ಬೆಂಗಳೂರು(ಆ.10) ಬೈಕು ಮತ್ತು ಮಾನವ ಹಳೇ ಗೆಳೆಯರು. ಮನುಷ್ಯ ಸಾಕು ಪ್ರಾಣಿಯನ್ನು ಪ್ರೀತಿಸುವಷ್ಟೇ ಪ್ರೀತಿಯಿಂದ ಒಂದು ಯಂತ್ರವನ್ನು ಕೂಡ ಪ್ರೀತಿಸಬಲ್ಲರು ಅನ್ನುವುದನ್ನು ಬೈಕರ್‌ಗಳು ಕಲಿಸಿ ಕೊಡುತ್ತಾರೆ. ಅದೇ ಥರ 50-60ರ ದಶಕದಲ್ಲಿ ರೇಸರ್‌ಗಳ ಪ್ರಾಣದಂತೆ ಇದ್ದಿದ್ದು ಕಾಂಟಿನೆಂಟಲ್ ಜಿಟಿ ಬೈಕು. ಬದುಕೇ ಜಿಟಿ ಎಂಬಂತೆ ಇದ್ದ ಆ ಬೈಕು ಹಳೇ ರೂಪ, ಹೊಸ ಶಕ್ತಿ ಸೇರಿಸಿಕೊಂಡು ಬಂದು ರೋಡಿಗಿಳಿದು ಅನೇಕ ತಿಂಗಳುಗಳು ಸರಿದುಹೋಗಿವೆ. ಆ ಬೈಕನ್ನು ಈಗ ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಎಂದು ಕರೆಯುತ್ತಾರೆ. ಈ ವರ್ಷ ಕಾಂಟಿನೆಂಟಲ್ ಜಿಟಿ 650ಯ ಹೊಸ ವರ್ಷನ್ ಬಂದಿದೆ. ಇಂಜಿನ್‌ನಲ್ಲಿ ಹೊಸ ಬದಲಾವಣೆ ಏನೂ ಇಲ್ಲ. ಆದರೆ ಮತ್ತಷ್ಟು ಸಾಫ್ಟ್ ಆಗಿದೆ, ದೃಢತೆ ಹೆಚ್ಚಾಗಿದೆ. ಒಮ್ಮೆ ನೋಡಿದರೆ ಇಷ್ಟವಾಗುವ ಬಣ್ಣಗಳಲ್ಲಿ ಬೈಕು ಸಿಗುತ್ತದೆ.
ಅತ್ಯಾಧುನಿಕ ತಂತ್ರಜ್ಞಾನದ ನೂತನ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬಿಡುಗಡೆ!
648 ಸಿಸಿಯ ಪ್ಯಾರಲಲ್ ಟ್ವಿನ್, 4 ಸಿಲಿಂಡರ್ ಇಂಜಿನ್ ಹೊಂದಿರುವ ಈ ಬೈಕಿನ ಭಾರ 202 ಕೆಜಿ. ಅದರ ಜೊತೆ ಪೆಟ್ರೋಲ್ ಭಾರ ಸೇರಿಕೊಳ್ಳುತ್ತದೆ. ಈ ಬೈಕನ್ನು ಹತ್ತಿ ಕುಳಿತರೆ ಸಾಮಾನ್ಯ ಬೈಕಿನಂತಲ್ಲ. ಕಾಲನ್ನು ಹಿಂದೆ ಇಟ್ಟು ದೇಹ ಮುಂದೆ ಬಾಗಿಸಬೇಕು. ಅದಕ್ಕೆ ತಕ್ಕಂತೆ ಬೈಕು ವಿನ್ಯಾಸ ಆಗಿರುವುದರಿಂದ ನೀವು ಬಯಸದಿದ್ದರೂ ನಿಮ್ಮ ದೇಹ ಬಿಲ್ಲಿನಂತೆ ಬಾಗುತ್ತದೆ. ಅನಂತರ ಆ್ಯಕ್ಸಿಲೇಟರ್ ಕೊಟ್ಟು ಬಿಟ್ಟ ಬಾಣದಂತೆ ಮುಂದೆ ಸಾಗಿದರೆ ಮರಗಿಡಗಳು ಹಿಂದೆ ಸಾಗುತ್ತಿರುತ್ತವೆ.
