ತೆರಿಗೆ ಉಳಿತಾಯ ಹೆಚ್ಚಿಸಿಕೊಳ್ಳಲು ಮಾ.31ರ ಮುನ್ನ ಈ 7 ಕೆಲಸಗಳನ್ನು ತಪ್ಪದೇ ಮಾಡಿ ಮುಗಿಸಿ

By Suvarna NewsFirst Published Mar 14, 2024, 1:18 PM IST
Highlights

ಈ ಹಣಕಾಸು ಸಾಲು ಮುಕ್ತಾಯವಾಗುವ ಮುನ್ನ ಮುಂದಿನ ವರ್ಷ ನಿಮ್ಮ ತೆರಿಗೆ ಉಳಿತಾಯದ ಪ್ರಮಾಣ ಹೆಚ್ಚಿಸಿಕೊಳ್ಳಲು ಈ ಕೆಲಸಗಳನ್ನು ಮಾ.31ರೊಳಗೆ ಮಾಡಿ ಮುಗಿಸಿ. 
 

Business Desk: ಪ್ರಸಕ್ತ ಹಣಕಾಸು ವರ್ಷ ಕೊನೆಗೊಳ್ಳಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಿರುವಾಗ ಅನೇಕ ತೆರಿಗೆದಾರರು ಮುಂದಿನ ವರ್ಷದ ತಮ್ಮ ಹೂಡಿಕೆಯನ್ನು ಈಗಾಗಲೇ ಪ್ಲ್ಯಾನ್ ಮಾಡುತ್ತಿದ್ದಾರೆ. ಹೌದು, ಮುಂದಿನ ಹಣಕಾಸು ಸಾಲಿಗೆ ಈಗಲೇ ತೆರಿಗೆ ಲೆಕ್ಕಾಚಾರ ಹಾಕೋದು ಅವಶ್ಯಕ. ಹೀಗಾಗಿ ಕೆಲವು ಸರಳ ವಿಧಾನಗಳನ್ನು ಅನುಸರಿಸುವ ಮೂಲಕ ಅಂತಿಮ ಗಡುವು ಸಮೀಪಿಸುವ ಮುನ್ನ ತೆರಿಗೆ ಉಳಿತಾಯ ಮಾಡಬಹುದು. ಹಾಗಾದ್ರೆ ತೆರಿಗೆ ಉಳಿತಾಯ ಮಾಡಲು ನಮ್ಮ ಹೂಡಿಕೆ ಹೇಗಿರಬೇಕು? ಹಾಗೆಯೇ ಮಾ.31ಕ್ಕಿಂತ ಮುನ್ನ ಯಾವೆಲ್ಲ ತೆರಿಗೆ ಸಂಬಂಧಿ ಕೆಲಸಗಳನ್ನು ಪೂರ್ಣಗೊಳಿಸಬೇಕು? ಇಲ್ಲಿದೆ ಮಾಹಿತಿ. 

1.ತೆರಿಗೆ ಉಳಿತಾಯ ಮಾಡುವ ಯೋಜನೆಗಳಲ್ಲಿ ಹೂಡಿಕೆ ಮಾಡಿ
ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80ಸಿ ಅಡಿಯಲ್ಲಿ ಆದಾಯ ತೆರಿಗೆ ಕಡಿತದ ಪ್ರಯೋಜನಗಳಿವೆ. ಹೀಗಾಗಿ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ಉಳಿತಾಯದ ಪ್ರಯೋಜನ ನೀಡುವ ಯೋಜನೆಗಳಲ್ಲಿ ಹೂಡಿಕೆ ಮಾಡೋದು ಉತ್ತಮ. ವೇತನ ಪಡೆಯುವ ಉದ್ಯೋಗಿಗಳು  ಉದ್ಯೋಗಿಗಳ ಭವಿಷ್ಯ ನಿಧಿಯಲ್ಲಿ (ಇಪಿಎಫ್) ಹೂಡಿಕೆ ಮಾಡಬಹುದು. ಇದರಲ್ಲಿ ಮಾಸಿಕ ಮೂಲವೇತನದಲ್ಲಿ ಶೇ.12ರಷ್ಟನ್ನು ಹೂಡಿಕೆ ಮಾಡಲಾಗುತ್ತದೆ. ಇನ್ನು ತೆರಿಗೆ ಪ್ರಯೋಜನ ಹೊಂದಿರುವ ಇನ್ನೊಂದು ಯೋಜನೆಯೆಂದ್ರೆ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್). ಇದು 15 ವರ್ಷದ ಸರ್ಕಾರಿ ಯೋಜನೆಯಾಗಿದೆ. ಇದಕ್ಕೆ ಅಂದಾಜು ಶೇ.8ರಷ್ಟು ರಿಟರ್ನ್ಸ್ ಸಿಗುತ್ತದೆ. ಇನ್ನು ಈಕ್ವಿಟಿ ಲಿಂಕ್ಡ್ ಉಳಿತಾಯ ಯೋಜನೆಗಳಲ್ಲಿ (ELSS) ಕೂಡ ಹೂಡಿಕೆ ಮಾಡಬಹುದು. ಮೂರು ವರ್ಷಗಳ ಲಾಕ್ ಇನ್ ಅವಧಿಯ ಈ ಯೋಜನೆ ಮಾರುಕಟ್ಟೆ ಲಿಂಕ್ಡ್ ರಿಟರ್ನ್ಸ್ ನೀಡುತ್ತದೆ. ಈ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ರೆ 1.5 ಲಕ್ಷ ರೂ. ತನಕ ತೆರಿಗೆ ಉಳಿತಾಯ ಮಾಡಬಹುದು.

