Royal Enfield ಮಿಟಿಯೋರ್‌ 350ಯಲ್ಲಿ ಬೆಂಗಳೂರಿಂದ ಯೇರ್ಕಾಡ್‌ಗೆ ರೈಡ್‌: ಒಂದು ಅಪೂರ್ವ ಕಾಫಿ ಪ್ರವಾಸ

By Kannadaprabha News  |  First Published Jan 30, 2024, 7:20 PM IST

ತಿರುವುಗಳಿಂದ ಕೂಡಿದ ರಸ್ತೆ, ಬೆಟ್ಟ-ಗುಡ್ಡ, ಹಸಿರುಗಳಿಂದ ತುಂಬಿದ ಆಹ್ಲಾದಕರ ವಾತಾವರಣ, ಈ ದಾರಿಯಲ್ಲಿ ರಾಯಲ್ ಎನ್‌ಫೀಲ್ಡ್ ಮಿಟಿಯೋರ್ 350 ಬೈಕ್ ಸದ್ದು ಮಾಡುತ್ತಾ ಸಾಗಿತ್ತು. 14 ಬೈಕ್ ಯೇರ್ಕಾಡಿನ ಕಾಫಿ ತೋಟದ ಸುಂದರ ತಾಣಕ್ಕೆ ಲಗ್ಗೆ ಇಟ್ಟಿತ್ತು. ಲಾಂಗ್ ರೈಡ್ ಸೇರಿದಂತೆ ಸುಂದರ ಅನುಭಗಳ  ಅನ್‌ಕವರ್‌ ಕಾಫಿ 2024 ಕಥನ ಯಾನ ಇಲ್ಲಿದೆ.


ರಾಜೇಶ್ ಶೆಟ್ಟಿ

ಬೆಂಗಳೂರಿನಿಂದ ಯೇರ್ಕಾಡ್‌ ಬೆಟ್ಟದ ತುದಿಗೆ ಸುಮಾರು 200 ಕಿಮೀ ದೂರ. ರಾಷ್ಟ್ರೀಯ ಹೆದ್ದಾರಿಯ ನಯವಾದ ರಸ್ತೆ, ಘಾಟಿಯ ತಿರುವು ಮುರುವು ಹಾದಿ, ಕಾಫಿ ಎಸ್ಟೇಟಿನ ಕಲ್ಲು ಮು‍ಳ್ಳಿನ ರಸ್ತೆಗಳನ್ನೆಲ್ಲಾ ಹಾದು ಹೋಗಬೇಕು ಅಲ್ಲಿಗೆ. ಹೀಗೊಂದು ಸುಂದರವಾದ ರೈಡ್‌ಗೆ ನಾವು 14 ಮಂದಿ ಬೈಕರ್‌ಗ‍ಳು ಸಜ್ಜಾಗಿದ್ದೆವು. ಆರಂಭದಿಂದ ಇವತ್ತಿನ ಕ್ಷಣದವರೆಗೂ ತನ್ನ ಸದ್ದಿನಿಂದಲೇ ಬಹುತೇಕರ ಎದೆಬಡಿತವಾಗಿರುವ ರಾಯಲ್‌ ಎನ್‌ಫೀಲ್ಡ್‌ ಆಯೋಜಿಸಿದ್ದ ಅನ್‌ಕವರ್‌ ಕಾಫಿ ರೈಡ್‌ ಅದು. ರಾಯಲ್‌ ಎನ್‌ಫೀಲ್ಡ್‌ನವರು ತನ್ನ ರೈಡರ್‌ಗಳಿಂದ ಅನೇಕ ರೈಡ್‌ಗ‍ಳನ್ನು ಆಯೋಜಿಸುತ್ತಿರುತ್ತಾರೆ. ಒಂದೊಂದು ರೈಡ್‌ ಕೂಡ ಒಂದೊಂದು ವಿಶೇಷತೆಯನ್ನು ಒಳಗೊಂಡಿರುತ್ತದೆ. ಈ ಸಲದ ವಿಶೇಷತೆ ಎಂದರೆ ಕಾಫಿ ಟೂರ್. ಈ ರೈಡ್‌ನ ಹೆಸರು ಅನ್‌ಕವರ್‌ ಕಾಫಿ 2024.

