದೆ. 
*15 ದಿನಗಳೊಳಗೆ ನಿಮ್ಮ ವಿಳಾಸ ಅಥವಾ ಇತರ ಯಾವುದೇ ಮಾಹಿತಿ ಆಧಾರ್ ನಲ್ಲಿ ಅಪ್ಡೇಟ್ ಆಗುತ್ತದೆ. 

click me!