Union Budget 2022: 2023ನೇ ಆರ್ಥಿಕ ಸಾಲಿಗೆ ದಾಖಲೆಯ ₹7.50 ಲಕ್ಷ ಕೋಟಿ ಬಂಡವಾಳ ವೆಚ್ಚ ಘೋಷಣೆ

By Suvarna News  |  First Published Feb 1, 2022, 5:38 PM IST

*2023ನೇ ಆರ್ಥಿಕ ಸಾಲಿನ ಬಂಡವಾಳ ವೆಚ್ಚದಲ್ಲಿ ಶೇ.35.4 ಏರಿಕೆ
*2022ನೇ ಆರ್ಥಿಕ ಸಾಲಿನಲ್ಲಿ ₹5.54 ಲಕ್ಷ ಕೋಟಿ ರೂ. ಬಂಡವಾಳ ವೆಚ್ಚ ಘೋಷಿಸಿದ್ದ ಸರ್ಕಾರ
*ವಿತ್ತೀಯ ಕೊರತೆ ಗುರಿಯನ್ನು 2022ನೇ ಆರ್ಥಿಕ ಸಾಲಿಗೆ  6.8%ರಿಂದ 6.9% ಪರಿಷ್ಕರಣೆ


ನವದೆಹಲಿ (ಫೆ.1):  ಕಳೆದ ವರ್ಷ ಕೋವಿಡ್‌ ಕಾರಣದಿಂದ ಎದುರಾದ ಆರ್ಥಿಕ ಸಂಕಷ್ಟದಿಂದ ಪಾರಾಗಲು ಕೇಂದ್ರ ಸರ್ಕಾರ ಬೃಹತ್ ಬಂಡವಾಳ ವೆಚ್ಚವನ್ನು(Capital Expenditure) ಘೋಷಿಸಿತ್ತು. ಇಂದು (ಫೆ.1) ಮಂಡಿಸಿದ 2022ನೇ ಸಾಲಿನ ಬಜೆಟ್ ನಲ್ಲಿ ಕೂಡ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2023ನೇ ಆರ್ಥಿಕ ಸಾಲಿನ ಬಂಡವಾಳ ವೆಚ್ಚದಲ್ಲಿ ಶೇ.35.4 ಏರಿಕೆ ಘೋಷಿಸಿದೆ. ದಾಖಲೆಯ  ₹7.50 ಲಕ್ಷ ಕೋಟಿ ಬಂಡವಾಳ ವೆಚ್ಚ ಘೋಷಿಸಲಾಗಿದ್ದು, 2022ನೇ ಆರ್ಥಿಕ ಸಾಲಿನಲ್ಲಿ ₹5.54 ಲಕ್ಷ ಕೋಟಿ ರೂ. ಬಂಡವಾಳ ವೆಚ್ಚ ಘೋಷಿಸಲಾಗಿತ್ತು.
ಕೋವಿಡ್ ಹಾಗೂ ಹಣದುಬ್ಬರ ಹೆಚ್ಚಳದಿಂದ ತತ್ತರಿಸಿರೋ ಆರ್ಥಿಕತೆಗೆ ಉತ್ತೇಜನ ನೀಡಲು ಹೂಡಿಕೆ ಹೆಚ್ಚಳ ಮಾಡಲು ಸರ್ಕಾರ ಬಂಡವಾಳ ವೆಚ್ಚವನ್ನು ಏರಿಕೆ ಮಾಡಿದೆ. ಈ ಬಾರಿಯ ಬಂಡವಾಳ ವೆಚ್ಚ ದಾಖಲೆಯ ಪ್ರಮಾಣದಾಗಿದ್ದು,  ವರ್ಷದಿಂದ ವರ್ಷಕ್ಕೆ ಶೇ.12ರಷ್ಟು ಏರಿಕೆ ದಾಖಲಿಸಬಹುದೆಂಬ ಗೋಲ್ಡ್ ಮನ್ ಸ್ಯಾಚ್ಸ್ ಅಂದಾಜನ್ನು ಮೀರಿಸಿದೆ. 

ಕಳೆದ ವರ್ಷ ಕೂಡ ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಹೆಚ್ಚಿನ ಬಂಡವಾಳ ವೆಚ್ಚ ಘೋಷಿಸೋ ಮೂಲಕ ಮೂಲಸೌಕರ್ಯ ಅಭಿವೃದ್ಧಿಗೆ ಉತ್ತೇಜನ ನೀಡಿತ್ತು. 2021-22ನೇ ಆರ್ಥಿಕ ಸಾಲಿನಲ್ಲಿ  ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಂಡವಾಳ ವೆಚ್ಚವನ್ನು ₹5.54 ಲಕ್ಷ ಕೋಟಿಗೆ ಹೆಚ್ಚಿಸಿದ್ದರು. ಇದು 2021ರ ಬಜೆಟ್‌ಗಾಗಿ ಮೊದಲು ಅಂದಾಜಿಸಿದ್ದ ₹4.39 ಲಕ್ಷ ಕೋಟಿಗಿಂತ ಪರಿಷ್ಕೃತ ಅಂದಾಜಿನಲ್ಲಿ ಶೇ.26% ರಷ್ಟು ಏರಿಕೆಯಾಗಿತ್ತು. ಖಾಸಗಿ ಬಂಡವಾಳ ವೆಚ್ಚದ ಅನುಪಸ್ಥಿತಿಯಲ್ಲಿ ಸರ್ಕಾರದ ಬಂಡವಾಳ ವೆಚ್ಚವು ಆರ್ಥಿಕತೆಗೆ ಪರಿಣಾಮಕಾರಿ  ಬೆಂಬಲ ನೀಡುತ್ತಿದೆ. ಕೇಂದ್ರ ಸರ್ಕಾರ ರಾಜ್ಯಗಳಿಗೆ ಬಂಡವಾಳ ಒದಗಿಸಲು ವಿಶೇಷ ಪ್ಯಾಕೇಜ್ ಗಳನ್ನು ಕಳೆದ ವರ್ಷ ಘೋಷಿಸಿತ್ತು. ಕೊರೋನಾ ಕಾರಣದಿಂದ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದ್ದ ಆರ್ಥಿಕತೆಯನ್ನು ಮೇಲೆತ್ತಲು ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್ ಗಳನ್ನು ಘೋಷಿಸೋದು ಅತ್ಯವಾಗಿತ್ತು. ಇದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಬಂಡವಾಳ ವೆಚ್ಚವನ್ನು ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿತ್ತು ಕೂಡ. 

