
ನವದೆಹಲಿ (ಮಾ.18): ಕೇವಲ 12 ವರ್ಷದ ವಯಸ್ಸಿನಲ್ಲಿ ಮಕ್ಕಳು ಆಟವಾಡುತ್ತಾ, ಶಾಲೆಗೆ ಹೋಗುತ್ತಾ ಕಾಲ ಕಳೆಯುತ್ತಾರೆ. ಆದರೆ ಚೀನಾದ ಈ ಬಾಲಕಿ ಮಾತ್ರ ತನ್ನ ಉಳಿತಾಯದ ಹಣದಿಂದ ಒಂದು ಸ್ಟೇಷನರಿ ಅಂಗಡಿಯನ್ನೇ ಖರೀದಿಸಿ, ತನ್ನ ತಾಯಿಯನ್ನೇ ಮಾಸಿಕ 3,000 ಯುವಾನ್ ಸಂಬಳಕ್ಕೆ ಕೆಲಸಕ್ಕೆ ನೇಮಿಸಿಕೊಳ್ಳುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾಳೆ. ಮಧ್ಯ ಚೀನಾದ ಜಿಯಾಂಗ್‌ಕ್ಸಿ ಪ್ರಾಂತ್ಯದ ನಿವಾಸಿಯಾದ ಲಿ ಯುಯೆ, ವಸಂತ ಹಬ್ಬದ ಸಮಯದಲ್ಲಿ ತನಗೆ ಉಡುಗೊರೆಯಾಗಿ ಬಂದಿದ್ದ ಸುಮಾರು 44,000 ಯುವಾನ್ (ಅಂದಾಜು 5 ಲಕ್ಷ ರೂ.) ಹಣವನ್ನು ಯಾವುದಾದರೂ ಉದ್ಯಮದಲ್ಲಿ ಹೂಡಿಕೆ ಮಾಡಲು ನಿರ್ಧರಿಸಿದ್ದಳು. ಬ್ಯಾಂಕ್ ಬಡ್ಡಿದರಗಳು ಹಣದುಬ್ಬರವನ್ನು ಎದುರಿಸಲು ತುಂಬಾ ಕಡಿಮೆ ಇವೆ ಎಂಬುದು ಈಕೆಯ ಅಭಿಪ್ರಾಯವಾಗಿತ್ತು.
ಒಮ್ಮೆ ದಾರಿಯಲ್ಲಿ ಹೋಗುವಾಗ 'ಮಾರಾಟಕ್ಕಿದೆ' ಎಂಬ ಬೋರ್ಡ್ ಹಾಕಿದ್ದ ಸ್ಟೇಷನರಿ ಅಂಗಡಿಯನ್ನು ಕಂಡ ಲಿ, ಅದನ್ನು ಖರೀದಿಸಲು ನಿರ್ಧರಿಸಿದಳು. ನಷ್ಟವಾಗಬಹುದು ಎಂದು ತಾಯಿ ಎಚ್ಚರಿಸಿದರೂ ಧೈರ್ಯ ಮಾಡಿ ತನ್ನ ಹಣವನ್ನು ಹೂಡಿಕೆ ಮಾಡಿದ್ದಳು.
ಮಾರ್ಚ್‌ನಲ್ಲಿ ಶಾಲೆಗಳು ಪುನಃ ಆರಂಭವಾದಾಗ, ಲಿ ತನ್ನ ತಾಯಿಯನ್ನು ಅಂಗಡಿಯ ದೈನಂದಿನ ಕೆಲಸಗಳಿಗಾಗಿ ಕೆಲಸಕ್ಕೆ ಸೇರಿಸಿಕೊಂಡಳು. ತಾಯಿ ವ್ಯಾಪಾರ ನೋಡಿಕೊಂಡರೆ, ಲಿ ಪೂರೈಕೆದಾರರೊಂದಿಗೆ ಮಾತುಕತೆ ನಡೆಸುವುದು, ಬೆಲೆ ನಿಗದಿಪಡಿಸುವುದು ಮತ್ತು ವ್ಯಾಪಾರದ ಕಾರ್ಯತಂತ್ರಗಳನ್ನು ರೂಪಿಸುವ ಜವಾಬ್ದಾರಿ ಹೊತ್ತಿದ್ದಳು
ಮುಂಜಾನೆ ಶಾಲೆಗೆ ಹೋಗುವ ಮುನ್ನ ಅಂಗಡಿ ತೆರೆದು ಅಲ್ಲಿ ಎಷ್ಟು ಸ್ಟಾಕ್‌ಗಳಿದೆ ಅನ್ನೋದನ್ನು ಪರಿಶೀಲನೆ ಮಾಡೋದಾಗಿತ್ತು. ಶಾಲೆಯಿಂದ ಬಂದ ನಂತರ ಅಂಗಡಿಯಲ್ಲೇ ಕುಳಿತು ಓದುತ್ತಾ ರಾತ್ರಿ 8:30ರವರೆಗೆ ತಾಯಿಗೆ ವ್ಯಾಪಾರದಲ್ಲಿ ಸಹಾಯ ಮಾಡುವುದಾಗಿತ್ತು. ಲೆಕ್ಕಪತ್ರ ನಿರ್ವಹಣೆಗಾಗಿ ಸ್ವತಃ ಕೃತಕ ಬುದ್ಧಿಮತ್ತೆ (AI) ಪರಿಕರಗಳನ್ನು ಬಳಸಿ ಡಿಜಿಟಲ್ ಲೆಡ್ಜರ್ ಸಿದ್ಧಪಡಿಸುವ ಕೆಲಸ ಮಾಡುತ್ತಿದ್ದಳು. ಕೆಲ ವಾರದ ಹಿಂದೆ ಅಂಗಡಿಯ ಆದಾಯದಲ್ಲಿ ಕುಸಿತ ಕಂಡಾಗ ಲೀ ತಕ್ಷಣವೇ ಕಾರ್ಯಪ್ರವೃತ್ತಳಾಗಿದ್ದಳು. ಬೆಲೆಗಳನ್ನು ಕಡಿತಗೊಳಿಸುವ ತೀರ್ಮಾನ ಮಾಡಿದ ಲಿ ತನ್ನ ತಾಯಿಗೆ, "ನಾವು ಹೂಡಿಕೆ ಮಾಡಿದ ಹಣದ (Sunk costs) ಬಗ್ಗೆ ಅತಿಯಾಗಿ ಚಿಂತಿಸಿದರೆ ವಸ್ತುಗಳು ಮಾರಾಟವಾಗುವುದಿಲ್ಲ, ಇದರಿಂದ ಹಣದ ಹರಿವಿನ ಸಮಸ್ಯೆ ಎದುರಾಗುತ್ತದೆ' ಎಂದಿದ್ದಳು. ಅವಳು ಸಣ್ಣಪುಟ್ಟ ವಸ್ತುಗಳಿಗೆ ಕೇವಲ 1 ಯುವಾನ್ ಬೆಲೆ ಇಟ್ಟರೆ, ಗುಣಮಟ್ಟದ ವಸ್ತುಗಳ ಬೆಲೆಯನ್ನು ಶೇ. 50 ರಷ್ಟು ಕಡಿತಗೊಳಿಸಿದಳು. ಇದರಿಂದ ಪೋಷಕರು ಮತ್ತು ವಿದ್ಯಾರ್ಥಿಗಳು ಅಂಗಡಿಯತ್ತ ಮುಗಿಬಿದ್ದರು.
ಸ್ಟೇಷನರಿ ವ್ಯಾಪಾರಕ್ಕೆ ಹೆಚ್ಚು ಸಮಯ ವ್ಯಯವಾಗುತ್ತಿರುವುದನ್ನು ಗಮನಿಸಿದ ಲಿ, ಈಗ ತನ್ನ ಬಿಸಿನೆಸ್ ಮಾಡೆಲ್ ಅನ್ನೇ ಬದಲಿಸಿದ್ದಾಳೆ. ಹಳೆಯ ಸ್ಟೇಷನರಿ ವಸ್ತುಗಳನ್ನು ಮಾರಿ, ಹೊಸ ಉಪಕರಣಗಳನ್ನು ಖರೀದಿಸಿ ಈಗ ಸಾಸೇಜ್‌ಗಳು, ಆರೆಂಜ್ ಜ್ಯೂಸ್ ಮತ್ತು ತಂಪು ಪಾನೀಯಗಳನ್ನು ಮಾರಲು ಶುರು ಮಾಡಿದ್ದಾಳೆ. "ನಾನು ಪ್ರಾಮಾಣಿಕ ಬಾಸ್ ಆಗಲು ಬಯಸುತ್ತೇನೆ. ಯಾವುದೇ ವಸ್ತುವನ್ನು ಮಾರುವ ಮೊದಲು ಅದು ಆರೋಗ್ಯಕರವಾಗಿದೆಯೇ ಎಂದು ನಾನೇ ಪರೀಕ್ಷಿಸುತ್ತೇನೆ" ಎನ್ನುತ್ತಾಳೆ ಲಿ.
ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪರ ವಿರೋಧ ಚರ್ಚೆ ಶುರುವಾಗಿದೆ. ಲಿ ಅವರ ತಾಯಿ ಕೂಡ ಮಗಳ ಈ ಕೆಲಸವನ್ನು ಬೆಂಬಲಿಸಿದ್ದಾರೆ. "ಇದು ಅವಳಿಗೆ ಒಂದು ಬಿಸಿನೆಸ್ ಸ್ಕೂಲ್ ಇದ್ದಂತೆ" ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ. "ಈ ವಯಸ್ಸಿನಲ್ಲೇ ಇಷ್ಟು ಬುದ್ಧಿವಂತಿಕೆ ಮತ್ತು ಧೈರ್ಯ ಇರುವ ಈಕೆ ಖಂಡಿತ ಯಶಸ್ವಿಯಾಗುತ್ತಾಳೆ" ಎಂದು ಒಬ್ಬರು ಹೊಗಳಿದರೆ; "12 ವರ್ಷದ ವಯಸ್ಸಿನಲ್ಲಿ ಮಕ್ಕಳು ಓದಿನ ಕಡೆ ಗಮನ ಕೊಡಬೇಕು, ಇಷ್ಟು ಬೇಗ ಬಿಸಿನೆಸ್ ಜವಾಬ್ದಾರಿ ಬೇಡ" ಎಂದು ಇನ್ನೊಬ್ಬರು ಸಲಹೆ ನೀಡಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.