Tap to resize

Latest Videos

14 ಮಂದಿ ಮಿಟಿಯೋರ್‌ 350 ಬೈಕಿನಲ್ಲಿ ಬೆಂಗಳೂರಿನಿಂದ ಹೊರಟೆವು. ಜೆ ಸೀರಿಸೀನ 350 ಸಿಸಿ ಎಂಜಿನ್ ಹೊಂದಿರುವ ಈ ಬೈಕು ನೋಡುವುದಕ್ಕೂ, ಆರಾಮವಾಗಿ ರೈಡ್ ಮಾಡುವುದಕ್ಕೂ ಒಳ್ಳೆಯದು. ಒಬ್ಬೊಬ್ಬರು ಒಂದೊಂದು ಬೈಕೇರಿ ಹೊಸೂರು ದಾಟಿ ಹೈವೇಗೆ ಬಿದ್ದೆವು. ಅಲ್ಲಿಂದ ನೇರ ದಾರಿ. 110-115 ಕಿಮೀ ವೇಗದಲ್ಲಿ ಆರಾಮಾಗಿ ಸಾಗಬಹುದು. ಅವರವರವ ಶಕ್ತ್ಯಾನುಸಾರ ಎಂಬುದು ಗಮನಾರ್ಹ. ಕೃಷ್ಣಗಿರಿ ತಲುಪಿ ಸೇಲಂ ಹೋಗುವುದು ಕೂಡ ಅಂಥಾ ತ್ರಾಸೇನಲ್ಲ. ಅಲ್ಲಿಂದ ಮುಂದೆ ಯೇರ್ಕಾಡಿಗೆ ಇರುವುದು ಖುಷಿಯ ಹಾದಿ, ತಿರುವು ರಸ್ತೆ. ಸುತ್ತಿ ಬಳುಕಿ ಬೆಟ್ಟದ ತುದಿಗೆ ಸಾಗುವುದೇ ರೋಮಾಂಚಕ ಯಾನ.
ನಮ್ಮ ಗುರಿ ಇದ್ದಿದ್ದು ಯೇರ್ಕಾಡಿನ ಪುಟ್ಟ ಪೇಟೆಯಿಂದಲೂ ಹತ್ತಾರು ಕಿಮೀ ದೂರದಲ್ಲಿ ಇರುವ ಎಂಎಸ್‌ಪಿ ಗೌರಿ ಎಸ್ಟೇಟಿನ ಕಡೆಗೆ. ಹಾಗಾಗಿ ಯೇರ್ಕಾಡ್‌ ಪೇಟೆಯ ನಂತರದ ಹಾದಿ ಇನ್ನೂ ಸೊಗಸು. ಕಾಫಿ ಗಿಡಗಳು, ಕಾಳು ಮೆಣಸಿನ ಬಳ್ಳಿಗಳು ಸ್ವಾಗತ ಕೋರುತ್ತವೆ. ಗುರಿ ತಲುಪಿದಾಗ ಇನ್ನೇನು ಸೂರ್ಯ ಮುಳುಗುತಲಿದ್ದ. ಕೆಂಪು ಬಾನು ಕಪ್ಪಾಗುತ್ತಿತ್ತು.

ದೊಡ್ಡ ಆಕಾರ, ಶಕ್ತಿ ಅಪಾರ ಸಿಟ್ರಾಯನ್ ಸಿ3 ಕಾರಿನ ಟೆಸ್ಟ್ ಡ್ರೈವ್!

ಅಂದಹಾಗೆ ಅನ್‌ಕವರ್‌ ಕಾಫಿ ರೈಡ್‌ಗೆ ದಾರಿ ತೋರಿಸಿದ್ದು ಬ್ಲೂಟೊಕೈ(https://bluetokaicoffee.com/) ಎಂಬ ಕಾಫಿ ಉತ್ಪನ್ನ ತಯಾರಿಸುವ ಸಂಸ್ಥೆ. ಬ್ಲೂಟೊಕೈ ವಿಧವಿಧದ ಕಾಫಿ ಉತ್ಪನ್ನಗಳನ್ನು ನೀಡುತ್ತದೆ. ಜೊತೆಗೆ ಅದರ ರೆಸ್ಟೋರೆಂಟ್‌ಗಳೂ ಇವೆ. ದೇಶವಿದೇಶದಾದ್ಯಂತ ಅಗಾಧವಾಗಿ ಹರಡಿರುವ ಈ ಸಂಸ್ಥೆಗೆ ಹಲವಾರು ಎಸ್ಟೇಟ್‌ಗಳಿಂದ ಕಾಫಿ ಬೀಜಗಳು ಪೂರೈಕೆಯಾಗುತ್ತವೆ. ಆ ಎಸ್ಟೇಟ್‌ಗಳಲ್ಲಿ ಒಂದು ಎಂಎಸ್‌ಪಿ ಗೌರಿ ಎಸ್ಟೇಟ್‌.
ಅದೊಂದು ಅಂದಾಜು ಸಾವಿರ ಎಕರೆ ವಿಸ್ತಾರವಾಗಿ ಹರಡಿಕೊಂಡಿರುವ ಎಸ್ಟೇಟು. ನೂರಾರು ವರ್ಷಗಳಿಂದ ಈ ಎಸ್ಟೇಟು ಅಲ್ಲಿದೆ. ಜನರೇಷನ್‌ ದಾಟಿದಂತೆ ವ್ಯಾಪಾರ ರೀತಿ, ಉತ್ಪನ್ನ ತಯಾರಿಸುವ ರೀತಿ ಮಾತ್ರ ಬದಲಾಗಿದೆ. ಈಗ ಕಾಫಿ ಎಸ್ಟೇಟ್‌ ಒಳಗೆ ಈಗ ಕಾಟೇಜ್‌ಗಳೂ ಇವೆ. ಯಾರಾದರೂ ಯೇರ್ಕಾಡ್‌ ತುದಿಗೆ ಹೋಗಿ ಸೂರ್ಯೋದಯ, ಸೂರ್ಯಾಸ್ತ ನೋಡುವ ಆಸಕ್ತರು ಅಲ್ಲಿಗೆ ಹೋಗಬಹುದು. ಹೆವೆನ್ಸ್ ಲೆಡ್ಜ್ ಮತ್ತು ಲಾಸ್ಟ್ ಶೋಲಾ ಕಾಟೇಜಸ್ ಎಂಬ ಎರಡು ಥರದ ಕಾಟೇಜ್‌ಗಳು ಇಲ್ಲಿ ಲಭ್ಯ. ಮಾಹಿತಿಗೆ www.stayatyercaud.com ನೋಡಬಹುದು.

