Union Budget 2022 : ತಂಬಾಕು, ಸಿಗರೇಟ್ ಮೇಲಿನ ತೆರಿಗೆಯಲ್ಲಿ ಬದಲಾವಣೆ ಇಲ್ಲ, ಪೆಟ್ರೋಲ್ ಗೆ ಏರಿಕೆ!

By Suvarna News  |  First Published Feb 1, 2022, 7:24 PM IST

ಸಿಗರೇಟ್, ತಂಬಾಕು ಮೇಲಿನ ತೆರಿಗೆಯಲ್ಲಿ ಬದಲಾವಣೆ ಇಲ್ಲ
ಸತತ 2ನೇ ವರ್ಷ ತೆರಿಗೆ ಬದಲಾವಣೆ ಮಾಡದ ಸರ್ಕಾರ
ಪೆಟ್ರೋಲ್ ಬೆಲೆಯಲ್ಲಿ ಮತ್ತಷ್ಟು ಏರಿಕೆ ಸಂಭವ


ನವದೆಹಲಿ (ಫೆ.1): ಕೇಂದ್ರ ಸರ್ಕಾರ ಸತತ 2ನೇ ವರ್ಷ ತಂಬಾಕು ಉತ್ಪನ್ನಗಳು (Tobacco) ಹಾಗೂ ಸಿಗರೇಟ್ (Cigarette) ಮೇಲಿನ ತೆರಿಗೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.  ಇದು ಮುಂದಿನ ಆರ್ಥಿಕ ವರ್ಷದಲ್ಲಿ ಸಿಗರೇಟ್ ಮಾರಾಟದ ಪ್ರಮಾಣದಲ್ಲಿ ಸಾಧಾರಣ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಉದ್ಯಮದ ಅಧಿಕಾರಿಗಳು ಮತ್ತು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಕೋವಿಡ್ ಸಮಯದಲ್ಲಿ ಉಂಟಾದ ಅಡ್ಡಿಯಿಂದ ತಂಬಾಕು ಹಾಗೂ ಸಿಗರೇಟ್ ಉದ್ಯಮ ಇನ್ನಷ್ಟೇ ಚೇತರಿಸಿಕೊಳ್ಳಬೇಕಿದೆ. ಇದರ ನಡುವೆ ಈ ಎರಡೂ ಉತ್ಪನ್ನಗಳ ಮೇಲೆ ಸರ್ಕಾರವು ತೆರಿಗೆ ವಿಚಾರದಲ್ಲಿ ಸ್ಥಿರವಾಗಿರುವುದು ಇನ್ನಷ್ಟು ಸಹಾಯ ಮಾಡಲಿದೆ ಎಂದು ಐಸಿಐಸಿಐ ಡೈರೆಕ್ಟ್ ನ ವಿಶ್ಲೇಷಕ ಸಂಜಯ್ ಮನ್ಯಾಲ್ ತಿಳಿಸಿದ್ದಾರೆ.

ಐಟಿಸಿ ಷೇರು ಏರಿಕೆ: 2022-23ರ ಬಜೆಟ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (nirmala sitharaman)ಅವರು ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆಗಳನ್ನು ಮುಟ್ಟದೆ ಬಿಟ್ಟಿದ್ದರಿಂದ ಮಂಗಳವಾರ ಐಟಿಸಿ (ITC) ಷೇರುಗಳಲ್ಲಿ ಏರಿಕೆ ಕಂಡಿದೆ. ಐಟಿಸಿ ಕಂಪನಿಯ ಆದಾಯದಲ್ಲಿ ಶೇ. 40ರಷ್ಟು ಪಾಲು ಸಿಗರೇಟ್ ಆದಾಯದಿಂದಲೇ ಬರುತ್ತದೆ. ಪ್ರತಿ ಬಾರಿಯೂ ಬಜೆಟ್ ಸಂದರ್ಭದಲ್ಲಿ ತೆರಿಗೆಗಳು ಏರಿಕೆಯಾಗುವ ಭಯದಲ್ಲಿ ಐಟಿಸಿ ಷೇರು ಎಚ್ಚರಿಕೆಯಲ್ಲಿಯೇ ಇರುತ್ತದೆ. ಆದರೆ, ನಿರ್ಮಲಾ ಸೀತಾರಾಮನ್ ತೆರಿಗೆಯಲ್ಲಿ ಯಾವುದೇ ಬದಲಾವಣೆ ಮಾಡದ ಕಾರಣ, ಐಟಿಸಿ ಪಾಲಿಗೆ ಇದು ಧನಾತ್ಮಕ ವಿಚಾರ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಐಟಿಸಿ ಕಂಪನಿಯು ಫೆಬ್ರವರಿ 3 ರಂದು ಡಿಸೆಂಬರ್ 2021 ಕ್ಕೆ ಕೊನೆಗೊಂಡ ತ್ರೈಮಾಸಿಕಕ್ಕೆ ತನ್ನ ಹಣಕಾಸಿನ ಫಲಿತಾಂಶಗಳನ್ನು ಬಿಡುಗಡೆ ಮಾಡುತ್ತದೆ. ಮಾರ್ಚ್ 2022 ಕ್ಕೆ ಕೊನೆಗೊಳ್ಳುವ ಹಣಕಾಸು ವರ್ಷಕ್ಕೆ ಮಧ್ಯಂತರ ಲಾಭಾಂಶದ ಘೋಷಣೆಯನ್ನು ಸಹ ಪರಿಗಣಿಸಲಿದೆ.

