ದುಬೈನಲ್ಲಿ ವಿಶ್ವದ ಅತೀದೊಡ್ಡ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ. ಇದು ಐದು ಸಮಾನಾಂತರ ರನ್ ವೇಗಳು ಹಾಗೂ 400 ಏರ್ ಕ್ರಾಫ್ಟ್ ಗೇಟ್ ಗಳು ಸೇರಿದಂತೆ ಅನೇಕ ವಿಶೇಷತೆಗಳನ್ನು ಒಳಗೊಂಡಿದೆ.
ದುಬೈ (ಏ.29): ವಿಶ್ವದ ಅತೀದೊಡ್ಡ ವಿಮಾನ ನಿಲ್ದಾಣ ದುಬೈನಲ್ಲಿ ನಿರ್ಮಾಣವಾಗಲಿದೆ. ದುಬೈ ಸರ್ಕಾರ ಈ ಅತೀದೊಡ್ಡ ಪ್ರಾಜೆಕ್ಟ್ ಮಾಹಿತಿಯನ್ನು ಬಿಡುಗಡೆ ಮಾಡಿದ್ದು, ಈಗಾಗಲೇ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿದೆ. ದುಬೈ ಆಡಳಿತಗಾರ ಶೇಕ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಈ ಯೋಜನೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಎಐ ಮಕ್ತೌಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಾಣವಾಗಲಿರುವ ಟರ್ಮಿನಲ್ ವಾಯಯಾನ ಮೂಲಸೌಕರ್ಯದಲ್ಲಿ ಕ್ರಾಂತಿ ಸೃಷ್ಟಿಸಲಿದೆ ಎಂದು ಅವರು ಏಪ್ರಿಲ್ 28ರಂದು ಮಾಹಿತಿ ನೀಡಿದ್ದಾರೆ. ಈ ಬೃಹತ್ ಯೋಜನೆಗೆ ಅಂದಾಜು 2.9 ಲಕ್ಷ ಕೋಟಿ ರೂ. (35 ಬಿಲಿಯನ್ ಯುಎಸ್ ಡಿ) ಮೀಸಲಿಡಲಾಗಿದೆ. ಈ ಯೋಜನೆ ಪೂರ್ಣಗೊಂಡ ಬಳಿಕ ಈ ಹೊಸ ಟರ್ಮಿನಲ್ ವಾರ್ಷಿಕ 260 ಮಿಲಿಯನ್ ಪ್ರಯಾಣಿಕರನ್ನು ನಿರ್ವಹಣೆ ಮಾಡಲಿದೆ.
'ಅಲ್ ಮಕ್ತೌಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸ ಪ್ರಯಾಣಿಕರ ಟರ್ಮಿನಲ್ ವಿನ್ಯಾಸಕ್ಕೆ ನಾವು ಅನುಮೋದನೆ ನೀಡಿದ್ದೇವೆ. ಹಾಗೆಯೇ ಈ ಕಟ್ಟದ ನಿರ್ಮಾಣ ವೆಚ್ಚ 128 ಬಿಲಿಯನ್ ಎಇಡಿ (34.85 ಬಿಲಿಯನ್ ಡಾಲರ್ ) ಅನುಮೋದನೆ ನೀಡಿದ್ದೇವೆ' ಎಂದು ಯುಎಇ ಆಡಳಿತಗಾರ ಹಾಗೂ ಪ್ರಧಾನಿ ಶೇಕ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ 'ಎಕ್ಸ್' ನಲ್ಲಿ ಮಾಹಿತಿ ನೀಡಿದ್ದಾರೆ.
ದುಬೈ ಪ್ರವಾಹ; 2 ವರ್ಷದ ಮಳೆ ಒಂದೇ ದಿನ ಬೀಳಲು ಮೋಡಬಿತ್ತನೆ ಕಾರಣವೇ? ಅಥವಾ..?
ಐದು ಸಮಾನಾಂತರ ರನ್ ವೇಗಳು ಹಾಗೂ 400 ಏರ್ ಕ್ರಾಫ್ಟ್ ಗೇಟ್ ಗಳು ಸೇರಿದಂತೆ ಈ ವಿನೂತನ ಟರ್ಮಿನಲ್ ಅನೇಕ ವಿಶೇಷತೆಗಳನ್ನು ಹೊಂದಿರಲಿದೆ. ಶೇಕ್ ಮೊಹಮ್ಮದ್ ಇದರ ಮಹತ್ವದ ಬಗ್ಗೆ ಒತ್ತಿ ಹೇಳಿದ್ದು, ಈ ಹೊಸ ವಿಮಾನ ನಿಲ್ದಾಣ ದುಬೈನ ಈಗಿನ ವಿಮಾನ ನಿಲ್ದಾಣಕ್ಕಿಂತ ಐದು ಪಟ್ಟು ದೊಡ್ಡದಿರಲಿದೆ.
