ಓಲಾದ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಓಲಾ ಎಸ್1 ಬಿಡುಗಡೆ, 2024ರಲ್ಲಿ ಬರಲಿದೆ ಓಲಾ ಕಾರು!

By Suvarna NewsFirst Published Aug 16, 2022, 6:26 PM IST
Highlights

75ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಓಲಾ ತನ್ನ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಓಲಾ ಎಸ್1 ಬಿಡುಗಡೆ ಮಾಡಿದೆ. 2024ರ ಬೇಸಿಗೆಯಲ್ಲಿ ಓಲಾದ ಮೊದಲ ಎಲೆಕ್ಟ್ರಿಕ್ ಕಾರು ಬರಲಿದೆ ಎಂದು ಓಲಾ ಘೋಷಿಸಿದೆ. ನೂತನ ಸ್ಕೂಟರ್ ಹಾಗೂ ಕಾರಿನ ಕುರಿತು ಮಾಹಿತಿ ಇಲ್ಲಿದೆ

ಬೆಂಗಳೂರು(ಆ.16):  ರೈಡ್ ಶೇರಿಂಗ್ ಕಂಪನಿಯಾದ ಓಲಾ ಎಲೆಕ್ಟ್ರಿಕ್ ಸ್ಕೂಟರ್ ತಯಾರಿಕೆಗೆ ಇಳಿದಿದ್ದಷ್ಟೇ ಅಲ್ಲ, ಎಲೆಕ್ಟ್ರಿಕ್ ವಾಹನ ತಯಾರಿಕೆಯಲ್ಲಿ ಮುಂಚೂಣಿಯಲ್ಲಿ ನಿಂತಿದೆ. 75ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಓಲಾ ತನ್ನ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಓಲಾ ಎಸ್1 ಬಿಡುಗಡೆ ಮಾಡಿದೆ. ಪ್ರಸ್ತುತ ಓಲ್ ಎಸ್1 ಸ್ಕೂಟರ್ ಗೆ ನಿಗದಿಯಾದ ಬೆಲೆ ರು.99,999. ಆರಂಭಿಕ ಆಫರ್ ಬಿಟ್ಟಿರುವ ಓಲಾ ಆ.31ರವರೆಗೆ ರು.499 ಕೊಟ್ಟು ಈ ಹೊಸ ಸ್ಕೂಟರ್ ಬುಕಿಂಗ್ ಮಾಡಬಹುದು ಎಂದು ಘೋಷಿಸಿದೆ. ಯಾರಾರು ದುಡ್ಡು ಕೊಟ್ಟು ಬುಕ್ ಮಾಡುತ್ತಾರೋ ಅವರೆಲ್ಲಾ ಸೆ.1ರಂದು ಪೂರ್ತಿ ಹಣ ನೀಡಿ ಸ್ಕೂಟರ್ ಖರೀದಿಸಬಹುದು. ಉಳಿದವರೆಲ್ಲಾ ಸೆ.2ರಿಂದ ಪೂರ್ತಿ ಹಣ ನೀಡಿ ಓಲಾ ಎಸ್1 ಖರೀದಿಸಬಹುದು. ಓಲಾ ಈಗಾಗಲೇ ಹಲವು ಬ್ಯಾಂಕ್ ಗಳೊಂದಿಗೆ ಸಹಯೋಗ ಮಾಡಿಕೊಂಡಿರುವುದರಿಂದ, ಇಎಂಐ ಸೌಲಭ್ಯ ಕೂಡ ಉಂಟು. ಸೆ.7ರಿಂದ ಸ್ಕೂಟರ್ ಡೆಲಿವರಿ ಶುರುವಾಗುತ್ತಿದೆ.

ಇನ್ನು ಈ ಸ್ಕೂಟರಿನ ತಾಂತ್ರಿಕ ಮಾಹಿತಿ ನೀಡುವುದಾದರೆ ಓಲಾ ಎಸ್1 ಪೂರ್ತಿ ಚಾರ್ಜ್ ಆಗಲು 5 ಗಂಟೆ ತೆಗೆದುಕೊಳ್ಳುತ್ತದೆ. ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ 141 ಕಿಮೀ ಕ್ರಮಿಸಲಿದೆ ಎಂಬ ಲೆಕ್ಕ ಸಿಗುತ್ತದೆ. ಅದರಲ್ಲೂ ಸ್ವಲ್ಪ ಹೆಚ್ಚು ಕಡಿಮೆ ಲೆಕ್ಕಾಚಾರ ಉಂಟು. ಈ ಸ್ಕೂಟರ್ ನಲ್ಲಿ ಮೂರು ಮೋಡ್ ಗಳಿವೆ. ನಾರ್ಮಲ್ ಮೋಡ್, ಇಕೋ ಮೋಡ್ ಮತ್ತು ಸ್ಪೋರ್ಟ್ಸ್ ಮೋಡ್. ನಾರ್ಮಲ್ ಮೋಡ್ ನಲ್ಲಿ ಚಲಿಸಿದರೆ 101 ಕಿಮೀ, ಇಕೋ ಮೋಡ್ ನಲ್ಲಿ 128 ಕಿಮೀ, ಸ್ಪೋರ್ಟ್ಸ್ ಮೋಡ್ ನಲ್ಲಿ 90 ಕಿಮೀ ಕ್ರಮಿಸಬಹುದು ಎಂದು ಓಲಾ ಹೇಳಿದೆ. ಒಂದೊಂದು ಮೋಡ್ ನಲ್ಲಿ ಒಂದೊಂದು ಥರ ರೈಡಿಂಗ್ ಅನುಭವ ಸಿಗಲಿದೆ. 

