
ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆಯಾದ ಟಿವಿಎಸ್ ಮೋಟಾರ್ ಕಂಪನಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಭರ್ಜರಿ ಮುನ್ನಡೆ ಕಾಯ್ದುಕೊಂಡಿದೆ. ಜೂನ್ ತಿಂಗಳ ಮಾರಾಟದಲ್ಲಿ ಶೇಕಡಾ 47 ರಷ್ಟು ದಾಖಲೆ ಪ್ರಮಾಣದ ಬೆಳವಣಿಗೆಯನ್ನು ಪ್ರದರ್ಶಿಸಿರುವ ಕಂಪನಿಯ ಷೇರುಗಳು, ಗುರುವಾರದ ವಹಿವಾಟಿನಲ್ಲಿ ಶೇಕಡಾ 4 ಕ್ಕಿಂತಲೂ ಹೆಚ್ಚು ಜಿಗಿತ ಕಾಣುವ ಮೂಲಕ ಮಾರುಕಟ್ಟೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಿವೆ.
ಕಳೆದ ವರ್ಷದ ಜೂನ್ ತಿಂಗಳ ಅವಧಿಗೆ ಹೋಲಿಸಿದರೆ, ಈ ವರ್ಷ ಟಿವಿಎಸ್ ಕಂಪನಿಯ ಒಟ್ಟು ಮಾರಾಟದಲ್ಲಿ ವರ್ಷದಿಂದ ವರ್ಷಕ್ಕೆ (YoY) ಶೇಕಡಾ 47 ರಷ್ಟು ಗಣನೀಯ ಹೆಚ್ಚಳ ದಾಖಲಾಗಿದೆ. ಮೊಪೆಡ್ ಒಳಗೊಂಡಂತೆ ಒಟ್ಟು ದ್ವಿಚಕ್ರ ವಾಹನಗಳ ಮಾರಾಟವು 2025 ರ ಜೂನ್‌ನಲ್ಲಿದ್ದ 3,85,698 ಯುನಿಟ್‌ಗಳಿಂದ ಈ ವರ್ಷ ಭಾರಿ ಪ್ರಗತಿ ಕಂಡಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಕಂಪನಿಯ ದ್ವಿಚಕ್ರ ವಾಹನಗಳ ಒಟ್ಟು ಮಾರಾಟ 4,11,014 ಯುನಿಟ್‌ಗಳಿಗೆ ತಲುಪಿದ್ದು, ಶೇಕಡಾ 46 ರಷ್ಟು ವಾರ್ಷಿಕ ಬೆಳವಣಿಗೆ ಸಾಧಿಸಿದೆ. ವಾಹನಗಳ ವಿಭಾಗವನ್ನು ನೋಡುವುದಾದರೆ, ಮೋಟಾರ್‌ಸೈಕಲ್‌ಗಳು ಶೇಕಡಾ 42 ರಷ್ಟು ಪ್ರಗತಿ ದಾಖಲಿಸಿದರೆ, ಸ್ಕೂಟರ್‌ಗಳ ಮಾರಾಟವು ಶೇಕಡಾ 53 ರಷ್ಟು ದಾಖಲೆ ಮಟ್ಟದಲ್ಲಿ ಏರಿಕೆಯಾಗಿ 2,47,950 ಯುನಿಟ್‌ಗಳನ್ನು ತಲುಪಿದೆ.
ವಿಶೇಷವಾಗಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ (EV) ಮಾರಾಟವು ಮೂರು ಪಟ್ಟು ಹೆಚ್ಚಾಗಿದೆ. ಜೂನ್ 2025 ರಲ್ಲಿ 14,400 ಯುನಿಟ್‌ಗಳಷ್ಟಿದ್ದ ಇವಿ ಮಾರಾಟವು ಜೂನ್ 2026 ರಲ್ಲಿ ಬರೋಬ್ಬರಿ 48,537 ಯುನಿಟ್‌ಗಳಿಗೆ ಜಿಗಿದಿದೆ. ಜೂನ್ ತಿಂಗಳಲ್ಲಿ ಕಂಪನಿಯು 24,586 ತ್ರಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಜಾಗತಿಕ ಮಾರುಕಟ್ಟೆಯ ರಫ್ತು ವ್ಯವಹಾರದಲ್ಲೂ ಶೇಕಡಾ 47 ರಷ್ಟು ವೃದ್ಧಿಯಾಗಿದ್ದು, ಒಟ್ಟು 172,355 ಯುನಿಟ್‌ಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರಾಟ ಮಾಡಲಾಗಿದೆ. ಈ ಎಲ್ಲಾ ಪೂರಕ ಬೆಳವಣಿಗೆಗಳಿಂದಾಗಿ, ಟಿವಿಎಸ್ ಮೋಟಾರ್ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (Q1FY27) ಬರೋಬ್ಬರಿ 16.31 ಲಕ್ಷ ಯುನಿಟ್‌ಗಳ ಸಾರ್ವಕಾಲಿಕ ಗರಿಷ್ಠ ತ್ರೈಮಾಸಿಕ ಮಾರಾಟವನ್ನು ದಾಖಲಿಸಿ ಹೊಸ ಇತಿಹಾಸ ಸೃಷ್ಟಿಸಿದೆ.
ಮತ್ತೊಂದೆಡೆ, ಟಿವಿಎಸ್ ಮೋಟಾರ್ ಕಂಪನಿಯು 2020 ರಲ್ಲಿ ಸ್ವಾಧೀನಪಡಿಸಿಕೊಂಡ ತನ್ನ ಬ್ರಿಟಿಷ್ ಪ್ರೀಮಿಯಂ ಮೋಟಾರ್‌ಸೈಕಲ್ ಬ್ರಾಂಡ್ ಆದ 'ದಿ ನಾರ್ಟನ್ ಮೋಟಾರ್‌ಸೈಕಲ್ ಕಂಪನಿ'ಯಿಂದಾಗಿ ಸುಮಾರು ₹1,976 ಕೋಟಿ (ಅಂದಾಜು ₹2,000 ಕೋಟಿ) ನಷ್ಟವನ್ನು ಅನುಭವಿಸಿದೆ. ಈ ಮೊತ್ತವು ಟಿವಿಎಸ್ ಕಂಪನಿಯ ಕಳೆದ ಆರು ವರ್ಷಗಳ ಒಟ್ಟು ಲಾಭದ ಐದನೇ ಒಂದು ಭಾಗಕ್ಕೆ ಸಮನಾಗಿದೆ. ಕಂಪನಿಯ ವಾರ್ಷಿಕ ವರದಿಗಳ ಪ್ರಕಾರ, 2020-21 ರಿಂದ 2025-26 ರ ಅವಧಿಯಲ್ಲಿ ಟಿವಿಎಸ್ ಗ್ರೂಪ್ ₹9,993 ಕೋಟಿ ಗಳಿಸಿದ್ದರೆ, ನಾರ್ಟನ್ ಬ್ರಾಂಡ್ ಸತತ ನಷ್ಟ ಅನುಭವಿಸಿದೆ.
ಜೂನ್ 24 ರಂದು ಟಿವಿಎಸ್‌ನ ಹೊಸೂರು ಉತ್ಪಾದನಾ ಘಟಕದಲ್ಲಿ ಮೊದಲ 'ಅಟ್ಲಾಸ್' (Atlas) ಮಾದರಿಗಳ ಬಿಡುಗಡೆಯನ್ನು ಘೋಷಿಸಲಾಗಿದ್ದು, ಮುಂಬರುವ ಜುಲೈನಲ್ಲಿ ಹೊಸ ಲೈನ್‌ಅಪ್‌ನೊಂದಿಗೆ ಜಾಗತಿಕವಾಗಿ ಮರುಪ್ರಾರಂಭಗೊಳ್ಳುವ ಮುನ್ನ, ನಾರ್ಟನ್ ಕಂಪನಿಯು FY26 ರಲ್ಲಿ ತೆರಿಗೆಯ ನಂತರ ₹723 ಕೋಟಿ ನಷ್ಟವನ್ನು ದಾಖಲಿಸಿದೆ.
