
ಕೆಲ್ಸ ಸಿಗ್ತಿದ್ದಂತೆ ಬಂದ ಸಂಬಳ (salary)ವನ್ನು ಹೇಗೆ ಖರ್ಚು ಮಾಡ್ಬೇಕು ಅಂತ ಪ್ಲಾನ್ ಮಾಡೋರೇ ಹೆಚ್ಚು. ಒಂದಿಷ್ಟು ವಯಸ್ಸಾಗಿ, ಕೈ ಖಾಲಿ ಆದ್ಮೇಲೆ, ಹೂಡಿಕೆ ಮಾಡೋ ಆಲೋಚನೆ ಮಾಡ್ತಾರೆ. ಹಿಂದೆಯೇ ಹೂಡಿಕೆ ಮಾಡಿದ್ರೆ ಚೆನ್ನಾಗಿತ್ತು ಅಂತ ನೊಂದಕೊಳ್ತಾರೆ. ಆದ್ರೆ ಈ ವ್ಯಕ್ತಿ ಈ ವಿಷ್ಯದಲ್ಲಿ ತುಂಬಾ ಸ್ಮಾಟ್ ಆಗಿ ಆಲೋಚನೆ ಮಾಡಿದ್ದಾನೆ. ಕೆಲ್ಸ ಸಿಕ್ಕಿದ ತಕ್ಷಣ ಹೂಡಿಕೆ ಶುರು ಮಾಡಿದ್ದವನ ಕೈನಲ್ಲಿ ಈಗ 2 ಕೋಟಿ ರೂಪಾಯಿ ಇದೆ. 37ನೇ ವಯಸ್ಸಿನಲ್ಲಿ ತನ್ನ ಸ್ವಂತ ದುಡಿಮೆಯಿಂದ ಇಷ್ಟೊಂದು ಆಸ್ತಿ ಮಾಡಿರುವ ವ್ಯಕ್ತಿ, ಅದನ್ನು ಹೆಮ್ಮೆಯಿಂದ ಹೇಳಿಕೊಂಡಿದ್ದಾನೆ. ಆತನ ರೆಡ್ಡಿಟ್ ಪೋಸ್ಟ್ ವೈರಲ್ ಆಗಿದೆ. ಇದ್ರ ಬಗ್ಗೆ ಜನರು ಪ್ರತಿಕ್ರಿಯೆ ಜೊತೆ ಯುವಕರಿಗೆ ಒಂದಿಷ್ಟು ಸಲಹೆಯನ್ನೂ ನೀಡಿದ್ದಾರೆ.
ರೆಡ್ಡಿಟ್ (Reddit) ನಲ್ಲಿ ವ್ಯಕ್ತಿ ತನ್ನ ಹೆಸರು ಬರೆಯದೇ ತನ್ನ ಗಳಿಕೆ ವಿವರ ಮಾತ್ರ ನೀಡಿದ್ದಾನೆ. 37 ವರ್ಷದ ವ್ಯಕ್ತಿ ಕೆಲಸ ಮಾಡುತ್ತಲೇ 15 ವರ್ಷಗಳ ಕಾಲ ನಿರಂತರವಾಗಿ ಹೂಡಿಕೆ ಮಾಡಿದರು. ಈಗ ಅವರು ಮ್ಯೂಚುವಲ್ ಫಂಡ್ಗಳಲ್ಲಿ 1 ಕೋಟಿ ರೂಪಾಯಿ ಹೂಡಿಕೆ ಪೂರ್ಣಗೊಳಿಸಿದ್ದಾರೆ. ಅವರ ಬಳಿ 1 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆ. ಆದರೆ, ಇನ್ನೂ 25 ಲಕ್ಷ ರೂಪಾಯ ಗೃಹ ಸಾಲ ಬಾಕಿ ಉಳಿಸಿಕೊಂಡಿದ್ದಾರೆ. ಇವರ ಸಾಧನೆಯನ್ನು ರೆಡ್ಡಿಟ್ ಬಳಕೆದಾರರು ಶ್ಲಾಘಿಸಿದ್ದಾರೆ. ನಾವು ಆರಂಭದಲ್ಲಿಯೇ ಹೂಡಿಕೆ ಮಾಡ್ಬೇಕಿತ್ತು ಅಂತ ಪಶ್ಚಾತಾಪ ಪಟ್ಟುಕೊಂಡವರಿದ್ದಾರೆ. ಹಣವನ್ನು ಬ್ಯಾಂಕ್ ಖಾತೆಯಲ್ಲಿಟ್ಟು ವ್ಯರ್ಥ ಮಾಡಿದ್ವಿ ಅಂತ ನೊಂದುಕೊಂಡಿದ್ದಾರೆ. ಮೊದಲ ಒಂದು ಕೋಟಿ ಸಂಪಾದನೆ ಸ್ವಲ್ಪ ಕಷ್ಟ. ಆದ್ರೆ ಶಿಸ್ತುಬದ್ಧವಾಗಿ ಹೂಡಿಕೆ ಮಾಡಿದ್ರೆ ಇದು ಸುಲಭ ಎಂದು ಕೆಲವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಕೆಲವರು ಹೊಸ ಹೂಡಿಕೆದಾರರಿಗೆ ಸಲಹೆ ಕೂಡ ನೀಡಿದ್ದಾರೆ. ಜನರು ತಮ್ಮ ಹೂಡಿಕೆಗಳ ಬಗ್ಗೆ ಮುಕ್ತವಾಗಿ ಹೇಳಿಕೊಳ್ಬೇಕು. ಯಾವ ರೀತಿಯ ಹಣ ಹೂಡಿಕೆ ಮಾಡಿದ್ದಾರೆ, ಅವರ ಹೂಡಿಕೆ ತಂತ್ರವೇನು ಮತ್ತು ಅವರ ಹೂಡಿಕೆಗಳು ಹೇಗೆ ಕಾರ್ಯನಿರ್ವಹಿಸಿವೆ ಎಂಬುದನ್ನು ಹೇಳಿದ್ರೆ, ಉಳಿದವರು ಅದನ್ನು ಪಾಲಿಸ್ತಾರೆ. ಹೊಸ ಹೂಡಿಕೆದಾರರಿಗೆ ಇದ್ರಿಂದ ಸಹಾಯವಾಗುತ್ತದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಭಾರತೀಯರ ಸ್ವಭಾವ ಏನು? : ಭಾರತದಲ್ಲಿಹೂಡಿಕೆ ಬಗ್ಗೆ ಯುವಕರಿಗೆ ಸರಿಯಾದ ಮಾಹಿತಿ ಸಿಗುವುದಿಲ್ಲ. ಬಹುತೇಕರು ತಮ್ಮ ಹೂಡಿಕೆ ಬಗ್ಗೆ ಮಾತನಾಡುವುದಿಲ್ಲ. ಈ ವಿಷ್ಯವನ್ನು ಬಹಳ ಗೌಪ್ಯವಾಗಿ ಇಡುತ್ತಾರೆ. ಸ್ನೇಹಿತರು ಹಾಗೂ ಸಂಬಂಧಿಕರ ಅಸೂಯೆ, ಕೆಲವರ ಪುಕ್ಕಟ್ಟೆ ಸಲಹೆ, ಸಹಾಯ ಕೇಳುವವರ ಸಂಖ್ಯೆಯಲ್ಲಿ ಏರಿಕೆ ಸೇರಿದಂತೆ ಕೆಲ ಆತಂಕದಿಂದ ಜನರು ತಮ್ಮ ಆಸ್ತಿಯ ವಿವರವನ್ನು ಬಹಿರಂಗಪಡಿಸುವುದಿಲ್ಲ. ಇದರಿಂದ ಯುವ ಹೂಡಿಕೆದಾರರಿಗೆ ಸರಿಯಾದ ನಿರ್ಣಯ ತೆಗೆದುಕೊಳ್ಳಲು ಕಷ್ಟವಾಗುತ್ತದೆ.
ತಜ್ಞರ ಸಲಹೆ ಏನು? : ಕೋಟ್ಯಾಧಿಪತಿ ಆಗಲು ಯಾವುದೇ ವಯಸ್ಸಿನ ಮಿತಿಯಿಲ್ಲ. ಹೂಡಿಕೆ ಬದ್ಧತೆ ಅಗತ್ಯ, ಎಷ್ಟು ಹೂಡಿಕೆ ಎಂಬುದು ತಿಳಿದಿರಬೇಕು. ಒಬ್ಬ ವ್ಯಕ್ತಿ ಆರ್ಥಿಕವಾಗಿ ಸದೃಢವಾಗಿರಲು ಮೊದಲು ಯೋಜನೆಯನ್ನು ರೂಪಿಸಬೇಕು. ವೈದ್ಯಕೀಯ ವಿಮೆ ಪಡೆಯಬೇಕು. ನಂತರ ಗೃಹ ಸಾಲವನ್ನು ಹೊರತುಪಡಿಸಿ ಉಳಿದ ಎಲ್ಲಾ ಸಾಲಗಳನ್ನು ತೀರಿಸಬೇಕು. ತುರ್ತು ನಿಧಿಯನ್ನು ರಚಿಸಬೇಕು. ಅವಧಿ ವಿಮೆಯನ್ನು ಖರೀದಿಸಬೇಕು. ಇವೆಲ್ಲ ಕೆಲ್ಸ ಮುಗಿದ ಮೇಲೆ ನಿಯಮಿತ ಹೂಡಿಕೆಗಳನ್ನು ಪ್ರಾರಂಭಿಸಬೇಕು. ಸ್ವತ್ತುಗಳನ್ನು ರಚಿಸುವ ಮೂಲಕ ಅಥವಾ ಎಸ್ ಯಪಿ ಗಳನ್ನು ಹೆಚ್ಚಿಸುವ ಮೂಲಕ ಆರ್ಥಿಕವಾಗಿ ಸದೃಢವಾಗಬೇಕು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.