 

ಹೀರೋ ಎಲೆಕ್ಟ್ರಿಕ್ ಹಿಂದಿಕ್ಕಿ ನಂ.1 ಸ್ಥಾನ ತಲುಪಿದ ಓಲಾ ಎಲೆಕ್ಟ್ರಿಕ್

ವೇಗದಲ್ಲೂ ಈ ಸ್ಕೂಟರ್ ಸ್ವಲ್ಪ ಶಕ್ತಿಶಾಲಿ ಎಂಬಂತೆ ತೋರುತ್ತಿದೆ. ಸೊನ್ನೆಯಿಂದ 40 ಕಿಮೀ ವೇಗ ತಲುಪಲು ಈ ಸ್ಕೂಟರ್ ಗೆ ಕೇವಲ 3.8 ಸೆಕೆಂಡ್ ಸಾಕು ಅನ್ನುವುದು ಓಲಾ ಆಶ್ವಾಸನೆ. ಇದರ ಟಾಪ್ ಸ್ಪೀಡ್ ಗಂಟೆಗೆ 95 ಕಿಮೀ. ಇನ್ನು ಯಾವುದೇ ಸ್ಕೂಟರ್ ನಲ್ಲಿ ಬ್ಯಾಟರಿ ಯಾವುದು ಎಂಬ ಕುತೂಹಲ ಎಲೆಕ್ಟ್ರಿಕ್ ಸ್ಕೂಟರ್ ಪ್ರೇಮಿಗಳಿಗೆ ಇರುತ್ತದೆ. ಈ ಸ್ಕೂಟರ್ 3 ಕೆಡಬ್ಲ್ಯೂಎಚ್ ಲೀಥಿಯಂ ಅಯಾನ್ ಬ್ಯಾಟರಿ ಹೊಂದಿದೆ. ಐದು ಬಣ್ಣಗಳಲ್ಲಿ ಲಭ್ಯವಿದೆ.

ಇದೇ ಸಂದರ್ಭದಲ್ಲಿ ಓಲಾ ಎಸ್1 ಪ್ರೋ ಸ್ಕೂಟರ್ ನ ಖಾಕಿ ಗ್ರೀನ್ ಎಂಬ ಫ್ರೀಡಂ ಎಡಿಷನ್ ಸ್ಕೂಟರ್ ಕೂಡ ಬಿಡುಗಡೆಯಾಗಿದೆ. ಇದರ ಬಣ್ಣವೇ ಆಕರ್ಷಕವಾಗಿದ್ದು, ಇದಕ್ಕೆ ಬೆಲೆ ರು.1.49 ಲಕ್ಷ ನಿಗದಿಗೊಳಿಸಲಾಗಿದೆ. ಓಲಾ ಆಪ್ ಮೂಲಕ ಈ ಸ್ಕೂಟರ್ ಅನ್ನು ಖರೀದಿ ಮಾಡಬಹುದು.

2024ರಲ್ಲಿ ಬರಲಿದೆ ಓಲಾ ಕಾರು
ಇಂಟರೆಸ್ಟಿಂಗ್ ಎಂದರೆ ಓಲಾ ಎಲೆಕ್ಟ್ರಿಕ್ ಸ್ಕೂಟರ್ ನಂತರ ಎಲೆಕ್ಟ್ರಿಕ್ ಕಾರು ತಯಾರಿಕೆಯಲ್ಲೂ ಒಂದು ಕೈ ನೋಡೋಣ ಎಂದು ನಿರ್ಧರಿಸಿದೆ. 2024ರ ಬೇಸಿಗೆಯಲ್ಲಿ ಓಲಾದ ಮೊದಲ ಎಲೆಕ್ಟ್ರಿಕ್ ಕಾರು ಬರಲಿದೆ ಎಂದು ಓಲಾ ಘೋಷಿಸಿದೆ. ಈ ಕಾರು ಅತಿ ವೇಗದ ಎಲೆಕ್ಟ್ರಿಕ್ ಕಾರು ಆಗಿರಲಿದೆ ಎಂಬುದು ಓಲಾ ಸಿಇಓ ಭವಿಷ್ ಅಗರ್ ವಾಲ್ ಭರವಸೆ. ಕೇವಲ 4 ಸೆಕೆಂಡಲ್ಲಿ ಈ ಕಾರು 0-100 ಕಿಮಿ ವೇಗವನ್ನು ಪಡೆಯಲಿದೆ. ಅಲ್ಲದೇ ಒಮ್ಮೆ ಚಾರ್ಜ್ ಮಾಡಿದರೆ 500 ಕಿಮೀ ದೂರ ಕ್ರಮಿಸುವ ಸಾಮರ್ಥ್ಯ ಇದಕ್ಕಿದೆ ಎನ್ನಲಾಗಿದೆ. ಈ ಮಾತು ನಿಜವಾದರೆ ಓಲಾ ಕಾರಿಗೆ ನಿಜಕ್ಕೂ ಭಾರಿ ಬೇಡಿಕೆ ಒದಗಿ ಬರಲಿದೆ. 