ಈ ನಷ್ಟಗಳು ದೇಶೀಯ ಮತ್ತು ಜಾಗತಿಕ ಪ್ರೀಮಿಯಂ ಮಾರುಕಟ್ಟೆಗಳಲ್ಲಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಲು ಕಂಪನಿ ನಡೆಸುತ್ತಿರುವ ಆಕ್ರಮಣಕಾರಿ ಪ್ರಯತ್ನಗಳ ಭಾಗವಾಗಿದೆ. ಆಗಸ್ಟ್ 2025 ರಲ್ಲಿ ರಾಲ್ಫ್ ಸ್ಪೆತ್ ಅವರಿಂದ ಅಧಿಕರಾ ವಹಿಸಿಕೊಂಡ ಟಿವಿಎಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸುದರ್ಶನ್ ವೇಣು ಅವರು ಈ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಬ್ರಾಂಡ್ ಮರುಲೋಂಚ್ ಮೇಲೆ ಹೆಚ್ಚಿನ ಗಮನ ಹರಿಸಿದ್ದಾರೆ.
ನಾರ್ಟನ್ ಬ್ರಾಂಡ್‌ನ ನಷ್ಟದ ಸುದ್ದಿಯಿದ್ದರೂ, ಜೂನ್ ತಿಂಗಳ ಬಂಪರ್ ಮಾರಾಟದ ವರದಿಯಿಂದಾಗಿ ಹೂಡಿಕೆದಾರರು ಮುಗಿಬಿದ್ದು ಷೇರು ಖರೀದಿಗೆ ಮುಂದಾಗಿದ್ದಾರೆ. ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ (NSE) ₹3,586 ಕ್ಕೆ ದಿನದ ವಹಿವಾಟು ಆರಂಭಿಸಿದ ಷೇರು, ಮಾರುಕಟ್ಟೆಯ ಅವಧಿಯಲ್ಲಿ ₹3,604.80 ರಷ್ಟು ಗರಿಷ್ಠ ಮಟ್ಟವನ್ನು ತಲುಪಿತು. ಮಧ್ಯಾಹ್ನ 12:30 ರ ಸುಮಾರಿಗೆ ಟಿವಿಎಸ್ ಮೋಟಾರ್ ಕಂಪನಿ ಷೇರುಗಳು ಒಟ್ಟಾರೆ ಮಾರುಕಟ್ಟೆಗಿಂತ ಹೆಚ್ಚಿನ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದ್ದು, ಶೇಕಡಾ 3 ರಷ್ಟು ಏರಿಕೆಯಾಗಿ ₹3,602 ಕ್ಕೆ ತಲುಪಿತು. ಇದಕ್ಕೆ ಹೋಲಿಸಿದರೆ ಅದೇ ಸಮಯದಲ್ಲಿ ನಿಫ್ಟಿ 50 ಸೂಚ್ಯಂಕವು ಕೇವಲ ಶೇಕಡಾ 0.52 ರಷ್ಟು ಮಾತ್ರ ಏರಿಕೆ ಕಂಡಿತ್ತು.
ನಿಫ್ಟಿ ನೆಕ್ಸ್ಟ್ 50 ರ ಭಾಗವಾಗಿರುವ ಟಿವಿಎಸ್ ಮೋಟಾರ್, ಪ್ರಸ್ತುತ ₹3.6 ಟ್ರಿಲಿಯನ್ ಭಾರಿ ಮಾರುಕಟ್ಟೆ ಬಂಡವಾಳೀಕರಣವನ್ನು (Market Cap) ಹೊಂದಿದೆ. ಎನ್‌ಎಸ್‌ಇ (NSE) ದತ್ತಾಂಶದ ಪ್ರಕಾರ, ನಿಫ್ಟಿ ಸೂಚ್ಯಂಕದಲ್ಲಿನ ಶೇಕಡಾ 5.2 ರಷ್ಟು ಕುಸಿತಕ್ಕೆ ಹೋಲಿಸಿದರೆ, ಕಳೆದ ಒಂದು ವರ್ಷದಲ್ಲಿ ಈ ಷೇರು ಶೇಕಡಾ 2 ರಷ್ಟು ಸಕಾರಾತ್ಮಕ ಬೆಳವಣಿಗೆಯನ್ನು ಕಾಯ್ದುಕೊಂಡಿದೆ.
