
ಬೆಂಗಳೂರು(ನ.22): ಹಲವು ಪ್ರಥಮಗಳಿಗೆ ಸಾಕ್ಷಿಯಾಗಿ ಕೇವಲ ಭಾರತದಲ್ಲಷ್ಟೇ ಅಲ್ಲದೇ ವಿದೇಶಗಳಲ್ಲೂ ಹೆಸರುವಾಸಿಯಾಗಿರುವ ನಮ್ಮ ಬೆಂಗಳೂರು ಇದೀಗ ಮತ್ತೊಂದು ಖ್ಯಾತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.
ನಿಮಗೆ ಹೆಚ್ಚು ಸಂಬಳ ಬೇಕು ಎಂದಾದರೆ ಕೂಡಲೇ ಬೆಂಗಳೂರಿಗೆ ಶಿಫ್ಟ್ ಆಗಿ. ಏಕೆಂದರೆ ಉದ್ಯಾನ ನಗರಿಯಲ್ಲಿ ಕೆಲಸ ಮಾಡುತ್ತಿರುವವರು ದೇಶದಲ್ಲಿಯೇ ಅತಿ ಹೆಚ್ಚು ವೇತನ ಪಡೆಯುತ್ತಿದ್ದಾರೆ.
ಹೌದು, ಬೆಂಗಳೂರಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ನೌಕರರು, ಇಡೀ ದೇಶದಲ್ಲೇ ಅತಿ ಹೆಚ್ಚು ವೇತನ ಪಡೆಯುತ್ತಿದ್ದಾರೆ ಎಂದು ವ್ಯಾಪಾರ ಮತ್ತು ಉದ್ಯೋಗ-ಆಧಾರಿತ ಸೇವಾ ಸಂಸ್ಥೆ ಲಿಂಕ್ಡ್‌ಇನ್(LinkedIn) ತಿಳಿಸಿದೆ.
ವಿಶೇಷವಾಗಿ ಹಾರ್ಡ್‍ವೇರ್, ನೆಟ್‍ವರ್ಕಿಂಗ್, ಸಾಫ್ಟ್‌ವೇರ್, ಐಟಿ ಸೇವೆ ಹಾಗೂ ಗ್ರಾಹಕ ಕ್ಷೇತ್ರ ಭಾರತದಲ್ಲಿ ಅತಿ ಹೆಚ್ಚು ವೇತನ ನೀಡುತ್ತಿರುವ ಮೂರು ಪ್ರಮುಖ ಉದ್ದಿಮೆಗಳು ಎಂದು ಗುರುತಿಸಲಾಗಿದ್ದು, ಹಾರ್ಡ್ ವೇರ್ ಮತ್ತು ಐಟಿ ಸಂಬಂಧಿ ಕ್ಷೇತ್ರಗಳಲ್ಲಿ ಸಂಬಳ ನೀಡುವ ವಿಚಾರಕ್ಕೆ ಬೆಂಗಳೂರು ಮುಂಚೂಣಿಯಲ್ಲಿದ್ದರೆ ಮುಂಬೈ ಮತ್ತು ನವದೆಹಲಿ ನಗರಗಳು ನಂತರದ ಸ್ಥಾನದಲ್ಲಿವೆ.
ಬೆಂಗಳೂರಿನಲ್ಲಿ ಹಾರ್ಡ್‌ವೇರ್ ಮತ್ತು ನೆಟ್‌ವರ್ಕಿಂಗ್ ಕ್ಷೇತ್ರದಲ್ಲಿ ಸರಾಸರಿ ವಾರ್ಷಿಕ 15 ಲಕ್ಷ ರೂ. ಹಾಗೂ ಸಾಫ್ಟ್‌ವೇರ್ ಕ್ಷೇತ್ರದಲ್ಲಿ 12 ಲಕ್ಷ ರೂ. ಗ್ರಾಹಕ ಕ್ಷೇತ್ರದಲ್ಲಿ ವಾರ್ಷಿಕ ಸರಾಸರಿ 9 ಲಕ್ಷ ರೂ. ವೇತನ ನೀಡಲಾಗುತ್ತಿದೆ ಎಂದು ಲಿಂಕ್ಡ್‌ಇನ್ ಸಮೀಕ್ಷೆ ತಿಳಿಸಿದೆ.
ಹಾರ್ಡ್ ವೇರ್ ಮತ್ತು ನೆಟ್‌ವರ್ಕಿಂಗ್ ಕ್ಷೇತ್ರದಲ್ಲಿ ಇಷ್ಟು ಅತಿ ಹೆಚ್ಚು ಸಂಬಳ ನೀಡುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದ್ದು, ವಿಶೇಷವಾಗಿ ಚಿಪ್ ಡಿಸೈನ್ ಹಾಗೂ ನ್ಯೂಯೇಜ್ ನೆಟ್‌ವರ್ಕಿಂಗ್ ಕ್ಷೇತ್ರದಲ್ಲಿ ದುಡಿಯುತ್ತಿರುವ ನಿಪುಣರಿಗೆ ಅತಿ ಹೆಚ್ಚು ಸಂಬಳ ಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.