ಇವಿಷ್ಟೇ ಓಲಾದ ಕನಸು ಅಲ್ಲ. ಈಗಾಗಲೇ ಕಾರು ತಯಾರಿಕಾ ಕೇಂದ್ರ ಮತ್ತು ಸ್ಕೂಟರ್ ತಯಾರಿಕಾ ಕೇಂದ್ರ ನಿರ್ಮಿಸಿರುವ ಓಲಾ ಇದೀಗ ಹೊಸದಾಗಿ ಬ್ಯಾಟರಿ ತಯಾರಿಕಾ ಕೇಂದ್ರವನ್ನೂ ನಿರ್ಮಿಸಿದೆ. ಪ್ರತಿಯೊಂದು ವಿಭಾಗದಲ್ಲೂ ತಾವೇ ಮುಂಚೂಣಿಯಲ್ಲಿರಬೇಕು ಅನ್ನುವುದು ಓಲಾ ಕಂಪನಿಯ ಆಸೆ. ಅದಕ್ಕಾಗಿ ಬ್ಯಾಟರಿ ತಯಾರಿಕೆಯಲ್ಲಿ ಅನೇಕ ಪ್ರಯೋಗಗಳು ನಡೆಯುತ್ತಿದೆ. ಲೀಥಿಯಂ ಅಲ್ಲದೆ ಬೇರೆ ಬೇರೆ ರೀತಿಯ ಬ್ಯಾಟರಿ ತಯಾರಿಕೆ ಕುರಿತೂ ಆಲೋಚಿಸಲಾಗುತ್ತಿದೆ ಎಂದು ಭವಿಷ್ ತಿಳಿಸಿದ್ದಾರೆ.

ಪಶ್ಚಿಮಕ್ಕೆ ಟೆಸ್ಲಾ: ಇತರ ಭಾಗಕ್ಕೆ ಓಲಾ- ಸಿಇಓ ಭವೀಶ್ ಅಗರ್ವಾಲ್

ಈ ಸ್ಕೂಟರ್ ಅನ್ನು ಲೋಕಾರ್ಪಣೆ ಮಾಡುವ ಸಂದರ್ಭದಲ್ಲಿ ಓಲಾ ಸಿಇಓ ಭವಿಷ್ ಅಗರ್ ವಾಲ್ ತಮ್ಮ ಮಹತ್ವಾಕಾಂಕ್ಷಿ ಯೋಜನೆ ಕುರಿತು ಹೇಳಿದ್ದಾರೆ. 2024ರಿಂದ 2026ರವರೆಗೆ 10 ಲಕ್ಷ ಓಲಾ ಎಲೆಕ್ಟ್ರಿಕ್ ಕಾರುಗಳನ್ನು ಒದಗಿಸುವ ಉದ್ದೇಶ ಇದೆ. 1 ಲಕ್ಷದಿಂದ ಆರಂಭಗೊಂಡು ರು.50 ಲಕ್ಷದವರೆಗಿನ ಓಲಾ ವಾಹನಗಳು ಮುಂದಿನ ದಿನಗಳಲ್ಲಿ ಗ್ರಾಹಕರ ಕೈಗೆ ಸಿಗಲಿದೆ. ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಓಲಾ ವಾಹನಗಳು ಸಿಗುವಂತೆ ಆಗಬೇಕು. ಭಾರತದಲ್ಲಿ ತಯಾರಾದ, ಭಾರತದಲ್ಲಿ ವಿನ್ಯಾಸಗೊಂಡ ನಮ್ಮ ವಾಹನಗಳನ್ನು ವಿದೇಶಕ್ಕೆ ರಫ್ತು ಮಾಡುವಂತೆ ಮಾಡುವುದೇ ನನ್ನ ಗುರಿ ಎಂದು ಅವರು ತಿಳಿಸಿದ್ದಾರೆ.

click me!