Latest Videos

ಪಿಂಚಣಿ ಪಡೆಯುತ್ತಿರೋರು ಕೂಡ ಐಟಿಆರ್ ಸಲ್ಲಿಕೆ ಮಾಡ್ಬೇಕು; ಅದು ಹೇಗೆ? ಇಲ್ಲಿದೆ ಮಾಹಿತಿ

2.ಸರ್ಕಾರಿ ಯೋಜನೆಗಳಲ್ಲಿ ಹೂಡಿಕೆ
ಕೆಲವು ಸರ್ಕಾರಿ ಯೋಜನೆಗಳಲ್ಲಿನ ಹೂಡಿಕೆಯಿಂದ ತೆರಿಗೆ ಪ್ರಯೋಜನ ಪಡೆಯಬಹುದು. ಉದಾಹರಣೆಗೆ ಸುಕನ್ಯಾ ಸಮೃದ್ಧಿ ಯೋಜನೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ. ಹೀಗಾಗಿ ಇಂಥ ಯೋಜನೆಗಳಲ್ಲಿ ಹೂಡಿಕೆ ಮಾಡಿ. 

3.ಎಲೆಕ್ಟ್ರಿಕ್ ವಾಹನ 
ನೀವು ಎಲೆಕ್ಟ್ರಿಕ್ ವಾಹನ ಹೊಂದಿದ್ದರೆ ಕೂಡ ತೆರಿಗೆ ಕಡಿತದ ಪ್ರಯೋಜನ ಪಡೆಯಬಹುದು.  ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80EEB ಅಡಿಯಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿಸಲು ಮಾಡಿದ ಸಾಲದ ಬಡ್ಡಿ ಮೇಲೆ 1,50,000ರೂ. ತೆರಿಗೆ ಕಡಿತದ ಪ್ರಯೋಜನ ಪಡೆಯಬಹುದು. ಆದರೆ, ಈ ಸಾಲ ಮಾತ್ರ 2019ರ ಏಪ್ರಿಲ್ 1 ಹಾಗೂ 2023ರ ಮಾರ್ಚ್ 31ರ ನಡುವೆ ಪಡೆದಿರಬೇಕು. 

4.ಆರೋಗ್ಯ ವಿಮೆ ಕಡಿತಗಳು
ನೀವು ನಿಮ್ಮ, ಸಂಗಾತಿ, ಮಕ್ಕಳು ಹೆಸರಿನಲ್ಲಿ ಆರೋಗ್ಯ ವಿಮೆ ಮಾಡಿಸಿದ್ದು, ಅದರ ಪ್ರೀಮಿಯಂ ಪಾವತಿಸುತ್ತಿದ್ದರೆ  25,000ರೂ. ತನಕ ತೆರಿಗೆ ಕಡಿತ ಕ್ಲೇಮ್ ಮಾಡಬಹುದು. ಇನ್ನು ನೀವು ನಿಮ್ಮ ಪಾಲಕರ ಆರೋಗ್ಯ ವಿಮೆಯನ್ನು ಪಾವತಿಸುತ್ತಿದ್ದರೆ ಅದಕ್ಕು ಕೂಡ 25,000ರೂ. ತನಕ ಹೆಚ್ಚುವರಿ ಕಡಿತದ ಪ್ರಯೋಜನ ಪಡೆಯಬಹುದು. ಒಂದು ವೇಳೆ ನೀವು ಹಿರಿಯ ನಾಗರಿಕರಾಗಿದ್ದು, ನಿಮಗಾಗಿ ಅಥವಾ ಹಿರಿಯ ನಾಗರಿಕರಾಗಿರುವ ಪಾಲಕರ ಹೆಸರಿನಲ್ಲಿ ಆರೋಗ್ಯ ವಿಮೆ ಮಾಡಿಸಿದ್ದರೆ 50,000ರೂ. ತನಕ ತೆರಿಗೆ ಕಡಿತದ ಪ್ರಯೋಜನ ಪಡೆಯಬಹುದು. 