ಮರುದಿನ ಆ ಎಸ್ಟೇಟಿನಲ್ಲಿ ಕಾಫಿ ಬೀಜ ತೆಗೆಯುವುದರಿಂದ ಹಿಡಿದು ಆ ಕಾಫಿ ಬೀಜಗಳ ಸಂಸ್ಕರಣೆ, ಕಾಫಿ ಬೆಳೆಗಾರರ ಸಂಕಷ್ಟ ಎಲ್ಲವನ್ನೂ ಆ ಎಸ್ಟೇಟು ಮಾಲೀಕ ನವೀನ್‌ ಮತ್ತು ಕಮಲೇಶ್‌ ತಿಳಿಸುತ್ತಾ ಹೋದರು. ಕಾಫಿ ಬಗ್ಗೆ ತಿಳಿದುಕೊಂಡಿದ್ದು ಈ ರೈಡ್‌ನ ಬೋನಸ್‌ ಸಂತೋಷ.ಈ ಅನ್‌ಕವರ್‌ ಕಾಫಿ ರೈಡ್‌ನಿಂದ ಸಿಕ್ಕ ಆಹ್ಲಾದವೇನೆಂದರೆ ಮಿಟಿಯೋರ್‌ 350ಯ ದೈತ್ಯ ಶಕ್ತಿ ಮತ್ತು ರಾಯಲ್‌ ಎನ್‌ಫೀಲ್ಡ್‌ ರೈಡ್‌ಗಳ ಅಗಾಧತೆಯ ಪರಿಚಯ. ರಾಯಲ್ ಎನ್‌ಫೀಲ್ಡ್‌ನವರು ಸೊಗಸಾಗಿ ರೈಡ್‌ಗಳನ್ನು ಆಯೋಜಿಸುತ್ತಾರೆ. ಅವರಲ್ಲಿ ಒಂದು ಅದ್ಭುತ ರೈಡ್‌ ತಂಡವಿದೆ. ಈ ರೈಡ್‌ನಲ್ಲಿ ರೈಡ್‌ ತಂಡದ ರೋಹನ್‌, ವಿಗೀತ್‌ ಮತ್ತು ರಾಜ್‌ಕಿರಣ್‌ ಭಾಗವಹಿಸಿದ್ದರು. ಅಲ್ಲದೇ ರಾಯಲ್‌ ಎನ್‌ಫೀಲ್ಡ್‌ನ ಸಿದ್ದಾರ್ಥ್‌ ಕೂಡ ಬಂದಿದ್ದರು.

ಗ್ರೌಂಡ್ ಕ್ಲಿಯರೆನ್ಸು ತೃಪ್ತಿದಾಯಕ, ಇಂಜಿನ್ ತಾಕತ್ತು ಆನಂದದಾಯಕ, ನಿಸಾನ್ ಮ್ಯಾಗ್ನೈಟ್ ಟೆಸ್ಟ್ ಡ್ರೈವ್!

ಬೆಂಗಳೂರಿನಿಂದ ಯೇರ್ಕಾಡ್‌ಗೆ ಹೋಗಿ ಅಲ್ಲಿಂದ ವಾಪಸ್‌ ಬರುವ ಹೊತ್ತಿಗೆ ಸುಮಾರು 450 ಕಿಮೀಗಳ ರೈಡ್‌ ಮಾಡಿದ್ದೆವು. ವಿವಿಧ ಬಗೆಯ ರಸ್ತೆಗಳಲ್ಲಿ ಖುಷಿಯಾಗಿ ಹಾದು ಬಂದ ಈ ರೈಡ್‌ ಬಹುಕಾಲ ನೆನಪಲ್ಲಿ ಉಳಿಯುತ್ತದೆ. ಆಸಕ್ತಿ ಇದ್ದವರು ಮತ್ತು ರಾಯಲ್‌ ಎನ್‌ಫೀಲ್ಡ್‌ ಬೈಕ್ ಹೊಂದಿರುವವರು ಮುಂದೆ ಅವರು ಆಯೋಜಿಸುವ ರೈಡ್‌ಗಳಲ್ಲಿ ಭಾಗವಹಿಸಬಹುದು.
 

click me!