ಅಮೆರಿಕದ ಮತ್ತೊಂದು ಬ್ಯಾಂಕ್‌ ಪತನ: ದೊಡ್ಡಣ್ಣನಿಗೆ ಸರಣಿ ಶಾಕ್

By Kannadaprabha NewsFirst Published May 2, 2023, 7:38 AM IST
Highlights

ವಿಶ್ವದ ಬಲಿಷ್ಠ ಆರ್ಥಿಕ ರಾಷ್ಟ್ರಗಳ ಪೈಕಿ ಮುಂಚೂಣಿಯಲ್ಲಿರುವ ಅಮೆರಿಕದ ಬ್ಯಾಂಕಿಂಗ್‌ ಕ್ಷೇತ್ರ ಮತ್ತೊಮ್ಮೆ ತಲ್ಲಣಗೊಂಡಿದೆ. ಎರಡು ಪ್ರತಿಷ್ಠಿತ ಬ್ಯಾಂಕುಗಳು ಮುಳುಗಡೆಯಾಗಿ 2 ತಿಂಗಳು ಪೂರ್ಣಗೊಳ್ಳುವ ಮುನ್ನವೇ ಮತ್ತೊಂದು ಜನಪ್ರಿಯ ಬ್ಯಾಂಕ್‌ ಪತನಗೊಂಡಿದೆ.

ನ್ಯೂಯಾರ್ಕ್: ವಿಶ್ವದ ಬಲಿಷ್ಠ ಆರ್ಥಿಕ ರಾಷ್ಟ್ರಗಳ ಪೈಕಿ ಮುಂಚೂಣಿಯಲ್ಲಿರುವ ಅಮೆರಿಕದ ಬ್ಯಾಂಕಿಂಗ್‌ ಕ್ಷೇತ್ರ ಮತ್ತೊಮ್ಮೆ ತಲ್ಲಣಗೊಂಡಿದೆ. ಎರಡು ಪ್ರತಿಷ್ಠಿತ ಬ್ಯಾಂಕುಗಳು ಮುಳುಗಡೆಯಾಗಿ 2 ತಿಂಗಳು ಪೂರ್ಣಗೊಳ್ಳುವ ಮುನ್ನವೇ ಮತ್ತೊಂದು ಜನಪ್ರಿಯ ಬ್ಯಾಂಕ್‌ ಪತನಗೊಂಡಿದೆ. ಅಮೆರಿಕದ ಫಸ್ಟ್‌ ರಿಪಬ್ಲಿಕ್‌ ಬ್ಯಾಂಕ್‌ (First Republic Bank of America) ದಿವಾಳಿ ಅಂಚಿಗೆ ಸಿಲುಕಿದ ಹಿನ್ನೆಲೆಯಲ್ಲಿ ಕ್ಯಾಲಿರ್ಫೋನಿಯಾದ (California) ಹಣಕಾಸು ಸಂರಕ್ಷಣೆ ಹಾಗೂ ನಾವೀನ್ಯತೆ ಇಲಾಖೆಯು ಅದನ್ನು ಮುಟ್ಟುಗೋಲು ಹಾಕಿಕೊಂಡಿದೆ.

ಇದರ ಬೆನ್ನಲ್ಲೇ, ಸಂಕಷ್ಟಕ್ಕೆ ಸಿಲುಕಿದ್ದ ಬ್ಯಾಂಕ್‌ ಅನ್ನು ಜೆಪಿ ಮೊರ್ಗಾನ್‌ ಚೇಸ್‌ ಅಂಡ್‌ ಕಂಪನಿಗೆ (JPMorgan Chase & Co) ಮಾರಾಟ ಮಾಡುವ ಒಪ್ಪಂದ ಮಾಡಿಕೊಳ್ಳಲಾಗಿದೆ. ಹೀಗಾಗಿ ಫಸ್ಟ್‌ ರಿಪಬ್ಲಿಕ್‌ ಬ್ಯಾಂಕ್‌ನ ಆಸ್ತಿ ಹಾಗೂ ಠೇವಣಿಗಳ ಬಗ್ಗೆ ಜೆಪಿ ಮೊರ್ಗಾನ್‌ ಕಾಳಜಿ ತೆಗೆದುಕೊಳ್ಳಲಿದ್ದು, ಹೂಡಿಕೆದಾರರಿಗೆ ಅಭಯ ಸಿಕ್ಕಂತಾಗಿದೆ. ಕೆಲವೇ ವಾರಗಳ ಹಿಂದೆ ಅಮೆರಿಕದ ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ (Silicon Valley Bank) ಹಾಗೂ ಸಿಗ್ನೇಚರ್‌ ಬ್ಯಾಂಕ್‌ಗಳು (Signature Bank) ಮುಳುಗಡೆಯಾಗಿ ಬ್ಯಾಂಕಿಂಗ್‌ ಕ್ಷೇತ್ರವನ್ನೇ ನಡುಗಿಸಿದ್ದವು. ಅದರಿಂದ ಗ್ರಾಹಕರಲ್ಲಿ ಮೂಡಿದ ಆತಂಕವೇ ಫಸ್ಟ್‌ ರಿಪಬ್ಲಿಕ್‌ ಪತನಕ್ಕೆ ಕಾರಣವಾಗಿದೆ.