ದುಬೈ ನಾಗರಿಕ ವಿಮಾನಯಾನ ಪ್ರಾಧಿಕಾರದ ಅಧ್ಯಕ್ಷ ಹಾಗೂ ಎಮಿರೇಟ್ಸ್ ಸಿಇಒ ಶೇಕ್ ಮೊಹಮ್ಮದ್ ಬಿನ್ ಸೈಯದ್ ಅಲ್ ಮಕ್ತೌಮ್ ಈ ಯೋಜನೆ ಮುಕ್ತಾಯದ ಅವಧಿಯನ್ನು ನಿಗದಿಪಡಿಸಿದ್ದಾರೆ. ಇನ್ನು ಈ ಯೋಜನೆಯ ಮೊದಲ ಹಂತ ಒಂದು ದಶಕದೊಳಗೆ ಮುಗಿಯುವ ವಿಶ್ವಾಸವನ್ನು ಕೂಡ ಅವರು ವ್ಯಕ್ತಪಡಿಸಿದ್ದಾರೆ. ಇನ್ನು ಈ ವಿಮಾನ ನಿಲ್ದಾಣ ಎಮಿರೇಟ್ಸ್, ಫ್ಲೈ ದುಬೈ ಹಾಗೂ ಇತರ ವಿಮಾನಯಾನ ಪಾಲುದಾರರಿಗೆ ಪ್ರಾಥಮಿಕ ನಿಲ್ದಾಣವಾಗಿದ್ದು, ದುಬೈ ಮೂಲಕ ಮಿತಿಯಿಲ್ಲದಷ್ಟು ಜಾಗತಿಕ ಸಂಪರ್ಕಗಳನ್ನು ಕಲ್ಪಿಸಲಿದೆ.
ದುಬೈ ವಿಮಾನ ನಿಲ್ದಾಣ ನಿಧಾನವಾಗಿ ಬದಲಾವಣೆಗೆ ತೆರೆದುಕೊಳ್ಳಲಿದೆ. ಹೊಸ ಸೌಲಭ್ಯಗಳಿಗೆ ಈಗಿರುವ ವಿಮಾನ ನಿಲ್ದಾಣ ತೆರೆದುಕೊಳ್ಳಲಿದೆ. ಈ ಹೊಸ ವಿಮಾನ ನಿಲ್ದಾಣ ದುಬೈ ಹೊರಭಾಗದಲ್ಲಿದ್ದು, ಇದು ಈ ಭಾಗದ ವಾಯಯಾನದಲ್ಲಿನ ಟ್ರಾಫಿಕ್ ತಗ್ಗಿಸುವ ಗುರಿ ಹೊಂದಿದೆ.
ಮರುಭೂಮಿ ದೇಶಗಳಲ್ಲಿ ಪ್ರವಾಹ: ಭಾರಿ ಮಳೆಗೆ ಒಮಾನ್‌ನಲ್ಲಿ 18 ಸಾವು!
ಈ ಹೊಸ ವಿಮಾನ ನಿಲ್ದಾಣ ಯೋಜನೆ ವಾಯುಯಾನ ಮೂಲಸೌಕರ್ಯದ ಹೊರಗೂ ವಿಸ್ತರಣೆಗೊಂಡಿದ್ದು, ದಕ್ಷಿಣ ದುಬೈನಲ್ಲಿ ವಿಮಾನ ನಿಲ್ದಾಣದ ಸುತ್ತ ಒಂದು ನಗರ ಅಭಿವೃದ್ಧಿಯನ್ನು ಕೂಡ ಒಳಗೊಂಡಿದೆ. ಇದು ಆರ್ಥಿಕ ಬೆಳವಣಿಗೆಗೆ ಒತ್ತು ನೀಡುವ ಜೊತೆಗೆ ಒಂದು ಮಿಲಿಯನ್ ನಿವಾಸಿಗಳಿಗೆ ಮನೆ ನಿರ್ಮಿಸುವ ಗುರಿಯನ್ನು ಕೂಡ ಹೊಂದಿದೆ.
ಮರುಭೂಮಿ ಪ್ರದೇಶವಾದ ದುಬೈನಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಗೆ ವಿಮಾನ ನಿಲ್ದಾಣ ಕೂಡ ಜಲಾವೃತ್ತವಾಗಿತ್ತು. ಇದರಿಂದ ಹಲವು ವಿಮಾನಗಳ ಹಾರಾಟವನ್ನು ಕೂಡ ರದ್ದುಗೊಳಿಸಲಾಗಿತ್ತು. ದುಬೈ ವಿಮಾನ ನಿಲ್ದಾಣ ಅನೇಕ ರಾಷ್ಟ್ರಗಳಿಗೆ ತೆರಳಲು ಸಂಪರ್ಕ ಕೇಂದ್ರವಾಗಿದೆ ಕೂಡ. ಕೆಲವು ರಾಷ್ಟ್ರಗಳಿಗೆ ವಿಮಾನಯಾನ ಮಾಡಲು ದುಬೈನಲ್ಲಿ ವಿಮಾನ ಬದಲಿಸಬೇಕಾಗುತ್ತದೆ ಕೂಡ. ಹೀಗಾಗಿ ದುಬೈ ಅಂತಾರಾಷ್ಟ್ರೀಯ ವಿಮಾನ ಸದಾ ಬ್ಯುಸಿಯಾಗಿರುತ್ತದೆ.