ಬಜೆಟ್ ಕುರಿತಾದ ಮತ್ತಷ್ಟು ಸುದ್ದಿಗಳು, ಅಭಿಪ್ರಾಯಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಪೆಟ್ರೋಲ್, ಡೀಸೆಲ್ ದರದಲ್ಲಿ ಏರಿಕೆ: ಮಿಶ್ರಣವಿಲ್ಲದ ಪೆಟ್ರೋಲ್  ಮತ್ತು ಡೀಸೆಲ್  (Unblended petrol and diesel) ಹೆಚ್ಚು ದುಬಾರಿಯಾಗಬಹುದು, ಏಕೆಂದರೆ ಸರ್ಕಾರವು ಅದರ ಮೇಲೆ ಲೀಟರ್‌ಗೆ ರೂ 2 ಹೆಚ್ಚುವರಿ  ಅಬಕಾರಿ ಸುಂಕವನ್ನು ವಿಧಿಸಲು ಯೋಜಿಸಿದೆ. ಕೇಂದ್ರ ಬಜೆಟ್ (Union Budget 2022 ) ಇಂಧನದ ಮೇಲಿನ ಅಬಕಾರಿ ಸುಂಕವನ್ನು ಬದಲಾಯಿಸದೇ ಇರಲು ತೀರ್ಮಾನಿಸಿದೆ. ಅಕ್ಟೋಬರ್ 1 ರಿಂದ ಅನ್ ಬ್ಲೆಂಡೆಡ್ ಇಂಧನಗಳ ಮೇಲೆ ಮೇಲೆ ರೂ 2 ಹೆಚ್ಚುವರಿ ಡಿಫರೆನ್ಷಿಯಲ್ ಅಬಕಾರಿ ಸುಂಕವನ್ನು ಪರಿಚಯಿಸಲಿದೆ.

“ಇಂಧನ ಮಿಶ್ರಣವು ಈ ಸರ್ಕಾರದ ಆದ್ಯತೆಯಾಗಿದೆ. ಇಂಧನವನ್ನು ಮಿಶ್ರಣ ಮಾಡುವ ಪ್ರಯತ್ನಗಳನ್ನು ಉತ್ತೇಜಿಸಲು, ಮಿಶ್ರಣ ಮಾಡದ ಇಂಧನಗಳ ಮೇಲೆ 2022 ರ ಅಕ್ಟೋಬರ್ 1 ನೇ ದಿನದಿಂದ 2 ರೂಪಾಯಿಗಳ ಹೆಚ್ಚುವರಿ ಡಿಫರೆನ್ಷಿಯಲ್ ಎಕ್ಸೈಸ್ ಸುಂಕವನ್ನು ವಿಧಿಸಲಾಗುತ್ತದೆ ”ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಮಂಗಳವಾರ ಹೇಳಿದ್ದಾರೆ.
ಮಿಶ್ರಿತ ಇಂಧನವು ಪೆಟ್ರೋಲ್ ಅಥವಾ ಡೀಸೆಲ್ ಅನ್ನು ಸೂಚಿಸುತ್ತದೆ, ಇದನ್ನು ವಾಹನಗಳಲ್ಲಿ ಬಳಸಲು ಎಥೆನಾಲ್ ನಂಥ ಇತರ ದ್ರವಗಳೊಂದಿಗೆ ಮಿಶ್ರಣ ಮಾಡಲಾಗುತ್ತದೆ. ಮಿಶ್ರಿತ ಇಂಧನದಲ್ಲಿ ಚಲಿಸುವ ವಾಹನಗಳು ಕಡಿಮೆ ಹೊಗೆಯನ್ನು ಉತ್ಪಾದಿಸುತ್ತವೆ.

Union Budget 2022: ಕ್ರೀಡಾ ಕ್ಷೇತ್ರಕ್ಕೆ ಅತಿಹೆಚ್ಚು ಬಜೆಟ್ ಒದಗಿಸಿದ ಕೇಂದ್ರ ಸರ್ಕಾರ..!
ಕಚ್ಚಾ ತೈಲದ ಬೆಲೆ ಒಂದು ಬ್ಯಾರಲ್ ಗೆ 90 ಡಾಲರ್ ಗಡಿ ಮುಟ್ಟಿದೆ. ಅಲ್ಲದೆ, ಕಳೆದ ಮೂರು ತಿಂಗಳಿನಿಂದ ಇಂಧನ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಅಂಡರ್ ರಿಕವರಿ ಯೋಜನೆ ಈಗಾಗಲೇ ಚಾಲ್ತಿಯಲ್ಲಿರಬಹುದು. ಈಗ ಹೆಚ್ಚುವರಿ ಸುಂಕ ದಾಖಲಿಸುವ ಹಿನ್ನೆಲೆಯಲ್ಲಿ ಮಿಶ್ರಿತವಲ್ಲದ ಇಂಧನಗಳ ಬೆಲೆಯಲ್ಲಿ ಮುಂಬರುವ ದಿನಗಳಲ್ಲಿ ದೊಡ್ಡ ಮಟ್ಟದ ಏರಿಕೆ ಆಗಬಹುದು" ಎಂದು ಡೆಲಾಯ್ಟ್ ಇಂಡಿಯಾದ ದೇಬಶೀಶ್ ಮಿಶ್ರಾ ಹೇಳಿದ್ದಾರೆ.

click me!