Latest Videos

ಪತನದ ಭೀತಿಯಿಂದ ಪಾರಾದ ಸ್ವಿಜರ್ಲೆಂಡ್‌ ಮೂಲದ ಬ್ಯಾಂಕ್‌

ಏಪ್ರಿಲ್‌ 13ಕ್ಕೆ ಅನುಗುಣವಾಗಿ ಫಸ್ಟ್‌ ರಿಪಬ್ಲಿಕ್‌ ಬ್ಯಾಂಕ್‌ ಬಳಿ 18 ಲಕ್ಷ ಕೋಟಿ ರು. ನಿವ್ವಳ ಆಸ್ತಿ ಹಾಗೂ 8.4 ಲಕ್ಷ ಕೋಟಿ ರು.ನಷ್ಟುಠೇವಣಿ ಇತ್ತು. ಆದರೆ ಸಿಲಿಕಾನ್‌ ವ್ಯಾಲಿ ಹಾಗೂ ಸಿಗ್ನೇಚರ್‌ ಬ್ಯಾಂಕುಗಳ ಮುಳುಗಡೆ ಬಳಿಕ ಗಾಬರಿಗೊಂಡ ಜನರು ಫಸ್ಟ್‌ ರಿಪಬ್ಲಿಕ್‌ ಬ್ಯಾಂಕ್‌ನಿಂದ ಮುಗಿಬಿದ್ದು ಹಣ ತೆಗೆಯಲು ಆರಂಭಿಸಿದರು. ಒಂದೇ ತಿಂಗಳಲ್ಲಿ 8.1 ಲಕ್ಷ ಕೋಟಿ ರು.ನಷ್ಟುಹಣವನ್ನು ಗ್ರಾಹಕರು ಮರಳಿ ಪಡೆದರು. ಈ ಒತ್ತಡದಿಂದ ಬ್ಯಾಂಕು ಸಂಕಷ್ಟಕ್ಕೆ ಸಿಲುಕಿತು ಎಂದು ವರದಿಗಳು ತಿಳಿಸಿವೆ.

1985ರಲ್ಲಿ ಕೇವಲ 10 ಸಿಬ್ಬಂದಿಯೊಂದಿಗೆ ಆರಂಭವಾದ ಫಸ್ಟ್‌ ರಿಪಬ್ಲಿಕ್‌ ಬ್ಯಾಂಕ್‌ ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ನಂತೆಯೇ ಶ್ರೀಮಂತರನ್ನು ಗುರಿಯಾಗಿಸಿಕೊಂಡು ಸೇವೆಯನ್ನು ಒದಗಿಸುತ್ತಿತ್ತು. 2000ನೇ ಇಸ್ವಿಯ ವೇಳೆಗೆ ಅಮೆರಿಕದ 14ನೇ ಅತಿದೊಡ್ಡ ಬ್ಯಾಂಕ್‌ ಎಂಬ ಅಭಿದಾನಕ್ಕೆ ಪಾತ್ರವಾಗಿತ್ತು. 2022ರ ಅಂತ್ಯದ ವೇಳೆಗೆ ಬ್ಯಾಂಕು ಅಮೆರಿಕದ 7 ರಾಜ್ಯಗಳಲ್ಲಿ 80 ಶಾಖೆ ಹಾಗೂ 7 ಸಾವಿರ ಸಿಬ್ಬಂದಿಯನ್ನು ಹೊಂದಿತ್ತು. ಇದೀಗ ಬ್ಯಾಂಕು 8 ರಾಜ್ಯಗಳಲ್ಲಿ 84 ಶಾಖೆಗಳನ್ನು ಹೊಂದಿದ್ದು, ಈ ಎಲ್ಲಾ ಶಾಖೆಗಳು ಜೆಪಿ ಮೊರ್ಗಾನ್‌ ಹೆಸರಲ್ಲಿ ಇನ್ನು ಮುಂದೆ ಕಾರ್ಯಾಚರಣೆ ನಡೆಸಲಿವೆ.

 

click me!