
ನವದೆಹಲಿ[ಡಿ.31]: ಪ್ರತಿ ವ್ಯಕ್ತಿಯೂ ಬ್ಯಾಂಕ್ ಖಾತೆ ಹೊಂದಿರಲಿ ಎಂಬ ಉದ್ದೇಶದಿಂದ ಆರಂಭಿಸಲಾಗಿದ್ದ ಪ್ರಧಾನಮಂತ್ರಿ ಜನಧನ ಯೋಜನೆಯ ವ್ಯಾಪ್ತಿ ಮತ್ತಷ್ಟುವಿಸ್ತಾರಗೊಂಡಿದ್ದು, ಖಾತೆದಾರರ ಸಂಖ್ಯೆ 33.5 ಕೋಟಿಗೆ ಏರಿದೆ. ಈ ಪೈಕಿ 25.6 ಕೋಟಿ ಖಾತೆಗಳು (ಶೇ.76) ಚಾಲ್ತಿಯಲ್ಲಿವೆ. ಒಟ್ಟಾರೆ ಜನಧನ ಖಾತೆಗಳಲ್ಲಿ 85,494 ಕೋಟಿ ರುಪಾಯಿ ಹಣವನ್ನು ಠೇವಣಿಯನ್ನಾಗಿ ಇರಿಸಲಾಗಿದೆ.
ಇನ್ನು ಜನಧನ ಯೋಜನೆಯ ಅಡಿ 65 ಲಕ್ಷ ಖಾತೆದಾರರಿಗೆ ಓವರ್‌ಡ್ರಾಫ್ಟ್ ಸೌಲಭ್ಯದ ಆಫರ್ ನೀಡಲಾಗಿದೆ. ಇವರಲ್ಲಿ 30 ಲಕ್ಷ ಖಾತೆದಾರರು 340 ಕೋಟಿ ರುಪಾಯಿಯಷ್ಟುಓವರ್‌ಡ್ರಾಫ್ಟ್ ಸೌಲಭ್ಯ ಪಡೆದಿದ್ದಾರೆ ಎಂದು ಸರ್ಕಾರದ ಅಂಕಿ ಅಂಶಗಳು ಹೇಳಿವೆ. ಯಾರು ನಿಯಮಿತವಾಗಿ ಖಾತೆಯಲ್ಲಿ ಹಣ ಇಡುತ್ತಾರೋ ಅವರಿಗೆ 10 ಸಾವಿರ ರು.ವರೆಗೆ ಓವರ್‌ಡ್ರಾಫ್ಟ್ ಸೌಲಭ್ಯ ದೊರಕುತ್ತದೆ.
ಈವರೆಗೆ ಕುಟುಂಬದಲ್ಲಿ ಒಬ್ಬರು ಖಾತೆ ಹೊಂದಿದರೆ ಸಾಕೆಂಬ ಉದ್ದೇಶ ಹೊಂದಲಾಗಿತ್ತು. ಅದರೆ ಈಗ ಮನೆಯ ಪ್ರತಿಯೊಬ್ಬರೂ ಖಾತೆ ಹೊಂದಬೇಕು ಎಂಬ ಗುರಿ ಹೊಂದಿದ್ದರಿಂದ ಖಾತೆದಾರರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜನಧನ ಖಾತೆದಾರರ ಪೈಕಿ 26 ಕೋಟಿ ಮಂದಿಗೆ ರುಪೇ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಇವು 2018ರ ಡಿಸೆಂಬರ್ 12ರ ಅಂಕಿ ಅಂಶಗಳಾಗಿವೆ ಎಂದು ಸರ್ಕಾರ ಲೋಕಸಭಾ ಸದಸ್ಯ ವರುಣ್ ಗಾಂಧಿ ಅವರಿಗೆ ನೀಡಿದ ಉತ್ತರದಲ್ಲಿ ತಿಳಿಸಿದೆ.
ಉ.ಪ್ರ. ನಂ.1, ಕರ್ನಾಟಕ ನಂ.10:
ಜನಧನ ಖಾತೆಗಳಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನ ಪಡೆದಿದ್ದು, 5.2 ಕೋಟಿ ಖಾತೆದಾರರನ್ನು ಹೊಂದಿದೆ. ಇವರು ಇಟ್ಟಹಣದ ಪ್ರಮಾಣ 14,882 ಕೋಟಿ ರುಪಾಯಿ. ನಂತರದ ಸ್ಥಾನದಲ್ಲಿ ಪ.ಬಂಗಾಳ (11,470 ಕೋಟಿ), ಬಿಹಾರ (8,417 ಕೋಟಿ), ರಾಜಸ್ಥಾನ (6,360 ಕೋಟಿ), ಮಹಾರಾಷ್ಟ್ರ (5,035 ಕೋಟಿ) ಹಾಗೂ ಮಧ್ಯಪ್ರದೇಶ (4,325 ಕೋಟಿ) ಇವೆ.
ಇನ್ನು 2,862 ಕೋಟಿ ರುಪಾಯಿಯೊಂದಿಗೆ ಕರ್ನಾಟಕ 10ನೇ ಸ್ಥಾನ ಪಡೆದಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.