5.ದೇಣಿಗೆ
ವಿವಿಧ ಉದ್ದೇಶಗಳು ಹಾಗೂ ಸಂಸ್ಥೆಗಳಿಗೆ ದೇಣಿಗೆ ನೀಡುವ ಮೂಲಕ ಕೂಡ ತೆರಿಗೆ ಉಳಿತಾಯದ ಪ್ರಯೋಜನ ಪಡೆಯಬಹುದು. ನೀವು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ದಾನ ಮಾಡಿದ್ದರೆ, ಮಾದಕದ್ರವ್ಯ ತಡೆಗೆ, ಗಂಗಾ ಸ್ವಚ್ಛತಾ ನಿಧಿ ಅಥವಾ ಯಾವುದೇ ಪ್ರಮಾಣೀಕೃತ ಎನ್ ಜಿಒಗೆ ದೇಣಿಗೆ ನೀಡಿದರೆ ನೀವೊಂದು ಉತ್ತಮ ಕಾರ್ಯಕ್ಕೆ ಮಾತ್ರ ನೆರವು ನೀಡಿದಂತಾಗೋದಿಲ್ಲ, ಬದಲಿಗೆ ನಿಮಗೆ ತೆರಿಗೆ ಪ್ರಯೋಜನ ಕೂಡ ಸಿಗುತ್ತದೆ. ಇಂಥ ದೇಣಿಗೆಗಳಿಗೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80G ಅಡಿಯಲ್ಲಿ ಪೂರ್ಣ ಪ್ರಮಾಣದ ತೆರಿಗೆ ವಿನಾಯ್ತಿ ಸಿಗುತ್ತದೆ. 

2023-24ನೇ ಸಾಲಿನ ಅಡ್ವಾನ್ಸ್ ಟ್ಯಾಕ್ಸ್ ಪಾವತಿಗೆ ಮಾ.15 ಅಂತಿಮ ಗಡುವು; ಇ-ಕ್ಯಾಂಪೇನ್ ಪ್ರಾರಂಭಿಸಿದ ಐಟಿ ಇಲಾಖೆ

6.ಪ್ರಧಾನ ಮಂತ್ರಿ ವಯೋ ವಂದನ ಯೋಜನೆ
ಹಿರಿಯ ನಾಗರಿಕರು ಪ್ರಧಾನ ಮಂತ್ರಿ ವಯೋ ವಂದನ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ತೆರಿಗೆ ಉಳಿತಾಯ ಮಾಡಬಹುದು. ಈ ಯೋಜನೆಗೆ ನೋಂದಣಿಯಾಗಲು 2024ರ ಮಾರ್ಚ್ 31ರ ತನಕ ಕಾಲಾವಕಾಶವಿದೆ. ಈ ಯೋಜನೆಯಲ್ಲಿ 60 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟವರು ಹೂಡಿಕೆ ಮಾಡಬಹುದು. ಈ ಯೋಜನೆ ಅವಧಿ 10 ವರ್ಷಗಳು. ಇದಕ್ಕೆ ಪ್ರಸ್ತುತ ಶೇ.7.4ರಷ್ಟು ವಾರ್ಷಿಕ ಬಡ್ಡಿದರವಿದೆ. 

7.ಅಡ್ವಾನ್ಸ್ ತೆರಿಗೆ ಪಾವತಿ
2023 - 2024ನೇ ಸಾಲಿನ ಅಡ್ವಾನ್ಸ್ ತೆರಿಗೆ ಪಾವತಿಗೆ 2024ರ ಮಾರ್ಚ್15 ಅಂತಿಮ ಗಡುವಾಗಿದೆ. ತೆರಿಗೆದಾರರು ತಮ್ಮ ಶೇ.100ರಷ್ಟು ಅಡ್ವಾನ್ಸ್ ಟ್ಯಾಕ್ಸ್ ಅನ್ನು ನಿಗದಿಪಡಿಸಿರುವ ಅಂತಿಮ ಗಡುವಿನೊಳಗೆ ಪಾವತಿಸಬೇಕು. ವೇತನ ಪಡೆಯುವ ಉದ್ಯೋಗಿಗಳು, ಫ್ರೀಲ್ಯಾನ್ಸರ್ ಅಥವಾ ಉದ್ಯಮಿಗಳ ವಾರ್ಷಿಕ ತೆರಿಗೆ ಮೊತ್ತ 10 ಸಾವಿರ ರೂ. ಅಥವಾ ಅದಕ್ಕಿಂತ ಹೆಚ್ಚಿದ್ದರೆ ಅವರು ತೆರಿಗೆಯನ್ನು ಮುಂಚಿತವಾಗಿ (ಅಡ್ವಾನ್ಸ್) ನಾಲ್ಕು ಕಂತುಗಳಲ್ಲಿ ಪಾವತಿಸಬೇಕು. 
 

click me!