ಪೃಥ್ವಿ ಫಿನ್‌ಮಾರ್ಟ್‌ನ ತಾಂತ್ರಿಕ ಇಕ್ವಿಟಿ ಸಂಶೋಧನಾ ವಿಭಾಗದ ಮುಖ್ಯಸ್ಥರಾದ ಎವಿಪಿ ಹರೀಶ್ ಜುಜರೆ ಅವರ ಪ್ರಕಾರ, ಟಿವಿಎಸ್ ಮೋಟಾರ್ ಷೇರು ಪ್ರಸ್ತುತ ಅತ್ಯಂತ ಬಲವಾದ ಚೇತರಿಕೆಯ ಹಂತದಲ್ಲಿದೆ. ಫೆಬ್ರವರಿ 2026 ರಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ ₹3,970 ತಲುಪಿದ ನಂತರ, ಟಿವಿಎಸ್ ಮೋಟಾರ್ ಷೇರು ತಿದ್ದುಪಡಿ (Correction) ಪ್ರಕ್ರಿಯೆಗೆ ಒಳಗಾಗಿ ₹3,300 ರ ಮಟ್ಟಕ್ಕೆ ಇಳಿದಿತ್ತು. ಆದರೆ, ₹3,230 ರಿಂದ ₹3,300 ವಲಯದಲ್ಲಿ ಈ ಷೇರು ಸತತವಾಗಿ ಬಲವಾದ ಬೆಂಬಲವನ್ನು (Support) ಪಡೆದುಕೊಂಡಿದೆ. ₹3,300 ಮುಕ್ತಾಯದ ಆಧಾರದ ಮೇಲೆ ದೃಢವಾಗಿ ಹಿಡಿದಿಟ್ಟಿರುವುದು ಇದು ಪ್ರಮುಖ ಬೇಡಿಕೆಯ ಪ್ರದೇಶವೆಂದು ದೃಢಪಡಿಸುತ್ತದೆ.
ಈ ಷೇರು ತನ್ನ ಕುಸಿಯುತ್ತಿರುವ ಟ್ರೆಂಡ್‌ಲೈನ್ ಹಾಗೂ ₹3,575 ರ ಬಳಿ ಇದ್ದ 200 ದಿನಗಳ ಸರಳ ಚಲಿಸುವ ಸರಾಸರಿಗಿಂತ (200-day SMA) ಮೇಲಕ್ಕೆ ಜಿಗಿದಿದ್ದು, ಹೊಸ ಅಪ್‌ಟ್ರೆಂಡ್ (Uptrend) ಆರಂಭದ ಸ್ಪಷ್ಟ ಮುನ್ಸೂಚನೆ ನೀಡಿದೆ. ಸಮೀಪದ ಅವಧಿಯಲ್ಲಿ (Short term) ಈ ಷೇರು ₹3,800 ಮಟ್ಟವನ್ನು ಪರೀಕ್ಷಿಸುವ ಸಾಧ್ಯತೆಯಿದೆ. ಈ ಪ್ರತಿರೋಧದ ಮಟ್ಟಕ್ಕಿಂತ ಹೆಚ್ಚಿನ ನಿರ್ಣಾಯಕ ನಡೆ ಕಂಡುಬಂದರೆ, ಮಧ್ಯಮ ಅವಧಿಯಲ್ಲಿ (Medium term) ತನ್ನ ಸಾರ್ವಕಾಲಿಕ ಗರಿಷ್ಠ ಮಟ್ಟವಾದ ₹3,970 ಅನ್ನು ಮರುಪರಿಶೀಲಿಸುವ ದಾರಿ ಸುಗಮವಾಗಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.