Latest Videos

undefined

ಬಜೆಟ್ ಗೆ ಸಂಬಂಧಿಸಿದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

2022ನೇ ಆರ್ಥಿಕ ಸಾಲಿಗೆ ವಿತ್ತೀಯ ಕೊರತೆ 6.9%
ಈ ಬಾರಿಯ ಬಜೆಟ್ ಬೆಳವಣಿಗೆ ಕೇಂದ್ರೀಕೃತವಾಗಿದ್ದು, ಮೂಲಸೌಕರ್ಯ ಅಭಿವೃದ್ಧಿ ಉತ್ತೇಜನಕ್ಕೆ ಹೆಚ್ಚಿನ ಒತ್ತು ನೀಡೋ ಗುರಿ ಹೊಂದಿದೆ. ಈಗಾಗಲೇ ಕೇಂದ್ರ ಸರ್ಕಾರ 2022ನೇ ಸಾಲಿನ ವಿತ್ತೀಯ ಕೊರತೆ ಗುರಿಯನ್ನು ತಲುಪಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಹೀಗಾಗಿ ವಿತ್ತೀಯ ಕೊರತೆ ಗುರಿಯನ್ನು 2022ನೇ ಆರ್ಥಿಕ ಸಾಲಿಗೆ  6.8%ರಿಂದ 6.9% ಪರಿಷ್ಕರಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. ತಜ್ಞರು 2023ನೇ ಸಾಲಿಗೆ ವಿತ್ತೀಯ ಕೊರತೆ 5.8% ಇರಲಿದೆ ಎಂಬ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. 

ಪರಿಣಾಮಕಾರಿ ಬಂಡವಾಳ ವೆಚ್ಚ
ರಾಜ್ಯಗಳಿಗೆ ವಿಶೇಷ ಅನುದಾನಗಳನ್ನು ನೀಡೋ ಮೂಲಕ ಬಂಡವಾಳ ಆಸ್ತಿಗಳನ್ನು ಸೃಷ್ಟಿಸಲು ಕೇಂದ್ರ ನೆರವು ನೀಡಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರದ ಪರಿಣಾಮಕಾರಿ ಬಂಡವಾಳ ವೆಚ್ಚವನ್ನು 2022-23ನೇ ಸಾಲಿಗೆ 10.68 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇದು ಜಿಡಿಪಿಯ ಸುಮಾರು ಶೇ.4.1ರಷ್ಟಿರಲಿದೆ. ಕಳೆದ ವರ್ಷ ಬಂಡವಾಳ ವೆಚ್ಚದ ಗುರಿಗಳನ್ನು ಪೂರೈಸಲು ಮಾರುಕಟ್ಟೆಯಿಂದ ಹೆಚ್ಚುವರಿ ಮೊತ್ತವನ್ನು ಎರವಲು ಪಡೆಯಲು ರಾಜ್ಯಗಳಿಗೆ ಅವಕಾಶ ನೀಡಲಾಗಿತ್ತು ಮತ್ತು ಅನೇಕ ರಾಜ್ಯಗಳು ಇದಕ್ಕಾಗಿ ವಿಶೇಷ ವಿಂಡೋವನ್ನು ಬಳಸಿದವು.

Union Budget 2022: 75 ಜಿಲ್ಲೆಗಳಲ್ಲಿ ಡಿಜಿಟಲ್ ಬ್ಯಾಂಕಿಂಗ್ ಘಟಕ: ಅಂಚೆ ಕಚೇರಿಗಳಲ್ಲಿ 100% ಕೋರ್ ಬ್ಯಾಂಕಿಂಗ್!

ಗ್ರೀನ್ ಬಾಂಡ್ಸ್
2022-23ನೇ ಆರ್ಥಿಕ ಸಾಲಿನಲ್ಲಿ ಹಸಿರು ಮೂಲಸೌಕರ್ಯ ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ಸಮಗ್ರ ಮಾರುಕಟ್ಟೆ ಸಾಲವನ್ನು ಗ್ರೀನ್ ಬಾಂಡ್ ಗಳ ಮೂಲಕ ಸಂಗ್ರಹಿಸಲಿದೆ. ಸಾರ್ವಜನಿಕ ವಲಯದ ಯೋಜನೆಗಳಲ್ಲಿ ಹಸಿರು ಬಾಂಡ್ಗಳನ್ನು ಪರಿಚಯಿಸಲಾಗೋದು. 

click me!