ಸೇಫ್ ರೈಡಿಂಗ್ ಅನುಭವಕ್ಕಾಗಿ ರಾಯಲ್ ಎನ್‌ಫೀಲ್ಡ್‌ನಿಂದ ಸುರಕ್ಷತಾ ಸಾಧನ!
ಇದರ ಸೀಟಿನ ಎತ್ತರ 804 ಮಿಮೀ. ಸಾಮಾನ್ಯ ಎತ್ತರದವರು ಆರಾಮಾಗಿ ಸೀಟು ಹತ್ತಿ ವಿರಾಜಮಾನರಾಗಬಹುದು. 174 ಮಿಮೀ ಗ್ರೌಂಡ್ ಕ್ಲಿಯರೆನ್ಸ್ ಇರುವುದರಿಂದ ಹಂಪ್ ಹಾರಿಸುವಾಗ ತುಂಬಾ ಯೋಚಿಸಬೇಕಿಲ್ಲ. ಪಿಲಿಯನ್ ರೈಡರ್ ಹಾರದಂತೆ ನೋಡಿಕೊಂಡರೆ ಸಾಕು. ಹೈವೇಯಲ್ಲಿ ಸೆಹವಾಗ್ ಬ್ಯಾಟಿನಿಂದ ಸಿಡಿದ ಬಾಲಿನಂತೆ ಸಾಗುವ ಬೈಕು ಆಫ್ ರೋಡಲ್ಲಿ ಯಾವುದೇ ತೊಂದರೆ ಇಲ್ಲದೆ ನಿಧಾನಕ್ಕೆ ಉಯ್ಯಾಲೆಯಂತೆ ಸಾಗಬಲ್ಲದು. ಅಷ್ಟು ಚೆನ್ನಾಗಿದೆ ಸಸ್ಪೆನ್ಷನ್. ಹಿಂದಿನ ಮತ್ತು ಮುಂದಿನ ಎರಡೂ ಟೈರುಗಳಿಗೆ ಡಿಸ್ಕ್ ಬ್ರೇಕ್ ಇದೆ, ಹೇಳಿದಂತೆ ಕೇಳುತ್ತದೆ.
ಅದ್ಭುತವಾಗಿರುವ ಈ ಬೈಕಿನ ಹೊಸ ವರ್ಷನ್ನಿಗೆ ಸೆಂಟರ್ ಸ್ಟ್ಯಾಂಡ್ ಇಲ್ಲದೇ ಇದ್ದರೆ ಮಾತ್ರ ಫಜೀತಿ. ನಾವು ರಿವ್ಯೂಗೆ ತೆಗೆದುಕೊಂಡ ಬೈಕಿನಲ್ಲಿ ಸೆಂಟರ್ ಸ್ಟ್ಯಾಂಡ್ ವ್ಯವಸ್ಥೆ ಇರಲಿಲ್ಲ. ಟೈರು ಪಂಕ್ಚರ್ ಆದ್ದರಿಂದ ರಾಯಲ್ ಎನ್‌ಫೀಲ್ಡ್‌ನವರು ಬಂದು ಪಂಕ್ಚರ್ ಹಾಕುವುದಕ್ಕೆ ದಿನವೇ ಕಳೆದುಹೋಯಿತು. ಅದರ ಹೊರತಾಗಿ ದೂರುಗಳಿಲ್ಲ. ದೂರದೂರಿಗೆ ಹೋಗಲು ಈ ಬೈಕು ಅಡ್ಡಿಯಿಲ್ಲ. ಆರಂಭಿಕ ಬೆಲೆ ರು.2.75 ಲಕ್ಷ.(ಎಕ್ಸ್ ಶೋರೂಮ್) ಹೆಚ್ಚಿನ ಮಾಹಿತಿಗೆ, ಬೆಲೆ ಕುರಿತ ವಿವರಣೆಗೆ ಹತ್ತಿರದ ಶೋರೂಮ್‌ಗೆ ಭೇಟಿ ನೀಡಿ.